ಮಂಗಳವಾರ, ಜನವರಿ 21, 2020
20 °C
ಎಡೆಯಾರಳ್ಳಿ ಕಾರಿಡಾರ್‌ನಲ್ಲಿರುವ ರಸ್ತೆಯಲ್ಲಿ ತಡೆಗಂಬ ಅಳವಡಿಸಲು ಮುಂದಾದ ಲೋಕೋಪಯೋಗಿ ಇಲಾಖೆ

ವನ್ಯಜೀವಿಗಳ ಓಡಾಟಕ್ಕೆ ತೊಂದರೆ: ಅರಣ್ಯ ಇಲಾಖೆ ಆಕ್ಷೇಪ

ಬಿ.ಬಸವರಾಜು‌ Updated:

ಅಕ್ಷರ ಗಾತ್ರ : | |

Prajavani

ಹನೂರು: ಮಲೆ ಮಹದೇಶ್ವರ ವನ್ಯಧಾಮ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ (ಬಿಆರ್‌ಟಿ) ಸಂಪರ್ಕ ಕೊಂಡಿಯಾಗಿರುವ ಎಡೆಯಾರಳ್ಳಿ ಕಾರಿಡಾರ್‌ನಲ್ಲಿ ಹಾದುಹೋಗಿರುವ ರಸ್ತೆಯ ಬದಿಗೆ ತಡೆ ಕಂಬಗಳನ್ನು ಹಾಕಲು ಲೋಕೋಪಯೋಗಿ ಇಲಾಖೆ ಮುಂದಾಗಿದ್ದು, ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ ನಂತರ ಕೆಲಸ ಸ್ಥಗಿತಗೊಳಿಸಿದೆ. 

ತಾಲ್ಲೂಕಿನ ಲೊಕ್ಕನಹಳ್ಳಿಯ ಬಳಿ ಇರುವ 1.6 ಕಿ.ಮೀ ಇರುವ ಎಡೆಯಾರಳ್ಳಿ-ದೊಡ್ಡಸಂಪಿಗೆ ವನ್ಯಜೀವಿ ಕಾರಿಡಾರ್‌ನಲ್ಲಿ ಹಾಸನೂರು ಹಾಗೂ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದೆ. ಇದುವರೆಗೂ ರಸ್ತೆಯ ಇಕ್ಕೆಲಗಳನ್ನು ಹಾಗೆಯೇ ಬಿಡಲಾಗಿತ್ತು. ಅಲ್ಲಿ ತಡೆಗಲ್ಲುಗಳನ್ನು ಹಾಕಲು ಲೋಕೋಪ‍ಯೋಗಿ ಇಲಾಖೆ ಮುಂದಾಗಿತ್ತು. ರಸ್ತೆಯ ಬದಿಗಳಲ್ಲಿ ಈ ಕಂಬಗಳನ್ನು ಇರಿಸಿತ್ತು. 

ರಸ್ತೆಯ ಒಂದು ಕಡೆ ಬಿಆರ್‌ಟಿ, ಮತ್ತೊಂದೆಡೆ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿದ್ದು, ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ರಾಜ್ಯ ವನ್ಯಜೀವಿ ಮಂಡಳಿ, ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (ವನ್ಯಜೀವಿ) ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಅನುಮತಿ ಪಡೆಯದೆ ಲೋಕೋಪಯೋಗಿ ಇಲಾಖೆ ತಡೆಕಂಬಗಳನ್ನು ಅಳವಡಿಸಲು ಹೊರಟಿತ್ತು. 

ಇದೇ ಕಾರಿಡಾರ್‌ ಮೂಲಕ ವನ್ಯಜೀವಿಗಳು ಎರಡೂ ರಕ್ಷಿತಾರಣ್ಯಗಳ ನಡುವೆ ಓಡಾಡುತ್ತಿದ್ದು, ತಡೆಕಂಬಗಳನ್ನು ಅಳವಡಿಸಿದರೆ ಅವುಗಳ ಚಲನವಲನಕ್ಕೆ ಧಕ್ಕೆಯಾಗಿ ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುವ ಆತಂಕ ಎದುರಾಗಿತ್ತು. 

ಈಚೆಗೆ  ಕೈಗೊಂಡ ಅಧ್ಯಯನವೊಂದರಲ್ಲಿ ಕಾರಿಡಾರ್‌ನಲ್ಲಿ ಹುಲಿ, ಚಿರತೆ, ಕೆನ್ನಾಯಿ, ಆನೆ, ಕಾಟಿ, ಕಡವೆ ಸೇರಿದಂತೆ 20ಕ್ಕೂ ಹೆಚ್ಚು ಪ್ರಾಣಿಗಳು ಓಡಾಡುವುದು  ದಾಖಲಾಗಿದೆ. 

ಸ್ಥಗಿತ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಮಹದೇವಸ್ವಾಮಿ ಅವರು, ‘ಲೊಕ್ಕನಹಳ್ಳಿಯಿಂದ ಬೂದಿಪಡಗ ಮೂಲಕ ಹಾದುಹೋಗಿರುವ ರಾಜ್ಯ ಹೆದ್ದಾರಿ 38ರಲ್ಲಿ ಕೆಲವು ಅಪಾಯ ಸ್ಥಳಗಳಿದ್ದು, ಅಪಘಾತಗಳು ಸಂಭವಿಸುವುದನ್ನು ತಡೆಗಟ್ಟಲು ರಸ್ತೆಯ ಬದಿಯಲ್ಲಿ ತಡೆ ಕಂಬಗಳನ್ನು ನಿರ್ಮಿಸಲು ಮುಂದಾಗಿದ್ದೆವು. ಅರಣ್ಯ ಇಲಾಖೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಹಿರಿಯ ಅಧಿಕಾರಿಗಳ ಅನುಮತಿ ಪಡೆದು ಕಾಮಗಾರಿ ಆರಂಭಿಸುವಂತೆ ಸೂಚಿಸಿರುವುದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದೇವೆ’ ಎಂದು ತಿಳಿಸಿದರು.

ಕಾಯ್ದೆಯ ಸ್ಪಷ್ಟ ಉಲ್ಲಂಘನೆ: ಡಿಸಿಎಫ್‌

ಇಲಾಖೆ ಅನುಮತಿ ಪಡೆಯದೆ ಏಕಾಏಕಿ ಲೋಕೋಪಯೋಗಿ ಇಲಾಖೆಯು ತಡೆಕಂಬಗಳ ನಿರ್ಮಾಣಕ್ಕೆ ಮುಂದಾಗಿರುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಉಲ್ಲಂಘನೆ ಎಂದು ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇದು ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ತೆರಳಿ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದ್ದೇನೆ. ರಸ್ತೆ ಬದಿಯಲ್ಲಿ ಬಿಳಿಬಣ್ಣದ ಕಂಬಗಳನ್ನು ನಿಲ್ಲಿಸುವುದರಿಂದ ಪ್ರಾಣಿಗಳಿಗೆ ಕಿರಿಕಿರಿಯುಂಟಾಗುತ್ತದೆ. ಅಲ್ಲದೇ, ಇದು ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೂ ಕಾರಣವಾಗಲಿದೆ’ ಎಂದು ಅವರು ಹೇಳಿದರು.

***

ಎಡೆಯಾರಳ್ಳಿ, ಹೂಗ್ಯಂ ಮತ್ತು ಪಿ.ಜಿ ಪಾಳ್ಯ ವನ್ಯಜೀವಿ ವಲಯಗಳಲ್ಲಿರುವ ಎರಡು ಕಾರಿಡಾರ್ ಪ್ರಾಣಿಗಳ ಸಂಚಾರಕ್ಕೆ ಅತ್ಯುತ್ತಮ ಸ್ಥಳ. ಇದನ್ನು ಕಾಪಾಡಿಕೊಳ್ಳಬೇಕಿದೆ.

-ವಿ. ಏಡುಕುಂಡಲು, ಡಿಸಿಎಫ್, ಮಲೆಮಹದೇಶ್ವರ ವನ್ಯಧಾಮ

ಪ್ರತಿಕ್ರಿಯಿಸಿ (+)