ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಬೇರೆಯವರ ಮಾತು ಕೇಳಿ ತೇಜೋವಧೆ ಮಾಡಿದಿರಿ: ಸೋಮಣ್ಣ ಅಸಮಾಧಾನ

‘ಗೋ ಬ್ಯಾಕ್‌ ಸೋಮಣ್ಣ’ ಪ್ರತಿಭಟನೆ ಮಾಡಿದ ಗ್ರಾಮಸ್ಥರೊಂದಿಗೆ ಸೋಮಣ್ಣ ಸಭೆ, ದೇವಾಲಯದ ಅಭಿವೃದ್ಧಿಯ ಭರವಸೆ
Last Updated 26 ಮಾರ್ಚ್ 2023, 12:47 IST
ಅಕ್ಷರ ಗಾತ್ರ

ಚಾಮರಾಜನಗರ: ‘ಬೆಂಗಳೂರಿನಿಂದ ಯಾರೋ ತಂದು ಕೊಟ್ಟ ಫಲಕವನ್ನು ಹಿಡಿದು, ಸುಳ್ಳುಗಾರ ಸೋಮಣ್ಣ ಎಂದು ಹೇಳಿ ನನ್ನನ್ನು ಅವಮಾನ ಮಾಡಿದ್ದೀರಿ. ನನಗೆ ಇಷ್ಟೊಂದು ಅವಮಾನ ಎಲ್ಲೂ ಆಗಿರಲಿಲ್ಲ. ನಾನು ಏನು ತಪ್ಪು ಮಾಡಿದ್ದೆ? ನನ್ನ ತೇಜೋವಧೆ ಮಾಡಿದ್ದರೂ ಪರವಾಗಿಲ್ಲ. ಊರ ದೇವಸ್ಥಾನವನ್ನು ಅಭಿವೃದ್ಧಿ ಪಡಿಸುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ತಾಲ್ಲೂಕಿನ ಅಮಚವಾಡಿ ಚನ್ನಪ್ಪನಪುರ ಗ್ರಾಮಸ್ಥರಿಗೆ ಭಾನುವಾರ ಭರವಸೆ ನೀಡಿದರು.

‘ಅಮಚವಾಡಿ–ಚನ್ನಪ್ಪನಪುರ ಗುಡ್ಡದಮಠ ವೀರಭದ್ರಸ್ವಾಮಿ ದೇವಸ್ಥಾನ ಅಭಿವೃದ್ಧಿ ಹಾಗೂ ರಥ ನಿರ್ಮಾಣ ಮಾಡಿಕೊಡುವಲ್ಲಿ ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ನುಡಿದಂತೆ ನಡೆಯಲಿಲ್ಲ ಹಾಗೂ ಬೆಂಗಳೂರಿಗೆ ಹೋಗಿದ್ದಾಗ ಗ್ರಾಮಸ್ಥರನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ’ ಮೂರು ದಿನಗಳ ಹಿಂದೆ ಗ್ರಾಮಸ್ಥರು ದೇವಾಲಯದ ಆವರಣದಲ್ಲಿ ಗೋ ಬ್ಯಾಕ್‌ ಸೋಮಣ್ಣ ಚಳವಳಿ ಮಾಡಿದ್ದರು. ಅಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಸ್ವಾಮಿ ಅವರು, ಸಚಿವರು ನಗರಕ್ಕೆ ಬಂದಾಗ ದೇವಾಲಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಗ್ರಾಮಸ್ಥರು ವಾಪಸ್‌ ಪಡೆದಿದ್ದರು.

ಅದರಂತೆ, ಭಾನುವಾರ ಸಚಿವ ವಿ.ಸೋಮಣ್ಣ ಅವರು ಗ್ರಾಮದ ಎಲ್ಲ ಕೋಮುಗಳ ಮುಖಂಡರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ತಮ್ಮ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ತೀವ್ರ ಅಸಮಾಧಾನ ಹೊರ ಹಾಕಿದರು.

ಸಭೆಯಲ್ಲಿ ಮಾತನಾಡಿದ ಸೋಮಣ್ಣ, ‘ನಾನು ಏನು ತಪ್ಪು ಮಾಡಿದ್ದೆ? ‘ನಮ್ಮ ಸಮುದಾಯದವರಿದ್ದೀರಿ, ದೇವಾಲಯವನ್ನು ಸ್ವಲ್ಪ ಸ್ವಚ್ಛವಾಗಿಟ್ಟುಕೊಳ್ಳಿ’ ಎಂದು ಹೇಳಿದ್ದೆ. ಅದು ದೊಡ್ಡ ತಪ‍್ಪೇ? ನೀವು ಬೆಂಗಳೂರಿಗೆ ಬಂದಿದ್ದ ದಿನ ನಾನು ತುರ್ತಾಗಿ ಹೋಗಬೇಕಾಗಿತ್ತು. ಅದಕ್ಕೆ ಬೇಗ ಹೊರಟಿದ್ದೆ. ನನ್ನಿಂದ ತಪ್ಪಾಗಿದ್ದರೆ ಕ್ಷಮೆ ಕೋರುತ್ತೇನೆ. ಆದರೆ, ಬೇರೆಯವರ ಮಾತು ಕೇಳಿಕೊಂಡು ನನ್ನ ವಿರುದ್ಧ ಹೋರಾಟ ಮಾಡಿದ್ದೀರಿ. ಯಾರೋ ಹೇಳಿದ್ದಾರೆ ಎಂಬ ಕಾರಣಕ್ಕೆ ಇನ್ನೊಬ್ಬರನ್ನು ಟೀಕಿಸುವುದರಲ್ಲಿ, ಬೈಯುವುದರಲ್ಲಿ ಅರ್ಥ ಇಲ್ಲ’ ಎಂದು ಗ್ರಾಮಸ್ಥರಿಗೆ ಹೇಳಿದರು.

‘ಈ ದೇವಾಲಯಕ್ಕೂ ನನಗೂ ಸಂಬಂಧ ಇಲ್ಲ. ಆದರೆ, ನನ್ನ ಪುಣ್ಯ. ದೇವಾಲಯಕ್ಕೆ ಭೇಟಿ ನೀಡಿ, ಅದರ ಅಭಿವೃದ್ಧಿ ಕಾರ್ಯ ಮಾಡಲು ದೇವರು ಅವಕಾಶ ಕೊಟ್ಟಿದ್ದಾನೆ. ದೇವಾಲಯದ ಅಭಿವೃದ್ಧಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೆ. ನನ್ನ ಕ್ಷೇತ್ರಕ್ಕೆ ಬಂದು ನೋಡಿ. 72 ದೇವಾಲಯಗಳನ್ನು ಅಭಿವೃದ್ಧಿ ಪಡಿಸಿದ್ದೇನೆ. ಯಾವಾಗ ಏನು ಆಗಬೇಕೋ ಅದು ಆಗುತ್ತದೆ. ದೇವರು ಆ ಕೆಲಸವನ್ನು ಮಾಡಿಸುತ್ತಾನೆ. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ನನ್ನನ್ನು ಖಳನಾಯಕನನ್ನಾಗಿ ಮಾಡಿದ್ದೀರಿ. ಇದರಿಂದ ನನಗೇನೂ ಹೋಗುವುದಿಲ್ಲ. ದೇವರ ಮನೆಯಲ್ಲಿ ರಾಜಕೀಯ ಮಾಡುವುದು ತಪ್ಪು’ ಎಂದರು.

‘ದೇವಾಲಯದಲ್ಲಿ ಪೂಜೆ ಸರಿಯಾಗಿ ಆಗುತ್ತಿಲ್ಲ. ಅರ್ಚಕ ಸರಿ ಇಲ್ಲ. ಸಮಸ್ಯೆಗಳನ್ನು ನಿಮ್ಮಲ್ಲೇ ಇಟ್ಟುಕೊಂಡು ಈ ರೀತಿ ನಡೆದುಕೊಳ್ಳುತ್ತೀರಲ್ಲಾ? ನಿಮ್ಮ ನಡವಳಿಕೆ ತಿದ್ದಿಕೊಳ್ಳಿ. ಇನ್ನೊಬ್ಬರನ್ನು ಮೆಚ್ಚಿಸಿಕೊಳ್ಳುವುದಕ್ಕೆ ನಾನು ಕೆಲಸ ಮಾಡುವುದಿಲ್ಲ. ಭಗವಂತನ ಆಶೀರ್ವಾದ ನನ್ನ ಮೇಲೆ ಇದೆ. ಕೆಲಸ ಮಾಡಲು ಆರೋಗ್ಯ ಕೊಟ್ಟಿದ್ದಾನೆ’ ಎಂದರು.

ಸಮಗ್ರ ಅಭಿವೃದ್ಧಿ: ‘ವೀರಭದ್ರೇಶ್ವರ ದೇವಾಲಯ ಶಿಥಿಲವಾಗಿದೆ. ಅದನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಬೇಕು. ಜಿಲ್ಲಾಡಳಿತ ₹3.5 ಕೋಟಿ ವೆಚ್ಚದ ಯೋಜನೆ ತಯಾರಿಸಿದೆ. ಬೆಂಗಳೂರಿನಿಂದ ವಾಸ್ತು ತಜ್ಞ ಚಿದಾನಂದ ಅವರನ್ನು ಸೋಮವಾರ ಕಳುಹಿಸುತ್ತೇನೆ. ಅವರು ಇಡೀ ದೇವಸ್ಥಾನವನ್ನು ನೋಡಿ, ಸಲಹೆ ಕೊಡಲಿ. ಆ ಬಳಿಕ ಅಭಿವೃದ್ಧಿ ಕೆಲಸ ಆರಂಭಿಸೋಣ. ಸರ್ಕಾರದಿಂದಲೂ ಅನುದಾನ ಬರಲಿದೆ. ಚುನಾವಣೆ ಸಂದರ್ಭದಲ್ಲಿ ಅನುದಾನ ಬಿಡುಗಡೆ ಕಷ್ಟ. ನಾನು ಕೂಡ ಅಭಿವೃದ್ಧಿಗೆ ವೈಯಕ್ತಿಕವಾಗಿ ನೆರವಾಗುವೆ’ ಎಂದು ಸೋಮಣ್ಣ ಹೇಳಿದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾ ಪಂಚಾಯಿತಿ ಸಿಇಒ ಪೂವಿತಾ ಎಸ್‌., ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಶೀಲ್ದಾರ್‌ ಐ.ಈ.ಬಸವರಾಜ, ಡಿವೈಎಸ್‌ಪಿ ಸಾಣೆಕೊಪ್ಪ, ಗ್ರಾಮದ ಎಲ್ಲ ಕೋಮಿನ ಅಧ್ಯಕ್ಷ ಶ್ರೀಕಾಂತ್‌ ಅರಸ್‌, ಉಪಾಧ್ಯಕ್ಷ ಮಹದೇವಸ್ವಾಮಿ ಮುಖಂಡರು ಇದ್ದರು.

ನೆಲಕ್ಕೆ ಕಾಂಕ್ರೀಟ್‌, ರಥ ನಿಲ್ಲಿಸಲು ಕಟ್ಟಡ ಬೇಕು’

ಸಭೆ ಆರಂಭದಲ್ಲಿ ಮಾತನಾಡಿದ ಗ್ರಾಮದ ಎಲ್ಲ ಕೋಮಿನ ಅಧ್ಯಕ್ಷ ಶ್ರೀಕಾಂತ್‌ ಅರಸ್‌, ‘ತೇರಿನ ದಿನ ರಥ ಮುರಿದು ಬಿದ್ದ ನಂತರ ಸಚಿವರು ದೇವಾಲಯಕ್ಕೆ ಭೇಟಿ ನೀಡಿ ರಥ ನಿರ್ಮಾಣ ಹಾಗೂ ಇತರ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ನಂತರ ಸಚಿವರಾಗಲಿ, ಶಾಸಕರಾಗಲಿ, ಅಧಿಕಾರಿಗಳಾಗಲಿ ಈ ಬಗ್ಗೆ ಗಮನಹರಿಸಲಿಲ್ಲ. ಈಗ ರಥವನ್ನು ನಿರ್ಮಿಸಲು ದಾನಿಗಳು ಮುಂದೆ ಬಂದಿದ್ದಾರೆ. ಸೆಪ್ಟೆಂಬರ್‌ನಲ್ಲಿ ಈ ವರ್ಷದ ರಥೋತ್ಸವ ನಡೆಯಲಿದ್ದು, ತುರ್ತಾಗಿ ದೇವಾಲಯದ ಆವರಣದಲ್ಲಿ ಕಾಂಕ್ರೀಟ್‌ ಹಾಕಬೇಕಾಗಿದೆ. ಹೊಸ ರಥವನ್ನು ನಿಲ್ಲಿಸಲು ಶಾಶ್ವತ ಕಟ್ಟಡದ ಅಗತ್ಯವಿದೆ. ಈ ಎರಡು ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ತಹಶೀಲ್ದಾರ್‌ ಐ.ಈ.ಬಸವರಾಜ ಮಾತನಾಡಿ, ‘ನೆಲಕ್ಕೆ ಕಾಂಕ್ರೀಟ್‌ ಹಾಕಲು ಮತ್ತು ರಥದ ಕಟ್ಟಡ ನಿರ್ಮಿಸಲು ₹1.25 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT