ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇನು ಸಾಕಣೆ: ಸುಸ್ಥಿರ ಕೃಷಿಗೆ ಮಣೆ

ಯಳಂದೂರು: ಕಾರಪುರ ಮಠದ ಬಸವರಾಜಸ್ವಾಮೀಜಿ ಅವರ ಕೃಷಿ ಪ್ರೇಮ
Last Updated 17 ಅಕ್ಟೋಬರ್ 2019, 6:28 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಕಾರಪುರ ಮಠದ ಪಡಸಾಲೆಯಲ್ಲಿ ನಿಂತು ಸುತ್ತಲೂ ನೋಡಿದರೆ, ಕಣ್ಣು ಹಾಯಿಸಿದಷ್ಟು ದೂರಕ್ಕೂ ಹಸಿರು ತುಂಬಿದ ತೆಂಗು ಮತ್ತು ಕಂಗು ಕಂಗೊಳಿಸುತ್ತಿವೆ. ಸೀಬೆ, ನಿಂಬೆ, ಕೋಕೋ ಸಸಿಗಳ ನಡುವೆ ತೊಗರಿಮತ್ತು ಪುಷ್ಪಗಳು ಅರಳಿ ನಿಂತಿವೆ.

ಇವುಗಳ ನಡುವೆ ಗುಂಯ್‌ಗಿಡುವ ಜೇನು ವಿವಿಧ ಫಸಲಿನಸುತ್ತ ಎಂಟರ ಆಕಾರದಲ್ಲಿ ಸುತ್ತುವುದನ್ನು ವೀಕ್ಷಿಸುವುದೇ ಚೆಂದ.

ಮಠದ ಬಸವರಾಜ ಸ್ವಾಮೀಜಿ ಅವರು ಆಧ್ಯಾತ್ಮಿಕ ವಿಚಾರಗಳಿಗೆ ಮಾತ್ರ ಗಮನ ಕೊಡದೆ ಕೃಷಿಗೂ ಹೆಚ್ಚು ಒತ್ತು ನೀಡಿದ್ದಾರೆ. ಸಮಗ್ರ ಕೃಷಿಯ ಭಾಗವಾಗಿ ಜೇನು ಸಾಕಣೆಗೂ ಆದ್ಯತೆನೀಡುತ್ತಿದ್ದಾರೆ. ತಂಪು ತುಂಬಿದ ಭೂಮಿಯ ನಡುವೆ ಹೆಜ್ಜೆ ಹಾಕಿದರೆ, ಅಲ್ಲಲ್ಲಿಇಟ್ಟಿರುವ ಪೆಟ್ಟಿಗೆಗಳ ಸುತ್ತ ಜೇನ್ನೊಣಗಳ ಝೇಂಕಾರವೇ ಕೇಳುತ್ತದೆ. ಕೆಂಪು, ಕಪ್ಪು ಮತ್ತುಬಿಳಿ ಜೇನಿನ ತಳಿಗಳನ್ನು ಸಾಕುತ್ತಿದ್ದಾರೆ.

‘18 ಎಕರೆ ಪ್ರದೇಶದಲ್ಲಿ ಹತ್ತಾರು ಬೆಳೆಗಳಿವೆ. ಹಿಡುವಳಿಗಳ ನಡುವೆ 2 ವರ್ಷ ಬದುಕುವರಾಣಿ ಜೇನ್ನೊಣ ನಿತ್ಯ 500ರಿಂದ 1 ಸಾವಿರತನಕ ಮೊಟ್ಟೆ ಇಡುತ್ತದೆ. ಇವು ಮರಿಗಳಾಗಿ ಹೂವುಗಳ ಮಕರಂದ ಹೀರುವುದರ ಜೊತೆಗೆ ಪರಾಗ ಸ್ಪರ್ಶವನ್ನೂ ಮಾಡುತ್ತವೆ. ಇದರಿಂದಾಗಿ ಬೆಳೆಗಳ ಇಳುವರಿಯೂ ಹೆಚ್ಚಿ ಲಾಭವಾಗುತ್ತದೆ’ ಎಂದು ಹೇಳುತ್ತಾರೆ ಸ್ವಾಮೀಜಿ.

‘₹ 5,000 ಖರ್ಚು ಮಾಡಿ 2 ಎಕರೆಗೆ ತೊಗರಿ ಬಿತ್ತನೆ ಮಾಡಿದ್ದೆ. ಈಗ ಅದು ₹ 1 ಲಕ್ಷ ಆದಾಯತಂದುಕೊಟ್ಟಿದೆ. ಹೂ ಫಸಲು ಹೆಚ್ಚಾಗಿದೆ. ಅಡಿಕೆ ಮತ್ತು ತೆಂಗು ಸಮೃದ್ಧ ಫಲ ನೀಡಿದೆ.ನುಗ್ಗೆ ಮತ್ತು ಪುಷ್ಪಕೃಷಿಯ ಫಸಲು ಕೈಹಿಡಿದಿದೆ. ತೋಟದ ಸುತ್ತಮುತ್ತ ಕೃಷಿಗೆರಾಸಾಯನಿಕ ಸಿಂಪಡಿಸಿದರೆ ಜೇನ್ನೊಣ ಸಾಯುತ್ತದೆ’ ಎಂದು ಎಚ್ಚರಿಸುತ್ತಾರೆ ಅವರು.

ನಿರ್ವಹಣೆ: ‘ಜೇನ್ನೊಣಗಳು ಸೇರಿ 1 ಪೆಟ್ಟಿಗೆಗೆ ₹ 4,000 ದರ ಇದೆ. 6 ತಿಂಗಳ ನಂತರ ಪ್ರತಿ ತಿಂಗಳು 1 ಲೀಟರ್ ಜೇನು ಸಂಗ್ರಹ ಮಾಡಬಹುದು. ಜನವರಿಯಿಂದ ಜುಲೈ ತನಕ ತುಪ್ಪದಪ್ರಮಾಣ ಏರುತ್ತದೆ. ಜೇನ್ನೊಣಗಳು ಉತ್ತಮ ಜೇನು ಉತ್ಪಾದನೆ ಮಾಡಬೇಕು ಎಂದರೆ 1 ಕಿ.ಮೀ. ಸುತ್ತಳತೆಯಲ್ಲಿ ಹೂ ಬಿಡುವ ಸಸ್ಯ, ಶುದ್ಧಗಾಳಿ,ನೀರು, ಮಳೆ, ಬಿಸಿಲಿನಿಂದ ರಕ್ಷಣೆ ಒದಗಿಸಬೇಕು, ನೆರಳಿನ ಪ್ರದೇಶ ಇರಬೇಕು’ ಎಂದು ಸ್ವಾಮೀಜಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೆಟ್ಟಿಗೆಯನ್ನು 10–15 ದಿನಕ್ಕೊಮ್ಮೆ ಸ್ವಚ್ಛಗೊಳಿಸಬೇಕು. ನಿಸರ್ಗದಲ್ಲಿ ಪರಾಗ ಮತ್ತುಮಕರಂದ ಕಡಿಮೆಯಾದರೆ ಸಕ್ಕರೆ ಪಾಕ ಒದಗಿಸಬೇಕು. ಮಳೆಗಾಲದಲ್ಲಿ ಮೊದಲ 15 ದಿನ ಜೇನುಸಂಗ್ರಹ ಮಾಡಬಾರದು. ಈ ಅವಧಿಯಲ್ಲಿ ಹೂ ಸಸ್ಯಗಳನ್ನು ಹುಳುಗಳು ಅರಸುತ್ತವೆ.ವಂಶಾಭಿವೃದ್ಧಿಗೆ ಆದ್ಯತೆ ನೀಡುತ್ತವೆ. ಹಾಗಾಗಿ, ಜೇನು ಉತ್ಪಾದನೆ ಕಡಿಮೆಯಾಗುತ್ತದೆ’ ಎಂದು ಅವರು ಅನುಭವವನ್ನು ಬಿಚ್ಚಿಟ್ಟರು.

30 ಮಂದಿಯಿಂದ ಜೇನು ಸಾಕಣೆ:‘ಕಳೆದ ಸಾಲಿನಲ್ಲಿ ಜೇನು ಕೃಷಿ ಬಗ್ಗೆ ರೈತರಿಗೆ ಮಾಹಿತಿ ಹಾಗೂ ಶುದ್ಧಜೇನು ಮಾರಾಟಮಾಡಲು ಉತ್ತೇಜನ ನೀಡಲಾಗಿತ್ತು. ಸಾಮಾನ್ಯ ರೈತರಿಗೆ ₹ 1,800 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹ 3,600 ಹಾಗೂ ಮಧುವನ ಬಯಸುವವರಿಗೆ ₹ 50 ಸಾವಿರದವರೆಗೆ ಸಹಾಯಧನ ಸೌಲಭ್ಯ ನೀಡಲಾಗಿತ್ತು.ಪ್ರಸಕ್ತ ವರ್ಷ ಆಸಕ್ತರಿಗೆ ಶೇ 75ರಷ್ಟು ಹಣಕಾಸಿನ ನೆರವು ಮತ್ತು 1 ವರ್ಷ ತರಬೇತಿನೀಡಲಾಗುತ್ತದೆ. ತಾಲ್ಲೂಕಿನಲ್ಲಿ 30 ರೈತರು ಜೇನು ಸಾಕಣೆ ಮಾಡುತ್ತಿದ್ದಾರೆ’ ಎಂದುತೋಟಗಾರಿಕಾ ಇಲಾಖೆಯಹಿರಿಯ ಸಹಾಯಕ ನಿರ್ದೇಶಕ ಎಂ.ಎನ್. ಕೇಶವ್‌ ‘ಪ‍್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT