ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪ್ರಚಾರ ಆರಂಭಿಸಿದ ಸಚಿವ ಸೋಮಣ್ಣ

ಗೋವಿಂದರಾಜ ನಗರದಂತೆ ಚಾಮರಾಜನಗರವನ್ನೂ ಅಭಿವೃದ್ಧಿಪಡಿಸುವೆ–ವಾಗ್ದಾನ
Last Updated 16 ಏಪ್ರಿಲ್ 2023, 3:29 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಚಿವ ವಿ. ಸೋಮಣ್ಣ ಶನಿವಾರ ಕ್ಷೇತ್ರದಲ್ಲಿ ಅಧಿಕೃತವಾಗಿ ಪ‍್ರಚಾರಕ್ಕೆ ಚಾಲನೆ ನೀಡಿದರು.

ಟಿಕೆಟ್‌ ಘೋಷಣೆಯಾದ ನಂತರ ಎರಡನೇ ಬಾರಿಗೆ ಕ್ಷೇತ್ರಕ್ಕೆ ಬಂದ ಸೋಮಣ್ಣ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರಚಾರ ಸಭೆ ನಡೆಸಿದರು, ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೇಳಿಕೊಂಡರು.

ಶನಿವಾರ ಬೆಳಿಗ್ಗೆ ಪಕ್ಷದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಎಂ.ರಾಮಚಂದ್ರ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿದ ಸೋಮಣ್ಣ, ನಂತರ ಕ್ಷೇತ್ರ ವ್ಯಾಪ್ತಿಯ ಕೂಡ್ಲೂರು ಗ್ರಾಮದ ಮಂಟೇಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರವನ್ನು ಅಧಿಕೃತವಾಗಿ ಆರಂಭಿಸಿದರು. ನಂತರ ಆಲೂರು ಗ್ರಾಮಕ್ಕೆ ತೆರಳಿ ಡಾ.ಬಿ.ಆರ್. ಅಂಬೇಡ್ಕರ್, ಶ್ರೀ ಬಸವೇಶ್ವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. ಮಾಜಿ ರಾಜ್ಯಪಾಲರಾದ ಬಿ. ರಾಚಯ್ಯ ಅವರ ಸ್ಮಾರಕಕ್ಕೂ ತೆರಳಿ ಪುಷ್ಪನಮನ ಸಲ್ಲಿಸಿದರು.

ಆಲೂರು ಗ್ರಾಮದಲ್ಲಿ ಪಕ್ಷದ ಮಹಾಶಕ್ತಿ ಕೇಂದ್ರದ ಸಭೆ ನಡೆಸಿ ಮತಯಾಚನೆ ಮಾಡಿದರು.

‘ಚಾಮರಾಜನಗರ, ವರುಣಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ನಾನು ಬಯಸಿರಲಿಲ್ಲ. ಆದರೆ, ಹೈಕಮಾಂಡ್ ಅವಕಾಶ ಕಲ್ಪಿಸಿದೆ. ಎರಡು ಕ್ಷೇತ್ರಗಳಲ್ಲಿ ಅವಕಾಶ ಸಿಕ್ಕಿರುವುದು ದೈವಶಕ್ತಿಯ ಕೊಡುಗೆ’ ಎಂದರು.

‘ಈಗಾಗಲೇ ಮೂರು ಬಾರಿ ಬೇರೆಯವರನ್ನು ಆಯ್ಕೆ ಮಾಡಿದ್ದೀರಿ. ಈ ಸಲ ನನಗೆ ಅವಕಾಶ ಕೊಡಿ. ಮೇ 13ರ ನಂತರ ಈ ಕ್ಷೇತ್ರದ ಜನಸೇವಕನಾಗಿ ಕೆಲಸ ಮಾಡುತ್ತೇನೆ’ ಎಂದರು.

ಎರಡು ಕಡೆಗಳಲ್ಲೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಗೋವಿಂದರಾಜನಗರ ಕ್ಷೇತ್ರದ ಅಭಿವೃದ್ಧಿಯ ಮಾದರಿಯಲ್ಲಿಯೇ ಚಾಮರಾಜನಗರ ಕ್ಷೇತ್ರವನ್ನು ಅಭಿವೃದ್ಧಿಪಡಿಸುತ್ತೇನೆ. ಈಗಾಗಲೇ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲೂ ಹೆಚ್ಚಿನ ಅಭಿವೃದ್ಧಿ ಮಾಡುವೆ ಎಂದರು.

ಎಂ.ರಾಮಚಂದ್ರ ಮಾತನಾಡಿ, ‘ಚಾಮರಾಜನಗರ ಕ್ಷೇತ್ರದಲ್ಲಿ ವಿ.ಸೋಮಣ್ಣ ಅವರ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ವಿ.ಸೋಮಣ್ಣ ಅಭಿವೃದ್ಧಿಯ ಹರಿಕಾರರಾಗಿದ್ದು ಅವರನ್ನು ಗೆಲ್ಲಿಸಬೇಕಿದೆ’ ಎಂದರು.

ಅಲ್ಲಿಂದ ಚಂದಕವಾಡಿ, ಅಂಕನಶೆಟ್ಟಿಪುರ ಹಾಗೂ ಅರಕಲವಾಡಿ ಗ್ರಾಮಗಳಲ್ಲಿ ಮಹಾಶಕ್ತಿ ಕೇಂದ್ರದ ಸಭೆಯನ್ನು ನಡೆಸಿ ಮತಯಾಚನೆ ಮಾಡಿದರು.

ಜೊತೆಗಿದ್ದ ಆಕಾಂಕ್ಷಿಗಳು: ಸೋಮಣ್ಣ ಅವರ ಪ್ರಚಾರ ಕಾರ್ಯದಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದ ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಅಮ್ಮನಪುರ ಮಲ್ಲೇಶ್, ಡಾ.ಎ.ಆರ್.ಬಾಬು, ಕಾಡಾ ಅಧ್ಯಕ್ಷ ನಿಜಗುಣರಾಜು, ಯು.ಎಂ.ಪ್ರಭುಸ್ವಾಮಿ ಇತರರು ಇದ್ದರು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್‌, ಕ್ಷೇತ್ರದ ಚುನಾವಣಾ ಪ್ರಭಾರಿ ಎಂ.ಶಿವಣ್ಣ (ಕೋಟೆ), ಪ್ರಧಾನ ಕಾರ್ಯದರ್ಶಿ ಮಂಗಲ ಶಿವಕುಮಾರ್‌, ಮುಖಂಡ
ರಾದ ಆರ್‌.ಸುಂದರ್‌, ಹನುಮಂತಶೆಟ್ಟಿ, ಎ.ಆರ್‌.ಬಾಲರಾಜು, ಎಚ್.ಎಸ್. ಬಸವರಾಜು, ಅರಕಲವಾಡಿ ಸೋಮನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT