ಭಾನುವಾರ, ಏಪ್ರಿಲ್ 5, 2020
19 °C
ತೆಂಗಿನಕಾಯಿ ತುಟ್ಟಿ, ತರಕಾರಿ, ಹೂವುಗಳ ಬೆಲೆ ಯಥಾಸ್ಥಿತಿ

ಮೊಟ್ಟೆಗೂ ‘ಕೋವಿಡ್‌–19’ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಕೋವಿಡ್‌–19’ ಸೋಂಕಿನ ಭೀತಿ ಕುಕ್ಕುಟೋದ್ಯಮವನ್ನು ಬಾಧಿಸುತ್ತಿದ್ದು, ಮೊಟ್ಟೆಗಳಿಗೂ ಬೇಡಿಕೆ ಕಡಿಮೆಯಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೊಟ್ಟೆಯ ದರ ಕುಸಿದಿದೆ. 

ಚಿಲ್ಲರೆ ಮಾರುಕಟ್ಟೆಯಲ್ಲಿ ಕಳೆದವಾರ 100 ಮೊಟ್ಟೆಗಳ ಬೆಲೆ ₹375 ಇತ್ತು. ಈ ವಾರ ₹40 ಕುಸಿದು ₹335ಕ್ಕೆ ನಿಂತಿದೆ. ಸಾಮಾನ್ಯವಾಗಿ ಮೊಟ್ಟೆ ದರ ಮಾರುಕಟ್ಟೆಯಲ್ಲಿ ಮೂರು ದಿನಕ್ಕೆ ಬದಲಾಗುತ್ತದೆ. ಇತ್ತೀಚಿಗೆ ಪ್ರತಿ ದಿನವೂ ಬದಲಾವಣೆ ಕಂಡು ಬರುತ್ತಿದೆ. 

‘ಕೋವಿಡ್‌–19 ಸೋಂಕಿನ ಭೀತಿಯಿಂದ ಕೆಲವು ಗ್ರಾಹಕರು ಮೊಟ್ಟೆ ಖರೀದಿಗೆ ಮುಂದಾಗುತ್ತಿಲ್ಲ. ಮೊಟ್ಟೆಯ ಮಾರುಕಟ್ಟೆಯಲ್ಲೇ ದರ ಕಡಿಮೆಯಾಗಿದೆ. ಬೆಲೆ ಕಡಿಮೆಯಾದರೆ ಬೇಡಿಕೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ’ ಎಂದು ಮೊಟ್ಟೆ ವ್ಯಾಪಾರಿಯೊಬ್ಬರು ಹೇಳಿದರು. 

ತೆಂಗಿನಕಾಯಿ ತುಟ್ಟಿ

ತೆಂಗಿನ ಕಾಯಿಯ ಬೆಲೆ ಎರಡು ವಾರಗಳಿಂದ ಏರು ಮುಖವಾಗಿದ್ದು, ಹಾಪ್‌ ಕಾಮ್ಸ್‌ನಲ್ಲಿ ಗಾತ್ರಕ್ಕೆ ಅನುಗುಣವಾಗಿ ಒಂದು ತೆಂಗಿನಕಾಯಿ ಬೆಲೆ ₹20ರಿಂದ ₹28ರವರೆಗೆ ಇದೆ. ಹೊರಗಿನ ಮಾರುಕಟ್ಟೆ, ಅಂಗಡಿಗಳಲ್ಲಿ ದೊಡ್ಡ ಗಾತ್ರದ ತೆಂಗಿನಕಾಯಿಗೆ ₹35 ಬೆಲೆ ಇದೆ. 

‘ಮಾರುಕಟ್ಟೆಗೆ ತೆಂಗಿನಕಾಯಿ ಆವಕ ಕಡಿಮೆಯಾಗಿದೆ. ಹಾಗಾಗಿ, ಬೇಡಿಕೆ ಹೆಚ್ಚಿದ್ದು, ಬೆಳೆ ಹೆಚ್ಚಳವಾಗಿದೆ’ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. 

ತರಕಾರಿಗಳ ಪೈಕಿ ಟೊಮೆಟೊ ₹1, ಬೀಟ್‌ರೂಟ್ ಬೆಲೆ ₹2 ಇಳಿಕೆಯಾಗಿದೆ. ಹೀರೆಕಾಯಿ ಮತ್ತು ಹಾಗಲಕಾಯಿ ₹5 ಹೆಚ್ಚಳವಾಗಿದೆ. ಉಳಿದೆಲ್ಲ ತರಕಾರಿಗಳ ಧಾರಣೆ ಕಳೆದ ವಾರದಷ್ಟೇ ಮುಂದುವರಿದಿದೆ. ಈರುಳ್ಳಿ ಬೆಲೆಯೂ ಸ್ಥಿರವಾಗಿದೆ. 

ಹಣ್ಣುಗಳ ಪೈಕಿ ಸಪೋಟದ ‌ಬೆಲೆ ಕೆಜಿಗೆ ₹10, ಕಲ್ಲಂಗಡಿ ₹3–₹5ರಷ್ಟು ಕಡಿಮೆಯಾಗಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. 

ಹೂವುಗಳ ಧಾರಣೆಯಲ್ಲೂ ಬದಲಾವಣೆಯಾಗಿಲ್ಲ. ಮಂಗಳವಾರ ಹಾಗೂ ಶುಕ್ರವಾರಕ್ಕೆ ಮುಂಚಿತವಾಗಿ ಕೆಲವು ಹೂವುಗಳ ಬೆಲೆಯಲ್ಲಿ ಕೊಂಚ ಹೆಚ್ಚಳವಾಗುತ್ತದೆ. 

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌, ಮಟನ್‌ ಹಾಗೂ ಮೀನು ಮಾಂಸದ ಧಾರಣೆಯಲ್ಲೂ ಯಥಾಸ್ಥಿತಿ ಮುಂದುವರಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು