ಬುಧವಾರ, ಸೆಪ್ಟೆಂಬರ್ 22, 2021
29 °C
ಏಪ್ರಿಲ್ ಮೊದಲ 10 ದಿನಗಳಲ್ಲಿ 16,882 ಮಾನವ ದಿನಗಳ ‌ಸೃಷ್ಟಿ, ವೈಯಕ್ತಿಕ ಕಾಮಗಾರಿಗೆ ಹೆಚ್ಚು ಒತ್ತು

ನರೇಗಾ: ಚಾಮರಾಜನಗರದಲ್ಲಿ ಅರ್ಜಿ ಸಲ್ಲಿಸಿದವರಿಗೆ ಬೇಗ ಜಾಬ್‌ಕಾರ್ಡ್‌

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೊರೊನಾ ವೈರಸ್‌ ತಡೆಗೆ ಹೇರಲಾಗಿರುವ ದಿಗ್ಬಂಧನದಿಂದಾಗಿ ಗ್ರಾಮೀಣ ಪ್ರದೇಶದ ಬಡವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಜಿಲ್ಲಾ ಪಂಚಾಯಿತಿಯು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ (ನರೇಗಾ) ಹೆಚ್ಚು ಒತ್ತು ನೀಡುತ್ತಿದೆ. 

ಸೋಂಕು ತಡೆಗೆ ಸರ್ಕಾರ ರೂಪಿಸಿರುವ ನಿಯಮಗಳನ್ನು ಅಳವಡಿಸಿಕೊಂಡು ಗ್ರಾಮೀಣ ಭಾಗದ ಕೂಲಿ ಕಾರ್ಮಿಕರಿಗೆ ಹೆಚ್ಚು ಕೆಲಸ ಕೊಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದೆ. ಕೂಲಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಜಾಬ್‌ ಕಾರ್ಡ್‌ ನೀಡಲೂ ನಿರ್ಧರಿಸಿದೆ. 

ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ನರೇಗಾ ಕಾರ್ಮಿಕರ ದಿನದ ಕೂಲಿಯನ್ನು ₹249ರಿಂದ ₹275ಕ್ಕೆ ಹೆಚ್ಚಿಸಲಾಗಿದೆ. ಕಾರ್ಮಿಕರು ವಾಸವಿರುವ ಸ್ಥಳದಲ್ಲೇ ಕೆಲಸ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಜಿಲ್ಲಾ ಪಂಚಾಯಿತಿಯ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್‌ ತಿಂಗಳ ಮೊದಲ 10 ದಿನಗಳಲ್ಲಿ ನರೇಗಾ ಅಡಿಯಲ್ಲಿ 16,882 ಮಾನವ ದಿನಗಳನ್ನು ಸೃಜಿಸಲಾಗಿದೆ. 

ಹೊಸ ಜಾಬ್‌ ಕಾರ್ಡ್‌: ಜಿಲ್ಲೆಯಲ್ಲಿ ನರೇಗಾ ಅಡಿ 1.60 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 87 ಸಾವಿರದಷ್ಟು ಕಾರ್ಮಿಕರು ಸಕ್ರಿಯವಾಗಿದ್ದಾರೆ.  ದಿಗ್ಬಂಧನದ ಅವಧಿಯಲ್ಲಿ ಯಾರಾದರೂ ಕೂಲಿ ಕೇಳಿಕೊಂಡು ಬಂದರೆ ಅಥವಾ ಅರ್ಜಿ ಸಲ್ಲಿಸಿದರೆ ಅವರಿಗೆ ಶೀಘ್ರದಲ್ಲಿ ಜಾಬ್‌ ಕಾರ್ಡ್‌ ಕೊಡಬೇಕು ಎಂದು ಎಲ್ಲ ಗ್ರಾಮಪಂಚಾಯಿತಿಗಳಿಗೆ ಜಿಲ್ಲಾ ಪಂಚಾಯಿತಿ ಸೂಚಿಸಿದೆ.

ಅರ್ಜಿ ಸಲ್ಲಿಸಿದ ವ್ಯಕ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿದ್ದಾರೆಯೇ ಎಂಬುದನ್ನು ಖಾತರಿ ಪಡಿಸಿಕೊಂಡು ಅವರಿಗೆ ತುರ್ತಾಗಿ ಜಾಬ್‌ ಕಾರ್ಡ್‌ ನೀಡಬೇಕು. ಜೊತೆಗೆ, ಕೆಲಸದ ಅಗತ್ಯವಿರುವವರಿಗೆ ಅರ್ಜಿ (ನಮೂನೆ–6) ವಿತರಿಸಿ, ಕೆಲಸದ ಬೇಡಿಕೆಯ ಅರ್ಜಿಗಳನ್ನು ಪಡೆದು ಉದ್ಯೋಗ ಕೊಡಲೂ ಕ್ರಮ ಕೈಗೊಳ್ಳಬೇಕು ಎಂದು ಪಂಚಾಯತ್‌ ರಾಜ್‌ ಇಲಾಖೆ ಸೂಚಿಸಿದೆ. 

‘ಲಾಕ್‌ಡೌನ್‌ ಆದ ನಂತರ ನಗರ ಪ‍್ರದೇಶಗಳಿಂದ ನೂರಾರು ಕಾರ್ಮಿಕರು ವಾಪಸ್‌ ತಮ್ಮ ಊರಿಗೆ ಬಂದಿದ್ದಾರೆ. ಅವರಿಗೂ ಈಗ ಕೆಲಸದ ಅಗತ್ಯವಿದೆ. ಅಂತಹವರು ಅರ್ಜಿ ಸಲ್ಲಿಸಿದರೆ ನಾವು ಅವರಿಗೆ ಜಾಬ್‌ ಕಾರ್ಡ್‌ ನೀಡುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಸಮುದಾಯ ಕೆಲಸಗಳನ್ನು ಕಡಿಮೆ ಮಾಡಲಾಗಿದ್ದು, ವೈಯಕ್ತಿಕ ಕೆಲಸಗಳಿಗೆ ಒತ್ತು ನೀಡಲಾಗುತ್ತಿದೆ. ಒಂದು ಗುಂಪಿನಲ್ಲಿ ಐದು ಜನರಿಗಿಂತ ಹೆಚ್ಚು ಇರಬಾರದು ಎಂಬ ಸೂಚನೆಯೂ ಇದೆ. ಯಾವ ಕೆಲಸ ಮಾಡುತ್ತಿದ್ದರೂ ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಲೇಬೇಕು ಎಂಬ ನಿರ್ದೇಶನವೂ ಇದೆ’ ಎಂದು ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಹೇಳುತ್ತಾರೆ.

 ಯಾವುದೆಲ್ಲ ಕಾಮಗಾರಿಗಳು?

ಲಾಕ್‌ಡೌನ್‌ ಅವಧಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ನರೇಗಾ ಅಡಿಯಲ್ಲಿ ಇಲಾಖಾವಾರು ಕೈಗೆತ್ತಿಕೊಳ್ಳಬೇಕಾದ  ಕೆಲಸಗಳನ್ನೂ ಪಂಚಾಯತ್‌ ರಾಜ್‌ ಇಲಾಖೆ ಪಟ್ಟಿ ಮಾಡಿದೆ. 

ಗ್ರಾಮೀಣ ನೈರ್ಮಲ್ಯ: ಕೊಳಚೆ ನೀರು ಇಂಗಿಸಲು ಗುಂಡಿ, ಸರ್ಕಾರಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಿಸುವ ಸಂಬಂಧ ಮಣ್ಣಿನ ಕೆಲಸಗಳು

ಕೃಷಿ ಮತ್ತು ಜಲಾನಯನ: ಕಂದಕ ಬದುಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ, ಬದುಗಳ ಸ್ಥಿರೀಕರಣ, ಬದುಗಳ ಮೇಲೆ ಗಿಡ ನೆಡಲು ಗುಂಡಿ ತೋಡುವುದು

ಅರಣ್ಯ: ರಸ್ತೆ ಬದಿ ಗಿಡ ನೆಡಲು ಗುಂಡಿ ತೋಡುವುದು, ನೆಡುತೋಪು ನಿರ್ಮಾಣಕ್ಕೆ ಗುಂಡಿ ತೋಡುವುದು, ಅರಣ್ಯ ಪ್ರದೇಶಗಳಲ್ಲಿ ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿ ಕೈಗೊಳ್ಳುವುದು, ಸರ್ಕಾರಿ ಜಮೀನುಗಳಲ್ಲಿ ಗಿಡ ನೆಡಲು ಗುಂಡಿ ತೋಡುವುದು

ತೋಟಗಾರಿಕೆ: ಬಹುವಾರ್ಷಿಕ ಹಣ್ಣಿನ ಬೆಳೆಗಳ ಪ್ರದೇಶ ವಿಸ್ತರಣೆಗೆ ಗುಂಡಿ ತೆಗೆಯುವುದು, ಹಳೆಯ ತೋಟಗಳ ಪುನಶ್ಚೇತನ, ಕೊಳವೆ ಬಾವಿಗಳ ಮರುಪೂರತಣ, ಫಲಾನುಭವಿಗಳ ಮನೆಯ ಮುಂದೆ ಅಥವಾ ಹಿತ್ತಲಿನಲ್ಲಿ ಬಹು ವಾರ್ಷಿಕ ಹಣ್ಣಿನ ಗಿಡ ನೆಡಲು ಗುಂಡಿ ತೋಡುವುದು

ರೇಷ್ಮೆ: ಹಿಪ್ಪು ನೇರಳೆ ಬೇಸಾಯಕ್ಕೆ ಗುಂಡಿ ತೋಡುವುದು, ಎರಡು ಮತ್ತು ಮೂರನೇ ವರ್ಷದ ತೋಟಗಳ ನಿರ್ವಹಣೆ ಮಾಡುವುದು.

ಪಶುಸಂಗೋಪನೆ: ಕುರಿ, ದನದ ಶೆಡ್‌ಗಳ ನಿರ್ಮಾಣ, ಅಜೋಲ ಗುಂಡಿ ತೆಗೆಯುವುದು

ಬಾಕಿ ₹4.5 ಕೋಟಿ ಬಿಡುಗಡೆ

ಜಿಲ್ಲೆಯ ನರೇಗಾ ಕೂಲಿ ಕಾರ್ಮಿಕರಿಗೆ ಪಾವತಿಗೆ ಬಾಕಿ ಇರುವ ₹4.5 ಕೋಟಿ ಹಣ ಬಿಡುಗಡೆಯಾಗಿದ್ದು, ಮೂರ್ನಾಲ್ಕು ದಿನಗಳಲ್ಲಿ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌ ಹೇಳಿದರು. 

‘ಬಾಕಿ ಹಣ ಪಾವತಿಸುವುದಕ್ಕಾಗಿ ಕೇಂದ್ರ ಸರ್ಕಾರ  ಒಟ್ಟು ₹,1039 ಕೋಟಿಯನ್ನು ಎಲ್ಲ ರಾಜ್ಯಗಳಿಗೆ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ನರೇಗಾ ಕಾರ್ಮಿಕರಿಗೆ ₹4.5 ಕೋಟಿ ಪಾವತಿಸಬೇಕಾಗಿದ್ದು, ಹಣ ಬಿಡುಗಡೆಯಾಗಿರುವುದರಿಂದ ಈ ಸಂಕಷ್ಟದ ಸಮಯದಲ್ಲಿ ಅವರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು