ಮಹದೇಶ್ವರ ಬೆಟ್ಟ: ಆಗಸ್ಟ್ 21ರಂದು ಮಹದೇಶ್ವರ ಬೆಟ್ಟದಲ್ಲಿ ಶ್ರೀಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದಿಂದ ಸಾಮೂಹಿಕ ವಿವಾಹ ನಡೆಯಲಿದ್ದು, ಯಶಸ್ವಿಗೆ ಎಲ್ಲಾ ಅಧಿಕಾರಿಗಳು ಶ್ರಮಿಸಬೇಕು ಎಂದು ಶಾಸಕ ಮಂಜುನಾಥ್ ಹೇಳಿದರು.
ನಾಗಮಲೆ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವರು ಹಾಗೂ ಭಕ್ತರು ಭಾಗವಹಿಸುತ್ತಿತ್ತಿದ್ದಾರೆ. ಮಾದಪ್ಪನ ಸನ್ನಿಧಿಯಲ್ಲಿ ನವ ಜೀವನಕ್ಕೆ ಹೆಜ್ಜೆ ಹಾಕಲು 63 ಜೋಡಿಗಳು ನೋಂದಾಯಿಸಿದ್ದು, ಅವರಿಗೆ ಪ್ರಾಧಿಕಾರದಿಂದ ಸೀರೆ, ವಸ್ತ್ರ, ಮಾಂಗಲ್ಯ ನೀಡುವ ಬಗ್ಗೆ ಪರಿಶೀಲಿಸಿದರು.
ಅಲ್ಲದೆ ಸಾಮೂಹಿಕ ವಿವಾಹವಾಗುವ ಯುವಕಯುವತಿಯರ ಪೋಷಕರು ಪಾಲ್ಗೊಳ್ಳಲಿದ್ದಾರೆ. ಅವರಿಗೆ , ಸಂಬಂಧಿಕರಿಗೆ ಕೊಠಡಿ ನೀಡಬೇಕು. ಸೌಕರ್ಯಗಳು ಕೊರತೆಯಾಗದಂತೆ ಎಚ್ಚರ ವಹಿಸಬೇಕು. ದೇಗುಲದ ಭಕ್ತಗೂ ಸೌಲಭ್ಯ ಕೊರತೆಯಾಗದಂತೆ ಸಿಬ್ಬಂದಿ ನಿಯೋಜಿಸಿ, ಶುಚಿತ್ವಕ್ಕೆ ಆದ್ಯತೆ ನೀಡಬೇಕು ಎಂದು ಕಾರ್ಯದರ್ಶಿಗೆ ಸೂಚಿಸಿದರು.
ರಸ್ತೆಗೆ ತೇಪೆ: ಸಾಮೂಹಿಕ ವಿವಾಹಕ್ಕೆ ಮುಖ್ಯಮಂತ್ರಿ ಆಗಮಿಸುವ ನಿರೀಕ್ಷೆಯಲ್ಲಿ ತಾಳು ಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ಲೋಕೋಪಯೋಗಿ ಇಲಾಖೆಯಿಂದ ರಸ್ತೆಗುಂಡಿಗಳಿಗೆ ತೇಪೆ ಹಾಕುವ ಕಾಮಗಾರಿ ತರಾತುರಿಯಲ್ಲಿ ನಡೆಯುತ್ತಿದೆ. ಗುಣಮಟ್ಟದ ಕಾಮಗಾರಿ ಮಾಡಿ ಶೀಘ್ರ ಪೂರ್ಣಗೊಳಿಸಿ ಎಂದು ಸೂಚನೆಯನ್ನು ನೀಡಿದರು.
ಪ್ರಾಧಿಕಾರದ ಕಾರ್ಯದರ್ಶಿ ರಘು, ಉಪ ಕಾರ್ಯದರ್ಶಿ ಚಂದ್ರಶೇಖರ್, ಎಇಇ ಚಿನ್ನನ್, ಮಲೈ ಮಹದೇಶ್ವರ ಬೆಟ್ಟದ ಪೊಲೀಸ್ ಇನ್‌ಸ್ಪೆಕ್ಟರ್ ಜಗದೀಶ್, ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.