ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಡಿಸಿಎಂ ಡಿಕೆಶಿ ರಾಜೀನಾಮೆಗೆ ಜೆಡಿಎಸ್‌ ಆಗ್ರಹ, ಪ್ರತಿಭಟನೆ

ಪೆನ್‌ಡ್ರೈವ್‌ ಪ್ರಕರಣ; ಅಧಿಕಾರ ದುರ್ಬಳಕೆ, ಮಹಿಳೆಯರ ಮಾನ ಹಾನಿ ಆರೋಪ
Published 9 ಮೇ 2024, 13:37 IST
Last Updated 9 ಮೇ 2024, 13:37 IST
ಅಕ್ಷರ ಗಾತ್ರ

ಚಾಮರಾಜನಗರ: ಹಾಸನದ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸೇರಿದ ಪ್ರತಿಭಟನಕಾರರು ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ ರಾಜ್ಯ ಕಾಂಗ್ರೆಸ್‌ ಸರ್ಕಾರ, ಡಿ.ಕೆ.ಶಿವಕುಮಾರ್‌ ವಿರುದ್ಧ ಘೋಷಣೆ ಕೂಗಿದರು.

ಡಿ.ಕೆ.ಶಿವಕುಮಾರ್‌ ಅವರ ಭಾವಚಿತ್ರವನ್ನು ಪ್ರತಿಭಟನಕಾರರು ಸುಡಲು ಮುಂದಾದಾಗ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ನೂಕಾಟ, ತಳ್ಳಾಟ ಉಂಟಾಯಿತು.

ಜೆಡಿಎಸ್‌ ಮುಖಂಡ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರ ಉಸ್ತುವಾರಿ ಬಿ.ಪುಟ್ಟಸ್ವಾಮಿ ಮಾತನಾಡಿ, ‘ಪೆನ್‌ಡ್ರೈವ್‌ ಪ್ರಕರಣದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ. ಕಾಂಗ್ರೆಸ್‌ನವರು ಪೆನ್‌ಡ್ರೈವ್‌ಗಳನ್ನು ಹಂಚಿ ಮಹಿಳೆಯರ ಮಾನ ಹಾನಿಮಾಡಿದ್ದಾರೆ. ಪೆನ್‌ಡ್ರೈವ್‌ಗಳನ್ನು ಹಂಚಿದವರನ್ನು ಹೊರದೇಶಕ್ಕೆ ಕಳುಹಿಸಿದ್ದಾರೆ. ತಪ್ಪಿತಸ್ಥರನ್ನು ಶಿಕ್ಷಿಸುವುದು ಬಿಟ್ಟು, ಅಮಾಯಕರನ್ನು ಬಂಧಿಸಿದ್ದಾರೆ’ ಎಂದು ಆರೋಪಿಸಿದರು.

‘ಕಾಂಗ್ರೆಸ್‌ ಪಕ್ಷವು ಎಸ್‌ಐಟಿಯನ್ನು ಬಳಸಿಕೊಂಡು ನಿಜವಾದ ಅಪರಾಧಿಗಳನ್ನು ಬಂಧಿಸುವುದು ಬಿಟ್ಟು, ನಿರಪರಾಧಿಗಳನ್ನು ಬಂಧಿಸುತ್ತಿದೆ. ಉಪ ಮುಖ್ಯಮಂತ್ರಿ ಅವರ ಆಡಿಯೊವೇ ಇದಕ್ಕೆ ಸಾಕ್ಷಿ. ಅವರು ತಕ್ಷಣ ರಾಜೀನಾಮೆ ನೀಡಬೇಕು. ಪೆನ್‌ಡ್ರೈವ್‌ ಹಂಚಿ ಮಹಿಳೆಯರ ಮಾನ ಹಾನಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಮುಖಂಡ ಕಡಬೂರು ಮಂಜುನಾಥ್ ಮಾತನಾಡಿ, ‘ಪ್ರಜ್ವಲ್ ರೇವಣ್ಣ ತಪ್ಪು ಮಾಡಿದ್ದರೆ, ಅವರನ್ನು ಗಲ್ಲಿಗೇರಿಸಲಿ. ಅದಕ್ಕೆ ನಮ್ಮ ಸಹಮತ ಇದೆ. ಆದರೆ, ಎಸ್‌ಐಟಿ ತಂಡವು ಡಿಕೆಶಿ ತನಿಖಾ ತಂಡವಾಗಿದೆ. ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಆಲೂರು ಮಲ್ಲು, ರೇಚಂಬಳ್ಳಿ ಕುಮಾರ್, ಹೊಮ್ಮ ಮಹದೇವಸ್ವಾಮಿ, ವೈ.ಕೆ.ಮೋಳೆ ಸೋಮಣ್ಣ, ಶ್ರೀನಿವಾಸಗೌಡ, ಬಿ.ಎಂ.ಮಹದೇವಸ್ವಾಮಿ, ಸಿದ್ದರಾಜುನಾಯಕ, ಆನಂದ್, ಮಂಗಳಮ್ಮ, ಪುಷ್ಪಲತಾ, ರವಿರಾಮು, ಸೋಮು, ರವೀಶ್, ಶಂಕರ್, ಕುಮಾರ್, ಮಹದೇವಸ್ವಾಮಿ, ನಂದೀಶ್, ಶ್ರೀನಾಥ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT