ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ: ವಿನಯ್‌ ನಾಮಪತ್ರಕ್ಕೆ ತಡೆ, ನೋಟಿಸ್‌ ಜಾರಿ

ನಾಮಪತ್ರ ಪರಿಶೀಲನೆ: ಎಂಟು ನಾಮಪತ್ರಗಳು ಸಿಂಧು, ಹಾಲಿ ಅಧ್ಯಕ್ಷರ ವಿರುದ್ಧ ನಾಗೇಶ ಸೋಸ್ಲೆ ದೂರು
Last Updated 8 ಏಪ್ರಿಲ್ 2021, 16:19 IST
ಅಕ್ಷರ ಗಾತ್ರ

ಚಾಮರಾಜನಗರ: ಮೇ 9ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಲ್ಲಿಕೆಯಾಗಿರುವನಾಮಪತ್ರಗಳ ಪರಿಶೀಲನೆ ಕಾರ್ಯ ಗುರುವಾರ ನಡೆದಿದ್ದು, ಒಂಬತ್ತು ಮಂದಿಯ ಪೈಕಿ ಎಂಟು ಜನರ ನಾಮಪತ್ರ ಅಂಗೀಕೃತವಾಗಿದೆ.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್‌.ವಿನಯ್‌ ಅವರ ನಾಮಪತ್ರಕ್ಕೆ ಚುನಾವಣಾ ಅಧಿಕಾರಿಗಳು ತಡೆಯೊಡ್ಡಿದ್ದು, ಸ್ಪಷ್ಟನೆ ಕೋರಿ ನೋಟಿಸ್‌ ಜಾರಿ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆಯ ಒಳಗಾಗಿ ಪ್ರತಿಕ್ರಿಯಿಸುವಂತೆ ಸೂಚಿಸಿದ್ದಾರೆ.

‘ಬಿ.ಎಸ್‌.ವಿನಯ್‌ ಅವರು ಚಾಮರಾಜನಗರ ತಾಲ್ಲೂಕಿನ ವಿಳಾಸ ನೀಡಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಮಾತ್ರವಲ್ಲದೇ ತಮಿಳುನಾಡಿನ ಈರೋಡ್‌ ಜಿಲ್ಲೆಯ ತಾಳವಾಡಿಯ ವಿಳಾಸ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಲು ಬೆಂಗಳೂರಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ’ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ನಾಗೇಶ ಸೋಸ್ಲೆ ಅವರು ಚುನಾವಣಾ ಅಧಿಕಾರಿಗೆ ಗುರುವಾರ ದೂರು ನೀಡಿದ್ದರು.

‘ಅವರು ಎರಡು ಕಡೆಗಳಲ್ಲಿ ಸ್ಪರ್ಧಿಸಿರುವುದು ಕಸಾಪದ ನೀತಿಗೆ ವಿರುದ್ಧವಾಗಿರುತ್ತದೆ. ಜೊತೆಗೆ ಜಿಲ್ಲೆಯ ವಿಳಾಸ ಮಾತ್ರವಲ್ಲದೇ, ತಮಿಳುನಾಡಿನಲ್ಲಿ ಬೇನಾಮಿ ಹೆಸರಲ್ಲಿ ಅಕ್ರಮ ದಾಖಲೆ ಸೃಷ್ಟಿಸಿಕೊಂಡು ನಾಮ‍ಪತ್ರ ಸಲ್ಲಿಸಿರುವುದು ಅಪರಾಧವಾಗುತ್ತದೆ. ಆದ್ದರಿಂದ ಅವರ ನಾಮಪತ್ರ ವಜಾಗೊಳಿಸಿ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

ನೋಟಿಸ್‌ ನೀಡಿರುವ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಬಿ.ಎಸ್‌.ವಿನಯ್‌ ಅವರು, ‘ನಾನು ಎರಡು ಕಡೆ ಸ್ಪರ್ಧಿಸಿರುವುದು ನಿಜ. ಆದರೆ, ಚಾಮರಾಜನಗರದ ವಿಳಾಸವನ್ನೇ ನೀಡಿದ್ದೇನೆ. ಎರಡು ಕಡೆಯಿಂದ ಸ್ಪರ್ಧಿಸಬಾರದು ಎಂಬ ನಿಯಮ ಪರಿಷತ್ತಿನ ಬೈಲಾದಲ್ಲಿ ಇಲ್ಲ. ಚುನಾವಣಾ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ 2 ಗಂಟೆಯವರೆಗೂ ಕಾಲಾವಕಾಶ ಇದೆ. ಕಾನೂನು ತಜ್ಞರೊಂದಿಗೆ ಚರ್ಚಿಸಿ ಪ್ರತಿಕ್ರಿಯೆ ನೀಡುತ್ತೇನೆ’ ಎಂದು ಹೇಳಿದರು.

ಎಂಟು ನಾಮಪತ್ರ ಅಂಗೀಕೃತ

ಬಿ.ಎಸ್.ವಿನಯ್‌ ಮಾತ್ರವಲ್ಲದೇ ಪ್ರೊ.ಮಲೆಯೂರು ಗುರುಸ್ವಾಮಿ, ಸಿ.ಎಂ.ನರಸಿಂಹಮೂರ್ತಿ, ಶೈಲೇಶ್‌ ಕುಮಾರ್‌, ನಾಗೇಶ ಸೋಸ್ಲೆ, ನಿರಂಜನ್‌ಕುಮಾರ್‌, ಶಿವಾಲಂಕಾರಯ್ಯ, ಸ್ನೇಹ ಮತ್ತು ರವಿಕುಮಾರ್‌ ಮಾದಾಪುರ ಅವರು ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು.

‘ಬಿ.ಎಸ್‌.ವಿನಯ್‌ ಅವರನ್ನು ಬಿಟ್ಟು ಉಳಿದ ಎಲ್ಲರ ನಾಮಪತ್ರ ಸರಿಯಾಗಿದ್ದು, ಅಂಗೀಕೃತಗೊಂಡಿದೆ. ವಿನಯ್‌ ಅವರು ಎರಡು ಕಡೆ ಸದಸ್ಯತ್ವ ಹೊಂದಿದ್ದಾರೆ ಎಂದು ಆರೋಪಿಸಿ ನಾಗೇಶ ಸೋಸ್ಲೆ ಅವರು ತಕರಾರು ಸಲ್ಲಿಸಿರುವುದರಿಂದ ಅವರ ನಾಮಪತ್ರವನ್ನು ತಡೆ ಹಿಡಿದು ಸ್ಪಷ್ಟನೆ ನೀಡುವಂತೆ ನೋಟಿಸ್‌ ನೀಡಲಾಗಿದೆ’ ಎಂದು ಸಹಾಯಕ ಚುನಾವಣಾ ಅಧಿಕಾರಿ ಮಹದೇ‌ವಶೆಟ್ಟಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT