ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಶಾಸಕ ಎ.ಆರ್.ಕೃಷ್ಣಮೂರ್ತಿ

ಎಸ್‌‌‌‌ಸಿ ಎಸ್‌‌‌ಟಿ ಹಿತರಕ್ಷಣಾ ಸಭೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ತಾಕೀತು
Published 7 ಜನವರಿ 2024, 6:26 IST
Last Updated 7 ಜನವರಿ 2024, 6:26 IST
ಅಕ್ಷರ ಗಾತ್ರ

ಕೊಳ್ಳೇಗಾಲ: ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಡಾವಣೆಗಳಲ್ಲಿ ಯಾವುದೇ ರೀತಿ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ’ ಎಂದು ಶಾಸಕ ಎ.ಆರ್ ಕೃಷ್ಣಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.

 ತೇರಂಬಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪುರುಷೋತ್ತಮ್ ಮಾತನಾಡಿ, ‘ಎಸ್‌‌‌ಸಿ,ಎಸ್‌‌‌‌ಟಿ ಸಮುದಾಯಗಳಿಗೆ ದಾಸನಪುರ ಗ್ರಾಮ ಸೇರಿ ತಾಲ್ಲೂಕಿನಾದ್ಯಂತ ಸ್ಮಶಾನದ ಕೊರತೆ ಇದೆ.  ಪ್ರವಾಹ ಬಂದಾಗ ಸ್ಮಶಾನ ನೀರಿನಿಂದ ಜಲಾವೃತವಾಗುತ್ತದೆ. ಬೇರೆ ಕಡೆ ಪರ್ಯಾಯ ವ್ಯವಸ್ಥೆ ಮಾಡಿಕೊಡಿ. ಇಲ್ಲವಾದರೆ ಸ್ಮಶಾನಕ್ಕೆ ಜಾಗ ನೀಡಿ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಆದರೂ ಯಾರೂ ಇದರ ಬಗ್ಗೆ ಗಮನ ಹರಿಸಿಲ್ಲ’ ಎಂದು ತಹಶೀಲ್ದಾರ್ ಮಂಜುಳಾ ಅವರಿಗೆ ಹೇಳಿದರು.

ಇದಕ್ಕೆ ಉತ್ತರಿಸಿದ ಮಂಜುಳಾ ಅವರು,‘ಆ ಗ್ರಾಮಗಳಲ್ಲಿ ಜಮೀನುಗಳನ್ನು ಯಾರಾದರೂ ನೀಡಿದರೆ ನಾವು ಅವರಿಂದ ಖರೀದಿ ಮಾಡಿ ಸ್ಮಶಾನಕ್ಕೆ ಜಾಗ ನೀಡುತ್ತೇವೆ ಹಾಗೂ ಸ್ಮಶಾನದ ರಸ್ತೆ ಸೇರಿದಂತೆ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಮಾಡುತ್ತೇವೆ’ ಎಂದು ಉತ್ತರ ನೀಡಿದರು.

ನಗರಸಭೆ ಸದಸ್ಯ ಬಸ್ತೀಪುರ ಶಾಂತರಾಜು ಮಾತನಾಡಿ, ‘ಸರ್ಕಾರಿ ಆಸ್ಪತ್ರೆಯ ವೈದ್ಯರು ಸ್ಕ್ಯಾನಿಂಗ್ ಸೇರಿ ಅನೇಕ ಪರೀಕ್ಷೆ ಮಾಡಿಸಬೇಕಾದರೆ ಖಾಸಗಿ ಸೆಂಟರ್‌‌‌‌‌ಗಳಿಗೆ ಬರೆಯುತ್ತಾರೆ. ಸಣ್ಣಪುಟ್ಟ ತೊಂದರೆ ಆದರೂ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ  ವೈದ್ಯರು ಸರಿಯಾಗಿ ನೋಡುವುದಿಲ್ಲ. ಕೆಲ ವೈದ್ಯರು ಸ್ಕ್ಯಾನಿಂಗ್ ಮಾಡಿಸಿಕೊಂಡು ಬನ್ನಿ ಎಂದು ರೋಗಿಗಳಿಗೆ ಹೇಳಬೇಕಾದರೆ ಸ್ಕ್ಯಾನಿಂಗ್ ಚೀಟಿಯಲ್ಲಿ ಅವರ ಚುಟುಕು ಸಹಿ ಮಾಡಿ ಕಳಿಸುತ್ತಾರೆ. ಆಗ ಅಲ್ಲಿನ ಸ್ಕ್ಯಾನಿಂಗ್ ಸೆಂಟರ್‌‌‌ನವರು ವೈದ್ಯರಿಗೆ ಪರ್ಸೆಂಟೇಜ್ ನೀಡುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಶಾಸಕ ಕೃಷ್ಣಮೂರ್ತಿ ಅವರು,‘ಜನರು ವೈದ್ಯರನ್ನು ದೇವರೆಂದು ಪೂಜಿಸುತ್ತಿದ್ದಾರೆ ಹಾಗಾಗಿ ಜನರಿಗೆ ವೈದ್ಯರು ದ್ರೋಹ ಮಾಡಬಾರದು. ನಿಮ್ಮ ಕರ್ತವ್ಯ ಸರಿಯಾಗಿ ಮಾಡಬೇಕು. ರೋಗಿಗಳಿಂದ ಹಣ ಪಡೆಯಬಾರದು. ರಾತ್ರಿ ವೇಳೆ ವೈದ್ಯರು ಸರಿಯಾಗಿ ಕೆಲಸಕ್ಕೆ ಹಾಜರಾಗಬೇಕು. ರೋಗಿಗಳನ್ನು ತಮ್ಮ ಕುಟುಂಬದವರಂತೆ ಪ್ರೀತಿಸಬೇಕು. ಇಲ್ಲದಿದ್ದರೆ ಅಂತಹ ವೈದ್ಯರು ನಮ್ಮ ಬಳಿ ಇರುವುದು ಅಗತ್ಯವಿಲ್ಲ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಗೋಪಾಲ್ ಅವರಿಗೆ ಸೂಚನೆ ನೀಡಿದರು.

ಮುಖಂಡ ಶಿವಕುಮಾರ್ ಮಾತನಾಡಿ, ‘ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್ ಅಂಬೇಡ್ಕರ್  ಸಮುದಾಯ ಭವನ ಸುಮಾರು 20 ವರ್ಷಗಳಿಂದಲೂ ಕಾಮಗಾರಿ ಪೂರ್ಣಗೊಳ್ಳದೆ ಹಾಗೆ ನಿಂತಿದೆ  ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಿ ಈ ವರ್ಷ ಉದ್ಘಾಟಿಸಬೇಕು’ಎಂದರು.

ಶಾಸಕರು ಡಾ.ಬಿ.ಆರ್ ಅಂಬೇಡ್ಕರ್ ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ₹99 ಲಕ್ಷ ಅನುದಾನ ನೀಡಿದ್ದಾರೆ. ಹಾಗಾಗಿ ಈ ಬಾರಿಯೂ ಅನುದಾನವನ್ನು ನೀಡಿಬೇಕು ಎಂದರು.

ಸಭೆಯಲ್ಲಿ, ತಹಶೀಲ್ದಾರ್ ಮಂಜುಳ, ಡಿ.ಎಚ್.ಓ ಚಿದಂಬರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೇಶವಮೂರ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನವೀನ್ ಸಿ ಮಠದ, ಡಿ.ವೈ.ಎಸ್.ಪಿ ಸೋಮೇಗೌಡ, ಇಒ ಶ್ರೀನಿವಾಸ್, ಸಿಡಿಪಿಒ ನಂಜಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಕೃಷಿ ಅಧಿಕಾರಿ ಸುಂದರಮ್ಮ ಸೇರಿದಂತೆ ಅನೇಕ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮುಖಂಡರು ಇದ್ದರು.

ಪ್ರಜಾವಾಣಿ ವಿಶೇಷ ವರದಿ, ಗಮನ ಸೆಳೆದ ಶಾಸಕ:

ಮುಖಂಡ ದಿಲೀಪ್ ಸಿದ್ದಪ್ಪಾಜಿ ಮಾತನಾಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಬಡಾವಣೆಗಳಲ್ಲಿ ನಿರಂತರ ಅಕ್ರಮ ಮದ್ಯ ಗಾಂಜಾ ಮಾದಕ ವಸ್ತು ದೊರಕುತ್ತಿವೆ.  ಇದರ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ನಗರದ ಲಾಡ್ಜ್‌‌‌ಗಳಲ್ಲಿ ನಿರಂತರ ಮಾದಕ ವಸ್ತು ದೊರೆಯುತ್ತಿದೆ ಎಂಬ ಮಾಹಿತಿ ಇದೆ. ಇದರ ಬಗ್ಗೆ ಅಬಕಾರಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಹದ್ದಿನ ಕಣ್ಣು ಇಡಬೇಕು’ ಎಂದರು.

ಇದಕ್ಕೆ ಉತ್ತರಿಸಿದ ಶಾಸಕರು ಪ್ರಜಾವಾಣಿ ಪತ್ರಿಕೆಯಲ್ಲಿ ಚಟಗಳಿಗೆ ದಾಸರಾಗುವ ಯುವಜನ ಎಂಬ ವಿಶೇಷ ವರದಿ ಮಾಡಿದ್ದಾರೆ. ಈ ವರದಿಯಲ್ಲಿ ಅಕ್ರಮ ಮದ್ಯ ಗಾಂಜಾ ಜೂಜಾಟ ಸೇರಿ ಅನೇಕ ಮಾದಕ ವಸ್ತು ಅಕ್ರಮವಾಗಿ ಸದ್ದಿಲ್ಲದೆ ನಡೆಯುತ್ತಿದೆ ಎಂಬ ವರದಿ ಸಹ ಮಾಡಿದ್ದಾರೆ. ಹಾಗಾಗಿ ಪೊಲೀಸರು ಪತ್ರಿಕೆಗಳಲ್ಲಿ ಇಂತಹ ಸುದ್ದಿಗಳು ಬರದಂತೆ ನೋಡಿಕೊಳ್ಳಬೇಕು. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ನಡೆಸಿ ಗಾಂಜಾ ಮದ್ಯ ಹಾಗೂ ಇನ್ನಿತರ ಮಾದಕ ವಸ್ತುಗಳಿಗೆ ಕಡಿವಾಣ ಹಾಕಲೇಬೇಕು. ಇದರ ಬಗ್ಗೆ ವಿಶೇಷ ತಂಡ ರಚಿಸಿ ಇಂತಹ ಕೆಟ್ಟ ಚಟಗಳು ನನ್ನ ವಿಧಾನಸಭಾ ಕ್ಷೇತ್ರದಲ್ಲಿ ನಡೆಯದಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದಕ್ಕೆ ಉತ್ತರಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯವರು ಮುಂದಿನ ದಿನಗಳಲ್ಲಿ ವಿಶೇಷ ತಂಡ ರಚಿಸಿ ಇಂತಹ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡಿದಂತೆ ನೋಡಿಕೊಳ್ಳುತ್ತೇವೆ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT