ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನತಾ ಕರ್ಫ್ಯೂ: ಚಾಮರಾಜನಗರ ಜಿಲ್ಲೆ ಸ್ತಬ್ಧ ನಿಚ್ಚಳ

ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆಯವರೆಗೆ ಮನೆಯಲ್ಲೇ ಉಳಿಯಲು ಮೋದಿ ಸಲಹೆ, ಹಲವರ ಬೆಂಬಲ
Last Updated 21 ಮಾರ್ಚ್ 2020, 16:04 IST
ಅಕ್ಷರ ಗಾತ್ರ

ಚಾಮರಾಜನಗರ: ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪ್ರಧಾನಿ ಮೋದಿ ಅವರು ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ಜಿಲ್ಲೆಯ ವಿವಿಧ ಸಂಘಟನೆಗಳು, ಸಂಸ್ಥೆಗಳು ಹಾಗೂ ನಾಗರಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಬೆಳಿಗ್ಗೆ 7ರಿಂದ 9ರವರೆಗೆ ಜಿಲ್ಲೆ ಸ್ತಬ್ಧಗೊಳ್ಳುವುದು ಬಹುತೇಕ ನಿಚ್ಚಳವಾಗಿದೆ.

ತುರ್ತು ಸೇವೆಗಳನ್ನು ಬಿಟ್ಟು, ಇತರೆ ಯಾವುದೇ ಸೇವೆಗಳು ಜಿಲ್ಲೆಯಾದ್ಯಂತ ಲಭ್ಯವಾಗುವುದು ಅನುಮಾನ. ರಾಜ್ಯ ಸರ್ಕಾರವೂ ‘ಜನತಾ ಕರ್ಫ್ಯೂ’ಗೆ ಬೆಂಬಲ ಸೂಚಿಸಿರುವುದರಿಂದಜಿಲ್ಲಾಡಳಿತ, ಪೊಲೀಸ್‌ ಇಲಾಖೆ, ಸ್ಥಳೀಯ ನಗರ ಸಂಸ್ಥೆಗಳು ಈ ಕಾರ್ಯಕ್ರಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿವೆ.

ನಗರ, ಪಟ್ಟಣ ಹಾಗೂ ಹೋಬಳಿ ಮಟ್ಟದಲ್ಲಿ ಧ್ವನಿವರ್ಧಕದ ಮೂಲಕ ಬಾನುವಾರ ಆಚರಿಸಲಾಗುವ ಜನತಾ ಕರ್ಫ್ಯೂ ಬಗ್ಗೆ ತಿಳಿಹೇಳಿದ್ದು, ಸಮಾಜದ ಹಿತದೃಷ್ಟಿಯಿಂದ, ಕೊರೊನಾ ವೈರಸ್‌ ಹರಡುವುದನ್ನು ತಡೆಗಟ್ಟಲು ಭಾನುವಾರ ಇಡೀ ದಿನ ಅನಿವಾರ್ಯ ಸಂದರ್ಭ ಬಿಟ್ಟು ಹೊರಗಡೆ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿವೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರೂ ‘ಜನತಾ ಕರ್ಫ್ಯೂ’ ಬೆಂಬಲಿಸುವಂತೆ ಕರೆ ನೀಡಿದ್ದಾರೆ.

ಎಲ್ಲವೂ ಬಂದ್‌: ವೈದ್ಯಕೀಯ ಸೇವೆಗಳು, ಔಷಧಿಗಳು, ಹಾಲು, ದಿನಪತ್ರಿಕೆ, ಪೆಟ್ರೋಲ್‌ ಬಂಕ್‌ ಸೇರಿದಂತೆ ತುರ್ತು ಸೇವೆಗಳನ್ನು ಬಿಟ್ಟರೆ ಇನ್ನುಳಿದ ಯಾವ ಸೇವೆಗಳೂ ಭಾನುವಾರ ಲಭ್ಯವಿರುವ ಸಾಧ್ಯತೆ ಕ್ಷೀಣ.

ಕೆಎಸ್‌ಆರ್‌ಟಿಸಿ ತನ್ನ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ನಿರ್ಧರಿಸಿದೆ. ಖಾಸಗಿ ಬಸ್‌ಗಳ ಸಂಚಾರವೂ ಇರುವುದಿಲ್ಲ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘ ಹೇಳಿದೆ. ಬಹುತೇಕ ಆಟೊ ಚಾಲಕರ ಸಂಘಗಳು ಕೂಡ ಜನತಾ ಕರ್ಫ್ಯೂಗೆ ಬೆಂಬಲ ಸೂಚಿಸಿವೆ. ಹಾಗಾಗಿ ಭಾನುವಾರ ರಸ್ತೆಗಳಲ್ಲಿ ವಾಹನಗಳು ಓಡಾಡುವುದಿಲ್ಲ.

‘ಭಾನುವಾರ ಶೇ 100ರಷ್ಟು ಕಾರ್ಯಾಚರಣೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ. ಹಾಗಾಗಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ‌ವರೆಗೂ ನಮ್ಮ ಬಸ್‌ಗಳು ಸಂಚರಿಸುವುದಿಲ್ಲ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಂಘದ ಸದಸ್ಯರು ಈ ವಿಚಾರವಾಗಿ ಚರ್ಚೆ ನಡೆಸಿದ್ದು, ಮೋದಿ ಅವರ ಕರೆಯನ್ನು ಬೆಂಬಲಿಸಿ ಬಸ್‌ ಸೇವೆಯನ್ನು ಭಾನುವಾರ ಸ್ಥಗಿತಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ಜಿಲ್ಲಾ ಖಾಸಗಿ ಬಸ್‌ ಮಾಲೀಕರ ಸಂಘದ ಕಾರ್ಯದರ್ಶಿ ತ್ಯಾಗರಾಜ್‌ ಅವರು

ವರ್ತಕರ ಸಂಘ ಕೂಡ ಕರ್ಫ್ಯೂಗೆ ಬೆಂಬಲ ಸೂಚಿಸಿದ್ದು, ತನ್ನ ಸದಸ್ಯರಿಗೆ ಅಂಗಡಿಗಳನ್ನು ಮುಚ್ಚಿ ಪ್ರಧಾನಿ ಅವರ ಕರೆಯನ್ನು ಬೆಂಬಲಿಸುವಂತೆ ಕರೆ ನೀಡಿದೆ. ಹಾಗಾಗಿ, ಚಾಮರಾಜನಗರ ಸೇರಿದಂತೆ ಸೇರಿದಂತೆ ಜಿಲ್ಲೆಯಾದ್ಯಂತಹೋಟೆಲ್‌ಗಳು, ದಿನಸಿ ಅಂಗಡಿ, ಜವಳಿ, ಹಾರ್ಡ್‌ವೇರ್‌ ಸೇರಿದಂತೆ ಬಹುತೇಕ ಎಲ್ಲ ಅಂಗಡಿಗಳೂ ಬಂದ್‌ ಆಗುವುದು ಖಚಿತ.

ಸಾಮಾಜಿಕ ಜಾಲತಾಣಗಳಲ್ಲೂ ಜನತಾ ಕರ್ಫ್ಯೂ ಪರ ಹಲವು ಸಂದೇಶಗಳು ಓಡಾಡುತ್ತಿದ್ದು, ಜನರು ಕೂಡ ಮನೆಯಿಂದ ಹೊರಗಡೆ ಬರದೆ ಇದರಲ್ಲಿ ಭಾಗವಹಿಸುವ ಸಾಧ್ಯ‌ತೆ ಹೆಚ್ಚಾಗಿದೆ. ಹಿರಿಯ ನಾಗರಿಕ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪ್ರಧಾನಿ ಕರೆಯನ್ನು ಬೆಂಬಲಿಸಿವೆ.

ಬಿಜೆಪಿ ಜಿಲ್ಲಾ ಘಟಕ ಮನವಿ

ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಅವರು ‘ಜನತಾ ಕರ್ಫ್ಯೂ’ಗೆ ಸಾರ್ವಜನಿಕರ ಬೆಂಬಲ ಸೂಚಿಸಿ ಸಹಕರಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕ ಮನವಿ ಮಾಡಿದೆ.

‘ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಯಾರೂ ಮನೆಯಿಂದ ಹೊರಬರಬಾರದು ಎಂದು ಮೋದಿ ಅವರು ಮನವಿ ಮಾಡಿದ್ದಾರೆ. ಕೆಲವು ವಾರಗಳವರೆಗೆ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಗಡೆ ಬಾರದಂತೆಯೂ ಅವರು ಸಲಹೆ ನೀಡಿದ್ದಾರೆ. ಅದನ್ನು ಎಲ್ಲರೂ ಪಾಲಿಸಬೇಕು’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಆರ್‌.ಸುಂದರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

5 ನಿಮಿಷ ಅಭಿನಂದನೆ: ಕೊರೊನಾ ವೈರಸ್‌ ವಿರುದ್ಧದ ಹೋರಾಟದಲ್ಲಿ ಅವಿರತವಾಗಿ ಶ್ರಮಿಸುತ್ತಿರುವ ವೈದ್ಯರು, ಶುಶ್ರೂಷಕರು, ಪೊಲೀಸರು, ಸೈನಿಕರು, ಪೌರ ಕಾರ್ಮಿಕರು ಇವರೆಲ್ಲರಿಗೂ ಸಂಜೆ 5 ಗಂಟೆಗೆ 5 ನಿಮಿಷ ಚಪ್ಪಾಳೆ ತಟ್ಟುವ ಮೂಲಕ ಅಭಿನಂದನೆ ಸಲ್ಲಿಸೋಣ’ ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT