ಮಂಗಳವಾರ, ನವೆಂಬರ್ 24, 2020
19 °C
ಶೆಟ್ಟಳ್ಳಿ ಗ್ರಾಮಪಂಚಾಯಿತಿಯಲ್ಲಿ ನರೇಗಾ ಅವ್ಯವಹಾರ: ಗ್ರಾಮಸ್ಥರ ಆರೋಪ

ಹನೂರು: ಇಲ್ಲದ ಕೆರೆಗಳ ಹೆಸರಲ್ಲಿ ಕಾಮಗಾರಿ, ಕೋಟ್ಯಾಂತರ ರೂಪಾಯಿ ಲೂಟಿ?

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಅಡಿಯಲ್ಲಿ ಕಾಮಗಾರಿಗಳನ್ನೇ ನಡೆಸದೇ ಕೋಟ್ಯಂತರ ರೂಪಾಯಿ ಹಣ ಮಂಜೂರು ಮಾಡಿಸಿಕೊಳ್ಳಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹಾಗೂ ಕಂಪ್ಯೂಟರ್‌ ಆಪರೇಟರ್‌ ಇದರ ಹಿಂದೆ ಇದ್ದಾರೆ ಎಂದು ಮುಖಂಡರು ನೇರ ಆರೋಪ ಮಾಡಿದ್ದಾರೆ. 

ಅವ್ಯವಹಾರ ನಡೆದಿರುವ ವಿಚಾರ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಗಮನಕ್ಕೆ ಬಂದಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.  

‘ಪಿಡಿಒ ಮಹಾದೇವ ಹಾಗೂ ಕಂಪ್ಯೂಟರ್ ಆಪರೇಟರ್ ಆನಂದ್ ಇಬ್ಬರು ಸೇರಿ, ಮನಸೋ ಇಚ್ಛೆ ಕ್ರಿಯಾಯೋಜನೆಗಳನ್ನು ತಯಾರಿಸಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆಸಿದ್ದಾರೆ. ಕೆಲವು ಕಡೆ ಮಾನವ ದಿನಗಳ ಬದಲಾಗಿ ಯಂತ್ರಗಳ ಮೂಲಕ ಕೆಲಸ ಮಾಡಿ ಹಣ ಜೂರು ಮಾಡಿಕೊಂಡಿದ್ದರೆ, ಇನ್ನು ಕೆಲವು ಕಡೆ ಕಾಮಗಾರಿ ಮಾಡದೆಯೇ ಹಣ ಮಂಜೂರು ಮಾಡಿ ಕೊಂಡಿದ್ದಾರೆ’ ಎಂಬುದು ಗ್ರಾಮಸ್ಥರ ಆರೋಪ.

ಆದರೆ, ಪಿಡಿಒ ಮಹಾದೇವ ಅವರು ಇದನ್ನು ನಿರಾಕರಿಸಿದ್ದು, ‘ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಬಗ್ಗೆ ತನಿಖೆ ನಡೆಯಲಿ’ ಎಂದು ‘ಪ್ರಜಾವಾಣಿ’ಗೆ ತಳಿಸಿದ್ದಾರೆ.  

ಇಲ್ಲದ ಕೆರೆಗಳ ಹೆಸರಲ್ಲೂ ಕಾಮಗಾರಿ:  ಜಾಬ್‌ ಕಾರ್ಡ್‌ ಹೊಂದಿರುವವರ ಬಳಿ ಕೆಲಸ ಮಾಡಿಸದೆ, ಜೆಸಿಬಿ ಮೂಲಕ ಕೆಲಸ ಮಾಡಲಾಗಿದೆ. ಎರಡು ಕಡೆಗಳಲ್ಲಿ ರಾತ್ರಿ ಹೊತ್ತಲ್ಲಿ ಜೆಸಿಬಿ ಬಳಸಿ ಅರ್ಧಂಬರ್ಧ ಕಾಮಗಾರಿ ಮಾಡಲಾಗಿದೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 10 ಕೆರೆಗಳ ಹೂಳೆತ್ತುವ ಕಾಮಗಾರಿಗೆ ಅನುಮೋದನೆ ನೀಡಿ ಕಾಮಗಾರಿ ಆರಂಭಿಸ‌ಲಾಗಿದೆ. ತಲಾ ₹10 ಲಕ್ಷದಂತೆ ₹1 ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿದೆ. ಆದರೆ ಅರ್ಧದಷ್ಟು ಕಾಮಗಾರಿ ಕೂಡ ಶೆಟ್ಟಿಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿಲ್ಲ.

ಒಂದೇ ಜಾಗದಲ್ಲಿ ವಿವಿಧ ಭಂಗಿಯಲ್ಲಿ ಪೋಟೋ ತೆಗೆದು ಬಿಲ್ ಮಾಡಲಾಗಿದೆ. ಅಷ್ಟೇ ಅಲ್ಲದೇ ಒಂದು ಕುಟುಂಬದ ನಾಲ್ಕು ಮಂದಿಗೆ ವಸತಿ ಯೋಜನೆಯ ಮನೆಗಳು ನೀಡಲಾಗಿದೆ ಎಂದು ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೇ ಕುಟುಂಬಕ್ಕೆ  ಒಂದು ದನದ ಕೊಟ್ಟಿಗೆ ನಿರ್ಮಾಣ ಮಾಡಿ ನಾಲ್ಕೈದು ಮಂದಿಯ ಹೆಸರಿನಲ್ಲಿ ಬಿಲ್‌ ಮಾಡಲಾಗಿದೆ. ಕೊಟ್ಟಿಗೆ ನಿರ್ಮಾಣ, ಬದು ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ₹1.45 ಲಕ್ಷ ಅನುಮೋದನೆ ಪಡೆದುಕೊಂಡು ಕಾಮಗಾರಿ ಮಾಡಲಾಗಿದ್ದು, ಬಹುತೇಕ ಹಣವನ್ನು ಮಂಜೂರು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಲಿಖಿತವಾಗಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಗ್ರಾಮದ ನಾಗರಾಜು ಅವರು ಹೇಳಿದರು. 

ಜೆಸಿಬಿಯಲ್ಲಿ ಕೆಲಸ; ಮಾತಿನ ಚಕಮಕಿ

ಗ್ರಾಮದ ಗಿಡ್ಡಯ್ಯನ ಕೆರೆಯ ಹೆಸರಲ್ಲಿ ಕಾಮಗಾರಿ ನಡೆದಿರುವುದಾಗಿ ₹2 ಲಕ್ಷ ಹಣ ಮಂಜೂರಾಗಿದೆ. ಆದರೆ ಯಾವುದೇ ಕೆಲಸವಾಗಿರಲಿಲ್ಲ. ಇದು ಗ್ರಾಮಸ್ಥರ ಗಮನಕ್ಕೆ ಬರಿತ್ತಿದ್ದಂತೆ ಶುಕ್ರವಾರ ರಾತ್ರಿ ಜೆಸಿಬಿಯಲ್ಲಿ ಕೆಲಸ ಮಾಡುತ್ತಿರುವ ಶಬ್ದ ಕೇಳಿ ಬಂದಿದೆ. ಸ್ಥಳಕ್ಕೆ ಗ್ರಾಮದ ಮುನಿಯಪ್ಪ, ಸೋಮಶೇಖರ, ಶ್ರೀರಂಗ, ಶಿವರಾಜು ಎಂಬುವವರು ಹೋಗಿ ಕೇಳಿದ್ದಾರೆ. ಈ ಸಂದರ್ಭದಲ್ಲಿ ಕೆಲಸ ಮಾಡಿಸುತ್ತಿದ್ದವರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ.

ಸಮಗ್ರ ತನಿಖೆ: ಆರೋಪಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜು ಅವರು, ‘ಶೆಟ್ಟಳ್ಳಿಯಲ್ಲಿ ನರೇಗಾ ಅಡಿ ಅವ್ಯವಹಾರ ನಡೆದಿರುವುದು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಜಿಲ್ಲಾ ಪಂಚಾಯಿತಿ ವತಿಯಿಂದ ತನಿಖಾ ತಂಡ ಬರಲಿದ್ದು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು