ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಇಳಿದ ಈರುಳ್ಳಿ ಬೆಲೆ

ಇಳಿದ ದಾಳಿಂಬೆ, ಏಲಕ್ಕಿ ಬಾಳೆ ಹಣ್ಣು ಧಾರಣೆ
Published 26 ಡಿಸೆಂಬರ್ 2023, 7:21 IST
Last Updated 26 ಡಿಸೆಂಬರ್ 2023, 7:21 IST
ಅಕ್ಷರ ಗಾತ್ರ

ಚಾಮರಾಜನಗರ: ವಾರದಿಂದೀಚೆಗೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗುತ್ತಿದೆ. 

ಹಾಪ್‌ಕಾಮ್ಸ್‌, ದಿನಸಿ ಅಂಗಡಿಗಳಲ್ಲಿ ಗುಣಮಟ್ಟದ ಈರುಳ್ಳಿ ಕೆಜಿಗೆ ₹40ರಂತೆ ಸಿಗುತ್ತಿದೆ. ಹೊರಗಡೆ ವ್ಯಾಪಾರಿಗಳು ಇನ್ನೂ ಸ್ವಲ್ಪ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.  

‘ಎರಡು ತಿಂಗಳುಗಳಿಗೂ ಹೆಚ್ಚು ಸಮಯದಿಂದ ಈರುಳ್ಳಿ ಬೆಲೆ ಕೆಜಿಗೆ ₹60 ಇತ್ತು. ಮಾರುಕಟ್ಟೆಗೆ ಈರುಳ್ಳಿ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಹೀಗಾಗಿ ಧಾರಣೆ ಇಳಿದಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ಹೇಳಿದರು. ‌

ಇತರೆ ತರಕಾರಿಗಳ ಪೈಕಿ ಬೀನ್ಸ್‌ ಬೆಲೆ ಇಳಿಕೆ ಕಂಡಿದೆ. ಹಾಪ್‌ಕಾಮ್ಸ್‌ನಲ್ಲಿ ಕೆಜಿಗೆ ₹10 ಕಡಿಮೆಯಾಗಿದೆ. ಸೋಮವಾರ ಹಾಪ್‌ಕಾಮ್ಸ್‌ನಲ್ಲಿ ಕೆಜಿ ಬೀನ್ಸ್‌ ₹30ಕ್ಕೆ ಸಿಗುತ್ತಿತ್ತು. 

ಬೀಟ್‌ರೂಟ್‌ ಧಾರಣೆ ಕೆಜಿಗೆ ₹10 ಹೆಚ್ಚಾಗಿದ್ದು, ₹40ಕ್ಕೆ ತಲುಪಿದೆ. ಬೆಳ್ಳುಳ್ಳಿಯ ದುಬಾರಿ ಬೆಲೆ (₹240) ಈ ವಾರವೂ ಮುಂದುವರಿದಿದೆ. 

ಉಳಿದಂತೆ ಟೊಮೆಟೊ, ಕ್ಯಾರೆಟ್‌, ಆಲೂಗಡ್ಡೆ, ಮೂಲಂಗಿ (₹30), ಹಾಗಲಕಾಯಿ (₹60), ಹಸಿಮೆಣಸಿನಕಾಯಿ (₹40) ದಪ್ಪಮೆಣಸಿನಕಾಯಿ (₹60), ಗೆಡ್ಡೆಕೋಸು (₹40) ಸೇರಿದಂತೆ ಇತರೆ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. 

ಅವರೆಕಾಯಿ ಮತ್ತು ತೊಗರಿಕಾಯಿಗೆ ಬೇಡಿಕೆ ಹೆಚ್ಚಾಗಿದ್ದು, ಧಾರಣೆ ಕ್ರಮವಾಗಿ ₹50, ₹60 ಇದೆ. 

ದಾಳಿಂಬೆ ಅಗ್ಗ: ಹಣ್ಣುಗಳ ಪೈಕಿ ದಾಳಿಂಬೆ ಹಾಗೂ ಏಲಕ್ಕಿ ಬಾಳೆಹಣ್ಣುಗಳ ಧಾರಣೆ ಇಳಿಕೆಯಾಗಿದೆ. ‌‌

ಹಾಪ್‌ಕಾಮ್ಸ್‌ನಲ್ಲಿ ಕೆಜಿ ದಾಳಿಂಬೆಗೆ ₹160 ಇದೆ. ಕಳೆದ ವಾರ ₹180ಕ್ಕೆ ಇತ್ತು. ಏಲಕ್ಕಿ ಬಾಳೆ ಹಣ್ಣಿಗೆ ಕೆಜಿಗೆ ₹70 ಇತ್ತು. ಈಗ ಅದು ₹60ಕ್ಕೆ ಇಳಿದಿದೆ. ಮೂಸಂಬಿ, ಕಿತ್ತಳೆಗೆ ತಲಾ ₹80 ಇದೆ. ಸೇಬು ಕೆಜಿಗೆ ₹140, ಎರಡು ಬಗೆ ದ್ರಾಕ್ಷಿ ಲಭ್ಯ ಇದ್ದು ಕೆಜಿಗೆ ₹130 ಮತ್ತು ₹160 ಇದೆ.  ‌

ಹೂವಿನ ಧಾರಣೆ ಇಳಿಕೆ ಧನುರ್‌ ಮಾಸ ಆರಂಭವಾದ ನಂತರ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳ ಬೆಲೆ ಇಳಿಕೆಯಾಗಿದೆ.  ‘ಧನುರ್‌ ಮಾಸದಲ್ಲಿ ಪ್ರತಿದಿನ ಮುಂಜಾನೆ ದೇವಾಲಯದಲ್ಲಿ ಪೂಜೆ ಬಿಟ್ಟರೆ ಬೇರೆ ಶುಭ ಸಮಾರಂಭಗಳು ನಡೆಯುವುದಿಲ್ಲ. ಹೀಗಾಗಿ ಹೂವುಗಳಿಗೆ ಹೆಚ್ಚು ಬೇಡಿಕೆ ಇರುವುದಿಲ್ಲ’ ಎಂಬುದು ವ್ಯಾಪಾರಿಗಳ ಮಾತು.  ನಗರದ ಚೆನ್ನಿಪುರಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಕನಕಾಂಬರಕ್ಕೆ ಕೆಜಿಗೆ ₹600ರಿಂದ ₹800 ಇದೆ. ಸೇವಂತಿಗೆಗೆ ₹120 ಚೆಂಡು ಹೂವಿಗೆ ₹40ರಿಂದ ₹50 ಸುಗಂಧರಾಜಕ್ಕೆ ₹80 ಹಾಗೂ ಬಟನ್‌ಗುಲಾಬಿಗೆ ₹100ರಿಂದ ₹120ರವರೆಗೆ ಇದೆ.  ‘ಇನ್ನು ಒಂದು ತಿಂಗಳು ಇದೇ ಧಾರಣೆ ಇರಲಿದೆ. ಮಕರ ಸಂಕ್ರಾಂತಿಯ ನಂತರ ಹೂವುಗಳಿಗೆ ಬೇಡಿಕೆ ಹೆಚ್ಚಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT