ಮಂಗಳವಾರ, ಸೆಪ್ಟೆಂಬರ್ 21, 2021
22 °C
ಯಳಂದೂರು ತಾಲ್ಲೂಕಿನ ಮಾಂಬಳ್ಳಿಯಲ್ಲಿ ದುರಂತ

ಪ್ರೀತಿಸಿದ ಹುಡುಗಿ ಜತೆ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಪ್ರೇಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಳಂದೂರು: ಪ್ರೀತಿಸಿದ ಹುಡುಗಿ ತನ್ನನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಪ್ರೇಮಿಯೊಬ್ಬ ಹುಡುಗಿಯನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿಹಾಕಿಕೊಂಡು ತಾನೂ ಸತ್ತು, ಆಕೆಯ ಸಾವಿಗೂ ಕಾರಣನಾದ ಘಟನೆ ತಾಲ್ಲೂಕಿನ ಮಾಂಬಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ. 

ಮಾಂಬಳ್ಳಿ ಗ್ರಾಮದ ಶ್ರೀನಿವಾಸ್ (23) ಹಾಗೂ ಅದೇ ಗ್ರಾಮದ ಕಾಂಚನಾ (22) ಮೃತಪಟ್ಟವರು. ಪ್ರಕರಣ ದಾಖಲಿಸಿಕೊಂಡಿರುವ ಅಗರ–ಮಾಂಬಳ್ಳಿ ಠಾಣೆಯ ಪೊಲೀಸರು, ಕೊಲೆ ಪ್ರಕರಣವನ್ನು ದಾಖಲಿಸಿದ್ದಾರೆ. 

ಕಾರಿನ ಒಳಭಾಗಕ್ಕೆ ಪೆಟ್ರೋಲ್‌ ಹಾಕಿ ಬೆಂಕಿ ಹಾಕಲಾಗಿದೆ ಎಂದು ಪೊಲೀಸರು ಶಂಕಿಸಿದ್ದು, ಒಳಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಒಂದೇ ಸೀಟಿನಲ್ಲಿ ಇಬ್ಬರ ತಲೆಬುರುಡೆಗಳು ಮಾತ್ರ ಕಂಡು ಬಂದಿವೆ.

ಘಟನೆಯ ಹಿನ್ನೆಲೆ

ಕಾಂಚನ ಅವರು ಜಿಲ್ಲಾಸ್ಪತ್ರೆಯಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದರು. ಕೃಷಿಕರಾಗಿದ್ದ ಶ್ರೀನಿವಾಸ್‌ ಕ್ಯಾಬ್ ಚಾಲಕರಾಗಿದ್ದರು. ಈ ಹಿಂದೆ ಶಿಕ್ಷಣ ಪಡೆಯುತ್ತಿದ್ದಾಗ ಇಬ್ಬರೂ ಸಹಪಾಠಿಗಳಾಗಿದ್ದರು. ಶ್ರೀನಿವಾಸ್‌ ಅವರು ಕಾಂಚನ ಅವರನ್ನು ಹಲವು ಸಮಯದಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗಿದೆ. ಆದರೆ, ಆಕೆಯ ಕುಟುಂಬದವರಿಗೆ ಇದು ಇಷ್ಟವಿರಲಿಲ್ಲ ಎಂದು ಗೊತ್ತಾಗಿದೆ. ಹಾಗಾಗಿ, ಕಾಂಚನ ಕೂಡ ಶ್ರೀನಿವಾಸ್‌ ಅವರಿಂದ ದೂರ ಇದ್ದರು. 

‌ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀನಿವಾಸ್‌ ಅವರು ಕಾಂಚನ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಮಾಂಬಳ್ಳಿಯಿಂದ ಕಿನಕಳ್ಳಿಗೆ ಹೋಗುವ ಮುಖ್ಯ ರಸ್ತೆಯಿಂದ ಎರಡು ಕಿ.ಮೀ ದೂರದಲ್ಲಿ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ, ಒಳಗೆ ಕುಳಿತುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಪಕ್ಕದ ಜಮೀನಿನಲ್ಲಿ ಹಸು ಮೇಯಿಸಿಕೊಂಡಿದ್ದ ವ್ಯಕ್ತಿಯೊಬ್ಬರು, ಕಾರು ಉರಿಯುತ್ತಿದ್ದುದನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದರು. 

ಸ್ಥಳಕ್ಕೆ ಪೊಲೀಸರು ಬಂದಾಗ ನಿಲ್ಲಿಸಿದ್ದ ಕಾರಿಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿರಬಹುದು ಎಂದು ಎಣಿಸಿದ್ದರು. ಆದರೆ, ಹತ್ತಿರ ಹೋಗಿ ಇಣುಕಿ ನೋಡಿದಾಗ ಒಳಗಡೆ ಒಂದೇ ಎರಡು ತಲೆ ಬುರುಡೆಗಳು ಕಂಡು ಬಂದವು. ಕಾರಿನ ಬಾಗಿಲು ಲಾಕ್‌ ಇತ್ತು. 

ಕೊಲೆ ಪ್ರಕರಣ ದಾಖಲು

ಆರಂಭದಲ್ಲಿ ಪ್ರೇಮಿಗಳ ಆತ್ಮಹತ್ಯೆ ಎಂದು ಹೇಳಲಾಗಿತ್ತು. ಆದರೆ, ವಿಚಾರಣೆ ನಡೆಸಿದಾಗ ಶ್ರೀನಿವಾಸ್‌ ಅವರನ್ನು ಕಾಂಚನ ಇಷ್ಟಪಡುತ್ತಿರಲಿಲ್ಲ ಎಂಬುದು ಗೊತ್ತಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. 

‘ನಾವು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಶ್ರೀನಿವಾಸ್‌, ಹುಡುಗಿಯನ್ನು ಪ್ರೀತಿಸುತ್ತಿದ್ದುದು ನಿಜ. ಆದರೆ, ಆತ ತನಗೆ ಇಷ್ಟ ಇಲ್ಲ ಎಂದು ಮನೆಯವರಲ್ಲಿ ಕಾಂಚನ ಹೇಳಿದ್ದಳು ಎಂಬುದು ಗೊತ್ತಾಗಿದೆ’ ಎಂದು ಅಗರ–ಮಾಂಬಳ್ಳಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌ ಎಚ್‌.ಬಿ.ಮಾದೇಗೌಡ ಅವರು ಮಾಹಿತಿ ನೀಡಿದರು.  

ಇದೇ ವಿಷಯಕ್ಕೆ ಮೂರು ತಿಂಗಳ ಹಿಂದೆಯೂ ಶ್ರೀನಿವಾಸ್‌ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಅದೃಷ್ಟವಶಾತ್‌ ಬದುಕುಳಿದಿದ್ದರು ಎಂದು ಅವರ ಸ್ನೇಹಿತರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು