ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರಿ ಇಟ್ಟುಕೊಂಡಿಲ್ಲ; ಅಭಿವೃದ್ಧಿಗಷ್ಟೇ ಕಾಳಜಿ

‘ಪ್ರಜಾವಾಣಿ’ಯೊಂದಿಗೆ ನೂತನ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಮಾತು; ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಆದ್ಯತೆ
Last Updated 3 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಿಲ್ಲೆ ಎದುರಿಸುತ್ತಿರುವ ಸಮಸ್ಯೆಗಳು, ಇಲ್ಲಿನ ಆಗುಹೋಗುಗಳು ಎಲ್ಲವೂ ನನಗೆ ಗೊತ್ತು. ದೊಡ್ಡ ಗುರಿಗಳನ್ನು ಹಾಕಿಕೊಂಡಿಲ್ಲ. ಮುಕ್ತ ಮನಸ್ಸಿನಿಂದ ಬಂದಿದ್ದೇನೆ. ಜನರ ಜೀವನ ಮಟ್ಟ ಸುಧಾರಣೆಗೆ ಅಗತ್ಯವಾದ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತೇನೆ...’

ಕೆಲ ದಿನಗಳ ಹಿಂದೆಯಷ್ಟೇ ಚಾಮರಾಜನಗರದ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಾ.ಎಂ.ಆರ್‌.ರವಿ ಮಾತುಗಳಿವು.

‘ಪ್ರಜಾವಾಣಿ’ಯೊಂದಿಗೆ ಅನಿಸಿಕೆಗಳನ್ನು ಹಂಚಿಕೊಂಡ ಅವರು, ಜಿಲ್ಲೆಯ ಬಗ್ಗೆ ಹಾಗೂ ಜಿಲ್ಲಾಡಳಿತದ ಮುಖ್ಯಸ್ಥರಾಗಿ ತಮ್ಮ ಆದ್ಯತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದರು.

ಅಭಿವೃದ್ಧಿಯಾಗುತ್ತಿರುವ ಜಿಲ್ಲೆ

‘ಚಾಮರಾಜನಗರ ‘ಹಿಂದುಳಿದ ಜಿಲ್ಲೆ’ ಎಂಬುದನ್ನು ನಾನು ಒಪ್ಪುವುದಿಲ್ಲ. ಆ ರೀತಿ ಕರೆಯುವುದನ್ನು ಕೇಳುವುದಕ್ಕೆ ನಾನು ಇಚ್ಛಿಸುವುದಿಲ್ಲ. ಇದು ಅಭಿವೃದ್ಧಿ ಹೊಂದುತ್ತಿರುವ ಜಿಲ್ಲೆ. ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಇದಕ್ಕೂ ಮೊದಲು 19 ಜಿಲ್ಲೆಗಳಲ್ಲಿ ನಾನು ಕೆಲಸ ಮಾಡಿದ್ದೇನೆ. ಈ ಜಿಲ್ಲೆಯನ್ನು ಯಾವ ಜಿಲ್ಲೆಗಳೊಂದಿಗೂ ಹೋಲಿಕೆ ಮಾಡುವುದಕ್ಕೆ ಇಷ್ಟ ಪಡುವುದಿಲ್ಲ’ ಎಂದು ಅವರು ಹೇಳಿದರು.

ಬೇರು ಇಲ್ಲಿದೆ

‘ನನ್ನ ತಂದೆ ಮೂಲತಃ ಜಿಲ್ಲೆಯವರು. ಯಳಂದೂರು ತಾಲ್ಲೂಕಿನ ಮಾಂಬಳ್ಳಿಯವರು. ಹಾಗಾಗಿ, ನನ್ನ ಬೇರು ಇಲ್ಲಿದೆ. ನಾನು ಹುಟ್ಟಿ ಬೆಳೆದಿದ್ದೆಲ್ಲಾ ಮೈಸೂರು. ಹಾಗಿದ್ದರೂ ಜಿಲ್ಲೆಯ ಆಗು ಹೋಗುಗಳೆಲ್ಲಾ ಚೆನ್ನಾಗಿಯೇ ಗೊತ್ತು. ಬೋಧಕನಾಗಿ, ಅಧಿಕಾರಿಯಾಗಿಯೂ ಕೆಲಸ ಮಾಡಿದ್ದೇನೆ’ ಎಂದರು.

‘ಇದು ಅದ್ಭುತವಾದ ಜಿಲ್ಲೆ. ಸಂಸ್ಕೃತಿ, ಸಾಹಿತ್ಯ ಎಲ್ಲವೂ ಇಲ್ಲಿದೆ. ಜೀವಂತಿಕೆ ಇನ್ನೂ ಇದೆ. ಅಭಿವೃದ್ಧಿಯಾದರೆ ಜನ ಕಲ್ಯಾಣ ಆಗುತ್ತದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ’ ಎಂದರು.

ಮೂರು ಆದ್ಯತೆಗಳು

ಯಾವ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುತ್ತೀರಿ ಎಂದು ಕೇಳಿದ್ದಕ್ಕೆ ರವಿ ಅವರು, ಮೂರು ವಿಷಯಗಳನ್ನು ಪಟ್ಟಿ ಮಾಡಿದರು. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ.

‘ಶಿಕ್ಷಣದಲ್ಲಿ ಜಿಲ್ಲೆ ಹಿಂದುಳಿದಿದೆ. ಮೂರೂವರೆ ಲಕ್ಷ ಮಂದಿ ಅನಕ್ಷರಸ್ಥರು ಜಿಲ್ಲೆಯಲ್ಲಿದ್ದಾರೆ ಎಂದರೆ ಶಿಕ್ಷಣದ ಸ್ಥಿತಿ ಗತಿಯನ್ನು ಅರ್ಥ ಮಾಡಿಕೊಳ್ಳಬಹುದು. ಹಾಗಾಗಿ ಇಲ್ಲಿ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಬೇಕಾದ ಅಗತ್ಯವಿದೆ. ಶಿಕ್ಷಣ ಎಂದರೆ ಕೇವಲ ಪಠ್ಯ ಎಂದಲ್ಲ. ಜನರಿಗೆ ಎಲ್ಲ ರೀತಿಯ ಜಾಗೃತಿಯ ಶಿಕ್ಷಣ ನೀಡಬೇಕು. ಎರಡನೇಯದಾಗಿ ಜಿಲ್ಲೆಯ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಬೇಕು. ಮೂರನೆಯದಾಗಿ ಉದ್ಯೋಗ. ಶಿಕ್ಷಣ ಮುಗಿಸಿ ಬಂದ ಯುವಕ–ಯುವತಿಯರಿಗೆ ಉದ್ಯೋಗ ಸಿಗುವಂತಾಗಬೇಕು. ಈ ಮೂರು ಅವಶ್ಯಕತೆಗಳು ಜನರಿಗೆ ದೊರೆತರೆ ಅವರ ಜೀವನ ಮಟ್ಟ ಸುಧಾರಣೆಯಾಗುವುದರಲ್ಲಿ ಅನುಮಾನ ಇಲ್ಲ’ ಎಂದು ಅವರು ವಿವರಿಸಿದರು.

‘ವಿವಿಧ ಸಮುದಾಯಗಳ ಅನುಕೂಲಕ್ಕಾಗಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸರಿಯಾಗಿ ಅನುಷ್ಠಾನ ಮಾಡಿದರೂ ಜಿಲ್ಲೆಯ ಅಭಿವೃದ್ಧಿ ಖಚಿತ’ ಎಂದು ಜಿಲ್ಲಾಧಿಕಾರಿ ರವಿ ಹೇಳಿದರು.

ಹಲವು ಸವಾಲುಗಳು

‘ಹಿಂದುಳಿದ ಜಿಲ್ಲೆ’ ಎಂಬ ಹಣೆಪ‍ಟ್ಟಿಯನ್ನು ಇನ್ನೂ ಕಳಚಿಕೊಳ್ಳದ ಜಿಲ್ಲೆಯಲ್ಲಿಡಾ.ಎ‌ಂ.ಆರ್‌.ರವಿ ಮುಂದೆ ಹಲವು ಸವಾಲುಗಳಿವೆ.

* ಜಿಲ್ಲೆಗೆ ಕೈಗಾರಿಕೆಗಳನ್ನು ತರುವುದೇ ಬಹು ದೊಡ್ಡ ಸವಾಲು. ನಾಲ್ಕು ವರ್ಷಗಳ ಹಿಂದೆ ಚಾಮರಾಜನಗರ ತಾಲ್ಲೂಕಿನ ಬದನಗುಪ್ಪೆ–ಕೆಲ್ಲಂಬಳ್ಳಿ ವ್ಯಾಪ್ತಿಯಲ್ಲಿ 1,460 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ಗುರುತಿಸಿದ್ದರೂ, ಇದುವರೆಗೂ ಒಂದು ಕೈಗಾರಿಕೆಯೂ ಬಂದಿಲ್ಲ. ಹಿಂದಿನ ಜಿಲ್ಲಾಧಿಕಾರಿಗಳಿಗೂ ಉದ್ದಿಮೆಗಳನ್ನು ಕರೆ ತರಲು ಸಾಧ್ಯವಾಗಿಲ್ಲ. ಕೆಲವಾದರೂ ಕೈಗಾರಿಕೆಗಳು ಬಂದರೆ, ಜಿಲ್ಲೆಯ ಯುವಕ–ಯುವತಿಯರಿಗೆ ಉದ್ಯೋಗ ಸಿಗಲಿದೆ.

* ಜಿಲ್ಲಾಡಳಿತದ 14ಕ್ಕೂ ಹೆಚ್ಚು ಇಲಾಖೆಗಳಿಗೆ ಕಾಯಂ ಮುಖ್ಯಸ್ಥರಿಲ್ಲ. ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲೇ ಕೆಲಸ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಖ್ಯಸ್ಥರು ಹಾಗೂ ಸಿಬ್ಬಂದಿ ಕೊರತೆ ನಡುವೆಯೂ ಜಿಲ್ಲೆಯನ್ನು ಪ್ರಗತಿ ಪಥದಲ್ಲಿ ಮುನ್ನಡೆಸುವ ಜವಾಬ್ದಾರಿ ಹೊಸ ಜಿಲ್ಲಾಧಿಕಾರಿ ಮೇಲಿದೆ.

* ಜಿಲ್ಲೆಯಲ್ಲಿ ಈಚೆಗೆ ಅಕ್ರಮ ಗಣಿಗಾರಿಕೆ ಹೆಚ್ಚಾಗಿದೆ. ಕರಿ ಕಲ್ಲು, ಮರಳುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಆರೋಪವನ್ನು ರೈತರು ಹಾಗೂ ಜನಸಾಮಾನ್ಯರು ಮಾಡುತ್ತಿದ್ದಾರೆ. ಅಕ್ರಮ ಗಣಿಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ತುರ್ತಾಗಿ ಆಗಬೇಕಿದೆ.

* ಜಿಲ್ಲೆಯು ಪ್ರವಾಸಿ ತಾಣಗಳಿಗೆ ಹೆಸರುವಾಸಿ. ಬಹುತೇಕ ಪ್ರವಾಸಿ ಕೇಂದ್ರಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ಇವುಗಳನ್ನು ಅಭಿವೃದ್ಧಿ ಪಡಿಸಿದರೆ ಇನ್ನಷ್ಟು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.

* ಹನೂರನ್ನು ಪ್ರತ್ಯೇಕ ತಾಲ್ಲೂಕು ಎಂದು ಘೋಷಿಸಿ ಎರಡು ವರ್ಷ ಕಳೆದರೂ, ಕಚೇರಿಗಳು ಇನ್ನೂ ಅಲ್ಲಿಗೆ ಸ್ಥಳಾಂತರವಾಗಿಲ್ಲ. ಕಾಯಂ ತಹಶೀಲ್ದಾರ್‌ ಕೂಡ ಅಲ್ಲಿಲ್ಲ.

* ಬಾಲ್ಯ ವಿವಾಹ, ಅಸ್ಪೃಶ್ಯತೆಯಂತಹ ಮೌಢ್ಯ ಆಚರಣೆಗಳು ಇನ್ನೂ ಜಿಲ್ಲೆಯಲ್ಲಿವೆ. ಇವುಗಳನ್ನು ಸಂಪೂರ್ಣ ನಿಯಂತ್ರಿಸಲು ಜಿಲ್ಲಾಡಳಿತಕ್ಕೆ ಇನ್ನೂ ಸಾಧ್ಯವಾಗಿಲ್ಲ.

* ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ ಸೇರಿದಂತೆ ಪ್ರಮುಖ ನಗರ ಮತ್ತು ಪಟ್ಟಣ ಪ್ರದೇಶಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಬಗೆಹರಿಸಲು ಜಿಲ್ಲಾಡಳಿತದ ಮಧ್ಯಪ್ರವೇಶ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT