ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಣತಿ ವರದಿಯನ್ನು ಎಚ್‌ಡಿಕೆ ತಡೆದಿದ್ದು ನಿಜ: ಪುಟ್ಟರಂಗಶೆಟ್ಟಿ

Last Updated 27 ಡಿಸೆಂಬರ್ 2020, 17:01 IST
ಅಕ್ಷರ ಗಾತ್ರ

ಚಾಮರಾಜನಗರ: ‘ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ನಾನು ಸಿದ್ಧನಿದ್ದೆ. ಆದರೆ, ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರ‌ಸ್ವಾಮಿ ಅವರು ತಡೆದರು’ ಎಂದು ಶಾಸಕ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾಗಿದ್ದ ಸಿ.ಪುಟ್ಟರಂಗಶೆಟ್ಟಿ ಅವರು ಹೇಳಿದರು.

ಯಳಂದೂರು ತಾಲ್ಲೂಕಿನ ಉಪ್ಪಿನಮೋಳೆಯಲ್ಲಿ ಭಾನುವಾರ ಮತದಾನ ಮಾಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ವರದಿಯ ವಿವರಗಳನ್ನು ಪಡೆಯುವುದಕ್ಕಾಗಿ ಸಭೆ ಆಯೋಜಿಸುವಂತೆ ಅಧಿಕಾರಿಗಳಿಗೆ ನಾನು ಹೇಳಿದ್ದೆ. ಹಿಂದುಳಿದ ಜನಾಂಗದವರ ಅಭಿವೃದ್ಧಿಗಾಗಿ ವರದಿ ಬಿಡುಗಡೆಯಾಗಬೇಕಿತ್ತು. ಆದರೆ, ಕುಮಾರಸ್ವಾಮಿ ಅವರು ಕರೆ ಮಾಡಿ, ‘ಸಭೆ ನಡೆಸಲು ನಿಮಗೆ ಹೇಳಿದ್ದು ಯಾರು? ಸಭೆಯನ್ನು ರದ್ದುಪಡಿಸಿ’ ಎಂದು ಹೇಳಿದರು. ಮುಖ್ಯಮಂತ್ರಿಯನ್ನು ವಿರೋಧಿಸಿಕೊಂಡು ಸಭೆ ನಡೆಸುವುದು ಸರಿಯಲ್ಲ ಎಂದು ರದ್ದುಪಡಿಸಿದೆ’ ಎಂದರು.

‘ವರದಿಯ ವಿವರಗಳು ನನಗೆ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ಲಿಂಗಾಯತರು 1.5 ಕೋಟಿ, ಒಕ್ಕಲಿಗರು 1 ಕೋಟಿ ಜನ, ಉಪ್ಪಾರರು 30 ಲಕ್ಷ ಇದ್ದಾರೆ ಎಂದು ಹೇಳುತ್ತಾರೆ. ಇವೆಲ್ಲ ಸುಳ್ಳು. ಲಿಂಗಾಯತರು 67 ಲಕ್ಷದಿಂದ 68 ಲಕ್ಷ ಇದ್ದಾರೆ. ಒಕ್ಕಲಿಗರು 48 ಲಕ್ಷ ಇರಬಹುದು. ಉಪ್ಪಾರರು 14 ಲಕ್ಷ ಇದ್ದಾರಷ್ಟೇ. ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರು ವರದಿಯನ್ನು ಪಡೆದು ಮಂಡಿಸುವಂತೆ ತಿಳಿಸಿದ್ದರು. ಆದರೆ, ಅದು ಆಗಲಿಲ್ಲ. ಬಿಡುಗಡೆಗೆ ಯಾಕೆ ಒಪ್ಪಿಗೆ ಕೊಡಲಿಲ್ಲ ಎಂಬುದನ್ನು ನೀವು ಕುಮಾರಸ್ವಾಮಿ ಅವರನ್ನೇ ಕೇಳಬೇಕು. ಈಗ ಯಡಿಯೂರಪ್ಪ ಅವರಿಗೆ ಅವಕಾಶ ಇದೆ. ಜಾತಿಗಣತಿ ವರದಿಯನ್ನು ಬಹಿರಂಗಪಡಿಸಲಿ’ ಎಂದು ಪುಟ್ಟರಂಗಶೆಟ್ಟಿ ಅವರು ಹೇಳಿದರು.

ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅಡ್ಡಗಾಲು ಹಾಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT