ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶಿಷ್ಟ ಜಾತಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದವನಿಗೆ ಜೀವಾವಧಿ ಶಿಕ್ಷೆ

ಸ್ಟೌ, ಮಿಕ್ಸಿ ರಿಪೇರಿ ಮಾಡುವ ಸಮಯದಲ್ಲಿ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಅಪರಾಧಿ
Last Updated 29 ಅಕ್ಟೋಬರ್ 2020, 7:10 IST
ಅಕ್ಷರ ಗಾತ್ರ

ಚಾಮರಾಜನಗರ: ಪರಿಶಿಷ್ಟ ಜಾತಿಯ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ನಗರದ ಗಾಳಿಪುರ ಬಡಾವಣೆಯ, ಸದ್ಯ ಸರಗೂರು ಗ್ರಾಮದಲ್ಲಿ ವಾಸವಿರುವ ಶಮೀವುಲ್ಲಾ ಅಲಿಯಾಸ್‌ ಡಾಮ್ಟೆ ಅಲಿಯಾಸ್‌ ಸಲ್ಮಾನ್‌ ಅಲಿಯಾಸ್‌ ಪ್ರೀತಂ ಶಿಕ್ಷೆಗೆ ಗುರಿಯಾಗಿರುವ ಅಪರಾಧಿ. 2018ರ ಜುಲೈನಲ್ಲಿ ಈ ಪ್ರಕರಣ ನಡೆದಿತ್ತು. ಎರಡು ವರ್ಷ ಮೂರು ತಿಂಗಳ ಅವಧಿಯಲ್ಲಿ ನ್ಯಾಯಾಲಯವು ಪ್ರಕರಣವನ್ನು ಇತ್ಯರ್ಥ ಪಡಿಸಿದೆ.

ಘಟನೆ ವಿವರ: ಶಮೀವುಲ್ಲಾ ಸ್ಟೌ ಹಾಗೂ ಮಿಕ್ಸಿ ರಿಪೇರಿ ಮಾಡುವ ವೃತ್ತಿ ಮಾಡುತ್ತಿದ್ದ. ಸ್ಟೌ ಹಾಗೂ ಮಿಕ್ಸಿ ರಿಪೇರಿ ಮಾಡುವುದಕ್ಕಾಗಿತಾಲ್ಲೂಕಿನ ಗ್ರಾಮವೊಂದಕ್ಕೆ ಹೋಗಿದ್ದಾಗ ಅಲ್ಲಿನ ಪರಿಶಿಷ್ಟ ಜಾತಿಯ ಬಾಲಕಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಆಕೆಯನ್ನು ಪುಸಲಾಯಿಸಿದ್ದ ಆತ, ಪ್ರೀತಿಸುತ್ತಿರುವುದಾಗಿ, ಮದುವೆಯಾಗುವುದಾಗಿ ನಂಬಿಸಿದ್ದ.

2018ರ ಜುಲೈ 24ರಂದು ಬೈಕ್‌ನಲ್ಲಿ ಆಕೆಯನ್ನು ತಮಿಳುನಾಡಿನ ತಮಿಳ್‌ ಪುರಕ್ಕೆ ಕರೆದುಕೊಂಡು ಹೋಗಿ, ಬಲವಂತವಾಗಿ ದೈಹಿಕ ಸಂಬಂಧ ಹೊಂದಿದ್ದ. 25ರಂದು ತಮಿಳ್‌ಪುರದಿಂದ ಮೈಸೂರು ಜಿಲ್ಲೆ ಹುಣಸೂರಿಗೆ ಬಂದಿದ್ದ ಶಮೀವುಲ್ಲಾ, ಅಲ್ಲಿನ ಲಾಡ್ಜ್‌ ಒಂದರಲ್ಲಿ ಕೊಠಡಿಯನ್ನು ಬಾಡಿಗೆ ಪಡೆದು ಎರಡು ದಿನ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ.

ಆತನ ವಿರುದ್ಧ ಚಾಮರಾಜನಗರದ ಪೂರ್ವ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ, ಎಸ್‌ಟಿ, ಎಸ್‌ಸಿ ದೌರ್ಜನ್ಯ ತಡೆ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಡಿವೈಎಸ್‌ಪಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.

ಶಮೀವುಲ್ಲಾ ವಿರುದ್ಧದ ಆರೋಪಗಳು ಸಾಬೀತಾಗಿರುವುದರಿಂದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು, ಆರೋಪಿಯನ್ನು ತಪ್ಪಿತಸ್ಥ ಎಂದು ಘೋಷಿಸಿದ್ದು ಇದೇ 27ರಂದು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಒಂದು ಲಕ್ಷ ತಂಡವನ್ನೂ ವಿಧಿಸಲಾಗಿದ್ದು, ದಂಡ ಪಾವತಿಸದಿದ್ದರೆ ಒಂದು ವರ್ಷ ಸಜೆ ಅನುಭವಿಸಬೇಕು ಎಂದು ಅವರು ಆದೇಶದಲ್ಲಿ ಹೇಳಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲೋಲಾಕ್ಷಿ ಅವರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT