ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಮಾಂತ್ರಿಕನ ಮಾತು ನಂಬಿ ನಿಧಿ ಆಸೆಗೆ ಮನೆಯೊಳಗೆ 20 ಅಡಿ ಗುಂಡಿ ತೋಡಿದರು!

Last Updated 20 ಸೆಪ್ಟೆಂಬರ್ 2021, 11:36 IST
ಅಕ್ಷರ ಗಾತ್ರ

ಚಾಮರಾಜನಗರ: ಕೇರಳದ ಮಾಂತ್ರಿಕನೊಬ್ಬನ ಮಾತು ಕೇಳಿ ನಿಧಿಯ ಆಸೆಗಾಗಿ ತಾಲ್ಲೂಕಿನ ಅಮ್ಮನಪುರ ಗ್ರಾಮದ ಕೂಲಿ ಕಾರ್ಮಿಕರೊಬ್ಬರು ತಮ್ಮ ಮನೆಯೊಳಗೆ 20 ಅಡಿಗಳಷ್ಟು ಆಳಕ್ಕೆ ಗುಂಡಿ ತೆಗೆದು ಮೋಸ ಹೋಗಿದ್ದಾರೆ.

ಊರಿನವರ ಗಮನಕ್ಕೆ ಬಾರದಂತೆ ಪತಿ ಹಾಗೂ ಪತ್ನಿ ಇಬ್ಬರೇ ಮನೆಯ ಕೊಠಡಿಯೊಂದರಲ್ಲಿ ಗುಂಡಿ ತೋಡಿದ್ದು, ಅಗೆದ ಮಣ್ಣನ್ನು ಕೂಡ ಮನೆಯ ಇನ್ನೊಂದು ಕೊಠಡಿಯಲ್ಲಿ ರಾಶಿ ಹಾಕಿದ್ದಾರೆ. ಎರಡು ದಿನಗಳ ಹಿಂದೆ ಪೊಲೀಸರಿಗೆ ವಿಷಯ ತಿಳಿದು ಸ್ಥಳ ಪರಿಶೀಲನೆ ನಡೆಸಿದ ಬಳಿಕವಷ್ಟೇ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ರಕರಣ ದಾಖಲಾಗಿಲ್ಲ. ಕಾರ್ಮಿಕನನ್ನು ಕರೆದು ವಿಚಾರಣೆ ನಡೆಸಿರುವ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಘಟನೆಯ ವಿವರ: ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ಅಮ್ಮನಪುರ ಗ್ರಾಮದ ರಾಮಣ್ಣ (ಹೆಸರು ಬದಲಾಯಿಸಲಾಗಿದೆ) ಅವರ ಮನೆಯಲ್ಲಿ ತಿಂಗಳ ಹಿಂದೆ ನಾಗರಹಾವೊಂದು ಕಾಣಿಸಿಕೊಂಡಿತ್ತು. ಅದನ್ನು ಅವರು ಕೊಂದು ಹಾಕಿದ್ದರು. ಕೆಲವು ದಿನಗಳ ಬಳಿಕ ಇನ್ನೆ‌ರಡು ಹಾವುಗಳು ಕಾಣಿಸಿಕೊಂಡಿತ್ತು. ಇದರಿಂದ ಭಯಭೀತರಾದ ರಾಮಣ್ಣ ಅವರು ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿದ್ದರು. ಅವರು ಕೇರಳದ ಮಾಂತ್ರಿಕನೊಬ್ಬನನ್ನು ಪರಿಚಯಿಸಿದ್ದರು.

‘ಹಾವುಗಳು ಮನೆಯೊಳಗೆ ಓಡಾಡುತ್ತಿರುವುದರಿಂದ ಮನೆಯ ತಳಭಾಗದಲ್ಲಿ ನಿಧಿ ಇರಬಹುದು. ನಿಧಿಯನ್ನು ಕಾಯುವುದಕ್ಕೆ ಸರ್ಪಗಳು ಬರುತ್ತಿವೆ. ಪೂಜೆ ನಡೆಸಿ, ಮಣ್ಣು ಅಗೆದರೆ ನಿಧಿ ಸಿಗಬಹುದು’ ಎಂದು ಮಾಂತ್ರಿಕ ರಾಮಣ್ಣ ಅವರಿಗೆ ತಿಳಿಸಿದ್ದ ಎಂದು ಗೊತ್ತಾಗಿದೆ.

ಆತನ ಮಾತು ನಂಬಿದ್ದ ರಾಮಣ್ಣ, ಪತ್ನಿಯ ನೆರವಿನಿಂದ ಹಾವುಗಳು ಕಂಡು ಬಂದ ಕೊಠಡಿಯಲ್ಲಿ ಮಣ್ಣನ್ನು ಅಗೆಯಲು ಆರಂಭಿಸಿದ್ದರು. ತುಂಬಾ ಆಳಕ್ಕೆ ಹೋಗುತ್ತಿದ್ದಂತೆಯೇ, ಏಣಿ ಹಾಕಿ, ಹಗ್ಗ ಇಳಿ ಬಿಟ್ಟು ಮಣ್ಣು ತೆರವುಗೊಳಿಸಿದ್ದರು. 20 ಅಡಿ ಆಳ ಆದರೂ ನಿಧಿ ಸಿಕ್ಕಿರಲಿಲ್ಲ.

ಈ ವಿಚಾರ ತಿಳಿದು ನಗರದ ಪೂರ್ವ ಠಾಣೆಯ ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಮನೆಯೊಳಗೆ ಗುಂಡಿ ತೆಗೆದಿರುವುದು ಗೊತ್ತಾಗಿದೆ. ನೆಲದಡಿಯಲ್ಲಿ ಹಾವಿನ ಹುತ್ತ ಇರಬಹುದು ಎಂದುಕೊಂಡು ಅದನ್ನು ತೆರವುಗೊಳಿಸಲು ಮಣ್ಣು ಅಗೆದಿರುವುದಾಗಿ ಪೊಲೀಸರ ಮುಂದೆ ರಾಮಣ್ಣ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಊರವರಿಗೆ ವಿಚಾರ ಗೊತ್ತಾಗಬಾರದು ಎಂದು ಅಗೆದ ಮಣ್ಣನ್ನು ರಾಮಣ್ಣ ಹೊರಗಡೆ ಹಾಕಿರಲಿಲ್ಲ. ಪೊಲೀಸರು ಭೇಟಿ ನೀಡಿದಾಗಲಷ್ಟೇ ಗ್ರಾಮದವರಿಗೂ ವಿಷಯ ಗೊತ್ತಾಗಿದೆ. ಸಲಹೆ ನೀಡಿದ ಮಾಂತ್ರಿಕ ಈಗ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಾಮರಾಜನಗರ ಪೂರ್ವ ಠಾಣೆ ಇನ್‌ಸ್ಪೆಕ್ಟರ್‌ ಆನಂದ್‌ ಅವರು, ‘ವಿಷಯ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಹಾವುಗಳು ಕಂಡು ಬಂದಿದ್ದರಿಂದ ನೆಲ ಅಗೆದಿರುವುದಾಗಿ ಮನೆಯ ಯಜಮಾನ ಹೇಳಿದ್ದಾರೆ. ಅವರಿಗೆ ಎಚ್ಚರಿಕೆ ನೀಡಿ, ಗುಂಡಿ ಮುಚ್ಚುವಂತೆ ಸೂಚಿಸಿದ್ದೇವೆ. ಪ್ರಕರಣ ದಾಖಲಾಗಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT