ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ತೊಂದರೆಯಾಗದು: ಕೃಷಿ ಸಚಿವರ ವಾಗ್ದನ

ಹೂ ಬೆಳೆಗಾರರಿಗೆ ನೆರವಿಗೆ ಸರ್ಕಾರದ ಚಿಂತನೆ: ಸಮೀಕ್ಷೆಗೆ ಯಡಿಯೂರಪ್ಪ ಸೂಚನೆ
Last Updated 11 ಏಪ್ರಿಲ್ 2020, 14:59 IST
ಅಕ್ಷರ ಗಾತ್ರ

ಚಾಮರಾಜನಗರ: ಕೊರೊನಾ ವೈರಸ್‌ ಕಾರಣಕ್ಕೆ ಹೇರಲಾಗಿರುವ ದಿಗ್ಬಂಧನದಿಂದಾಗಿ ರೈತರ ದೈನಂದಿನ ಚಟುವಟಿಕೆಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಶನಿವಾರ ಹೇಳಿದರು.

‌ನಗರದಲ್ಲಿ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿಗ್ಬಂಧನದಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ರೈತ ಮುಖಂಡರು ಪ್ರಸ್ತಾಪಿಸಿದ್ದಾರೆ. ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈಗಾಗಲೇ ಹಲವು ನಿಬಂಧನೆಗಳನ್ನು ಸಡಿಲಿಸಲಾಗಿದೆ. ಉಳುಮೆ, ಬಿತ್ತನೆ, ಕಟಾವು, ಕೃಷಿ ಯಂತ್ರಗಳ ದುರಸ್ತಿ, ಕೃಷಿಗೆ ಸಂಬಂಧಿಸಿದ ಮಳಿಗೆಗಳಿಗೆ ಅಡಚಣೆಯಾಗಬಾರದು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ’ ಎಂದರು.

‘ಜಿಲ್ಲೆಯು ಕೇರಳದೊಂದಿಗೆ ಗಡಿ ಹಂಚಿಕೊಂಡಿದೆ. ಕೇರಳದ ಗಡಿ ಮುಚ್ಚಬೇಕು ಎಂದು ಸರ್ಕಾರದ ಸೂಚನೆಯಿದ್ದರೂ, ಇಲ್ಲಿ ರೈತರ ಉತ್ಪನ್ನಗಳ ಸಾಗಣೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲಾಡಳಿತದ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ’ ಎಂದರು.

‘ಮಾರ್ಚ್‌ 31ರವರೆಗೂ ರಾಜ್ಯದಲ್ಲಿ ಬೇರೆಯದೇ ಪರಿಸ್ಥಿತಿ ಇತ್ತು. ರೈತ ಸಮುದಾಯಕ್ಕೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಲವು ನಿರ್ಬಂಧಗಳನ್ನು ಸಡಿಲಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ಸುಧಾರಿಸಿದೆ’ ಎಂದರು. ‌‌

‘ರೈತರು ಬೆಳೆದ ತರಕಾರಿಗಳಿಗೆ ಇತರ ಕಡೆಗಳಲ್ಲಿ ಬೇಡಿಕೆ ಇದೆ. ಆದರೆ, ಹೂ ಬೆಳೆಗಾರರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ದೇವಸ್ಥಾನಗಳು ಮುಚ್ಚಿರುವುದರಿಂದ, ಧಾರ್ಮಿಕ ಕಾರ್ಯಕ್ರಮಗಳು ನಡೆಯದಿರುವುದರಿಂದ ಹೂ ಮಾರಾಟವಾಗುತ್ತಿಲ್ಲ. ಮುಖ್ಯಮಂತ್ರಿ ಅವರು ಹೂ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿದ್ದು, ರಾಜ್ಯದಾದ್ಯಂತ ತಕ್ಷಣವೇ ಸಮೀಕ್ಷೆ ನಡೆಸಿ, ಮುಂದಿನ ದಿನಗಳಲ್ಲಿ ಅವರಿಗೂ ನೆರವು ನೀಡಲು ಚಿಂತಿಸಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯ, ದೇಶದಲ್ಲಿ ಆಹಾರ ಸಮಸ್ಯೆ ಉದ್ಭವವಾಗಬಾರದು ಎಂಬ ಕಾರಣಕ್ಕಾಗಿಯೇ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ದಿಗ್ಬಂಧನದ ಅವಧಿಯಲ್ಲಿ ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಈಗ ಬಿತ್ತನೆ ನಡೆಯದಿದ್ದರೆ ಮೂರು ತಿಂಗಳ ನಂತರ ಆಹಾರ ಧಾನ್ಯಗಳ ಸಮಸ್ಯೆಯಾಗಬಹುದು. ಸದ್ಯಕ್ಕಂತೂ ಆ ಪರಿಸ್ಥಿತಿ ಇಲ್ಲ’ ಎಂದರು.

ಅಕ್ರಮದ ವಿರುದ್ಧ ಕ್ರಮ: ಅಕ್ರಮವಾಗಿ ಆಹಾರ ಧಾನ್ಯಗಳ ಸಂಗ್ರಹಣೆ ಮಾಡುವವರು ಮತ್ತು ಕಾಳಸಂತೆ ಕೋರರ ವಿರುದ್ಧ ಜಿಲ್ಲಾಡಳಿತ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವರು ಹೇಳಿದರು. ‌

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ, ಎನ್‌.ಮಹೇಶ್‌, ಸಿ.ಎಸ್‌.ನಿರಂಜನ್‌ ಕುಮಾರ್‌, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಇದ್ದರು.

ಕೃಷಿ ಸಮ್ಮಾನ್: ₹ 957 ಕೋಟಿ ಬಿಡುಗಡೆ‌
ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ₹957 ಕೋಟಿ ಬಿಡುಗಡೆ ಮಾಡಿದೆ. 49.56 ಲಕ್ಷ ರೈತರ ಖಾತೆಗಳಿಗೆ ಈಗಾಗಲೇ ₹2000 ಜಮೆ ಆಗಿದೆ. ಇದೇ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ಕೂಡ ₹600 ಕೋಟಿ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಖಾತೆಗೆ ಜಮೆ ಆಗಲಿದೆ’ ಎಂದು ಸಚಿವ ಬಿ.ಸಿ.ಪಾಟೀಲ ಅವರು ಹೇಳಿದರು.

ತೆಂಗು ಬೆಳೆಗಾರರಿಂದ₹ 1 ಲಕ್ಷ ದೇಣಿಗೆ‌
ತಾಲ್ಲೂಕು ತೆಂಗು ಬೆಳೆಗಾರರ ಸಂಘದ ವತಿಯಿಂದ ಕೊರೊನಾ ವೈರಸ್‌ ವಿರುದ್ಧದ ಹೋರಾಟಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹1 ಲಕ್ಷ ದೇಣಿಗೆಯ ಚೆಕ್‌ ಅನ್ನು ಸಚಿವ ಬಿ.ಸಿ.ಪಾಟೀಲ ಅವರಿಗೆ ನೀಡಿದರು.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ‘ಇದು ಸಣ್ಣ ಕೊಡುಗೆ ಅಲ್ಲ, ಈ ₹ 1 ಲಕ್ಷಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಂಕಷ್ಟದ ಸಂದರ್ಭದಲ್ಲೂ ತೆಂಗು ಬೆಳೆಗಾರರು ಕೊರೊನಾ ವಿರುದ್ಧದ ಹೋರಾಟಸಲ್ಲಿ ಸರ್ಕಾರಕ್ಕೆ ನೆರವಾಗಿರುವುದು ಅವರ ಹೃದಯ ಶ್ರೀಮಂತಿಕೆಯನ್ನು ತೋರಿಸುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT