ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ | ಉಕ್ಕಿದ ನದಿ, ಜಲಾಶಯ ಭರ್ತಿ, ಕೆರೆ ಇನ್ನೂ ಖಾಲಿ!

ತಾಲ್ಲೂಕಿನ ಕೆರೆಗಳಿಗೆ ಹರಿಯದ ನಾಲೆ ನೀರು
Last Updated 19 ಜುಲೈ 2022, 19:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಿರಂತರ ಮಳೆಯಿಂದಾಗಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಪ್ರವಾಹ ಸ್ಥಿತಿಯೂ ನಿರ್ಮಾಣವಾಗಿದೆ. ಅತ್ತ ಜಲಾಶಯಗಳೂ ತುಂಬಿ ತುಳುಕುತ್ತಿವೆ. ಆದರೆ, ತಾಲ್ಲೂಕಿನ ಕೆರೆಗಳಿಗೆ ಮಾತ್ರ ಇನ್ನೂ ನೀರು ಹರಿದಿಲ್ಲ!

15 ದಿನಗಳಿಂದ ನಿರಂತರವಾಗಿ ರಾಜ್ಯದಾದ್ಯಂತ ಮಳೆಯಾಗುತ್ತಿದೆ. ತಾಲ್ಲೂಕಿನಲ್ಲೂ ಮಳೆ ಸುರಿಯುತ್ತಿದೆ. ಕಾವೇರಿ ತುಂಬಿ ಹರಿದ ಕಾರಣಕ್ಕೆ ನೆರೆಯ ತಮಿಳುನಾಡಿನ ಮೆಟ್ಟೂರು ಜಲಾಶಯವೂ ತುಂಬಿ, ಹೆಚ್ಚುವರಿ ನೀರು ನದಿಗೆ ಹರಿಯುತ್ತಿದೆ.

ಆದರೆ ತಾಲ್ಲೂಕಿನ ಚಿಕ್ಕರಂಗನಾಥ, ದೊಡ್ಡರಂಗನಾಥ, ಪಾಪನ ಕೆರೆ, ಕೊಂಗಳ ಕೆರೆ, ಸರಗೂರು ಕೆರೆ, ಉಗನಿಯಾ ಕೆರೆ, ಪಾಳ್ಯ ಕೆರೆ ಸೇರಿದಂತೆ ಯಾವ ಕೆರೆಗಳಿಗೂ ಕಬಿನಿ ನಾಲೆಯ ನೀರು ಹರಿದಿಲ್ಲ. ಇದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ನೀರಾವರಿ ಇಲಾಖೆ ವೈಫಲ್ಯ: ಕಬಿನಿ, ಕಾವೇರಿ ನದಿಯಲ್ಲಿ ಸಾಕಷ್ಟು ‍ಪ್ರಮಾಣದಲ್ಲಿ ನೀರು ಹರಿದು ಹೋದರೂ ಕೆರೆಗಳಿಗೆ ನೀರು ಹರಿಸಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂಬುದು ರೈತ ಸಂಘಗಳ ಮುಖಂಡರು ಹಾಗೂ ಕೃಷಿಕರ ಆರೋಪ.

ತಾಲ್ಲೂಕಿನಲ್ಲಿ ಇರುವ ಕೆರೆಗಳಲ್ಲಿ ಹೂಳು ತುಂಬಿದ್ದು, ಅದನ್ನು ತೆಗೆಯುವ ಕೆಲಸ ಆಗಿಲ್ಲ. ಕಳೆ ಗಿಡಗಳು, ಜೊಂಡು ಹುಲ್ಲು ಕೆರೆಗಳನ್ನು ಆವರಿಸಿದ್ದು, ಸ್ವಚ್ಛ ಮಾಡುವ ಕಾರ್ಯವೂ ನಡೆದಿಲ್ಲ. ಕೆರೆಗೆ ನೀರು ಹರಿಯುವ ಕಾಲುವೆ, ನಾಲೆಯನ್ನು ಸ್ವಚ್ಛಗೊಳಿಸಿದ್ದರೆ ಮಳೆ ನೀರೇ ಸಾಕಷ್ಟು ಪ್ರಮಾಣದಲ್ಲಿ ಹರಿದು ಬರುತ್ತಿತ್ತು ಎಂಬುದು ರೈತರ ವಾದ.

‘ಕಾಟಾಚಾರಕ್ಕೆ ಕೆಲವು ಪ್ರಮುಖ ಕೆರೆಗಳನ್ನು ಸ್ವಚ್ಚ ಮಾಡಿಸುತ್ತಾರೆ. ಇನ್ನೂ ಕೆಲ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಕೈಜೋಡಿಸಿ ಕೆರೆಗಳನ್ನು ಹೂಳು ತೆಗೆಸುವ ನಾಟಕವಾಡಿ ಬಿಲ್ ಮಾಡಿ ಕೊಳ್ಳುತ್ತಾರೆ’ ಎಂದು ರೈತರಾದ ಧಶರಥ್‌, ಬಸವರಾಜು, ಶೈಲೇಂದ್ರ ಆರೋಪಿಸಿದರು.

ಕೆರೆಗಳ ಒತ್ತುವರಿ; ಅಧಿಕಾರಿಗಳು ಮೌನ
‘ತಾಲ್ಲೂಕಿನಲ್ಲಿ ಅನೇಕ ಕೆರೆಗಳು ಒತ್ತುವರಿಯಾಗಿವೆ. ಆದರೆ ಅಧಿಕಾರಿಗಳು ಮಾತ್ರ ಮೌನವಹಿಸಿದ್ದಾರೆ. ಒತ್ತುವರಿಯಾದ ಕಾರಣ ಕೆರೆಗಳಿಗೆ ನೀರು ಬರುವುದಿಲ್ಲ. ಇನ್ನೂ ಕೆಲವು ಕಡೆಗಳಲ್ಲಿ ನಾಲೆಗಳ ಒತ್ತುವರಿಯಾಗಿದೆ. ಇದರಿಂದ ನದಿ ನೀರು ಬಿಟ್ಟರೂ ಕೆರೆಗಳಿಗೆ ಸಮರ್ಪಕ ನೀರು ಬರುವುದಿಲ್ಲ’ ಎಂದು ಹೇಳುತ್ತಾರೆರೈತರು.

*
ಈಗಾಗಲೇ ನದಿಯಿಂದ ನೀರನ್ನು ಕೆರೆಗೆ ಬಿಟ್ಟಿದ್ದೇವೆ. ಕೆಲವು ದಿನಗಳಲ್ಲಿ ಕೆರೆಗಳು ಭರ್ತಿಯಾಗುತ್ತದೆ. ಕೆರೆಗಳ ಒತ್ತುವರಿ ಬಗ್ಗೆ ಸರ್ವೆ ಮಾಡಲಾಗುತ್ತಿದೆ.
-ವೆಂಕಟೇಶ್ ಪ್ರಭು, ಇಇ, ಕಾವೇರಿ ನೀರಾವರಿ ನಿಗಮ

--

ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದರೂ ನಮ್ಮ ಕೆರೆಗಳು ಭರ್ತಿಯಾಗಿಲ್ಲ. ಇದಕ್ಕೆ ನೀರಾವರಿ ಇಲಾಖೆಯ ನಿರ್ಲಕ್ಷ್ಯವೇ ಕಾರಣ
-ಗೌಡೇಗೌಡ, ತಾಲ್ಲೂಕು ರೈತ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT