ಗುರುವಾರ , ಸೆಪ್ಟೆಂಬರ್ 23, 2021
24 °C
ಮೌನ ವಹಿಸಿರುವ ಅಧಿಕಾರಿಗಳು, ಪೊಲೀಸರು: ಗ್ರಾಮಸ್ಥರ ಆರೋಪ

ಹೂಗ್ಯಂ: ಅಕ್ರಮ ಮರಳು ದಂಧೆ ಸಕ್ರಿಯ

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಹೂಗ್ಯಂ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆಲವು ಭಾಗಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ಎಗ್ಗಿಲ್ಲದೇ ಸಾಗಿದ್ದು, ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಮೌನ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಾಲ್‌ರೋಡ್‌ನಿಂದ ಜಲ್ಲಿಪಾಳ್ಯದವರೆಗೆ ಪಾಲಾರ್ ಹಳ್ಳ ಇದೆ. ಇದು ನಲ್ಲೂರು, ಹಂಚಿಪಾಳ್ಯ, ಕೂಡ್ಲೂರ, ಹೂಗ್ಯಂ ಹಾಗೂ ಜಲ್ಲಿಪಾಳ್ಯ ಗ್ರಾಮಗಳಿಗೆ ಹೊಂದಿಕೊಂಡಂತಿದೆ. ಈ ಭಾಗದಲ್ಲಿ ಪ್ರತಿನಿತ್ಯ ಎಡೆಬಿಡದೇ ಮರಳು ದಂಧೆ ನಡೆಯುತ್ತಿದೆ. ಮುಖ್ಯ ರಸ್ತೆಯಲ್ಲಿಯೇ ಟ್ರ್ಯಾಕ್ಟರ್‌ನಲ್ಲಿ ಮರಳು ಸಾಗಣೆ ಮಾಡುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸ್ಥಳೀಯ ನಿವಾಸಿಗಳ ಆರೋಪ.

 ರಾತ್ರಿ ವೇಳೆ ದಂಧೆ: ಕೂಡ್ಲೂರು, ಹೂಗ್ಯಂ ಹಾಗೂ ಜಲ್ಲಿಪಾಳ್ಯ ಗ್ರಾಮಗಳಿಗೆ ಹೊಂದಿಕೊಂಡಂತೆ ಕೆಲವು ಪ್ರದೇಶಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ನಿರಂತರವಾಗಿ ಮರಳು ಸಾಗಣೆ ನಡೆಯುತ್ತಿದೆ. ಕೆಲವರು ತಮ್ಮ ಸ್ವಂತ ಬಳಕೆಗೆ ಉಪಯೋಗಿಸಿದರೆ ಮತ್ತೆ ಕೆಲವರು ಅದನ್ನು ದುಪ್ಪಟ್ಟು ಬೆಲೆಗೆ ಬೇರೆ ಕಡೆ ಸಾಗಿಸುತ್ತಾರೆ ಎಂಬುದು ಸ್ಥಳೀಯರ ಹೇಳಿಕೆ.

‘ಜಲ್ಲಿಪಾಳ್ಯದ ಬಳಿಯಿರುವ ಪಾಪ್ಶೆಟ್ಟಿದೊಡ್ಡಿ ಬಳಿ ವ್ಯಾಪಕ ಮರಳು ಸಾಗಾಣೆ ನಡೆಯುತ್ತಿದೆ. ಇದನ್ನು ಬೀಟ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದರೆ, ‘ನೋಡೋಣ’ ಎಂದು ಹೇಳುತ್ತಾರೆ. ಆದರೆ ಮರಳು ಮಾತ್ರ ಸಾಗಣೆ ನಿಲ್ಲುತ್ತಿಲ್ಲ. ಅಕ್ರಮವನ್ನು ತಡೆಗಟ್ಟಬೇಕಾದವರೇ ಅದಕ್ಕೆ ಬೆಂಬಲ ನೀಡುತ್ತಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ. ಕೂಡಲೇ ಹಿರಿಯ ಅಧಿಕಾರಿಗಳು ಇಲ್ಲಿಗೆ ಆಗಮಿಸಿ ಪರಿಶೀಲನೆ ನಡೆಸಿದರೆ ವಾಸ್ತವದ ಅರಿವಾಗುತ್ತದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಗ್ರಾಮಸ್ಥ‌ರೊಬ್ಬರು ‘ಪ್ರಜಾವಾಣಿ’ಗೆ  ತಿಳಿಸಿದರು. 

‌ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಮಾಪುರ ಠಾಣೆ ಇನ್‌ಸ್ಪೆಕ್ಟರ್‌ ನಂಜುಂಡಸ್ವಾಮಿ ಅವರು, ‘ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ನಾಲ್‌ರೋಡ್ ಚೆಕ್ ಪೋಸ್ಟ್‌ನಲ್ಲಿ ಮರಳು ಸಾಗಣೆಯಾಗುತ್ತಿಲ್ಲ. ಅಕ್ರಮ ಸಾಗಣೆ ಬಗ್ಗೆ ಸ್ಥಳೀಯ ಸಿಬ್ಬಂದಿಯಿಂದ ವರದಿ ಪಡೆದು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು. 

ದಾಳಿ ನಡೆದರೂ ನಿಂತಿಲ್ಲ

ಈ ಹಿಂದೆ ಗ್ರಾಮಸ್ಥರ ದೂರಿನ ಆಧಾರದಲ್ಲಿ ಹನೂರು ತಹಶೀಲ್ದಾರ್ ಹಾಗೂ ರಾಮಾಪುರ ಪೊಲೀಸರು ದಾಳಿ ನಡೆಸಿ ನಲ್ಲೂರು, ಕೂಡ್ಲೂರು ಹಾಗೂ ಹೂಗ್ಯಂ ಗ್ರಾಮಗಳಲ್ಲಿ ಮನೆಗಳ ಮುಂದೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಅಲ್ಲದೇ ಪಾಲಾರ್ ಹಳ್ಳದಲ್ಲಿ ಮರಳು ತೆಗೆಯುವುದು ಮುಂದುವರೆದರೆ ಕಠಿಣ ಕ್ರಮ ಜರುಗಿಸುವುದಾಗಿಯೂ ಎಚ್ಚರಿಸಿದ್ದರು.

ಇದಾದ ಬಳಿಕ ಮರಳು ಸಾಗಣೆ ಕೆಲವು ತಿಂಗಳವರೆಗೆ ತಾತ್ಕಾಲಿಕವಾಗಿ ನಿಂತಿತ್ತು. ಈಗ ಮತ್ತೆ ರಾತ್ರಿ ವೇಳೆ ಮರಳು ಸಂಗ್ರಹಿಸಿ ಸಾಗಣೆ ಮಾಡಲಾಗುತ್ತಿದೆ.

ಈ ಬಗ್ಗೆ ಅರಣ್ಯ ಇಲಾಖೆಯನ್ನು ಕೇಳಿದರೆ ಮರಳು ತೆಗೆಯುತ್ತಿರುವುದು ಕಂದಾಯ ಭೂಮಿಯಾಗಿರುವುದರಿಂದ ನಾವು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಇತ್ತ ಇತರೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹೀಗಾದರೆ ಈ ಅಕ್ರಮವನ್ನು ತಡೆಯುವವರು ಯಾರು ಎಂಬುದು ಈ ಭಾಗದ ಜನರ ಪ್ರಶ್ನೆ.

----------

ಹೂಗ್ಯಂ ಭಾಗದಲ್ಲಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಕೂಡಲೇ ಅಧಿಕಾರಿಗಳನ್ನು ಕಳಿಸಿ ಪರಿಶೀಲಿಸಲಾಗುವುದು ಜಿ.ಎಚ್.ನಾಗರಾಜು, ಹನೂರು ತಹಶೀಲ್ದಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು