ಶುಕ್ರವಾರ, ಡಿಸೆಂಬರ್ 2, 2022
23 °C
ಮಹದೇಶ್ವರ ಬೆಟ್ಟ: ಸಚಿವರಿಂದ ಹಸಿರು ನಿಶಾನೆ, ಮೂರು ಮಾರ್ಗಗಳಲ್ಲಿ ಸಂಚಾರ

ಕುಂಭಮೇಳ: ಮಹದೇಶ್ವರರ ಜ್ಯೋತಿ ಯಾತ್ರೆ ಆರಂಭ; 6 ಲಕ್ಷ ಜನ ಸೇರುವ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹದೇಶ್ವರ ಬೆಟ್ಟ: ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರ ಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಇದೇ 13ರಿಂದ ನಾಲ್ಕು ದಿನಗಳ ಕಾಲ ನಡೆಯಲಿರುವ ಮಲೆ ಮಹದೇಶ್ವರರ ಮಹಾಕುಂಭ ಮೇಳ ಹಾಗೂ ಪುಣ್ಯಸ್ನಾನದ ಅಂಗವಾಗಿ ಇಲ್ಲಿನ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಹದೇಶ್ವರರ ಜ್ಯೋತಿ ಯಾತ್ರೆಗೆ ಗುರುವಾರ ಚಾಲನೆ ನೀಡಲಾಯಿತು. 

ಮಲೆ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ, ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಅಬಕಾರಿ ಸಚಿವ, ಮಂಡ್ಯ ಜಿಲ್ಲೆ ಉಸ್ತುವಾರಿ ಸಚಿವ ಗೋಪಾಲಯ್ಯ, ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ರೇಷ್ಮೆ ಸಚಿವ ಸಿ.ಕೆ.ನಾರಾಯಣ ಗೌಡ, ಹನೂರು ಶಾಸಕ ಆರ್‌.ನರೇಂದ್ರ ಸೇರಿದಂತೆ ಹಲವು ಗಣ್ಯರು ಜ್ಯೋತಿಯ ಯಾತ್ರೆಗೆ ಹಸಿರು ನಿಶಾನೆ ತೋರಿಸಿದರು.   

ಮಹದೇಶ್ವರರ ಜ್ಯೋತಿಯನ್ನು ಹೊಂದಿರುವ ಮೂರು ವಾಹನಗಳು ಪ್ರತ್ಯೇಕವಾಗಿ ಚಾಮರಾಜನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಂಚರಿಸಿ 13ರಂದು ತ್ರಿವೇಣಿ ಸಂಗಮ ತಲುಪಲಿವೆ. 

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಮಾತನಾಡಿ,  ‘ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ಮೂರು ನದಿಗಳು ಸಂಗಮವಾಗುವ ಸ್ಥಳದಲ್ಲಿ ಕುಂಭಮೇಳ ಹಮ್ಮಿಕೊಳ್ಳಲಾಗಿದೆ. 13ರಿಂದ ನಾಲ್ಕು ದಿನಗಳ ಕಾಲ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಭಕ್ತರಿಗೆ ಉಳಿಯುವುದಕ್ಕೆ ಹಾಗೂ ಊಟದ ವ್ಯವಸ್ಥೆಯ ಸಿದ್ಧತೆಗಳು ನಡೆಯುತ್ತಿವೆ. ಪವಾಡ ಪುರುಷ ಮಲೆ ಮಹದೇಶ್ವರ ಸ್ವಾಮಿಯ ಮಹಾ ಜ್ಯೋತಿಯು ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳನ್ನು ಸಂಚರಿಸಿ ಭಕ್ತರಿಗೆ ಕುಂಭಮೇಳದ ಬಗ್ಗೆ ಮಾಹಿತಿ ನೀಡಲಿದೆ’ ಎಂದರು. 

ಶಾಸಕ ನರೇಂದ್ರ ಮಾತನಾಡಿ, ‘ಕಳೆದ ಬಾರಿ ತಿ.ನರಸೀಪುರದಲ್ಲಿ ಕುಂಭಮೇಳ ನಡೆದಿತ್ತು. ಇಲ್ಲಿಂದ ಮಹಾಜ್ಯೋತಿಯನ್ನು ತೆಗೆದುಕೊಂಡು ಹೋಗಿ ಕುಂಭಮೇಳ ಜರುಗಿಸುವುದು ವಾಡಿಕೆ. ಕಳೆದ ಬಾರಿ ಸ್ವಲ್ಪ ಗೊಂದಲವಾಗಿತ್ತು. ಆದರೆ ಈ ಬಾರಿ ಬೇಡಗಂಪಣ ಸಮುದಾಯದವರು, ಸಾಲೂರು ಸ್ವಾಮಿಗಳು ಹಾಗೂ ಭಕ್ತರು ಸಂಪೂರ್ಣವಾಗಿ ಸಹಕಾರ ನೀಡಿದ್ದಾರೆ’ ಎಂದರು. 

ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಮಂಡ್ಯ ಜಿಲ್ಲಾಧಿಕಾರಿ ಎಸ್‌.ಅಶ್ವತಿ, ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಹುಲ್ಮನಿ, ಮಂಡ್ಯ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್‌.ಎಲ್‌.ನಾಗರಾಜು, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿ ದೇವಿ, ಬಿಜೆಪಿ ಮುಖಂಡರಾದ ಪ್ರೀತನ್ ನಾಗಪ್ಪ, ದತ್ತೇಶ್‌ಕುಮಾರ್‌ ಇತರರು ಇದ್ದರು.

6 ಲಕ್ಷ ಜನ ಸೇರುವ ನಿರೀಕ್ಷೆ

ಸಚಿವ ನಾರಾಯಣ ಗೌಡ ಮಾತನಾಡಿ, ‘ತ್ರಿವೇಣಿ ಸಂಗಮದಿಂದ ಮಹದೇಶ್ವರರು ಬೆಟ್ಟಕ್ಕೆ ಬಂದಿದ್ದಾರೆ ಎಂದು ಕೇಳಿದ್ದೇವೆ. ಈ ಬಾರಿ ತ್ರಿವೇಣಿ ಸಂಗಮದಲ್ಲಿ ಸರ್ಕಾರದ ವತಿಯಿಂದ ಮಹಾ ಕುಂಭಮೇಳ ಆಯೋಜಿಸಲಾಗಿದೆ. ಮುಖ್ಯಮಂತ್ರಿಗಳು, ವಿವಿಧ ಮಠಾಧೀಶರು, ಯೋಗಿಗಳು ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದು, ಆರು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ’ ಎಂದರು. 

‘ಮಹದೇಶ್ವರರು ಪವಾಡ ಪುರುಷ. ಈ ಪುಣ್ಯ ಸ್ಥಳದಿಂದ ಜ್ಯೋತಿಯನ್ನು ತ್ರಿವೇಣಿ ಸಂಗಮಕ್ಕೆ ಕೊಂಡೊಯ್ಯಲಾಗುತ್ತಿದೆ. ಜ್ಯೋತಿ ಯಾತ್ರೆಯು ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದೆ. ಹಲವು ಧಾರ್ಮಿಕ ಸ್ಥಳಗಳನ್ನೂ ಜ್ಯೋತಿ ಸಂದರ್ಶಿಸಲಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.