ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದ ಕೆಲ ದಿನಗಳಾದರೂ ರಾಜಕೀಯ ಬಿಡೋಣ: ಸುರೇಶ್‌ ಕುಮಾರ್

Last Updated 27 ಜನವರಿ 2020, 5:21 IST
ಅಕ್ಷರ ಗಾತ್ರ

ಬೆಂಗಳೂರು: ‘ವರ್ಷದ ಕೆಲ ದಿನಗಳಾದರೂ ನಾವು ರಾಜಕೀಯ ಮಾತನಾಡುವುದು ಬಿಟ್ಟು ರಚನಾತ್ಮಕ ವಿಷಯಗಳತ್ತ ಗಮನ ಹರಿಸಬೇಕಿದೆ’ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‌ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುರೇಶ್‌ ಕುಮಾರ್, ಜ.26ರಂದು ಚಾಮರಾಜನಗರದ ಈದ್ಗಾ ಮೈದಾನದಲ್ಲಿ ನಡೆದ ಪರ್ಯಾಯ ಗಣರಾಜ್ಯೋತ್ಸವದಲ್ಲಿ ಪ್ರಸ್ತಾಪವಾದ ವಿಷಯಗಳ ಬಗ್ಗೆ ಪತ್ರಿಕಾ ಹೇಳಿಕೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಈದ್ಗಾ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿಪಾಲ್ಗೊಂಡಿದ್ದಮಾಜಿ ಸಂಸದರಿಗೆ, ಮಾಜಿ ಶಾಸಕರಿಗೆ ಇಂಥ ವಿಷಯ ಮಾತನಾಡಲಿಕ್ಕೆ ಗಣರಾಜ್ಯೋತ್ಸವ ದಿನಾಚರಣೆಯ ಸಂದರ್ಭವೇ ಬೇಕಿತ್ತೇ? ಇಂತಹ ದಿನವಾದರೂ ಧನಾತ್ಮಕ, ರಚನಾತ್ಮಕ ವಿಚಾರಗಳನ್ನು ಮಾತನಾಡಿ ಜನರಿಗೆ ಪ್ರೇರಣೆ ನೀಡುವ ಪ್ರಯತ್ನ ಇವರು ಮಾಡಬಹುತ್ತಲ್ಲವೇ? ವರ್ಷದ ಕೆಲ ದಿನ ರಾಜಕೀಯ ಭಾಷಣ ಮುಕ್ತ ದಿನಗಳನ್ನಾಗಿ ಆಚರಿಸುವುದು ಸೂಕ್ತ ಎಂಬುದು ನನ್ನ ನಂಬಿಕೆ.ರಾಜಕೀಯ ವಿಚಾರಗಳಿಗೆ ಉಳಿದ ಮುನ್ನೂರ ಅರವತ್ತಕ್ಕೂ ಹೆಚ್ಚು ದಿನಗಳು‌ ಲಭ್ಯವಿರುತ್ತವಲ್ಲವೇ?’ ಎಂದು ಅವರು ಹೇಳಿದ್ದಾರೆ.

‘ನಿನ್ನೆ ಚಾಮರಾಜನಗರದಲ್ಲಿ ಕೆಲ ಸಂಘಟನೆಗಳು ಈದ್ಗಾ ಮೈದಾನದಲ್ಲಿ‌ ಪ್ರತ್ಯೇಕ ಗಣರಾಜ್ಯೋತ್ಸವ ಕಾರ್ಯಕ್ರಮ ಯೋಜಿಸಿದ್ದವು. ಜಿಲ್ಲಾಡಳಿತದ ಬಹಳಷ್ಟು ಪ್ರಯತ್ನದ ನಂತರವೂ ಆ ಸಂಘಟನೆಗಳು ಹಟ ಹಿಡಿದು ಕಾರ್ಯಕ್ರಮ ನಡೆಸಿಯೇಬಿಟ್ಟವು’ ಎಂದು ವಿಷಾದದ ದನಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

‘ಗಣರಾಜ್ಯೋತ್ಸವ ಸಭೆಯಲ್ಲಿಜಿಎಸ್‌ಟಿ, ಟಿಪ್ಪುಜಯಂತಿ ಕುರಿತು ಮಾತನಾಡುವ ಬದಲು ಗಣರಾಜ್ಯೋತ್ಸವದ‌ ಮಹತ್ವ, ದೇಶ ಬೆಳೆದು ಬಂದ ಹಾದಿ, ನಾಗರಿಕರಾಗಿ ನಮ್ಮ ಕರ್ತವ್ಯ ಕುರಿತು ಒಂದು ನಾಲ್ಕು ಮಾತುಗಳನ್ನಾಡಿದ್ದರೆ ಅದಕ್ಕೆ ‘ಸೈ’ಎನ್ನಬಹುದಾಗಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಪ್ರತ್ಯೇಕತೆಯನ್ನು ಬೆಂಬಲಿಸುವ ಕಾರ್ಯ ಹಲವು ಬಾರಿ ಶಾಸಕರಾಗಿದ್ದವರಿಂದ, ಸಂಸದರಾಗಿದ್ದವರಿಂದ ಆಗಬಾರದಿತ್ತು. ಪ್ರತ್ಯೇಕತಾ ಮನೋಭಾವ ಏನೇನು ಅನಾಹುತಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದು ಈ ಇಬ್ಬರು ಪ್ರಬುದ್ಧರಿಗೆ ಗೊತ್ತಾಗಬೇಕಿತ್ತು’ ಎಂದು ವಿಷಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT