ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಾದ್ಯಂತ ಬಿರುಸಿನ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

Published 21 ಮೇ 2024, 6:31 IST
Last Updated 21 ಮೇ 2024, 6:31 IST
ಅಕ್ಷರ ಗಾತ್ರ

ಚಾಮರಾಜನಗರ/ಗುಂಡ್ಲುಪೇಟೆ/ಯಳಂದೂರು/ಸಂತೇಮರಹಳ್ಳಿ: ಜಿಲ್ಲೆಯಾದ್ಯಂತ ಸೋಮವಾರ ಬಿರುಸಿನ ಮಳೆಯಾಗಿದೆ. 

ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಬೆಳಿಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಸಮಯದಲ್ಲಿ ಬಿಟ್ಟು ಬಿಟ್ಟು ಧಾರಾಕಾರ ಮಳೆಯಾಗಿದೆ. 

ಜಿಲ್ಲಾ ಕೇಂದ್ರ ಸೇರಿದಂತೆ ಚಾಮರಾಜನಗರ ತಾಲ್ಲೂಕಿನಲ್ಲಿ ಬೆಳಿಗ್ಗೆ 11ರ ನಂತರ ಆರಂಭವಾದ ಜಿಟಿ ಜಿಟಿ ಮಳೆ, ಮಧ್ಯಾಹ್ನದ ಹೊತ್ತಿಗೆ ಬಿರುಸುಗೊಂಡಿತು. ನಂತರ ಆರು ಗಂಟೆಯವರೆಗೂ ಬಿಟ್ಟಿತ್ತು. ನಂತರ ಮತ್ತೆ ಶುರುವಾಗಿ ತಡರಾತ್ರಿವರೆಗೂ ಸುರಿಯಿತು. 

ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಸೋಮವಾರ ಮಧ್ಯಾಹ್ನ ಭರ್ಜರಿ ಮಳೆಯಾಗಿದೆ. ದೇವಸ್ಥಾನಕ್ಕೆ ತೆರಳಲು ಚೆಕ್‌ಪೋಸ್ಟ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದ ಪ್ರವಾಸಿಗರು  ಮಳೆಗೆ ಸಿಲುಕಿಕೊಂಡರು. ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಬೆಟ್ಟದ ಮೇಲಿಂದ ಮಳೆ ನೀರು ಹೊಳೆ ರೂಪದಲ್ಲಿ ಹರಿಯಿತು. ಅಕ್ಕಪಕ್ಕದ ರಸ್ತೆ ಬದಿ ಅಂಗಡಿಗಳಿಗೆ ನೀರು ನುಗ್ಗಿದವು. ಬೆಟ್ಟದ ಭಾಗದಲ್ಲಿ ಧಾರಾಕಾರ ವರ್ಷಧಾರೆಯಾಗಿರುವುದರಿಂದ ಹಂಗಳ ಹಿರಿಕೆರೆಗೆ ನೀರು ಹರಿದು ಬರುತ್ತಿದೆ. ಹಂಗಳ, ಗುಂಡ್ಲುಪೇಟೆ, ಚೆನ್ನಮಲ್ಲಿಪುರ, ಗೋಪಾಲಪುರ, ದೇವರಲ್ಲಿ, ಹೊಂಗಳ್ಳಿ, ಬರಗಿ ಭಾಗಗಳಲ್ಲೂ ಉತ್ತಮ ವರ್ಷಧಾರೆಯಾಗಿದೆ. 

ಗುಂಡ್ಲುಪೇಟೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಇತರ ಕಡೆಗಳಲ್ಲಿ ಸಾಧಾರಣದಿಂದ ಉತ್ತಮ ಮಳೆ ಸುರಿದಿದೆ. 

ಯಳಂದೂರು ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದಲೇ ಮೋಡ ಮುಸುಕಿದ ವಾತಾವರಣ ಕಂಡು ಬಂದಿತ್ತು. 11 ಗಂಟೆ ವೇಳೆಗೆ ತುಂತುರು ಹನಿಯಿಂದ ಶುರುವಾದ ಮಳೆ ಮಧ್ಯಾಹ್ನದ ವೇಳೆಗೆ ಬಿರುಸು ಪಡೆಯಿತು.  ಇದೇ ಮೊದಲ ಬಾರಿಗೆ ಬಿಳಿಗಿರಿರಂಗನಬೆಟ್ಟ ಮತ್ತು ತಾಲ್ಲೂಕಿನ ಎಲ್ಲ ಗ್ರಾಮೀಣ ಪ್ರದೇಶಗಳಲ್ಲೂ ಮಳೆಯಾಗಿದೆ. 

ಸಂಜೆಯೂ ಗಾಳಿ ಸಹಿತ ಮಳೆಯಾಗಿದೆ. ಮಿಂಚು ಮತ್ತು ಗುಡುಗಿನ ಅಬ್ಬರವೂ. ಉತ್ತಮ ಮಳೆ ನಿರೀಕ್ಷೆಯಿಂದ ರೈತರು ಕೃಷಿ ಇಲಾಖೆ ಕೇಂದ್ರಗಳಲ್ಲಿ ಬಿತ್ತನೆ ಬೀಜಕೊಳ್ಳಲು ದಾಂಗುಡಿ ಇಟ್ಟರು. 

ಸಂತೇಮರಹಳ್ಳಿ ಹೋಬಳಿಯಾದ್ಯಂತ ಉತ್ತಮ ಮಳೆಯಾಗಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ. ಮಧ್ಯಾಹ್ನ ಆರಂಭವಾದ ಮಳೆ ಸಂಜೆವರೆಗೂ ಸಾಧಾರಣವಾಗಿ ಸುರಿಯಿತು. ಇದುವರೆಗೆ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೂ ಪೂರ್ಣ ಪ್ರಮಾಣದಲ್ಲಿ ಮಳೆಯಾಗಿರಲಿಲ್ಲ.

ಇದುವರೆಗೆ ಬಿದ್ದ ಮಳೆಗೆ ಕೆಲವು ಭಾಗಗಳಲ್ಲಿ ಬಿತ್ತನೆ ಮಾಡಲು ಸಾಧ್ಯವಿರಲಿಲ್ಲ. ಹಾಗಾಗಿ, ರೈತರು ಕೃಷಿ ಚಟುವಟಿಕೆಗಳಿಂದ ದೂರ ಉಳಿದಿದ್ದರು. ಸೋಮವಾರದ ಮಳೆ ಎಲ್ಲೆಡೆಯೂ ಬಂದಿರುವುದರಿಂದ  ರೈತರು ಬಿತ್ತನೆಗೆ ಸಜ್ಜುಗೊಂಡಿದ್ದಾರೆ. 

ಹೋಬಳಿ ವ್ಯಾಪ್ತಿಯ ಹೊಂಗನೂರು, ಇರಸವಾಡಿ, ಮಸಣಾಪುರ, ಗೂಳಿಪುರ, ಕೆಂಪನಪುರ ಹಾಗೂ ಸಂತೇಮರಹಳ್ಳಿ ಭಾಗಕ್ಕೆ ಉತ್ತಮವಾಗಿ ಮಳೆಯಾಗಿದೆ. ಕುದೇರು, ಉಮ್ಮತ್ತೂರು, ನವಿಲೂರು ಹಾಗೂ ಆಲ್ದೂರು ಗ್ರಾಮಗಳಿಗೆ ಸಾಧಾರಣವಾಗಿ ಮಳೆ ಸುರಿದಿದೆ.

ಕೊಳ್ಳೇಗಾಲ ನಗರ ತಾಲ್ಲೂಕು ವ್ಯಾಪ್ತಿಯಲ್ಲಿ, ಹನೂರು ಪಟ್ಟಣ, ಮಹದೇಶ್ವರ ಬೆಟ್ಟ ಹಾಗೂ ತಾಲ್ಲೂಕು ವ್ಯಾಪ್ತಿಯ ಎಲ್ಲೆಡೆಯೂ ಚೆನ್ನಾಗಿ ಮಳೆಯಾಗಿದೆ. 

ಕೊಳ್ಳೇಗಾಲ ನಗರದಲ್ಲಿ ರಸ್ತೆ, ಬಡಾವಣೆಗಳು, ಕ್ರೀಡಾಂಗಣಗಳಲ್ಲಿ ನೀರು ನಿಂತು ಸಮಸ್ಯೆಯಾಯಿತು. ತಗ್ಗುಪ್ರದೇಶದಲ್ಲಿರುವ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಚೆಕ್‌ಪೋಸ್ಟ್‌ ಬಳಿ ಬೆಟ್ಟದಿಂದ ಬಂದ ಭಾರಿ ಪ್ರಮಾಣದ ನೀರು ರಸ್ತೆಯಲ್ಲಿ ಹರಿಯಿತು
ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನ ಚೆಕ್‌ಪೋಸ್ಟ್‌ ಬಳಿ ಬೆಟ್ಟದಿಂದ ಬಂದ ಭಾರಿ ಪ್ರಮಾಣದ ನೀರು ರಸ್ತೆಯಲ್ಲಿ ಹರಿಯಿತು
ಯಳಂದೂರು ತಾಲ್ಲೂಕಿನ ಮದ್ದೂರು-ಆಲ್ಕೆರೆ ಅಗ್ರಹಾರ ಗ್ರಾಮದಲ್ಲಿ ಸೋಮವಾರ ಸುರಿದ ಮಳೆ ನಡುವೆ ಸೈಕಲ್ ಏರಿ ಹೊರಟ ವಿದ್ಯಾರ್ಥಿ
ಯಳಂದೂರು ತಾಲ್ಲೂಕಿನ ಮದ್ದೂರು-ಆಲ್ಕೆರೆ ಅಗ್ರಹಾರ ಗ್ರಾಮದಲ್ಲಿ ಸೋಮವಾರ ಸುರಿದ ಮಳೆ ನಡುವೆ ಸೈಕಲ್ ಏರಿ ಹೊರಟ ವಿದ್ಯಾರ್ಥಿ

1.21 ಸೆಂ.ಮೀ ಮಳೆ

ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಜಿಲ್ಲೆಯಾದ್ಯಂತ 1.21 ಸೆಂ.ಮೀ ಮಳೆಯಾಗಿದೆ.  ಹನೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 1.67 ಸೆಂ.ಮೀನಷ್ಟು ಮಳೆ ಬಿದ್ದಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿ 1.45 ಸೆಂ.ಮೀ ವರ್ಷಧಾರೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 0.92 ಸೆಂ.ಮೀ ಚಾಮರಾಜನಗರ ತಾಲ್ಲೂಕಿನಲ್ಲಿ 0.77 ಮತ್ತು ಯಳಂದೂರು ತಾಲ್ಲೂಕು ವ್ಯಾಪ್ತಿಯಲ್ಲಿ 0.38 ಸೆಂ.ಮೀ ನಷ್ಟು ವರ್ಷಧಾರೆಯಾಗಿದೆ.  ಮೇ 1ರಿಂದ 20ರವರೆಗೆ ಜಿಲ್ಲೆಯಲ್ಲಿ 9.1 ಸೆಂ.ಮೀ ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 7.5 ಸೆಂ.ಮೀ ಮಳೆಯಾಗುತ್ತದೆ. ಶೇಕಡವಾರು ಲೆಕ್ಕಾಚಾರದಲ್ಲಿ 22ರಷ್ಟು ಹೆಚ್ಚು ಮಳೆ ಬಿದ್ದಿದೆ.  ಇನ್ನೂ ಐದಾರು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT