ಮಂಗಳವಾರ, ಅಕ್ಟೋಬರ್ 27, 2020
23 °C
ಪತಿ ನಾಪತ್ತೆ ದೂರು ನೀಡಿದ್ದ ಪತ್ನಿ, ತವರು ಮನೆಗೆ ಕರೆದೊಯ್ದು ದುಷ್ಕೃತ್ಯ, ಸ್ಕೂಟರ್‌ನಲ್ಲಿ ಶವ ಸಾಗಾಟ

ಅಕ್ರಮ ಸಂಬಂಧಕ್ಕೆ ಅಡ್ಡಿ, ಪ್ರಿಯಕರನೊಂದಿಗೆ ಸೇರಿ ಪತಿಯ ಕೊಲೆ ಮಾಡಿದ ಪತ್ನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ತಾಲ್ಲೂಕಿನ ಬೇಗೂರು ಠಾಣೆಯಲ್ಲಿ ಸೆ.16ರಂದು ದಾಖಲಾಗಿದ್ದ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ಅವರ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದು ತನಿಖೆಯಿಂದ ಬಯಲಾಗಿದೆ. ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. 

ರಾಘವಾಪುರ ಗ್ರಾಮದ ನಾಗರಾಜನಾಯ್ಕ (35 ವರ್ಷ) ಕೊಲೆಯಾದವರು. ಅವರ ಪತ್ನಿ ಟಿ.ಎಂ.ಪದ್ಮ (30) ಹಾಗೂ ತೊಂಡವಾಡಿ ಗ್ರಾಮದ ಮಣಿಕಂಠ (26) ಬಂಧಿತರು. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  

ಪದ್ಮ ಅವರು ಸೆ.16ರಂದು ಬೇಗೂರು ಠಾಣೆಗೆ ಬಂದು ತನ್ನ ಪತಿ ನಾಗರಾಜನಾಯ್ಕ ಅವರು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. 

‘ಸೆ.11ರಂದು ಮಕ್ಕಳೊಂದಿಗೆ ನಾವು ತೊಂಡವಾಡಿ ಗ್ರಾಮದಲ್ಲಿರುವ ತವರು ಮನೆಗೆ ಹೋಗಿದ್ದೆವು. 12ರಂದು ವಾಪಸ್‌ ಊರಿಗೆ ಬರಲು ಬೇಗೂರಿಗೆ ಬಂದು, ಅಲ್ಲಿಂದ ಪತಿ ನಾಗರಾಜನಾಯ್ಕ ಅವರು ನನ್ನನ್ನು ಹಾಗೂ ಮಕ್ಕಳನ್ನು ರಾಘವಾಪುರಕ್ಕೆ ಹೋಗುತ್ತಿದ್ದ ಟೆಂಪೊದಲ್ಲಿ ಹತ್ತಿಸಿ, ತಾನು ನಂತರ ಬರುವುದಾಗಿ ಹೇಳಿದ್ದರು. ಆದರೆ, ಅವರು ಮನೆಗೆ ವಾಪಸ್‌ ಆಗಿರಲಿಲ್ಲ. ಅವರಿಗೆ ಕುಡಿತದ ಚಟ ಇದ್ದು, ಇದುವರೆಗೆ ಪತ್ತೆಯಾಗಿಲ್ಲ’ ಎಂದು ದೂರು ನೀಡಿದ್ದರು. 

ನಾಪತ್ತೆ ಪ‍್ರಕರಣ ದಾಖಲಿಸಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. 

ತಾಯಿಯ ದೂರು: 20 ದಿನಗಳ ಬಳಿಕ, ಅಂದರೆ ಅಕ್ಟೋಬರ್‌ 5ರಂದು ನಾಗರಾಜನಾಯ್ಕ ಅವರ ತಾಯಿ ನಿಂಗಮ್ಮ ಅವರು ಬೇಗೂರು ಠಾಣೆಗೆ ಬಂದು ಸೊಸೆ ಪದ್ಮ ಹಾಗೂ ಆಕೆಯ ಪ್ರಿಯಕರ ಸೇರಿ ತನ್ನ ಮಗನನ್ನು ಹತ್ಯೆ ಮಾಡಿದ್ದಾರೆ ಎಂದು ದೂರು ನೀಡಿದ್ದರು. 

‘ಪದ್ಮಳೊಂದಿಗೆ ತೊಂಡವಾಡಿ ಗ್ರಾಮದ ಮಣಿಕಂಠ ಅಕ್ರಮ ಸಂಬಂಧ ಹೊಂದಿದ್ದು, ಇಬ್ಬರೂ ಸೇರಿ ತೊಂಡವಾಡಿ ಗ್ರಾಮದ ಸಿದ್ದನಾಯಕ ಎಂಬುವವರ ಜಮೀನಿನಲ್ಲಿ ನಾಗರಾಜನಾಯ್ಕನನ್ನು ಕೊಲೆ ಮಾಡಿ ಹೆಣ ಬಚ್ಚಿಟ್ಟಿದ್ದಾರೆ’ ಎಂದು ಅವರು ದೂರಿನಲ್ಲಿ ಆರೋಪಿಸಿದ್ದರು.

ಅಕ್ರಮ ಸಂಬಂಧಕ್ಕೆ ಅಡ್ಡಿ: ಕೊಲೆ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಅ.6ರಂದು ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಮಣಿಕಂಠನಿಗೂ ತನಗೂ ಅಕ್ರಮ ಸಂಬಂಧ ಇದ್ದುದಾಗಿ ಆರೋಪಿ ಪದ್ಮ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಈ ವಿಚಾರ ಪತಿ ನಾಗರಾಜನಾಯ್ಕನಿಗೆ ಗೊತ್ತಾಗಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಾರೆ ಎಂಬ ಕಾರಣಕ್ಕೆ ಕೊಲೆ ಮಾಡಲು ತೀರ್ಮಾನಿಸಿದ್ದಾಗಿ ಆಕೆ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಸ್ಕೂಟರಿನಲ್ಲಿ ಶವ ಸಾಗಿಸಿದರು...

‘ಹತ್ಯೆ ಮಾಡುವ ಉದ್ದೇಶದಿಂದಲೇ ರಾಘವಾಪುರ ಗ್ರಾಮದಿಂದ ತೊಂಡವಾ‌ಡಿ ಗ್ರಾಮಕ್ಕೆ ಸೆ.11ರಂದು ನಾಗರಾಜನಾಯ್ಕರನ್ನು ಕರೆದೊಯ್ದು ರಾತ್ರಿ 10.30ರ ಸುಮಾರಿಗೆ ತಾಯಿಯ ಮನೆಯ ಹಿಂಭಾಗದಲ್ಲಿರುವ ಜಮೀನೊಂದರಲ್ಲಿ ಮಣಿಕಂಠನೊಂದಿಗೆ ಸೇರಿ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿ, ಇಬ್ಬರೂ ಸೇರಿ ಶವವನ್ನು ಸ್ಕೂಟರಿನಲ್ಲಿ ತೆಗೆದುಕೊಂಡು ಹೋಗಿ ನಂಜನಗೂಡು ತಾಲ್ಲೂಕಿನ ಕಳಲೆ ಗ್ರಾಮದ ಹತ್ತಿರ ಕಬಿನಿ ನಾಲೆಗೆ ಹಾಕಿದ್ದೇವೆ’ ಎಂದು ವಿಚಾರಣೆ ವೇಳೆ ಆಕೆ ಒಪ್ಪಿಕೊಂಡಿದ್ದಾರೆ.

ನಾಗರಾಜನಾಯ್ಕ ಅವರ ಶವ ಪತ್ತೆಯಾಗಿಲ್ಲ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ತನಿಖಾ ತಂಡದಲ್ಲಿ ಗುಂಡ್ಲುಪೇಟೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಂ.ಮಹದೇವಸ್ವಾಮಿ, ತೆರಕಣಾಂಬಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ರಾಧಾ, ಎಎಸ್‌ಐಗಳಾದ ದೊರೆರಾಜು, ಪ್ರಕಾಶ್‌, ಹೆಡ್‌ ಕಾನ್‌ಸ್ಟೆಬಲ್‌ಗಳಾದ ರಾಜೀವ,  ಮಲ್ಲಿಕಾರ್ಜುನಸ್ವಾಮಿ, ಕಾನ್‌ಸ್ಟೆಬಲ್‌ಗಳಾದ ಶಂಭುಲಿಂಗಸ್ವಾಮಿ, ಸ್ವಾಮಿ, ಮಮತಾ, ನಂದೀಶ ಕೆ.ಎಂ.ಸಿದ್ದರಾಮು ದಿವಾಕರ, ಚಾಲಕರಾದ ಜಗದೀಶ್, ನಾಗೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು