ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಸಾಗುವಳಿದಾರಿಗೆ ಕೃಷಿ ಯಂತ್ರಧಾರೆ ಆಸರೆ

ಯಂತ್ರಗಳನ್ನು ಖರೀದಿಸಲು ಸಾಧ್ಯವಾಗದವರಿಗೆ ಪ್ರಯೋಜನ
Published 20 ಮೇ 2023, 23:30 IST
Last Updated 20 ಮೇ 2023, 23:30 IST
ಅಕ್ಷರ ಗಾತ್ರ

ಯಳಂದೂರು: ಆಧುನಿಕ ಯಂತ್ರೋಪಕರಣ ಪೂರೈಸುವ ಮೂಲಕ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅನ್ನದಾತರಿಗೆ ನೆರವಾಗಿದೆ. ‘ಕೃಷಿ ಯಂತ್ರಧಾರೆ’ ಯೋಜನೆ ಮೂಲಕ ಐದು ವರ್ಷಗಳಲ್ಲಿ ಸಾವಿರಾರು ರೈತರಿಗೆ ಯೋಜನೆಯ ಲಾಭವನ್ನು ವಿಸ್ತರಿಸಿದೆ. ಈಗ ಪೂರ್ವ ಮುಂಗಾರು ಚುರುಕಾಗಿದ್ದು, ಉತ್ತುವ ಹಾಗೂ ಬಿತ್ತುವ ಕಾಯಕಕ್ಕೆ ಯಂತ್ರಗಳನ್ನು ಒದಗಿಸುತ್ತಿದೆ.

ತಾಲ್ಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಆವರಿಸಿದೆ. ಭೂಮಿ ಹಸನುಗೊಳಿಸಲು ಹೆಚ್ಚು ಹಣ ನೀಡಿದರೂ ಶ್ರಮಿಕರು ಸಿಗದಂತಹ ಕಾಲಘಟ್ಟದಲ್ಲಿ ಆ ಕೊರತೆಯನ್ನು ಯಂತ್ರಗಳು ನೀಗಿಸುತ್ತಿವೆ. ಟ್ರ್ಯಾಕ್ಟರ್ ಮತ್ತು ಟಿಲ್ಲರ್‌ಗಳನ್ನು ಕೊಳ್ಳಲು ಸಾಧ್ಯವಾಗದ ಸಣ್ಣ, ಸತಿಸಣ್ಣ ಹಿಡುವಳಿದಾರರಿಗೆ ಕಡಿಮೆ ವೆಚ್ಚದ ಯಂತ್ರೀಕರಣದಿಂದ ಲಾಭವಾಗುತ್ತಿದೆ.  

ಅಗರದಲ್ಲಿ ಯಂತ್ರಧಾರೆ ಕೇಂದ್ರ ಇದ್ದು, ಇದನ್ನು ಧರ್ಮಸ್ಥಳ ಸಂಸ್ಥೆ ನಿರ್ವಹಿಸುತ್ತಿದೆ. ಹೊನ್ನೂರಿನಲ್ಲಿ ಚಿತ್ರದುರ್ಗದ ವರ್ಷಾ ಅಸೋಸಿಯೇಟ್ ಸಂಸ್ಥೆಯೂ ಕಾರ್ಯ ನಿರ್ವಹಿಸುತ್ತಿದೆ. ಆರಂಭದಲ್ಲಿ ಯಂತ್ರ ಕೊಳ್ಳಲು 70:30 ಅನುಪಾತದಲ್ಲಿ ಸರ್ಕಾರ ಹಾಗೂ ಸಂಸ್ಥೆಗಳು ಖರೀದಿ ವೆಚ್ಚವನ್ನು ಭರಿಸಬೇಕಿತ್ತು. ನಂತರ ಅನುಪಾತವನ್ನು 50:50 ನಿಗದಿ ಮಾಡಲಾಯಿತು. ಈಗ ಧರ್ಮಸ್ಥಳ ಸಂಸ್ಥೆ ಎಲ್ಲ ವೆಚ್ಚವನ್ನು ತುಂಬುತ್ತಿದೆ.

‘ತಾಲ್ಲೂಕಿನಲ್ಲಿ ಕಬ್ಬು, ಭತ್ತ, ರಾಗಿ, ಮೆಕ್ಕೆಜೋಳ, ತರಕಾರಿ, ಅಡಿಕೆ, ಬಾಳೆ ತೆಂಗನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಬಿತ್ತನೆ ಮತ್ತು ಕಟಾವಿನ ಸಮಯದಲ್ಲಿ ಯಂತ್ರಗಳಿಗೆ ಬೇಡಿಕೆ ಹೆಚ್ಚು. ಕೊಯ್ಲಿನ ಸಮಯದಲ್ಲಿ ಕಟಾವು ಯಂತ್ರಗಳು ತಮಿಳುನಾಡಿನಿಂದ ಪೂರೈಕೆ ಆಗುತ್ತವೆ. ಆದರೆ, ಸ್ಥಳೀಯ ಅಗತ್ಯಕ್ಕೆ ಟಿಲ್ಲರ್, ರೊಟಾವೇಟರ್, ಬಲರಾಮ ನೇಗಿಲು, ಅಡಿಕೆ ಸಸಿ ನೆಡಲು ಗುಂಡಿ ತೋಡುವ ಯಂತ್ರ, ಕೂರಿಗೆ, ಡಿಸ್ಕ್ ಮತ್ತು ನಾಟಿ ಯಂತ್ರ ಲಭ್ಯ ಇದ್ದು, ಕಡಿಮೆ ಬಾಡಿಗೆ ದರದಲ್ಲಿ ಪೂರೈಸಲಾಗುತ್ತದೆ’ ಎಂದು ಸಂಸ್ಥೆಯ ಸಿಬ್ಬಂದಿ ಹೇಳುತ್ತಾರೆ.

‘ದಿನಕ್ಕೆ ಎತ್ತುಗಳು ಮತ್ತು ಏಳೆಂಟು ಶ್ರಮಿಕರನ್ನು ಬಳಸಿಕೊಂಡು ಎರಡು ಮೂರು ಎಕರೆ ಮಾತ್ರ ನಿರ್ವಹಿಸಬಹುದು. ಇದು ಅತಿಯಾದ ಶ್ರಮ ಮತ್ತು ಖರ್ಚನ್ನು ಬೇಡುತ್ತದೆ. ಯಾಂತ್ರೀಕರಣದಿಂದ ಹತ್ತಾರು ಎಕರೆ ಭೂಮಿಯನ್ನು ಸುಲಭವಾಗಿ ಹಿಡುವಳಿ ಮಾಡಬಹುದು. ಸಮಯ ಮತ್ತು ಹಣವೂ ಉಳಿಯುತ್ತದೆ’ ಎಂದು ಮಾಂಬಳ್ಳಿ ಕೃಷಿಕ ನಾಗೇಶ್ ಹೇಳಿದರು.  

₹20 ಲಕ್ಷ ವಹಿವಾಟು: ಪ್ರತಿ ವರ್ಷ ಯಾಂತ್ರೀಕರಣದ ವೇಗ ಹೆಚ್ಚಾಗುತ್ತಿದೆ. 20ಕ್ಕೂ ಹೆಚ್ಚು ಯಂತ್ರಗಳಿದ್ದು, ಹಿಂಗಾರು ಮತ್ತು ಮುಂಗಾರಿನ ಸಮಯದಲ್ಲಿ ಒಂದೇ ರೀತಿಯ ಯಂತ್ರಗಳಿಗೆ ಬೇಡಿಕೆ ಹೆಚ್ಚು ಇದ್ದು, ಪೂರೈಕೆ ಕಷ್ಟವಾಗುತ್ತದೆ. ಕೃಷಿಕರಿಗೆ ನರವಾಗುವ ಉದ್ಧೇಶದಿಂದ ಜಿಲ್ಲೆಯ ವಿವಿಧೆಡೆ 4 ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಲಾಗಿದೆ. ವಾರ್ಷಿಕ ₹20 ರಿಂದ ₹22 ಲಕ್ಷ ವಹಿವಾಟು ನಡೆಯುತ್ತಿದೆ. ಕಡಿಮೆ ವೆಚ್ಚದಲ್ಲಿ ರೈತರಿಗೆ ಯಂತ್ರಗಳನ್ನು ವಿತರಿಸಿ, ರೈತರಿಗೆ ನೆರವು ಕಲ್ಪಿಸುವ ಉದ್ಧೇಶದಿಂದ   ಧರ್ಮಸ್ಥಳ ಸಂಸ್ಥೆ ನೆರವಾಗಿದೆ’ ಎಂದು ಸಂಸ್ಥೆಯ ಕೃಷಿ ಅಧಿಕಾರಿ ಪ್ರವೀಣ್ ಹೇಳಿದರು.

ಬೆಲೆ ನಿಗದಿಗೆ ಸಮಿತಿ ‘ಸುಧಾರಿತ ಕೃಷಿ ಯಂತ್ರಗಳನ್ನು ಸ್ಥಳೀಯ ಬೆಲೆಗಿಂತ ಶೇ 25 ಕಡಿಮೆ ವೆಚ್ಚದಲ್ಲಿ ನೀಡಲಾಗುತ್ತದೆ. ಅಗರ ಮತ್ತು ಹೊನ್ನೂರುಗಳಲ್ಲಿ 2 ಕೇಂದ್ರ ಇದೆ. ಪ್ರತಿ ವರ್ಷ ಜಿಲ್ಲಾ ಪಂಚಾಯಿತಿ ಸಿಇಒ ಕೃಷಿ ಇಲಾಖೆ ಅಧಿಕಾರಿ ಹಾಗೂ ಕೃಷಿಕನ್ನು ಒಳಗೊಂಡ ಸಮಿತಿ ಯಂತ್ರಗಳ ಬೆಲೆ ನಿಗದಿ ಪಡಿಸುತ್ತದೆ. ಆ ದರವನ್ನು ಖಾಸಗಿ ಸಂಸ್ಥೆಗಳು ರೈತರಿಂದ ಪಡೆಯಬೇಕು. ಹಾಗಾಗಿ ಎಲ್ಲೆಡೆ ಏಕ ರೂಪದ ಬಾಡಿಗೆಗೆ ಯಂತ್ರಗಳು ಲಭ್ಯವಾಗುತ್ತವೆ’ ಎಂದು ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT