ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ‍ಪರಿಶೀಲನೆ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಈಶ್ವರಪ್ಪ ಭೇಟಿ
Last Updated 20 ಜೂನ್ 2020, 16:38 IST
ಅಕ್ಷರ ಗಾತ್ರ

ಚಾಮರಾಜನಗರ/ಮಹದೇಶ್ವರ ಬೆಟ್ಟ/ ಕೊಳ್ಳೇಗಾಲ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಶನಿವಾರ ಜಿಲ್ಲೆಯ ವಿವಿಧ ಕಡೆಗಳಿಗೆ ಭೇಟಿ ನೀಡಿ, ನರೇಗಾ ಯೋಜನೆ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದರು.

ಬೆಳಿಗ್ಗೆ ಮಹದೇಶ್ವರ ಬೆಟ್ಟದಲ್ಲಿ ನರೇಗಾ ಕಾಮಗಾರಿಯನ್ನು ಪರಿಶೀಲಿಸುವುದರ ಜೊತೆಗೆ ಸ್ಥಳೀಯಗ್ರಾಮ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಉದ್ಯೋಗ ಚೀಟಿಯನ್ನು ವಿತರಣೆ ಮಾಡಿದರು. ಪೊಲೀಸ್‌ ಠಾಣೆಯ ಬಳಿ ಇರುವ ದೊಡ್ಡಕೆರೆಗೂ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಹನೂರು ವಿಧಾನಸಭಾ ಕ್ಷೇತ್ರದ 291 ಗ್ರಾಮಗಳಿಗೆ ನೀರು ಪೂರೈಸುವ ಕೊಳ್ಳೇಗಾಲ ತಾಲ್ಲೂಕಿನ ಸರಗೂರು ಗ್ರಾಮದ ಕಾವೇರಿ ನದಿ ಸಮೀಪ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ವೀಕ್ಷಿಸಿದರು.

ನಂತರ ಮಾತನಾಡಿದ ಅವರು, ‘ಹನೂರು ಭಾಗದ ಬಹಳಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಅಲ್ಲಿಗೆ ಕಾವೇರಿ ನೀರು ತಲುಪಿಸುವ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಗುತ್ತಿಗೆದಾರರು ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಮುಕ್ತಾಯಗೊಳಿಸಬೇಕು’ ಎಂದರು.

ಹನೂರು ಶಾಸಕ ಆರ್.ನರೇಂದ್ರ ಅವರು ಮಾತನಾಡಿ, ‘ಮೊದಲನೇ ಹಂತದ ಕಾಮಗಾರಿಯಲ್ಲಿ 98 ಹಳ್ಳಿಗಳಿಗೆ ಕುಡಿಯುವ ನೀರು ದೊರೆಯುತ್ತದೆ. ಅದೇ ರೀತಿ ಮುಂದೆ ಇರುವ ಗ್ರಾಮಗಳ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಆ ಭಾಗದ ಜನರಿಗೂ ಎರಡನೇ ಹಂತದ ಕಾಮಗಾರಿಯನ್ನು ಪ್ರಾರಂಭಿಸಿ ಅಲ್ಲಿನ ಜನರಿಗೆ ಕುಡಿಯುವ ನೀರು ಸೌಕರ್ಯ ಕಲ್ಪಿಸಬೇಕು’ ಎಂದು ಸಚಿವರಲ್ಲಿ ಕೇಳಿಕೊಂಡರು.

ಆ ಬಳಿಕ ಚಾಮರಾಜನಗರದ ವಿವಿಧ ಗ್ರಾಮಗಳಿಗೆ ನೀರು ಪೂರೈಸುವ ಉಮ್ಮತ್ತೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಶುದ್ಧೀಕರಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಾಸಕ ಎನ್.ಮಹೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶಿವಮ್ಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ್‍ರಾವ್, ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಪ್ರಾಧಿಕಾರದಕಾರ್ಯಧರ್ಶಿ ಜಯವಿಭವಸ್ವಾಮಿ, ಉಪವಿಭಾಗಾಧಿಕಾರಿ ನಿಖಿತಾ ಚಿನ್ನಸ್ವಾಮಿ, ತಹಶೀಲ್ದಾರ್ ಕುನಾಲ್, ಮುಖಂಡ ಡಾ.ದತ್ತೇಶ್‍ಕುಮಾರ್ ಸೇರಿದಂತೆ ಇತರರು ಇದ್ದರು.

ನಿರ್ಬಂಧದ ನಡುವೆ ಮಾದಪ್ಪನ ದರ್ಶನ

ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಎಣ್ಣೆ ಮಜ್ಜನ ಸೇವೆ ಹಾಗೂ ಅಮಾವಾಸ್ಯೆ ವಿಶೇಷ ಪೂಜೆಗಳು ನಡೆಯುವ ಸಂದರ್ಭದಲ್ಲಿ ಹೆಚ್ಚಿನ ಭಕ್ತರು ಬರುವುದನ್ನು ತಡೆಯುವ ಉದ್ದೇಶದಿಂದಜೂನ್‌ 19ರಿಂದ 21ರವರೆಗೆ ಜನರ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶಿಸಲಾಗಿತ್ತು.

ಆದರೆ, ಶನಿವಾರ ಸಚಿವ ಎಸ್‌.ಈಶ್ವರಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ಮಹದೇಶ್ವರ ಸ್ವಾಮಿಯ ದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT