ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಕ್ಷೇತ್ರ: ಲಿಂಗಾಯತ ಮುಖಂಡರ ವಿರುದ್ಧವೇ ಹರಿಹಾಯ್ದ ವಿ.ಸೋಮಣ್ಣ

Published 17 ಮೇ 2023, 10:20 IST
Last Updated 17 ಮೇ 2023, 10:20 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ವಿ.ಸೋಮಣ್ಣ ಅವರು ಬುಧವಾರ ಕೃತಜ್ಞತಾ ಸಭೆಯಲ್ಲಿ ಪಕ್ಷದ ಲಿಂಗಾಯತ ಮುಖಂಡರ ವಿರುದ್ಧವೇ ಅಸಮಾಧಾನ ಹೊರಹಾಕಿದರು.

'ನಾನು ನಂಬಿದವರೇ ಕತ್ತು ಕೊಯ್ದರು' ಎಂದು ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಭೆ ಆರಂಭವಾಗುತ್ತಲೇ ಕೆಲವು ಕಾರ್ಯಕರ್ತರು ಒಳೇಟಿನಿಂದಾಗಿ ಸೋಲಾಗಿದೆ ಎಂದು ಗದ್ದಲ ಎಬ್ಬಿಸಿದರು.

ಈ ಸಂದರ್ಭದಲ್ಲಿ ‌ಮಾತನಾಡಿದ ಸೋಮಣ್ಣ, 'ನನ್ನ ಸೋಲಿಗೆ ಯಾರು ಕಾರಣ ಎಂದು ಗೊತ್ತಿದೆ. ನಾನು ಏನೂ ತಿಳಿಯದೆ ಇರುವ ಮುಗ್ದ ಅಲ್ಲ. ಎಂಟು ಹತ್ತು ಜನರ ಪಾಪದ ಕೆಲಸದಿಂದ ಮನೆ ಹಾಳಾಗಿದೆ. ಸ್ವಂತ ತಮ್ಮನನ್ನೇ ಕೊಲೆ ಮಾಡಿದವನು‌ ಇಲ್ಲಿಗೆ ಬಂದಿದ್ದ. ಅಂತಹವರ ಜೊತೆ ಹೋಗುವ ನಮ್ಮವರು ಎಂತಹ ಮುಟ್ಠಾಳರು? ನಾನು ಬಯಸಿ ಇಲ್ಲಿ ಸ್ಪರ್ಧಿಸಿರಲಿಲ್ಲ. ಪಕ್ಷದ ಆದೇಶದ ಮೇರೆಗೆ ಬಂದೆ. ಜಿಲ್ಲೆಯನ್ನು ಅಭಿವೃದ್ಧಿ ಮಾಡುವ ಕನಸು ಕಂಡಿದ್ದೆ. ನಾಲ್ಕು ವರ್ಷಗಳಲ್ಲೇ ಅಭಿವೃದ್ಧಿ ಮಾಡುತ್ತಿದ್ದೆ. ಆದರೆ, ನನ್ನೊಬ್ಬನನ್ಜು ಸೋಲಿಸುವುದಕ್ಕಾಗಿ ಇಡೀ ಜಿಲ್ಲೆಯನ್ನೇ ಹಾಳು ಮಾಡಿದಿರಿ' ಎಂದು ಯಾರ ಹೆಸರು ಹೇಳದೆಯೇ ಅತೃಪ್ತಿ ಹೊರಹಾಕಿದರು.

'ನನ್ನನ್ನು ಸೋಲಿಸಲು ಅಲ್ಲಿಂದಲೇ ನಿರ್ದೇಶನ ಬಂದಿತ್ತು. 45 ವರ್ಷ ರಾಜಕೀಯ ಮಾಡಿದ್ದೇನೆ. ನನಗೆ ಎಲ್ಲವೂ ಗೊತ್ತು. ಯಥಾ ರಾಜ ತಥಾ ಪ್ರಜಾ. ಪ್ರಚಾರ ಸಭೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಇದ್ದರು. ಆದರೆ, ಅವರು 10 ನಿಮಿಷ ಇದ್ದರು. 60 ಕಿ.ಮೀ ದೂರವನ್ನು ರಸ್ತೆ ಮಾರ್ಗದಲ್ಲಿ ಹೋಗಬಾರದಿತ್ತೇ' ಎಂದು ಯಾರ ಹೆಸರು ಹೇಳದೆಯೇ ಆಕ್ರೋಶ ವ್ಯಕ್ತಪಡಿಸಿದರು.

'ಪಕ್ಷದ್ರೋಹ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ. ಪಕ್ಷದ ಜಿಲ್ಲಾದ್ಯಕ್ಷರೇ, ನಿಮಗೆ ನೈತಿಕತೆ ಇದ್ದರೆ ಅಂತಹವರನ್ನು ಪಕ್ಷದ ಕಚೇರಿಯಿಂದ ದೂರ ಇರಿಸಿ' ಎಂದು ಜಿಲ್ಲಾ ಘಟಕದ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್ ಉದ್ದೇಶಿಸಿ ಹೇಳಿದರು.

'ಗೆದ್ದರೆ ಸೋಮಣ್ಣ ಇಲ್ಲಿ ಇರುವುದಿಲ್ಲ ಎಂದು ಹೇಳಿದಿರಿ. ಮಗನನ್ನು ಕರೆದುಕೊಂಡು ಬರುತ್ತಾನೆ ಎಂದಿರಿ. ನಾನು ಇಲ್ಲೇ ಇರುತ್ತೇನೆ ಎಂದು ಹೇಳಿದ್ದೆ. 12 ಚುನಾವಣೆ ಎದುರಿಸಿರುವ ನನಗೆ ಯಾವತ್ತು ಇಂತಹ ಮಾನಸಿಕ ಯಾತನೆ ಆಗಿರಲಿಲ್ಲ.

ಮಹದೇಶ್ವರನ ಮೇಲಾಣೆ, ನನ್ನ ಮಕ್ಕಳ ಮೇಲಾಣೆ. ಇಲ್ಲಿಗೆ ನಾನಾಗಿಯೇ ಬರಲಿಲ್ಲ. ಪಕ್ಷದ ಆದೇಶದ ಮೇರೆಗೆ ಬಂದೆ' ಎಂದು ಮತ್ತೆ ಹೇಳಿದರು.

'ನಿಮಗೆ ಸ್ವಾಭಿಮಾನ, ಗೌರವ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಇಲ್ಲಿರುವ ಒಬ್ಬೊಬ್ಬನೂ 10 ಮತಗಳನ್ನು ಹಾಕಿಸಿದ್ದರೆ ಸಾಕಿತ್ತು. ನನಗೆ ಎಂತಹ ಬಳವಳಿ ಕೊಟ್ಟಿರಿ ನೀವು? ಈ ಕೃಪಾಪೋಷಿತ ನಾಟಕದಲ್ಲಿ ಮೋಸ ಮಾಡಿದವರು ನನ್ನ ಸಮುದಾಯದವರು. ಎಲ್ಲಿವರೆಗೆ ಮನೆಹಾಳು ಬಿದ್ದಿರುತ್ತದೋ ಅಲ್ಲಿಯವರೆಗೆ ಉದ್ಧಾರ ಆಗುವುದಿಲ್ಲ' ಎಂದು ಕಿಡಿ‌ಕಾರಿದರು.

'ಕೆಜೆಪಿ ಸ್ಥಾಪನೆಯಾದಾಗ ಅದಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಹೇಳಿದವನು ಸೋಮಣ್ಣ ಒಬ್ಬನೇ. ಬೇರೆ ಯಾರೂ ಇದನ್ನು ಹೇಳುವ ಧೈರ್ಯ ಮಾಡಲಿಲ್ಲ' ಎಂದು ಸೋಮಣ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT