ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೇರಿದ ಚುನಾವಣಾ ಅಖಾಡ; ಪ್ರಚಾರ ಬಿರುಸು

ಕಾಂಗ್ರೆಸ್‌, ಬಿಜೆಪಿ ನಡುವೆ ಪೈಪೋಟಿ, ಮೂರು ವಾರ್ಡ್‌ಗಳಲ್ಲಿ ಬಿಎಸ್‌ಪಿಯಿಂದಲೂ ಅಭ್ಯರ್ಥಿಗಳು
Last Updated 22 ಅಕ್ಟೋಬರ್ 2022, 5:59 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ನಗರಸಭೆಯ ಏಳು ವಾರ್ಡ್‌ಗಳ ಉಪ ಚುನಾವಣಾ ಕಣ ರಂಗೇರಿದ್ದು, ಮತದಾನಕ್ಕೆ (ಅ.28) ಇನ್ನು ವಾರವಷ್ಟೇ ಬಾಕಿ ಇದೆ.

ನಗರಸಭೆಯ ಅಧಿಕಾರಾವಧಿ ಇನ್ನೂ ಎರಡು ವರ್ಷಗಳಿದ್ದು, ಏಳು ವಾರ್ಡ್‌ಗಳಲ್ಲಿ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ರಾಜಕೀಯ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ.

ಕಾಂಗ್ರೆಸ್‌ ಹಾಗೂ ಬಿಜೆಪಿ ಏಳೂ ಸ್ಥಾನಗಳಲ್ಲೂ ಸ್ಪರ್ಧಿಸಿವೆ.ಬಿಎಸ್‌ಪಿಯು ಮೂರು ವಾರ್ಡ್‌, ಜೆಡಿಎಸ್‌, ಎಸ್‌ಡಿಪಿಐ ಹಾಗೂ ಕೆಆರ್‌ಎಸ್‌ ತಲಾ ಒಂದು ವಾರ್ಡ್‌ನಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹಿಂದಿನ ಚುನಾವಣೆಯಲ್ಲಿ ಏಳೂ ವಾರ್ಡ್‌ಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಗೆದ್ದಿದ್ದರು. ಈಗ ಏಳು ಜನರ ಪೈಕಿ ಆರು ಮಂದಿ ಬಿಜೆಪಿ ಅಭ್ಯರ್ಥಿಗಳಾಗಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಪೈಪೋಟಿ ಇರುವಂತೆ ಮೇಲ್ನೋಟಕ್ಕೆ ಕಂಡು ಬಂದರೂ, ಈ ವಾರ್ಡ್‌ಗಳಲ್ಲಿ ಬಿಎಸ್‌ಪಿ ಬೆಂಬಲಿಗರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಾಂಗ್ರೆಸ್‌ ಹಾಗೂ ಬಿಜೆಪಿಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಅದರಲ್ಲೂ ಶಾಸಕ ಎನ್‌.ಮಹೇಶ್ ಅವರಿಗೆ ಈ ಚುನಾವಣೆ ಬಹುದೊಡ್ಡ ಸವಾಲು. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿಯಲ್ಲಿದ್ದ ಅವರ ಬೆಂಬಲಿಗರು ಗೆದ್ದಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದರಿಂದ ಅವರ ಸದಸ್ಯತ್ವ ಅನರ್ಹಗೊಂಡಿತ್ತು. ಉಪ ಚುನಾವಣೆಯಲ್ಲಿ ಅನರ್ಹಗೊಂಡಿದ್ದ ಏಳು ಮಂದಿಯ ಪೈಕಿ ಆರು ಮಂದಿಗೆ ಶಾಸಕರೇ ಟಿಕೆಟ್‌ ಕೊಡಿಸಿದ್ದಾರೆ. ಮತ್ತೆ ಅವರನ್ನು ಗೆಲ್ಲಿಸುವ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.

ಕಾಂಗ್ರೆಸ್‌ ಮುಖಂಡರು ಕೂಡ ಇದನ್ನು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿದ್ದಾರೆ.ಕೆಪಿಸಿಸಿ ಕಾರ್ಯದ್ಯಕ್ಷ ಆರ್.ಧ್ರುವನಾರಾಯಣ, ಮುಖಂಡರಾದ ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಬಾಲರಾಜ್ ಅವರು ಕೂಡ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಓಡಾಡುತ್ತಿದ್ದಾರೆ.

ಮನವೊಲಿಕೆ ಯತ್ನ: ಈ ಮಧ್ಯೆ, ಅಭ್ಯರ್ಥಿಗಳು ತಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಪ್ರಚಾರ ಶುರು ಮಾಡಿದ್ದಾರೆ. ಮತದಾರರ ಮನವೊಲಿಸಲು ಯತ್ನಿಸುತ್ತಿದ್ದಾರೆ.

ಬಡಾವಣೆಯ ಮುಖಂಡರನ್ನು ಹಾಗೂ ಹೆಚ್ಚು ಮತಗಳನ್ನು ಹೊಂದಿರುವ ಕುಟುಂಬಗಳನ್ನು ಖುದ್ದಾಗಿ ಭೇಟಿ ಮಾಡಿ ಮತ ಹಾಕುವಂತೆ ಮನವಿ ಮಾಡುತ್ತಿದ್ದಾರೆ. ಮತದಾರರನ್ನು ಸೆಳೆಯಲು ಊಟ, ತಿಂಡಿ ಉಪಚಾರಗಳು ನಡೆಯುತ್ತಿವೆ.

ಮುಖಂಡರಿಂದ ಪ್ರಚಾರ: ಬಿಜೆಪಿ, ಕಾಂಗ್ರೆಸ್‌ ಅಭ್ಯರ್ಥಿಗಳ ಪರವಾಗಿ ಸ್ಥಳೀಯ ಮುಖಂಡರಲ್ಲದೆ ಬೇರೆ ಕ್ಷೇತ್ರಗಳ ಶಾಸಕರು ಮುಖಂಡರು ಭಾಗವಹಿಸಲಿದ್ದಾರೆ.

ಬಿಜೆಪಿ ಪರ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಂಸದ ವಿ.ಶ್ರೀನಿವಾಸ್ ಪ್ರಸಾದ್, ಗುಂಡ್ಲಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಸೇರಿದಂತೆ ಅನೇಕ ಮುಖಂಡರು ಪ್ರಚಾರ ಮಾಡಲಿದ್ದಾರೆ ಎಂದು ಹೇಳುತ್ತಾರೆ ಮುಖಂಡರು.

ಕಾಂಗ್ರೆಸ್‍ನಿಂದ ಕೆಪಿಸಿಸಿ ಕಾರ್ಯಧ್ಯಕ್ಷ ಆರ್.ಧ್ರುವನಾರಾಯಣ, ಶಾಸಕ ಆರ್.ನರೇಂದ್ರ, ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ ಹಾಗೂ ಮಾಜಿ ಶಾಸಕರು ಆಗಮಿಸಲಿದ್ದಾರೆ ಎಂದು ಪಕ್ಷದ ಮುಖಂಡರು ಮಾಹಿತಿ ನೀಡಿದ್ದಾರೆ.

7 ವಾರ್ಡ್‍ಗಳಲ್ಲಿ 24 ಮಂದಿ ಕಣದಲ್ಲಿ...
ಏಳು ವಾರ್ಡ್‌ಗಳಿಗೆ 25 ಮಂದಿ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್‌ನಿಂದ ಉಮೇದುವಾರಿಕೆ ಸಲ್ಲಿಸಿದ್ದ ಒಬ್ಬರ ನಾಮಪತ್ರ ತಿರಸ್ಕೃತವಾಗಿತ್ತು. ಹಾಗಾಗಿ, ಅಂತಿಮ ಕಣದಲ್ಲಿ 24 ಮಂದಿ ಇದ್ದಾರೆ.

ಮಂದಿ ನಾಮಪತ್ರವನ್ನು ಸಲ್ಲಿಸಿದ್ದರು ಆದರೆ ಒಬ್ಬ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡ ಕಾರಣ 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗುರುವಾರ ನಾಮಪತ್ರವನ್ನು ವಾಪಾಸ್ ಪಡೆಯುವ ಕೊನೆಯ ದಿನವಾಗಿತ್ತು ಯಾರು ನಾಮಪತ್ರವನ್ನು ಹಿಂಪಡೆಯದ ಕಾರಣ 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಹಾಗಾಗಿ ಬೆಳಗ್ಗೆ ಮತ್ತು ಸಂಜೆ ಪ್ರಚಾರದ ಜೋರಾಗಿ ನಡೆಯುತ್ತದೆ.

2ನೇ ವಾರ್ಡ್‌ನಲ್ಲಿ ಮೂವರು, ಆರನೇ ವಾರ್ಡ್‌ನಲ್ಲಿ ಇಬ್ಬರು, ಏಳನೇ ವಾರ್ಡ್‌ನಲ್ಲಿ ಐವರು, 13ನೇ ವಾರ್ಡ್‌ನಲ್ಲಿ ಇಬ್ಬರು, 21ನೇ ವಾರ್ಡ್‌ನಲ್ಲಿ ನಾಲ್ಕು ಮಂದಿ, 25ನೇ ವಾರ್ಡ್‌ನಲ್ಲಿ ಐವರು ಹಾಗೂ 26ನೇ ವಾರ್ಡ್‌ನಲ್ಲಿ ಮೂರು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

--

ಏಳೂ ವಾರ್ಡ್‍ಗಳಲ್ಲೂ ನಾವೇ ಗೆಲ್ಲುತ್ತೇವೆ. ಇದರಲ್ಲಿ ಅನುಮಾನವಿಲ್ಲ. ಬಿಜೆಪಿ ಸರ್ಕಾರದ ಸಾಧನೆ ಏನು ಎಂಬುದು ಪ್ರತಿಯೊಬ್ಬರಿಗೂ ತಿಳಿದಿದೆ.
-ಎನ್.ಮಹೇಶ್, ಶಾಸಕ

--

ನಮ್ಮ ಅಭ್ಯರ್ಥಿಗಳು ಹೆಚ್ಚಿನ ಮತ ಪಡೆದು ಗೆಲ್ಲಲಿದ್ದಾರೆ. ಪ್ರಚಾರವನ್ನೂ ಆರಂಭಿಸಲಾಗಿದೆ. ಪಕ್ಷದ ವರಿಷ್ಠರು ಕೂಡ ಪ‍್ರಚಾರದಲ್ಲಿ ಭಾಗವಹಿಸಲಿದ್ದಾರೆ
-ಎ.ಆರ್.ಕೃಷ್ಣ ಮೂರ್ತಿ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT