ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ | ರೇಖಾ ಸಾವು ನಿಗೂಢ, ಮಗಳು ಸುರಕ್ಷಿತ?

Published 18 ಡಿಸೆಂಬರ್ 2023, 5:03 IST
Last Updated 18 ಡಿಸೆಂಬರ್ 2023, 5:03 IST
ಅಕ್ಷರ ಗಾತ್ರ

ಚಾಮರಾಜನಗರ/ಕೊಳ್ಳೇಗಾಲ: ಇಲ್ಲಿನ ಆದರ್ಶ ನಗರ ಬಡಾವಣೆಯ ನಿವಾಸಿ ರೇಖಾ ಅವರ ಅನುಮಾನಾಸ್ಪದ ಸಾವು ಬಡಾವಣೆಯ ನಿವಾಸಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದ್ದು, ಆಕೆಯ ಮಗಳು ದೀಕ್ಷಿತ ಆಲಿಯಾಸ್ ಮನ್ವಿತಾ ಇನ್ನೂ ಪತ್ತೆಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ. 

ರೇಖಾ ತಂದೆ ನಾಗರಾಜು ನೀಡಿರುವ ದೂರಿನ ಅನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ದೂರಿನಲ್ಲಿ ಉಲ್ಲೇಖಿಸಿರುವ ಸೆಸ್ಕ್‌ ನೌಕರ ನಾಗೇಂದ್ರ ಹಾಗೂ ಅವರ ಚಿಕ್ಕಪ್ಪ, ಪೊಲೀಸ್‌ ಜೀಪು ಚಾಲಕ ಶಂಕರ್‌ ತಲೆ ಮರೆಸಿಕೊಂಡಿದ್ದು, ಇಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. 

ಬಾಲಕಿ ಮನ್ವಿತಾಳ ಬಗ್ಗೆ ಸುಳಿವು ಸಿಕ್ಕಿದ್ದು, ಆಕೆ ಸುರಕ್ಷಿತವಾಗಿದ್ದಾಳೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಪೊಲೀಸ್‌ ಅಧಿಕಾರಿಗಳು ಯಾರೂ ಈ ಬಗ್ಗೆ ಮಾಹಿತಿ ನೀಡುತ್ತಿಲ್ಲ. 

‘ಇಬ್ಬರೂ ಆರೋಪಿಗಳು ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡು ಪರಾರಿಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ’ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಕೊಲೆಯೋ, ಆತ್ಮಹತ್ಯೆಯೋ?

ರೇಖಾ ಅವರನ್ನು ಕೊಲೆ ಮಾಡಲಾಗಿದೆಯೋ ಅಥವಾ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮನೆಯಲ್ಲಿ ಮಗಳು ಇದ್ದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. 

ಮೊಮ್ಮಗಳ ಬಗ್ಗೆ ಆತಂಕ

ರೇಖಾ ಅವರ ತಂದೆ –ತಾಯಿ, ಮೊಮ್ಮಗಳ ಆತಂಕ ಹೊಂದಿದ್ದಾರೆ. 

ಚಾಮರಾಜನಗರ ಸಿಮ್ಸ್‌ ಬೋಧನಾ ಆಸ್ಪತ್ರೆಯ ಶವಾಗಾರದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಇದಕ್ಕೆಲ್ಲ ನಾಗೇಂದ್ರನೇ ಕಾರಣ. ನಮ್ಮ ಮೊಮ್ಮಗಳಿಗೂ ಏನಾದರೂ ಆತ ಮಾಡಿರುತ್ತಾನೆ’ ಎಂದು ದುಃಖಿಸಿದರು. 

‘ಎರಡು ವರ್ಷಗಳ ಹಿಂದೆ ರೇಖಾ ಗಂಡ ಆತ್ಮಹತ್ಯೆ ಮಾಡಿಕೊಳ್ಳಲೂ ನಾಗೇಂದ್ರನೇ ಕಾರಣ’ ಎಂದು ರೇಖಾ ತಂದೆ ನಾಗರಾಜು ದೂರಿದರು.

ಮನೆಗೆ ಬರುತ್ತಿದ್ದ ನಾಗೇಂದ್ರ

ರೇಖಾ ಅವರಿಗೆ ಆದರ್ಶ ನಗರದಲ್ಲಿ ನಾಗೇಂದ್ರ ಅವರೇ ಮನೆ ಮಾಡಿಕೊಟ್ಟಿದ್ದರು. ಮನೆಗೆ ಪ್ರತಿ ದಿನ ಬರುತ್ತಿದ್ದರು ಎಂಬ ಸಂಗತಿಯನ್ನು ನೆರೆ ಹೊರೆಯವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ರೇಖಾ ಮಗಳು ಮನ್ವಿತಾ ಒಂದು ವಾರದಿಂದ ಮನೆಯಲ್ಲಿ ಇರಲಿಲ್ಲ ಎಂಬುದನ್ನು ನೆರೆಹೊರೆಯವರು ಖಚಿತ ಪಡಿಸಿದ್ದಾರೆ. ವಾರದ ಹಿಂದೆಯೇ ಆಕೆಯನ್ನು ನಾಗೇಂದ್ರ ಅನಾಥ ಆಶ್ರಮವೊಂದಕ್ಕೆ ಸೇರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಪೊಲೀಸರು ಇದನ್ನು ದೃಢಪಡಿಸಿಲ್ಲ.

ಕೆಲಸಕ್ಕೆ ರಜೆ

ಸೆಸ್ಕ್‌ನಲ್ಲಿ ಕೆಲಸ ಮಾಡುವ ನಾಗೇಂದ್ರ ಶನಿವಾರ ಬೆಳಿಗ್ಗೆಯೂ ಕಚೇರಿಗೆ ಬಂದಿದ್ದರು. ಎರಡು ದಿನ ಕಚೇರಿಗೆ ಬರುವುದಿಲ್ಲ ಎಂದು ಅಧಿಕಾರಿಗಳ ಗಮನಕ್ಕೆ ತಂದು ಹೋಗಿದ್ದಾರೆ ಎಂದು ಅವರ ಸಹೋದ್ಯೋಗಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಲೇ ಪೊಲೀಸರು ನಾಗೇಂದ್ರ ಅವರಿಗೆ ಕರೆ ಮಾಡಿದ್ದಾರೆ. ಆದರೆ, ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ. 

ಸಮಗ್ರವಾಗಿ ತನಿಖೆ

ಎಸ್‌ಪಿ ಈ ಬಗ್ಗೆ ’ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ‘ರೇಖಾ ಅವರದ್ದು ಕೊಲೆಯೋ ಆತ್ಮಹತ್ಯೆಯೇ ಎಂಬುದು ಸ್ಪಷ್ಟವಾಗಿಲ್ಲ. ಮರಣೋತ್ತರ ಪರೀಕ್ಷೆಯ ವರದಿ ಬಂದಾಗಲಷ್ಟೇ ಸ್ಪಷ್ಟ ಕಾರಣ ಗೊತ್ತಾಗಲಿದೆ. ಆದರೆ ಈ ‍ಪ್ರಕರಣದಲ್ಲಿ ನಾಗೇಂದ್ರ ಭಾಗಿಯಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಅವರು ತಲೆಮರೆಸಿಕೊಂಡಿದ್ದಾರೆ. ಹುಡುಕಾಟ ನಡೆಸುತ್ತಿದ್ದೇವೆ’ ಎಂದರು.  ಇಲಾಖೆ ಸಿಬ್ಬಂದಿ ಶಂಕರ್‌ ಮೇಲೆ ಆರೋಪ ಬಂದಿರುವ ಬಗ್ಗೆ ಕೇಳಿದ್ದಕ್ಕೆ ‘ಅವರ ಮೇಲೆ ಕೊಲೆ ಆರೋಪ ಮಾಡಲಾಗಿಲ್ಲ. ಆರು ತಿಂಗಳ ಹಿಂದೆ ಮಹಿಳೆಯ ತಂದೆ ತಾಯಿಯರನ್ನು ಬೆದರಿಸಿದ್ದರು ಎಂದು ದೂರಲಾಗಿದೆ. ಅವರು ಕೂಡ ತಲೆ ಮರೆಸಿಕೊಂಡಿದ್ದಾರೆ. ಅವರು ಭಾಗಿಯಾಗಿದ್ದಾರೆಯೇ ಎಂಬುದನ್ನೂ ತನಿಖೆ ನಡೆಸುತ್ತೇವೆ. ಸಾಬೀತಾದಾರೆ ಅವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುತ್ತೇವೆ’ ಎಂದರು.  ‘ಬಾಲಕಿ ಇನ್ನೂ ಪತ್ತೆಯಾಗಿಲ್ಲ. ಪ್ರಕರಣವನ್ನು ಸಮಗ್ರವಾಗಿ ತನಿಖೆ ನಡೆಸಲಾಗುವುದು’ ಎಂದು ಅವರು ಹೇಳಿದರು. 

ಓಡಿ ಹೋದ ಪೊಲೀಸ್‌ ಜೀಪು ಚಾಲಕ!

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಶಂಕರ್‌ ಅವರು ಕೊಳ್ಳೇಗಾಲ ಪಟ್ಟಣ ಠಾಣೆಯ ‍ಪಿಎಸ್‌ಐ ಅವರ ಜೀಪಿನ ಚಾಲಕ.  ಶನಿವಾರ ರೇಖಾ ಅವರ ಶವ ಪತ್ತೆಯಾದ ವಿಷಯ ತಿಳಿದ ತಕ್ಷಣಕ್ಕೆ ಪಿಎಸ್‌ಐ ಮಹೇಶ್‌ ಕುಮಾರ್‌ ಅವರನ್ನು ಶಂಕರ್‌ ಅವರೇ ಸ್ಥಳಕ್ಕೆ ಕರೆದುಕೊಂಡು ಬಂದಿದ್ದರು.   ಸ್ಥಳಕ್ಕೆ ಬಂದಿದ್ದ ರೇಖಾ ತಂದೆ ನಾಗರಾಜು ಅವರು ‘ನನ್ನ ಮಗಳ ಸಾವಿಗೆ  ನಾಗೇಂದ್ರ ಹಾಗೂ ನಿಮ್ಮ ಇಲಾಖೆ ಸಿಬ್ಬಂದಿ ಶಂಕರ್ ಅವರೇ ನೇರ ಕಾರಣ ಇಬ್ಬರೂ ಸೇರಿಯೇ ಕೊಲೆ ಮಾಡಿದ್ದಾರೆ. ‘ನಾನು ಪೊಲೀಸ್ ಇಲಾಖೆಯಲ್ಲಿ ಇದ್ದೇನೆ ನನ್ನನ್ನು ಯಾರು ಏನೂ ಮಾಡುವುದಿಲ್ಲ ಎಂದು ದರ್ಪದಲ್ಲಿ ಹೇಳಿಕೊಳ್ಳುತ್ತಿದ್ದರು’ ಎಂದು ಪಿಎಸ್ಐ ಮಹೇಶ್ ಕುಮಾರ್ ಅವರಿಗೆ ಹೇಳಿದ ತಕ್ಷಣವೇ ಶಂಕರ್ ಅವರು ಜೀಪನ್ನು ಅಲ್ಲೇ ಬಿಟ್ಟು ಓಡಿ ಹೋದರು. ಐದು ನಿಮಿಷದ ನಂತರ ಪೊಲೀಸ್ ಸಿಬ್ಬಂದಿ ಶಂಕರ್... ಶಂಕರ್... ಎಂದು ಕೂಗಿತ್ತಿದ್ದರೆ ಇವರು ಅಲ್ಲಿರಲಿಲ್ಲ. ಶಂಕರ್ ಕೂಡ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. 

ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ್ದ ಎಸ್‌ಪಿ ಪದ್ಮಿನಿ ಸಾಹು ಅವರು ಸ್ಥಳೀಯರಿಂದ ಮಾಹಿತಿ ಪಡೆದರು
ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿದ್ದ ಎಸ್‌ಪಿ ಪದ್ಮಿನಿ ಸಾಹು ಅವರು ಸ್ಥಳೀಯರಿಂದ ಮಾಹಿತಿ ಪಡೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT