ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಲ ಸಂರಕ್ಷಣೆಗೆ ನರೇಗಾ ಬಲ

ಜಿಲ್ಲೆಯಲ್ಲೂ ಜಲಶಕ್ತಿ ಅಭಿಯಾನ; ಉದ್ಯೋಗ ಖಾತ್ರಿ ಯೋಜನೆಯಡಿ ನೀರು ಉಳಿಸುವ ಕೆಲಸ
Last Updated 4 ಮೇ 2022, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಡಿ ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಜಿಲ್ಲಾ ಪಂಚಾಯಿತಿ ಮುಂದಡಿಯಿಟ್ಟಿದೆ.

ದೇಶದಾದ್ಯಂತ ಜಲ ಶಕ್ತಿ ಅಭಿಯಾನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮಾರ್ಚ್‌ 29ರಂದೇ ಚಾಲನೆ ನೀಡಿದ್ದಾರೆ. ‘ಸುರಿಯುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಿ’ ಎಂಬ ಧ್ಯೇಯ ವಾಕ್ಯದಡಿ ಈ ಅಭಿಯಾನ ಆರಂಭಿಸಲಾಗಿದ್ದು, ನವೆಂಬರ್‌ ತಿಂಗಳ ಕೊನೆವರೆಗೂ ನಡೆಯಲಿದೆ.

ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕೂಲಿ ನೀಡಬೇಕು ಎಂಬ ಉದ್ದೇಶದಿಂದ ಮಾರ್ಚ್‌ 15ರಿಂದ ‘ದುಡಿಯೋಣ ಬಾ’ ಎಂಬ ಅಭಿಯಾನವನ್ನೂ ಆರಂಭಿಸಲಾಗಿದ್ದು, ಈ ಅಭಿಯಾನದಡಿಯಲ್ಲೂ ಜಲ ಸಂರಕ್ಷಣೆ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಆದ್ಯತೆ ನೀಡಿದೆ. ಜೂನ್‌ ಅಂತ್ಯದವರೆಗೂ ಅಭಿಯಾನ ನಡೆಯಲಿದೆ.

ಬೇಸಿಗೆಯಲ್ಲಿ ಗ್ರಾಮೀಣ ಭಾಗದ ಜನರಿಗೆ ಕೆಲಸ ನೀಡಿದಂತೆಯೂ ಆಗುತ್ತದೆ. ಮಳೆಗಾಲಕ್ಕೂ ಮುನ್ನ, ಮಳೆ ನೀರಿನ ಸಂಗ್ರಹ ಹಾಗೂ ಜಲ ಸಂರಕ್ಷಣಕ್ಕೆ ಪೂರಕವಾದ ಕೆಲಸ ಮಾಡಿದಂತೆಯೂ ಆಗುತ್ತದೆ ಎಂಬ ಉದ್ದೇಶದಿಂದ ಎರಡೂ ಅಭಿಯಾನಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.

ಜಲಸಂರಕ್ಷಣೆ ಮತ್ತು ಮಳೆ ನೀರು ಸಂಗ್ರಹ, ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳನ್ನು ಪುನಃಶ್ಚೇತನಗೊಳಿಸುವುದು, ನೀರಿನ ಪುನರ್ ಬಳಕೆ ಮತ್ತು ಮರುಪೂರಣ ವ್ಯವಸ್ಥೆ, ಜಲಾನಯನ ಪ್ರದೇಶದ ಅಭಿವೃದ್ಧಿ, ಅರಣ್ಯೀಕರಣ ಈ ಅಭಿಯಾನದ ಪ್ರಮುಖ ಉದ್ದೇಶಗಳು.

ಯಾವುದೆಲ್ಲಾ ಕಾಮಗಾರಿ?: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆಗಳ ಹೂಳು ಎತ್ತುವುದು, ಕೆರೆ ಒತ್ತುವರಿ ತೆರವುಗೊಳಿಸುವುದು, ಆಸ್ತಿ ದಾಖಲೆ ಖಾತರಿ ಪಡಿಸುವುದು ಸೇರಿದಂತೆ ಕೆರೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಕಾಮಗಾರಿ, ಕೆರೆಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ, ಕೆರೆಗಳ ಏರಿ ದುರಸ್ತಿ,ಇಳಿಜಾರುಗಳಲ್ಲಿ ಗಿಡ ನೆಡುವುದು ಸೇರಿದಂತೆ ಸಂಗ್ರಹಿಸಿದ ನೀರು ಸೋರಿಕೆಯಾಗದಂತೆ ಮಾಡುವ ಕೆಲಸಗಳು.

ಕೆರೆ ಕೋಡಿ ಮತ್ತು ರೈತರ ಜಮೀನುಗಳಿಗೆ ನೀರು ಹರಿದು ಹೋಗುವ ಕಾಲುವೆಗಳನ್ನು ದುರಸ್ತಿಗೊಳಿಸುವುದು,ಕೆರೆಯ ಅಂಚಿನ ಖಾಲಿ ಪ್ರದೇಶಗಳಲ್ಲಿ ಸಸಿಗಳನ್ನು ಬೆಳೆಸುವುದು, ಕಲ್ಯಾಣಿಗಳು–ನಾಲೆಗಳ ಪುನಶ್ಚೇತನ, ಗೋಕಟ್ಟೆಗಳ ನಿರ್ಮಾಣ, ಹೊಸ ಕೆರೆ ನಿರ್ಮಾಣ, ಬಚ್ಚಲು ಗುಂಡಿ ನಿರ್ಮಿಸುವುದು,ಮಲ್ಟಿ ಆರ್ಚ್/ಗೇಬಿಯಾನ್ ಚೆಕ್ ಡ್ಯಾಂ ನಿರ್ಮಾಣ,ಜಮೀನುಗಳಲ್ಲಿ ಮಿನಿ ಅರಣ್ಯ ಅಭಿವೃದ್ಧಿ, ಬದು ನಿರ್ಮಾಣ, ಚೆಕ್‌ ಡ್ಯಾಂಗಳ ಹೂಳು ತೆಗೆಯುವುದು ಸೇರಿದಂತೆ ಹಲವು ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಅಭಿಯಾನದಲ್ಲಿ ಅವಕಾಶ ಇದೆ.

ದುಡಿಯೋಣ ಬಾ ಹಾಗೂ ಜಲಶಕ್ತಿ ಅಭಿಯಾನಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕೆ.ಎಂ.ಗಾಯತ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ) ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ (ಪಿಡಿಒ) ಹಲವು ಸಭೆ ನಡೆಸಿ, ಸಲಹೆ ಮಾರ್ಗದರ್ಶನ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಜಲ ಸಂರಕ್ಷಣೆ ಕಾಮಗಾರಿಗಳನ್ನು ಪಟ್ಟಿ ಮಾಡಿ ಕ್ರಿಯಾಯೋಜನೆ ಸಲ್ಲಿಸಿದ್ದಾರೆ. ಅದರಲ್ಲಿ ಕೆಲವು ಮಾರ್ಪಾಡು ಮಾಡಿ, ಪರಿಷ್ಕೃತ ಕ್ರಿಯಾಯೋಜನೆ ಸಲ್ಲಿಸುವಂತೆಯೂ ಸಿಇಒ ಸೂಚಿಸಿದ್ದಾರೆ.

ಸ್ಥಳ ಪರಿಶೀಲನೆಗೆ ಆ್ಯಪ್‌
ನರೇಗಾದಡಿ ಜಲ ಸಂರಕ್ಷಣಾ ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಗುರುತಿಸಲಾದ ಜಾಗ ಜಲ ಸಂರಕ್ಷಣೆಗೆ ಸೂಕ್ತವಾಗಿದೆಯೇ ಎಂಬುದನ್ನು ಅರಿಯಲಾಗುತ್ತದೆ.

ಇದಕ್ಕಾಗಿ ಸಿಎಲ್‌ಎಆರ್‌ಟಿ (CLART-Composite Landscape Assessment and Restoration Tools) ಆ್ಯಪ್‌ ಅನ್ನು ಬಳಸಲಾಗುತ್ತದೆ. ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ಆಧಾರಿತ ಈ ತಂತ್ರಾಂಶವು, ನಿರ್ದಿಷ್ಟ ಪ್ರದೇಶದ ಮಣ್ಣಿನ ರಕ್ಷಣೆ ಹಾಗೂ ನೀರಿನ ಸಂರಕ್ಷಣಾ ಕ್ರಮಗಳ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನೆರವಾಗುತ್ತದೆ‌.

‘ನಿರ್ದಿಷ್ಟ ಸ್ಥಳವು ಜಲ ಸಂರಕ್ಷಣಾ ಕಾಮಗಾರಿ ಕೈಗೊಳ್ಳಲು ಸೂಕ್ತವಾಗಿದೆಯೇ ಎಂಬುದನ್ನು ಈ ಆ್ಯಪ್‌ ನಾಲ್ಕು ಬಣ್ಣಗಳ ಮೂಲಕ ಸೂಚಿಸುತ್ತದೆ. ಹಸಿರು ಬಣ್ಣ ಬಂದರೆ ಜಲ ಸಂರಕ್ಷಣೆಗೆ ಅತ್ಯಂತ ಸೂಕ್ತ ಸ್ಥಳ (ಇಂಗು ಗುಂಡಿ, ಜಲ ಮರುಪೂರಣ, ಕಂದಕಗಳನ್ನು ನಿರ್ಮಿಸಬಹುದು), ಹಳದಿ ಬಂದರೆ ಸ್ವಲ್ಪ ಪ್ರಮಾಣದಲ್ಲಿ ಸೂಕ್ತ ಸ್ಥಳ (ಟ್ರೆಂಚ್‌ಗಳು, ಚೆಕ್‌ ಡ್ಯಾಮ್‌ ನಿರ್ಮಿಸಬಹುದು), ಕೆಂಪು ಬಂದರೆ ಮೇಲ್ಮೈ ಜಲ ಸಂಗ್ರಹಕ್ಕೆ ಪ್ರಶಸ್ತ ಜಾಗ (ಕೃಷಿ ಹೊಂಡ, ಕ್ಷೇತ್ರ ಬದು, ತೆರೆದ ಬಾವಿಗೆ ಸೂಕ್ತ) ಹಾಗೂ ನೇರಳೆ ಬಣ್ಣ ತೋರಿಸಿದರೆ ಸಂರಕ್ಷಿಸಬೇಕಾದ ಮತ್ತು ಪುನರುಜ್ಜೀವನಗೊಳಿಸಬೇಕಾದ ಪ್ರದೇಶಗಳು ಎಂದರ್ಥ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

*
ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲಿರುವ ಜಲ ಸರಂಕ್ಷಣಾ ಯೋಜನೆಗಳನ್ನು ಪಟ್ಟಿ ಮಾಡಿ, ಆದ್ಯತೆ ಮೇರೆಗೆ ಅನುಷ್ಠಾನಗೊಳಿಸುವಂತೆ ಪಿಡಿಒ, ಇಒಗಳಿಗೆ ಸೂಚಿಸಲಾಗಿದೆ
–ಕೆ.ಎಂ.ಗಾಯಿತ್ರಿ, ಜಿಲ್ಲಾ ಪಂಚಾಯಿತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT