ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿ ಕಟ್ಟಿ ಭಕ್ತಿ ತೋರಿಸಬೇಕೆಂದಿಲ್ಲ, ರಾಮನ ಆದರ್ಶ ನಮಗೆ ಮುಖ್ಯ: ಶಿವಾನಂದ ಪಾಟೀಲ

'ಚುನಾವಣೆಗೆ ರಾಮಮಂದಿರ ಬಳಕೆ ಸರಿಯಲ್ಲ'
Published 19 ಜನವರಿ 2024, 11:00 IST
Last Updated 19 ಜನವರಿ 2024, 11:00 IST
ಅಕ್ಷರ ಗಾತ್ರ

ಗುಂಡ್ಲುಪೇಟೆ (ಚಾಮರಾಜನಗರ): ‘ರಾಮನ ಮೇಲೆ ನಮಗೂ ಭಕ್ತಿ ಗೌರವವಿದೆ. ಹಾಗೆಂದು ಚುನಾವಣೆಗೆ ರಾಮ ಮಂದಿರವನ್ನು ಬಳಸಿಕೊಳ್ಳಬಾರದು’ ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಶುಕ್ರವಾರ ಹೇಳಿದರು.

ರಾಮಮಂದಿರ ಉದ್ಘಾಟನೆ ವಿಚಾರವಾಗಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ರಾಮನ ಮೇಲಿನ ಭಕ್ತಿಯನ್ನು ಗುಡಿ ಕಟ್ಟಿ ತೋರಿಸಬೇಕು ಎಂಬುದೇನಿಲ್ಲ. ರಾಮನ ಆದರ್ಶಗಳು ನಮಗೆ ಮುಖ್ಯ. ರಾಮಮಂದಿರ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಅಪೂರ್ಣ ಮಂದಿರವನ್ನು ಉದ್ಘಾಟನೆ ಮಾಡಬಾರದು ಎಂದು ಶಂಕರಾಚಾರ್ಯ ಪೀಠಗಳ ಪೂಜ್ಯರೂ ಹೇಳಿದ್ದಾರೆ. ಆದರೆ ಚುನಾವಣೆಯ ವಿಷಯವಾಗಿ ರಾಮಮಂದಿರ ಬಳಸಿಕೊಳ್ಳಲಾಗುತ್ತಿದೆ’ ಎಂದರು. 

ಬಾಬರಿ ಮಸೀದಿ ಮಾದರಿಯಲ್ಲಿ ಭಟ್ಜಳದ ಮಸೀದಿಯನ್ನು ಒಡೆಯುತ್ತೇವೆ ಎಂಬ ಸಂಸದ ಅನಂತಕುಮಾರ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಸಂಸ್ಕಾರ ಇರುವವರು ಹೇಳುವಂತಹ ಮಾತಲ್ಲ ಇದು. ನಾವು ಜಾತ್ಯತೀತವಾಗಿರಬೇಕು. ಒಂದು ಸಮುದಾಯ, ಧರ್ಮವನ್ನು ಗುರಿಮಾಡುವುದು ತಪ್ಪು’ ಎಂದರು.

ಕ್ಷಮೆ ಕೋರುವೆ: ಗುಂಡ್ಲುಪೇಟೆಯಲ್ಲಿ ಕಬ್ಬು ಬೆಳೆಗಾರರ ಸಂಘದವರ ಮನವಿ ಸ್ವೀಕರಿಸುವಾಗ, ರೈತರ ಕುರಿತ ವಿವಾದಾತ್ಮಕ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ ಶಿವಾನಂದ ಪಾಟೀಲ, ‘ರೈತರು ಬರಗಾಲ ಬರಲೆಂದು ಬಯಸುತ್ತಾರೆಂದು ನಾನು ಹೇಳಿಲ್ಲ, ಮಾಧ್ಯಮಗಳಲ್ಲಿ ಹೇಳಿಕೆಯನ್ನು ತಿರುಚಲಾಗಿದೆ. ನಾನು ರೈತ ವಿರೋಧಿ ಹೇಳಿಕೆ ಕೊಟ್ಟಿಲ್ಲ. ರಾಜ್ಯದ ರೈತರಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ’ ಎಂದರು.

‘ಕಬ್ಬಿನ ಹೆಚ್ಚುವರಿ ಹಣ ಬಾಕಿಯನ್ನು ಶೀಘ್ರವೇ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು. ಮಂಡಳಿ ಸಭೆಗೆ ಚಾಮರಾಜನಗರ ರೈತ ಮುಖಂಡರನ್ನು ಸೇರ್ಪಡೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.  

ಕಬ್ಬಿನ ಬೆಲೆ ಹೆಚ್ಚಳ ಬಗ್ಗೆ ಮಾತನಾಡುತ್ತಾ, ‘ಕೇಂದ್ರ ಸರ್ಕಾರವನ್ನು ನೀವೇಕೆ ಪ್ರಶ್ನೆ ಮಾಡುವುದಿಲ್ಲ? ದೇಶದ ಪ್ರಧಾನ ಮಂತ್ರಿಯಾಗಿದ್ದ ದೇವೇಗೌಡ ಅವರು ಹೋಗಿ ಮನವಿ ಮಾಡಿದ್ದಕ್ಕೆ ಬೆಲೆಯನ್ನು ₹ 300 ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರವನ್ನು ನೀವು ಪ್ರಶ್ನೆ ಮಾಡಬೇಕು’ ಎಂದು ರೈತ ಮುಖಂಡರಿಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT