ಸೋಮವಾರ, ಅಕ್ಟೋಬರ್ 18, 2021
24 °C

ಕುಂದು ಕೊರತೆ: ಬಡಾವಣೆ ನಿವಾಸಿಗಳ ಬವಣೆ ನೀಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರದ ಭ್ರಮರಾಂಬ ಬಡಾವಣೆಗೆ ಉತ್ತಮ ಬಡಾವಣೆ ಎಂಬ ಹೆಗ್ಗಳಿಕೆ ಇದೆ. ಆದರೆ, ಬಡಾವಣೆಯ 3ನೇ ಅಡ್ಡರಸ್ತೆಯ (22ನೇ ವಾರ್ಡ್) ಪಶ್ಚಿಮಕ್ಕೆ ಸೇರಿದ ಮನೆಗಳಲ್ಲಿ ವಾಸಿಸುತ್ತಿರುವವರ ಪಾಡು ಹೇಳ ತೀರದು. ಇಲ್ಲಿ‌ರುವುದು ಒಂದೆರಡು ಸಮಸ್ಯೆಯಲ್ಲ. ಹಲವು ಸಮಸ್ಯೆಗಳಿವೆ. ಬಹುತೇಕವು ಹಲವು ವರ್ಷಗಳಿಂದ ಬಲಿತಿರುವಂತಹದ್ದು! 

ಈ ಭಾಗದಲ್ಲಿ 2 ಮತ್ತು‌ 3ನೇ ಅಡ್ಡರಸ್ತೆಗಳನ್ನು ಸಂಪರ್ಕಿಸುವ ಒಂದು ರಸ್ತೆ ಇದೆ. ಇದು ಕನ್ಸರ್ವೆನ್ಸಿ ಗಲ್ಲಿ ರೀತಿಯಲ್ಲಿ ಕಂಡರೂ ಕನ್ಸರ್ವೆನ್ಸಿ‌ ಅಲ್ಲ. ಬಡಾವಣೆ ನಿರ್ಮಾಣವಾದ ಸಮಯದಿಂದ ಈವರೆಗೂ 3ನೇ ಅಡ್ಡರಸ್ತೆಯು ಡೀವಿಯೇಷನ್ ರಸ್ತೆಯನ್ನು ಸಂಪರ್ಕಿಸುವುದಿಲ್ಲ.‌ ಆ‌‌ ಕಾರಣದಿಂದ ಈ ರಸ್ತೆ ಮಾಡಲಾಗಿದೆ.‌ ಆದರೆ, ಈ ರಸ್ತೆಯು ಸುತ್ತಮುತ್ತಲಿನ ನಿವಾಸಿಗಳು ಹಾಗೂ 2ನೇ ಅಡ್ಡರಸ್ತೆಯಲ್ಲಿರುವ ಅಂಗಡಿಯವರು ಕಸ ಸುರಿಯುವ ತಾಣವಾಗಿದೆ. ಇಲ್ಲಿ ನಡೆದಾಡಲು ಸರಿಯಾದ ದಾರಿಯೂ ಇಲ್ಲ. ‌

ರಸ್ತೆಯ ತುದಿಯಲ್ಲಿ ಅಪಾಯಕಾರಿಯಾದ ಶಕ್ತಿಶಾಲಿ ವಿದ್ಯುತ್ ಪರಿವರ್ತಕ ಇದೆ. ರಸ್ತೆಯ‌ ತುದಿಯನ್ನು ಶೇ 75ರಷ್ಟು ಇದು ಆವರಿಸಿದೆ. ಜನ ಓಡಾಡುವ ರಸ್ತೆ ಮಧ್ಯೆ ಯಾರದೋ ಅನುಕೂಲಕ್ಕೆ ಈ ವಿದ್ಯುತ್ ಪರಿವರ್ತಕ ಸ್ಥಾಪಿಸಲಾಗಿದೆ. ಹಲವಾರು ಬಾರಿ ಸೆಸ್ಕ್ ಹಾಗೂ ನಗರಸಭೆಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. 

ಇದು ಹೆಸರಿಗಷ್ಟೇ ರಸ್ತೆ. ಹಳ್ಳಿಗಳಲ್ಲಿರುವ ಕಾಲುದಾರಿಗಿಂತ ಕಿರಿದಾಗಿದೆ. ಈ ಅಡ್ಡರಸ್ತೆಯಲ್ಲಿ ವಾಸಿಸುತ್ತಿರುವುದಕ್ಕೆ ಹಾಗೂ ಈ ಸಂಪರ್ಕ ರಸ್ತೆಯಲ್ಲಿ ಓಡಾಡಲು ಪ್ರತಿ ನಿತ್ಯ‌ ಅವಮಾನ, ನಾಚಿಕೆ ಆಗುತ್ತದೆ. ಇಡೀ ಜಿಲ್ಲೆಗೆ ಸಾಂಕ್ರಾಮಿಕ ರೋಗವನ್ನು ಧಾರಾಳವಾಗಿ ಹಂಚಬಹುದಾದ ಸ್ಥಿತಿ ಇದೆ. ನಾಗರಿಕ ಸಮಾಜ ತಲೆ ತಗ್ಗಿಸುವ ಪರಿಸ್ಥಿತಿ ಇದು. ಉತ್ತಮ ಬಡಾವಣೆ ಎನಿಸಿಕೊಂಡಿರುವ ಸ್ಥಳದಲ್ಲಿರುವ ಈ ಅಡ್ಡರಸ್ತೆ ಕೊಳೆಗೇರಿ ಆಗಿದೆ.

ಎರಡನೇ ಮತ್ತು 3ನೇ ಅಡ್ಡರಸ್ತೆಗಳ ನಡುವೆ ಇರುವ ಕನ್ಸರ್ವೆನ್ಸಿ ಅಸಹ್ಯವಾಗಿದೆ. ಎರಡೂ ಅಡ್ಡರಸ್ತೆಗಳ ಮನೆಗಳ ಚರಂಡಿಗಳಿಗಿಂತ ಈ ಗಲ್ಲಿಯ ಮೋರಿಗಳು ಎತ್ತರದಲ್ಲಿವೆ. ಹೀಗಾಗಿ ಅಲ್ಲಿಂದ ಬರುವ ನೀರು ಮುಂದೆ ಹೋಗಲಾರದೆ ಆ ಮನೆಯ ಗೋಡೆಗಳಿಗೆ ನೀರಿನ ತೇವಾಂಶ ಹೆಚ್ಚಿದೆ. ಈ ಗಲ್ಲಿಯಲ್ಲಿ ಗಿಡಗಳು, ಕಳೆಗಳು ದಟ್ಟ ಅರಣ್ಯ ಬೆಳೆದಂತೆ ಬೆಳೆದಿವೆ. ಆ ಜಾಗ ಬಯಲು ಶೌಚಾಲಯವಾಗಿ ಪರಿವರ್ತನೆಯಾಗಿದೆ. ಈ ಸಂಪರ್ಕ ರಸ್ತೆ ಮತ್ತು ಕನ್ಸರ್ವೆನ್ಸಿಯಲ್ಲಿ ನೀರು ಮುಂದೆ ಹೋಗಲಾರದೆ ಮಳೆ ಬಂದಾಗ ರಸ್ತೆಗೆ ಬಂದು ಕೊನೆಯ ಮನೆಗೆ ನುಗ್ಗುತ್ತದೆ.

ವಿಶೇಷ ಎಂದರೆ, ಎರಡನೇ ಅಡ್ಡರಸ್ತೆಯಲ್ಲಿ ನಗರಸಭೆಯ ಆಯುಕ್ತರ ಅಧಿಕೃತ ನಿವಾಸ ಇದೆ!

ನಗರಸಭೆಯವರು ಸ್ಥಳೀಯ ನಿವಾಸಿಗಳನ್ನು ಈ ಬವಣೆಗಳಿಂದ ಪಾರು ಮಾಡಿ.

– ಕೆ.ವೆಂಕಟರಾಜು, ನಿವಾಸಿ

ತಾಲ್ಲೂಕು ಕಚೇರಿ ಕಟ್ಟಡದ ಚಾವಣಿ ಸರಿಪಡಿಸಿ

ಗುಂಡ್ಲುಪೇಟೆ ತಾಲ್ಲೂಕು ಕಚೇರಿ ಕಟ್ಟಡದ ಮೇಲ್ಚಾವಣಿ ಶಿಥಿಲವಾಗಿದ್ದು, ಕೆಲವು ಕಡೆಗಳಲ್ಲಿ ಸಿಮೆಂಟ್‌ ಕಿತ್ತುಕೊಂಡು ಬಂದಿದೆ. ಇನ್ನೂ ಕೆಲವು ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಸಾರ್ವಜನಿಕರು ಜೀವ ಭಯದಲ್ಲೇ ಕಚೇರಿ ಕೆಲಸಗಳಿಗಾಗಿ ಹೋಗಬೇಕಾಗಿದೆ. 

ಕಟ್ಟಡವನ್ನು ನೋಡುತ್ತಿದ್ದರೆ, ಅಪಾಯ ಸ್ಥಿತಿಯಲ್ಲಿ ಇರುವಂತೆ ಕಾಣುತ್ತದೆ. ಹಲವು ಸಮಯದಿಂದಲು ಇದೇ ರೀತಿ ಇದ್ದು, ತಹಶೀಲ್ದಾರ್‌ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ದಿನಂಪ್ರತಿ ಇದನ್ನು ನೋಡುತ್ತಿದ್ದರೂ, ಯಾರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.

ದುರಸ್ತಿ ಮಾಡದಿದ್ದರೆ ಅಪಾಯ ಇನ್ನಷ್ಟು ಹೆಚ್ಚಲಿದೆ. ಅಧಿಕಾರಿಗಳು ತಕ್ಷಣವೇ ಸಿಮೆಂಟ್‌ ಕಿತ್ತು ಬಂದಿರುವ ಜಾಗಗಳನ್ನು ಸರಿಪಡಿಸಬೇಕು, ನೀರು ಸೋರಿಕೆಯಾಗುವುದನ್ನು ತಡೆಯಬೇಕು. ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಬೇಕು. 

–ರವಿ, ಸೋಮಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು