ಬುಧವಾರ, ಮಾರ್ಚ್ 29, 2023
23 °C
ರಥಸಪ್ತಮಿ: ಚಾಮರಾಜನಗರ, ಮರಿಯಾಲದಲ್ಲಿ ಎಸ್‌ಪಿವೈಎಸ್‌ಎಸ್‌ನಿಂದ ಆಯೋಜನೆ; 1,100ಕ್ಕೂ ಹೆಚ್ಚು ಮಂದಿ ಭಾಗಿ

ಸಾಮೂಹಿಕ 108 ಸೂರ್ಯ ನಮಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ರಥ ಸಪ್ತಮಿ’ಯ ಅಂಗವಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ (ಎಸ್‌ಪಿವೈಎಸ್‌ಎಸ್)ನಿಂದ ನಗರ ಮತ್ತು ತಾಲ್ಲೂಕಿನ ಮರಿಯಾಲದಲ್ಲಿ 1,100ಕ್ಕೂ ಹೆಚ್ಚು ಯೋಗಪಟುಗಳು ಶನಿವಾರ‌ 13 ನೇ ವರ್ಷದ ಸಾಮೂಹಿಕವಾಗಿ 108 ಸೂರ್ಯ ನಮಸ್ಕಾರ ನಡೆಯಿತು.

ನಗರದ ಸೇವಾ ಭಾರತಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ‌ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತ್ಯ ಸಂಯೋಜಕ ರಾಘವೇಂದ್ರಸ್ವಾಮಿ, ‘ರೋಗ ಬರದಂತೆ, ತಡೆಯಲು ನಿತ್ಯ ಸೂರ್ಯ ನಮಸ್ಕಾರ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.

‘ಜಗತ್ತನ್ನು ರಕ್ಷಣೆ ಮಾಡುವವನು, ಕಣ್ಣಿಗೆ ಕಾಣುವವನು ಮತ್ತು ಜಾತಿ ಮತ ಭೇದ ಇಲ್ಲದೆ ಎಲ್ಲರೂ ಪೂಜಿಸುವಂತಹವನು ಅಂದರೆ ಅದು ಸೂರ್ಯ. ಆತ ಹುಟ್ಟಿದ ದಿನದ ಅಂಗವಾಗಿ, ನಮಸ್ಕಾರ ಮಾಡುವ ಮೂಲಕ ಶುಭಾಶಯ ಕೋರಬೇಕು ಎಂಬ ಉದ್ದೇಶದಿಂದ ಸಾಮೂಹಿಕ ಸೂರ್ಯ ನಮಸ್ಕಾರ ಆಯೋಜಿಸಲಾಗಿದೆ‘ ಎಂದರು.

‘ಇಂದಿನ ವೈಜ್ಞಾನಿಕ ಯುಗದಲ್ಲೂ ಆರೋಗ್ಯ ಕಾಪಾಡಲು ಸೂರ್ಯ ನಮಸ್ಕಾರ ಪ್ರಸ್ತುತವಾಗಿದೆ. ಆಧ್ಯಾತ್ಮಿಕ ಸಾಧನೆಗೆ ಮತ್ತು ಆರೋಗ್ಯಕ್ಕೆ ಸೂರ್ಯ ನಮಸ್ಕಾರ ಸಹಕಾರಿಯಾಗಿದೆ. ಯಾವ ರಾಷ್ಟ್ರದಲ್ಲಿ ಹೆಚ್ಚು ಆರೋಗ್ಯವಂತರು ಇರುತ್ತಾರೋ ಅದು ಅತ್ಯುತ್ತಮ ರಾಷ್ಟ್ರ’ ಎಂದು ತಿಳಿಸಿದರು.

ಸೇವಾಭಾರತಿ ಶಿಕ್ಷಣ ಸಂಸ್ಥೆ, ಜೆಎಸ್ಎಸ್ ಪಬ್ಲಿಕ್ ಶಾಲೆ, ಎಂಸಿಎಸ್ ಶಾಲೆಯ ನೂರಾರು ವಿದ್ಯಾರ್ಥಿಗಳು ಸೂರ್ಯ ನಮಸ್ಕಾರದಲ್ಲಿ ಭಾಗವಹಿಸಿದ್ದರು.

ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಾಸುದೇವರಾವ್, ಆಡಳಿತಾಧಿಕಾರಿ ರಮೇಶ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಜಿಲ್ಲಾ ಅಧ್ಯಕ್ಷ ಶಿವಕುಮಾರಸ್ವಾಮಿ, ಯೋಗ ಮುಖ್ಯಶಿಕ್ಷಕರಾದ ನಿಜಗುಣ, ಅಜಿತ್ ಕುಮಾರ್, ಸಿದ್ದರಾಜು, ಅಭಿಲಾಷ್, ಜಗದೀಶ್, ಲೊಕೇಶ್ ಇದ್ದರು.

ಮರಿಯಾಲದಲ್ಲಿ ಯೋಗಾಯೋಗ: ತಾಲ್ಲೂಕಿನ ಮರಿಯಾಲ ಶ್ರೀಮುರುಘರಾಜೇಂದ್ರ ವಿದ್ಯಾಸಂಸ್ಥೆ ಅವರಣದಲ್ಲಿ ನಡೆದ ಸಾಮೂಹಿಕ ಸೂರ್ಯ ನಮಸ್ಕಾರದಲ್ಲಿ ಎಸ್‌ಪಿವೈಎಸ್‌ಎಸ್ ಯೋಗ ಬಂಧುಗಳು ಹಾಗೂ ಶಾಲೆಯ 600 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮರಿಯಾಲ ಮಠದ ಇಮ್ಮಡಿ‌ ಮುರುಘರಾಜೇಂದ್ರ ಸ್ವಾಮೀಜಿ, ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಹಾಗೂ ಯೋಗ ಶಿಕ್ಷಣ ಸಮಿತಿಯ ಯೋಗ ಪ್ರಕಾಶ್ ಅವರು ಗಿಡಕ್ಕೆ ನೀರೆರುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಶ್ರೀಗಳು, ‘ನಮ್ಮ ಪೂರ್ವಿಕರು ಹಾಗೂ ಋಷಿಮುನಿಗಳಿಂದ ಬಂದ ಯೋಗಾಭ್ಯಾಸವು ವೈಜ್ಞಾನಿಕವಾಗಿ ಬಹಳ ಮಹತ್ವ ಪಡೆದುಕೊಂಡಿದೆ. ಇಡೀ ವಿಶ್ವಕ್ಕೆ ಯೋಗವನ್ನು ಪರಿಚಯ ಮಾಡಿದ್ದು ನಮ್ಮ ದೇಶ. ಯೋಗ ನಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪ್ರತಿನಿತ್ಯ ಕನಿಷ್ಠ ಒಂದು ಗಂಟೆ ಯೋಗಭ್ಯಾಸ ಮಾಡುವುದರಿಂದ ಆರೋಗ್ಯವಂತ ಜೀವನ ನಡೆಸಲು ಸಾಧ್ಯವಿದೆ’ ಎಂದರು.

ಸಿದ್ದಮಲ್ಲಪ್ಪ ಮಾತನಾಡಿ, ‘ಒತ್ತಡ ಜೀವನದಿಂದ ಮುಕ್ತರಾಗಲು ಯೋಗ ಸಹಕಾರಿ. ಯೋಗ ಎಂದರೆ ಆರೋಗ್ಯ ಮುಕ್ತ ಜೀವನ ಎಂದರ್ಥ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಮೂಡಲು ಯೋಗ ಪರಿಣಾಮಕಾರಿ’ ಎಂದು ತಿಳಿಸಿದರು.

ಯೋಗಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಪತಂಜಲಿ ಯೋಗ ಶಿಕ್ಷ ಸಮಿತಿಯ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಯೋಗ ಶಿಕ್ಷಕರಾದ ಶ್ರೀನಿವಾಸ, ದೊರೆಸ್ವಾಮಿ, ಶ್ರೀನಿವಾಸಮೂರ್ತಿ, ಸುನೀತಾ, ಮಹದೇವಪ್ಪ, ಡಿ.ಪಿ. ಪ್ರಕಾಶ್, ಸಿದ್ದರಾಜು, ರಂಜಿನಿಕಾಂತ್, ಸಂತೋಷ್, ಸ್ವಾಮಿ, ರವಿ, ಮಾದೇಶ್, ಮೂಡ್ಲುಪುರ ಕುಮಾರಣ್ಣ, ಭಜನೆ ಮಹೇಶ್, ಮುಖ್ಯ ಶಿಕ್ಷಕ ಆಶೋಕ್, ಬ್ರಿಜೇಶ್, ಸ್ವಾಮಿ, ಮಾದೇಶ್, ವಿದ್ಯಾರ್ಥಿಗಳು  ಶಿಕ್ಷಕರ ವೃಂದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು