ಚಾಮರಾಜನಗರ: ನಾಲ್ಕೈದು ತಿಂಗಳುಗಳ ಕಾಲ ಜಿಲ್ಲೆಯ ಜಾನುವಾರುಗಳನ್ನು ಕಾಡಿದ್ದ ಚರ್ಮಗಂಟು ರೋಗ ನಿಯಂತ್ರಣಕ್ಕೆ ಬಂದಿದ್ದು, ಸದ್ಯ ಜಿಲ್ಲೆಯಲ್ಲಿ ಒಂದು ಜಾನುವಾರು ಕೂಡ ಕಾಯಿಲೆಯಿಂದ ಬಳಲುತ್ತಿಲ್ಲ.
ಕಳೆದ ವರ್ಷದ ಅಕ್ಟೋಬರ್‌ನಿಂದಲೇ ಜಿಲ್ಲೆಯಲ್ಲಿ ಚರ್ಮಗಂಟು ಪ್ರಕರಣಗಳು ವರದಿಯಾಗಲು ಆರಂಭಗೊಂಡಿತ್ತು. ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ, ಜಿಲ್ಲೆಯ 550 ಗ್ರಾಮಗಳ ಪೈಕಿ 336 ಗ್ರಾಮಗಳಲ್ಲಿ ಪ್ರಕರಣಗಳು ವರದಿಯಾಗಿತ್ತು.
ಈವರೆಗೆ 7,943 ರಾಸುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. 7,518 ಜಾನುವಾರುಗಳು ಗುಣಮುಖಗೊಂಡಿದ್ದು, 430 ಮೃತಪಟ್ಟಿದ್ದವು. ಬೇಸಿಗೆ ಆರಂಭಗೊಂಡ ನಂತರ ಸೊಳ್ಳೆಗಳ ಹಾವಳಿ ಕಡಿಮೆಯಾದ ಬೆನ್ನಲ್ಲೇ ಕಾಯಿಲೆಯೂ ದೂರವಾಗಿದೆ.
‘ಸೊಳ್ಳೆಗಳು, ಉಣ್ಣೆಗಳ ಮೂಲಕ ‘ಕ್ಯಾಪ್ರಿ ಫಾಕ್ಸ್’ ಎಂಬ ವೈರಸ್‌ನ ಮೂಲಕ ಹರಡುವ ಈ ಕಾಯಿಲೆಯು ಮಳೆಗಾಲ ಮತ್ತು ಚಳಿಗಾಲದ ಅವಧಿಯಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಯದಲ್ಲಿ ನಿಂತಿರುವ ನೀರಿನಲ್ಲಿ ಸೊಳ್ಳೆಯ ಉತ್ಪತ್ತಿ ಹೆಚ್ಚಾಗುವುದರಿಂದ ರೋಗ ಹರಡುವಿಕೆಯ ವೇಗ ಹೆಚ್ಚು. ಬೇಸಿಗೆಯಲ್ಲಿ ಸೊಳ್ಳೆಗಳ ಉತ್ಪತ್ತಿ ಕಡಿಮೆಯಾಗುವುದರಿಂದ ರೋಗ ಪ್ರಸರಣದ ಪ್ರಮಾಣದ ಕಡಿಮೆ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವೆ ಇಲಾಖೆಯ ಉಪನಿರ್ದೇಶಕ ಡಾ.ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜಿಲ್ಲೆಯಲ್ಲಿ ಪ್ರಕರಣಗಳು ವರದಿಯಾದ ತಕ್ಷಣ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಜಿಲ್ಲೆಯಾದ್ಯಂತ 2,59,279 ಜಾನುವಾರುಗಳಿದ್ದು, ಈ ಪೈಕಿ 2,34,922 ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ. ಶೇ 91ರಷ್ಟು ರಾಸುಗಳಿಗೆ ಲಸಿಕೆ ನೀಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ರೈತರಿಗೆ ಪರಿಹಾರ: ಚರ್ಮ ಗಂಟು ರೋಗದಿಂದಾಗಿ ರಾಸುಗಳನ್ನು ಕಳೆದುಕೊಂಡ ರೈತರಿಗೆ ಇಲಾಖೆ ಪರಿಹಾರ ನೀಡುತ್ತಿದ್ದು, ಜಿಲ್ಲೆಯಲ್ಲಿ 430 ಜಾನುವಾರುಗಳು ಮೃತಪಟ್ಟಿರುವುದರಿಂದ ಅಷ್ಟೂ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಿದೆ.
ರೋಗದಿಂದ ಮೃತಪಟ್ಟ ಪ್ರತಿ ಎತ್ತಿಗೆ ₹ 30 ಸಾವಿರ, ಹಸುವಿಗೆ ₹ 20 ಸಾವಿರ ಮತ್ತು ಕರುವಿಗೆ ₹ 5000 ಪರಿಹಾರ ನಿಗದಿ ಪಡಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 115 ರೈತರಿಗೆ ₹ 24.15 ಲಕ್ಷ ಪರಿಹಾರ ಮೊತ್ತವನ್ನು ನೇರವಾಗಿ ಅವರ ಖಾತೆಗೆ ಜಮಾವಣೆ ಮಾಡಲಾಗಿದೆ.
‘178 ಹೈನುಗಾರರಿಗೆ ₹ 33 ಲಕ್ಷ ಪರಿಹಾರ ಮಂಜೂರಾಗಿದ್ದು, ಗುರುವಾರದಿಂದ ಪಾವತಿ ಪ್ರಕ್ರಿಯೆ ಆರಂಭಿಸಿದ್ದೇವೆ. 137 ರೈತರಿಗೆ ₹ 29.55 ಲಕ್ಷ ಪರಿಹಾರ ಹಣ ಬಿಡುಗಡೆಗಾಗಿ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ಡಾ.ಶಿವಣ್ಣ ಹೇಳಿದರು.
ಸ್ವಚ್ಛತೆ ಕಾಪಾಡಿ: ‘ಚರ್ಮಗಂಟು ರೋಗವನ್ನು ನಿಯಂತ್ರಿಸಲು ಜಾನುವಾರುಗಳನ್ನು ಕಟ್ಟಿ ಹಾಕುವ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ನೀರು ನಿಲ್ಲದಂತೆ ನೋಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.
------
ಸದ್ಯ ಜಿಲ್ಲೆಯಲ್ಲಿ ಒಂದು ಪ್ರಕರಣವೂ ಇಲ್ಲ. ರಾಸು ಕಳೆದುಕೊಂಡವರಿಗೆ ಪರಿಹಾರ ನೀಡಲಾಗುತ್ತಿದೆ. 3ನೇ ಹಂತದ ಪರಿಹಾರ ಮೊತ್ತಕ್ಕೆ ಪ್ರಸ್ತಾವ ಕಳುಹಿಸಲಾಗಿದೆ
ಡಾ.ಶಿವಣ್ಣ, ಪಶುವೈದ್ಯಕೀಯ ಇಲಾಖೆಯ ಉಪನಿರ್ದೇಶಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.