ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಸೇವೆ ಮಾಡಲು ಮತಭಿಕ್ಷೆ ನೀಡಿ: ಬಾಲರಾಜು

ಚಾಮರಾಜನಗರದಲ್ಲಿ ಬಿಜೆಪಿಯಿಂದ ಎಸ್‌ಟಿ ಮತ್ತು ಎಸ್‌ಸಿ ಸಮಾವೇಶ
Published 24 ಏಪ್ರಿಲ್ 2024, 4:12 IST
Last Updated 24 ಏಪ್ರಿಲ್ 2024, 4:12 IST
ಅಕ್ಷರ ಗಾತ್ರ

ಚಾಮರಾಜನಗರ: ‘32 ವರ್ಷಗಳ ರಾಜಕೀಯ ಜೀವನದಲ್ಲಿ ಮೂರು ವರ್ಷ ಮಾತ್ರ ಶಾಸಕನಾಗಿದ್ದೆ. 18 ವರ್ಷಗಳಿಂದ ಅಧಿಕಾರ ಇಲ್ಲದಿದ್ದರೂ ಜನರ ಸೇವೆ ಮಾಡಿದ್ದೇನೆ. ಈ ಚುನಾವಣೆಯಲ್ಲಿ ನಾಯಕ ಸಮುದಾಯದವರು ಮತಭಿಕ್ಷೆ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜು ಮಂಗಳವಾರ ಮನವಿ ಮಾಡಿದರು. 

ನಗರದಲ್ಲಿ ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾ ಹಮ್ಮಿಕೊಂಡಿದ್ದ ನಾಯಕ ಸಮುದಾಯದವರ ಸಮಾವೇಶದಲ್ಲಿ ಮಾತನಾಡಿದ ಅವರು, ‘ನನಗೆ ಸಿಕ್ಕಿದ ಮೂರು ವರ್ಷಗಳ ಅಧಿಕಾರದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ನಾಯಕರಿಗೆ ಸಮುದಾಯ ಭವನ ನಿರ್ಮಿಸಿಕೊಟ್ಟಿದ್ದೇನೆ. ಪ್ರಾಮಾಣಿಕವಾಗಿ, ನಿಷ್ಠೆಯಿಂದ ಜನರ ಕೆಲಸಗಳನ್ನು ಮಾಡಿದ್ದೇನೆ’ ಎಂದರು. 

‘ಮೋದಿ ಈ ದೇಶಕ್ಕೆ ಅನಿವಾರ್ಯ. ಅವರಿದ್ದರೆ ಮಾತ್ರ ಶಾಂತಿಯು‌ತವಾಗಿ ಬದುಕಲು ಸಾಧ್ಯ. ಬಿಜೆಪಿಯು ನನಗೆ ಈ ಬಾರಿ ದೊಡ್ಡ ಅವಕಾಶವನ್ನು ಕೊಟ್ಟಿದೆ’ ಎಂದರು. 

ಹಾಡುವುದು ತಪ್ಪಾ?: ಬಾಲರಾಜು ಹಾಡು ಹಾಡುತ್ತಾ, ಮಿಮಿಕ್ರಿ ಮಾಡಿಕೊಂಡು ಹೋಗುತ್ತಾರೆ ಎಂದು ನನ್ನ ಮೇಲೆ ಕಾಂಗ್ರೆಸ್‌ ಅಭ್ಯರ್ಥಿ ಆರೋಪ ಮಾಡಿದ್ದಾರೆ. ಹಾಡುವುದು ತಪ್ಪಾ? ಅದು ಒಂದು ಕಲೆ, ಒಂದು ಧ್ಯಾನ. ನಾನು ಭಕ್ತಿಯಿಂದ ಹಾಡಿದ್ದೇನೆ. ನಾನು ಹಾಡುವುದು ಪ್ರೀತಿಗಾಗಿ, ಜನರಿಗಾಗಿ, ನಾನು ಯಾವಾಗಲೂ ಜನರ ವಿರುದ್ಧವಾಗಿ ಹೋಗಿಲ್ಲ. ಅವರ ಒಳಿತಿಗಾಗಿ ಕೆಲಸ ಮಾಡಿದ್ದೇನೆ’ ಎಂದರು. 

ನಾಯಕ ಸಮುದಾಯದ ಮುಖಂಡ, ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್ಸ್‌ ಮಾಜಿ ಅಧ್ಯಕ್ಷ ಅಪ್ಪಣ್ಣ ಮಾತನಾಡಿ, ‘ನಾಯಕ ಸಮಾಜ ಹಿಂದುಳಿದಿದೆ. ಬಡತನ ಇದೆ. ಆದರೆ ಸ್ವಾಭಿಮಾನದಲ್ಲಿ ಸಮುದಾಯ ಎಂದೂ ಕಡಿಮೆ ಇಲ್ಲ. ತಳವಾರ, ಪರಿವಾರ ಪದಗಳನ್ನು ಎಸ್‌ಟಿಗೆ ಸೇರಿಸಲು ದಶಕಗಳ ಕಾಲ ಸಮುದಾಯದವರು ಹೋರಾಟ ಮಾಡಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸಿದ್ದು ಬಿಜೆಪಿ ಸರ್ಕಾರ. ಯಡಿಯೂರಪ್ಪನವರು. ಅವರು ಮಾಡಿದ ಕೆಲಸವನ್ನು ಎಂದೂ ಮರೆಯುವುದಿಲ್ಲ. ಕೊಟ್ಟ ಮಾತು, ಇಟ್ಟ ಗುರಿಯನ್ನು ಸಮುದಾಯ ಎಂದಿಗೂ ತಪ್ಪುವುದಿಲ್ಲ. ಚಾಮರಾಜನಗರ, ಮಂಡ್ಯ, ಹಾಸನ, ಮೈಸೂರು ಮೈಸೂರಿನಲ್ಲಿ ಸಮುದಾದವರು ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಮನವಿಮಾಡಿದರು. 

ಕಾಂಗ್ರೆಸ್‌ನವರು ಸಮುದಾಯದವರ ಮೂಗಿಗೆ ತುಪ್ಪ ಸವರಿದವರು. ಚುನಾವಣೆ ಬಂದಾಗ ಮಾತ್ರ ನಮ್ಮ ಬಳಿಗೆ ಬರುತ್ತಾರೆ. ಆದರೆ, ಬಿಜೆಪಿ ನಮಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಬಾಲರಾಜು ಅವರನ್ನು ಗೆಲ್ಲಿಸಿದರೆ ನಮ್ಮ ನೂರಾರು ಸಮಸ್ಯೆಗಳು ಬಗೆಹರಿಯಲಿವೆ’ ಎಂದರು. 

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ಕುಮಾರ್‌ ಅವರು, ‘ಬಿಜೆಪಿಯು ನಾಯಕ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ, ವಾಲ್ಮೀಕಿ ಜಯಂತಿ ಆಚರಣೆ ಹಲವಾರು ಕೊಡುಗೆಗಳನ್ನು ಕೊಟ್ಟಿದೆ. ಈ ಚುನಾವಣೆಯಲ್ಲಿ ಮತ ಹಾಕುವಾಗ ಜನರು ಇದನ್ನೆಲ್ಲ ಯೋಚಿಸಿ ಎಚ್ಚರಿಕೆಯಿಂದ ಹಕ್ಕು ಚಲಾಯಿಸಬೇಕು’ ಎಂದು ಮನವಿ ಮಾಡಿದರು.  

ವಿಧಾನ ಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಎಸ್‌ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಸುಂದರ್‌, ಬಿಜೆಪಿ ಚಾಮರಾಜನಗರ ಟೌನ್ ಅಧ್ಯಕ್ಷ ಶಿವರಾಜು ಸೇರಿದಂತೆ ಎಸ್‌ಟಿ ಮೋರ್ಚಾದ ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು. 

‘ದಲಿತರನ್ನು ತುಳಿಯುವ ಕಾಂಗ್ರೆಸ್‌’

ಕಾಂಗ್ರೆಸ್‌ನವರು ದಲಿತ ಸಮುದಾಯವನ್ನು ಹಂತ ಹಂತವಾಗಿ ತುಳಿಯುತ್ತಿದ್ದಾರೆ ಎಂದು ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಂಗಳವಾರ ದೂರಿದರು.  ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಎಸ್‌ಸಿ ಸಮಾವೇಶದಲ್ಲಿ ಮಾತನಾಡಿದ ಅವರು ‘ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ಆರ್. ಧ್ರುವನಾರಾಯಣ ಅವರಿಗೆ ವಿಧಾನಸಭೆಯ ನಂಜನಗೂಡು ಕ್ಷೇತ್ರದಲ್ಲಿ ಟಿಕೆಟ್ ತಪ್ಪಿಸುವ ಹುನ್ನಾರ ನಡೆದಿತ್ತು. ಆದ್ದರಿಂದಲೇ ಅಲ್ಲಿ ಎಚ್.ಸಿ.ಮಹದೇವಪ್ಪ ನನಗೆ ಟಿಕೆಟ್ ಬೇಕು ಎಂದು ಪೈಪೋಟಿಗೆ ಬಿದ್ದಿದ್ದರು. ಧ್ರುವನಾರಾಯಣ ಅವರು ವಿಧಿವಶರಾದ ಬಳಿಕ ಅವರ ಮಗನಿಗೆ ಟಿಕೆಟ್ ನೀಡಿದರು. ಇಲ್ಲದಿದ್ದರೆ ಅಂದು ಆರ್. ಧ್ರುವನಾರಾಯಣ ಅವರಿಗೆ ಟಿಕೆಟ್ ಸಿಗುತ್ತಿರಲಿಲ್ಲ’ ಎಂದು ಹೇಳಿದರು. ‘ಧ್ರುವನಾರಾಯಣ ಅವರಿಗೆ ಆದಂತೆ ನಮ್ಮ ಅಭ್ಯರ್ಥಿ ಎಸ್.ಬಾಲರಾಜು ಅವರಿಗೂ ಕಾಂಗ್ರೆಸ್‌ನಿಂದ ಅನ್ಯಾಯ ಆಗಿದೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಅವರನ್ನು ಗೆಲ್ಲಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು’ ಎಂದು ಮನವಿ ಮಾಡಿದರು. ಹರಕೆಯ ಕುರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಮಹದೇವಪ್ಪ ಅವರನ್ನು ಹರಕೆಯ ಕುರಿ ಮಾಡಲು ಹೊರಟಿದ್ದಾರೆ.  ಎಸ್.ಸಿ.ಮಹದೇವಪ್ಪ ಅವರನ್ನೇ ಕಣಕ್ಕಿಳಿಸಬೇಕು ಎಂಬುದು ಸಿಎಂ ಹಟಕ್ಕೆ ಬಿದ್ದಿದ್ದರು. ಆದರೆ ಮಹದೇವಪ್ಪ ಮಗನಿಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದರಿಂದ ಸುನಿಲ್‌ ಬೋಸ್‌ಗೆ ನೀಡಲಾಗಿದೆ. ಚುನಾವಣೆಯಲ್ಲಿ ಮಗನನ್ನು ಗೆಲ್ಲಿಸದಿದ್ದರೆ ಮಂತ್ರಿ ಸ್ಥಾನವನ್ನು ಕಿತ್ತುಕೊಳ್ಳುವುದಾಗಿ ನಿರ್ಬಂಧ ಹಾಕಿ ಮಹದೇವಪ್ಪ ಅವರನ್ನು ಹರಕೆ ಕುರಿ ಮಾಡಲಾಗಿದೆ’ ಎಂದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್.ಮಹೇಶ್ ಅಭ್ಯರ್ಥಿ ಎಸ್.ಬಾಲರಾಜು ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್‌ಕುಮಾರ್ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ ವೆಂಕಟರಮಣಸ್ವಾಮಿ(ಪಾಪು) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್ ನಗರಸಭೆ ಸದಸ್ಯೆ ಕುಮುದಾ ಕೇಶವಮೂರ್ತಿ ಇತರರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT