ಚಾಮರಾಜನಗರ: ಭಾರತೀಯ ವಾಯುಸೇನೆಯ 'ಕಿರಣ್' ತರಬೇತಿ ವಿಮಾನವೊಂದು ಗುರುವಾರ ತಾಲ್ಲೂಕಿನ ಭೋಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಪ್ಪಯ್ಯನಪುರದಲ್ಲಿ ಪತನಗೊಂಡಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಂಗ್ ಕಮಾಂಡರ್ ತೇಜ್ ಪಾಲ್ (50) ಮತ್ತು ತರಬೇತಿ ಪಡೆಯುತ್ತಿದ್ದ ಪೈಲಟ್ ಭೂಮಿಕಾ (28) ಅವರು ವಿಮಾನ ನಿಯಂತ್ರಣ ತಪ್ಪುತ್ತಲೇ ಪ್ಯಾರಚೂಟ್ ಮೂಲಕ ಸುರಕ್ಷಿತವಾಗಿ ಕೆಳಕ್ಕೆ ಇಳಿದಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿದ್ದು, ವಾಯುಪಡೆಯು ಇಬ್ಬರನ್ನೂ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆದೊಯ್ದಿದೆ.
'ತರಬೇತಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ವಿಮಾನ ಅಪಘಾತಕ್ಕೀಡಾಗಿದ್ದು, ಇಬ್ಬರೂ ಸಿಬ್ಬಂದಿ ಸುರಕ್ಷಿತವಾಗಿ ಇಳಿದಿದ್ದಾರೆ. ಪತನದ ಕಾರಣವನ್ನು ಪತ್ತೆ ಮಾಡುವುದಕ್ಕಾಗಿ ತನಿಖೆಗೆ ಆದೇಶಿಸಲಾಗಿದೆ' ಎಂದು ಭಾರತೀಯ ವಾಯುಸೇನೆ ಟ್ವೀಟ್ ಮಾಡಿದೆ.
ಹೊತ್ತಿ ಉರಿದು ಬಿದ್ದ ವಿಮಾನ: ಬುಧವಾರ ಬೆಳಿಗ್ಗೆ 11.50ರ ಸುಮಾರಿಗೆ ಘಟನೆ ನಡೆದಿದೆ. ಭೋಗಾಪುರ ಗ್ರಾಮ ಪಂಚಾಯಿತಿಯ ಸಪ್ಪಯ್ಯನಪುರದ ಸರ್ವೆ ನಂಬರ್ 75 ಜಮೀನಿನಲ್ಲಿ ವಿಮಾನ ಪತನಗೊಂಡಿದೆ.
'ಆಗಸದಲ್ಲಿ ಸ್ಫೋಟದ ಶಬ್ದಕೇಳಿತು. ವಿಮಾನ ಎರಡು ಸುತ್ತು ತಿರುಗಿತು. ಅಷ್ಟರಲ್ಲಿ ಇಬ್ಬರು ಪ್ಯಾರಚೂಟ್ ಮೂಲಕ ಕೆಳಕ್ಕೆ ಇಳಿಯುವುದು ಕಾಣಿಸಿತು. ಸ್ವಲ್ಪ ದೂರದಲ್ಲಿ ವಿಮಾನ ಉರಿಯುತ್ತ ಕೆಳಗಡೆ ಬಿತ್ತು. ಸ್ಥಳಕ್ಕೆ ಬಂದು ನೋಡಿದಾಗ ವಿಮಾನದ ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಜನರು ಯಾರೂ ಇರಲಿಲ್ಲ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು' ಎಂದು ಪ್ರತ್ಯಕ್ಷದರ್ಶಿ ಭೋಗಾಪುರದ ಮಹೇಶ್ 'ಪ್ರಜಾವಾಣಿ'ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.