ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ: ಬಾಯ್ತೆರೆದ ಅಪಾಯಕಾರಿ ಮ್ಯಾನ್‌ಹೋಲ್‌

ಮಳೆಬಂದರೆ ಕಾರಂಜಿಯಾಗುವ ಯುಜಿಡಿ: ಗಬ್ಬುವಾಸನೆಗೆ ಬೇಸತ್ತ ಸಾರ್ವಜನಿಕರು
Published 28 ಜೂನ್ 2024, 5:21 IST
Last Updated 28 ಜೂನ್ 2024, 5:21 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಎಲ್ಲೆಂದರಲ್ಲಿ ಬಾಯ್ತೆರೆದ ಒಳ ಚರಂಡಿಗಳು, ತುಂಬಿ ಹರಿಯುತ್ತಿರುವ ತ್ಯಾಜ್ಯ, ಮಳೆ ಬಂದರೆ ಜೀವಭಯದಿಂದ ಓಡಾಡಬೇಕಾದ ಅನಿವಾರ್ಯತೆ; ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಚಿತ. ಕೊಳ್ಳೇಗಾಲ ನಗರಸಭೆ ಆಡಳಿತದ ನಗರದ ದುಸ್ಥಿತಿ ಇದು.

ಕೊಳ್ಳೇಗಾಲ ವ್ಯಾಪಾರದಲ್ಲಿ ಪ್ರಮುಖ ಕೇಂದ್ರವಾಗಿದ್ದು ಅತಿವೇಗವಾಗಿ ಬೆಳೆಯುತ್ತಿರುವ ನಗರವಾಗಿ ಗುರುತಿಸಿಕೊಂಡಿದ್ದರೂ ಮೂಲಸೌಕರ್ಯ, ಶುಚಿತ್ವದ ಕೊರತೆ ಎದ್ದು ಕಾಣುತ್ತಿದೆ. 31 ವಾರ್ಡ್‌ಗಳನ್ನು ಹೊಂದಿರುವ ನಗರಸಭೆ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ನೈರ್ಮಲ್ಯ ಕೊರತೆ ಕಾಣುತ್ತದೆ.

ರಸ್ತೆಗಳಲ್ಲಿಯೇ ಒಳಚರಂಡಿಯ ಆಳುಗುಳಿ (ಮ್ಯಾನ್ ಹೋಲ್‌ಗಳು) ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಕೆಲವು ಮ್ಯಾನ್ ಹೋಲ್‌ಗಳ ಹೊಲಸು  ರಸ್ತೆಯ ಮೇಲೆ ಉಕ್ಕುತ್ತಿವೆ. ನಗರದ ಪರಿಸರವನ್ನು ಅಸಹನೀಯಗೊಳಿಸುತ್ತಿದೆ. ಅವ್ಯವಸ್ಥೆ ರಾರಾಜಿಸುತ್ತಿದ್ದರೂ ನಗರಸಭೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಎಲ್ಲಿ ಸಮಸ್ಯೆ: ನಗರದ ಕನ್ನಿಕಾ ಪರಮೇಶ್ವರಿ ಮುಖ್ಯ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಶಾಲಾ ಕಾಲೇಜು ಮಕ್ಕಳು ಹೆಚ್ಚಾಗಿ ಓಡಾಡುವ ಈ ರಸ್ತೆ ನಗರಸಭೆಯ ಹೃದಯ ಭಾಗದಲ್ಲೇ ಇದೆ. ಈ ರಸ್ತೆಯಲ್ಲಿ ಮ್ಯಾನ್ ಹೋಲ್ ಮುಚ್ಚಳ ತೆರೆದಿದ್ದು ಒಂದು ತಿಂಗಳಿಂದಲ್ಲೂ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ನಗರಸಭೆ ಮ್ಯಾನ್ ಹೋಲ್ ಮುಚ್ಚಳ ಮುಚ್ಚದ ಕಾರಣ ಸಾರ್ವಜನಿಕರು ಅದರ ಸುತ್ತ ಮೇಲೆ ಬ್ಯಾರಿಕೇಡ್‌ ಇರಿಸಿದ್ದಾರೆ. ನಗರದ ಮುಡಿಗುಂಡದ ರಾಷ್ಟ್ರೀಯ ಹೆದ್ದಾರಿ ಬಳಿ ಮ್ಯಾನ್ ಹೋಲ್ ಒಡೆದು ರಸ್ತೆಯಲ್ಲಿ ಕೊಳಚೆ ನೀರು ಹರಿಯುತ್ತಿದೆ. ಪ್ರತಿನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತವೆ. ಈ ರಸ್ತೆಯ ಮೂಲಕವೇ ಬೆಂಗಳೂರು, ಮೈಸೂರು, ಸೇರಿದಂತೆ  ಜಿಲ್ಲೆಗಳಿಗೂ ವಾಹನಗಳು ಹೋಗುತ್ತವೆ.

‘ಇದೇ ರಸ್ತೆಯಲ್ಲಿ ಸಚಿವರು, ಶಾಸಕರು, ಸಂಸದರಂಥ ಚುನಾಯಿತರು, ಜಿಲ್ಲಾಧಿಕಾರಿಯಂಥ   ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಓಡಾಡುತ್ತಾರೆ. ಆದರೂ ಕಾಣದಂತೆ ಸಾಗುತ್ತಿದ್ದಾರೆ. ನಗರ ಸಭೆ ಅಧಿಕಾರಿಗಳೂ ಮಣವಹಿಸಿದ್ದಾರೆ. ನೂರ್ ಮೊಹಲ್ಲಾ, ಶಿವಕುಮಾರ ಸ್ವಾಮೀಜಿ ಬಡಾವಣೆ, ಆದರ್ಶ ನಗರ, ಭೀಮ ನಗರ, ವಿದ್ಯಾನಗರ, ಕುರುಬರ ಬೀದಿ, ದೇವಾಂಗಪೇಟೆ, ದೊಡ್ಡನಾಯಕರ ಬೀದಿ, ಚಿಕ್ಕನಾಯಕರ ಬೀದಿ, ಮಹದೇಶ್ವರ ಕಾಲೇಜು ರಸ್ತೆ ಸೇರಿದಂತೆ ಹಲವು ಕಡೆ ಸಮಸ್ಯೆ ತೀವ್ರವಿದ್ದು ಶೀಘ್ರ ದುರಸ್ತಿ ಆಗಬೇಕು. ಇಲ್ಲವಾದರೆ ನಗರಸಭೆ ಮುಂದೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಮುಖಂಡ ಜಯಣ್ಣ ಎಚ್ಚರಿಕೆ ನೀಡಿದರು.

ಕೆಲವು ಬಡಾವಣೆಗಳಲ್ಲಿ ಮ್ಯಾನ್ ಹೋಲ್‌ಗಳು ಮೃತ್ಯುಕೂಪಗಳಾಗಿವೆ. ಕೆಲವು ರಸ್ತೆಗಿಂತ ನಾಲ್ಕೈದು ಇಂಚು ಕೆಳಗಿದ್ದರೆ ಕೆಲವು ಕಡೆಗಳಲ್ಲಿ ರಸ್ತೆಗಿಂತ 1 ಅಡಿಯಷ್ಟು ಮೇಲೆದ್ದು ನಿಲ್ಲುವಂತೆ ನಿರ್ಮಿಸಲಾಗಿದೆ.   ಪಾದಚಾರಿಗಳು, ವಾಹನ ಸವಾರರು ಬಿದ್ದು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.

ಹಗಲು ವೇಳೆ ಗುಂಡಿಗಳನ್ನು ನೋಡಿಕೊಂಡು ಎಚ್ಚರದಿಂದ ವಾಹನಗಳನ್ನು ಚಲಾಯಿಸಬಹುದು. ಆದರೆ ರಾತ್ರಿ ವೇಳೆ ಪಾದಚಾರಿಗಳನ್ನು ಹಾಗೂ ವಾಹನ ಸವಾರರನ್ನು ದೇವರೇ ಕಾಪಾಡಬೇಕು ಎನ್ನುತ್ತಾರೆ ಸ್ಥಳೀಯರು.

‘ಶಿವಕುಮಾರ ಸ್ವಾಮೀಜಿ ಬಡಾವಣೆಯಲ್ಲಿ ರಸ್ತೆಯ ಡಾಂಬರ್‌ನಲ್ಲೇ 1 ಅಡಿಗೂ ಎತ್ತರದ ಮ್ಯಾನ್ ಹೋಲ್ ಇದೆ. ಕೆಲವು ಕಡೆ ಮ್ಯಾನ್ ಹೋಲ್‌ಗಳು ಕುಸಿದು ಬಿದ್ದಿವೆ. ಹಾಗಾಗಿ ಕೂಡಲೇ ಸಾರ್ವಜನಿಕರ ಅನುಕೂಲಕ್ಕಾಗಿ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮ್ಯಾನ್‌ಹೋಲ್‌ಗಳನ್ನು ದುರಸ್ತಿ ಪಡಿಸಬೇಕು ಎಂದು ಒತ್ತಾಯಿಸುತ್ತಾರೆ’ ಬಡಾವಣೆಯ ನಿವಾಸಿ ಸರೋಜಮ್ಮ.

ಕಚ್ಚಾ ರಸ್ತೆಯ ಮಧ್ಯೆ 1 ಅಡಿ ಎತ್ತರ ಇರುವ ಮ್ಯಾನ್‌ಹೋ‌ಲ್‌
ಕಚ್ಚಾ ರಸ್ತೆಯ ಮಧ್ಯೆ 1 ಅಡಿ ಎತ್ತರ ಇರುವ ಮ್ಯಾನ್‌ಹೋ‌ಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT