ಭಾನುವಾರ, ನವೆಂಬರ್ 29, 2020
25 °C

ಕೊಳ್ಳೇಗಾಲದಲ್ಲಿ ಕಲುಷಿತ ನೀರು ಸೇವನೆ; ಮತ್ತಿಬ್ಬರು ಅಸ್ವಸ್ಥ, ಇಬ್ಬರ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಇಲ್ಲಿನ ಆಶ್ರಯ ಬಡಾವಣೆಯಲ್ಲಿ ಮಂಗಳವಾರ ಕಲುಷಿತ ನೀರು ಸೇವಿಸಿದ್ದ, 10ಕ್ಕೂ ಹೆಚ್ಚು ಜನರ ಪೈಕಿ ಮತ್ತಿಬ್ಬರು ಬುಧವಾರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇಬ್ಬರು ‌ಚೇತರಿಸಿಕೊಂಡಿದ್ದಾರೆ. 

ಏಳು ಜನರು ಮಂಗಳವಾರ ಅಸ್ವಸ್ಥರಾಗಿದ್ದರು. ಖಾಸಗಿ ಆರ್‌.ಕೆ. ಆಸ್ಪತ್ರೆಗೆ ಅವರನ್ನು ದಾಖಲಾಗಿಸಿತ್ತು. ಇವರಲ್ಲಿ ಇಬ್ಬರು ಚೇತರಿಸಿಕೊಂಡು ಬುಧವಾರ ಮನೆಗೆ ತೆರಳಿದ್ದಾರೆ. ಎಲ್ಲ ಅಸ್ವಸ್ಥರಲ್ಲಿ ವಾಂತಿ, ಭೇದಿ ಲಕ್ಷಣಗಳು ಕಾಣಿಸಿಕೊಂಡಿವೆ.

ಘಟನೆ ನಡೆದ ಬಳಿಕ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಬಡಾವಣೆ ಸ್ವಚ್ಚಗೊಳಿಸಿದ್ದಾರೆ.

ಆಯುಕ್ತರಿಗೆ ತರಾಟೆ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ನಗರಸಭೆ ಆಯುಕ್ತ ನಾಗಶೆಟ್ಟಿ ಅವರನ್ನು ಅಸ್ವಸ್ಥರ ಕುಟುಂಬದವರು ತರಾಟೆಗೆ ತೆಗೆದುಕೊಂಡರು.

‘ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಮೈಸೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬರಲು 48 ಗಂಟೆ ಬೇಕು. ಆ ಬಳಿಕವೇ ನೀರಿನಲ್ಲಿ ಏನು ಬೆರೆತಿದೆ ಎಂದು ತಿಳಿಯಲಿದೆ’ ಎಂದು ಆಯುಕ್ತ ನಾಗಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಸಿ, ತಹಶೀಲ್ದಾರ್ ಭೇಟಿ: ಉಪವಿಭಾಗಾಧಿಕಾರಿ ಡಾ.ಗಿರೀಶ್ ದಿಲೀಪ್ ಬದೋಲೆ ಹಾಗೂ ತಹಶೀಲ್ದಾರ್ ಕುನಾಲ್ ಅವರು ಮಂಗಳವಾರ ರಾತ್ರಿ ಆರ್.ಕೆ.ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಯೋಗ ಕ್ಷಮ ವಿಚಾರಿಸಿ ಅಲ್ಲಿನ ವೈದ್ಯರ ಜೊತೆ ಮಾಹಿತಿ ಪಡೆದರು.

‘ನೀರು ಕಲುಷಿತವಾಗಿದೆಯೇ ಇಲ್ಲವೇ ಎಂಬುದು ಗುರುವಾರ ವರದಿ ಬಂದ ಬಳಿಕ ತಿಳಿಯಲಿದೆ. ಅಧಿಕಾರಿಗಳ ಕರ್ತವ್ಯ ಲೋಪವಿದ್ದರೆ ಸೂಕ್ತ ಕ್ರಮ ತೆಗೆದು ಕೊಳ್ಳುತ್ತೇನೆ’ ಎಂದು ಉಪವಿಭಾಗಾಧಿಕಾರಿ ಅವರು ಮಾಧ್ಯಮಗಳಿಗೆ ತಿಳಿಸಿದರು. 

‘ಯಾರಿಗೂ ಪ್ರಾಣಕ್ಕೆ ಅಪಾಯವಾಗುವಂತಹ ಸಮಸ್ಯೆಗಳು ಉಂಟಾಗಿಲ್ಲ. ಭೇದಿ ಮತ್ತು ವಾಂತಿ ಮಾತ್ರ ಆಗಿದೆ. ಇಬ್ಬರು ಗುಣ ಮುಖರಾಗಿದ್ದಾರೆ. ಎಲ್ಲರೂ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಆಸ್ಪತೆಯ ವೈದ್ಯ ಸೈಯದ್ ಹಿದಾಯತ್ ಉಲ್ಲಾ ಅವರು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.