ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ| ಮಾದರಿ ಕ್ಷೇತ್ರ ಮಾಡುವೆ: ವಿ.ಸೋಮಣ್ಣ

ಚಾಮರಾಜನಗರ: ನಾಮಪತ್ರ ಸಲ್ಲಿಕೆಗೂ ಮೊದಲು ಬಹಿರಂಗ ಸಮಾವೇಶ, ಸಚಿವರಿಗೆ ಮುಖಂಡರ ಬಹುಪರಾಕ್
Last Updated 20 ಏಪ್ರಿಲ್ 2023, 5:16 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಿ 25 ವರ್ಷಗಳಾ ದರೂ ಬೇರೆ ಜಿಲ್ಲೆಗಳ ಹಾಗೆ ಅಭಿವೃದ್ಧಿ ಯಾಗಿಲ್ಲ. ಅಧಿಕಾರ ನನ್ನಪ್ಪನ ಆಸ್ತಿ ಯಲ್ಲ. ಆದರೆ, ಭಗವಂತ ಅವಕಾಶ ಕೊಟ್ಟಿದ್ದಾನೆ. ಅಧಿಕಾರವನ್ನು ಹೇಗೆ ಬಳಸಬೇಕು ಎಂಬ ಚಿಂತನೆ, ದೂರದೃಷ್ಟಿ ಇದೆ. ಚಾಮರಾಜನಗರವನ್ನು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ರೀತಿಯಲ್ಲಿ ಅಭಿವೃದ್ಧಿ ಪಡಿಸಿ ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿ ಮಾಡುವೆ’ ಎಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ವಿ.ಸೋಮಣ್ಣ ಬುಧವಾರ ಹೇಳಿದರು.

ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಗರದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ‘ನಾನು ಎರಡೂ ಕಡೆ ಟಿಕೆಟ್‌ ಬೇಡ ಎಂದು ಹೇಳಿದ್ದೆ. ಆದರೆ, ಪಕ್ಷದ ರಾಷ್ಟ್ರೀಯ ವರಿಷ್ಠರ ಮಂಡಳಿ ನನ್ನನ್ನು ಕರೆದು ಟಿಕೆಟ್‌ ಕೊಟ್ಟಿದೆ. ಗೋವಿಂದರಾಜನಗರ ಕ್ಷೇತ್ರದ ಜನರು ಕಣ್ಣೀರು ಹಾಕುತ್ತಿದ್ದಾರೆ. ಚಾಮುಂಡೇಶ್ವರಿ, ಮಲೆ ಮಹದೇಶ್ವರ ಸ್ವಾಮಿಯ ಆಶೀರ್ವಾದ ನನ್ನ ಮೇಲೆ ಇದೆ. ಈ ಜಿಲ್ಲೆ ಅಭಿವೃದ್ಧಿಯಾಗಬೇಕು ಎಂಬುದು ಎಲ್ಲರ ಭಾವನೆ. ಅದಕ್ಕೆ ನನ ಗೊಂದು ಅವಕಾಶ ಸಿಕ್ಕಿದೆ’ ಎಂದರು.

‘ಸೋಮಣ್ಣಗೂ ವರುಣಗೂ ಏನು ಸಂಬಂಧ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ಅವರು ಬಾದಾಮಿಗೆ ಯಾಕೆ ಹೋದರು? ಕೋಲಾರದ ಟಿಕೆಟ್ ಬೇಕು ಎಂದು ಯಾಕೆ ಗಂಟು ಬಿದ್ದರು? ಸೋನಿಯಾ ಗಾಂಧಿ, ಇಂದಿರಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕರ್ನಾಟಕ, ಕೇರಳದೊಂದಿಗೆ ಯಾವ ಸಂಬಂಧ’ ಎಂದು ಪ್ರಶ್ನಿಸಿದರು.

‘45 ವರ್ಷಗಳಿಂದ ಬೆಂಗಳೂರಿನಲ್ಲಿ ರಾಜಕೀಯ ಜೀವನ ನಡೆಸಿಕೊಂಡು ಬಂದಿದ್ದೇನೆ. ಸುಳ್ಳು ಹೇಳಿಲ್ಲ. ನೇರವಾಗಿ ಮಾತನಾಡಿದ್ದೇನೆ. ದ್ವೇಷದ ರಾಜಕೀಯ ಮಾಡಿಲ್ಲ. ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿಲ್ಲ. ನಾನು ಜಿಲ್ಲೆಯ ಮಗ ಅಲ್ಲ. ಇಲ್ಲಿ ಹುಟ್ಟಿಲ್ಲ. ಪಕ್ಕದ ಕನಕಪುರ ತಾಲ್ಲೂಕಿನ ಸಣ್ಣ ಗ್ರಾಮದವನು. ಈ ಸೋಮಣ್ಣಗೆ ಶಕ್ತಿ ಇದೆಯೇ ಇಲ್ಲವೇ ಎಂಬುದನ್ನು ನೀವು ತೀರ್ಮಾನ ಮಾಡಬೇಕು. ನಾನು ಇಲ್ಲಿ ಹೆಚ್ಚು ಪ್ರಚಾರ ಮಾಡುವುದು ಕಷ್ಟವಾಗುತ್ತದೆ. ವರುಣಕ್ಕೆ ಹೆಚ್ಚು ದಿನ ಹೋಗುತ್ತೇನೆ. ಇಲ್ಲಿ ನೀವೇ ಸೋಮಣ್ಣ, ನೀವೇ ಬಿಜೆಪಿಯಾಗಿ ಪ್ರಚಾರ ಮಾಡಬೇಕು’ ಎಂದು ಮನವಿ ಮಾಡಿದರು.

ಲಿಂಗಾಯತರಿಗೆ ಅನ್ಯಾಯವಾಗಿಲ್ಲ: ವಿಧಾನ ಪರಿಷತ್ ಸದಸ್ಯ, ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ‘ನನಗೆ ನಿಮ್ಮೆಲ್ಲರ ಮೇಲೆ ಕೋಪವೂ ಇದೆ. ಪ್ರೀತಿಯೂ ಇದೆ. ಸೋಮಣ್ಣ ಅವರನ್ನು ಬೆಂಗಳೂರಿನಿಂದ ಎತ್ತಿಹಾಕಿಕೊಂಡು ಬಂದಿದ್ದೀರಿ ಎಂಬುದಕ್ಕೆ ಕೋಪ, ಜಿಲ್ಲೆಯ ಅಭಿವೃದ್ಧಿಗಾಗಿ ಅವರು ಬೇಕು ಎಂದು ಕರೆತಂದಿದ್ದಕ್ಕೆ ಪ್ರೀತಿ. ಸೋಮಣ್ಣ ಅವರನ್ನು ಯಾರೂ ಲಘುವಾಗಿ ಪರಿಗಣಿಸುವುದಿಲ್ಲ. ಅಂತಹ ವ್ಯಕ್ತಿತ್ವ ಅವರದ್ದು. ಈ ಬಾರಿ ಪಕ್ಷ ಗೆದ್ದರೆ ಮುಖ್ಯಮಂತ್ರಿ ಆಗುವ ಅವಕಾಶ ಇರುವ ನಾಯಕ ಅವರು’ ಎಂದರು.

‘ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್‌ ಅವರಿಗೆ ಟಿಕೆಟ್ ಸಿಗದಿರುವುದನ್ನು ಪ್ರಸ್ತಾಪಿಸಿ, ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ಬಿಜೆಪಿ ಲಿಂಗಾಯತರಿಗೆ ಅನ್ಯಾಯ ಮಾಡಿಲ್ಲ. ಕಾಂಗ್ರೆಸ್ 42 ಲಿಂಗಾಯತರಿಗೆ ಟಿಕೆಟ್ ನೀಡಿದೆ. ಬಿಜೆಪಿ 63 ಮಂದಿಗೆ ನೀಡಿದೆ. ವಿ.ಸೋಮಣ್ಣ ಲಿಂಗಾಯತರಲ್ಲವೇ?. ವಾಸ್ತವದಲ್ಲಿ ಕಾಂಗ್ರೆಸ್ ದಲಿತರಿಗೆ ಅನ್ಯಾಯ ಮಾಡಿದೆ. ದಲಿತ ನಾಯಕರಾದ ಶ್ರೀನಿವಾಸ ಪ್ರಸಾದ್ ಅವರನ್ನು ಹೇಳದೆ ಕೇಳದೆ ಸಚಿವ ಸಂಪುಟದಿಂದ ದಬ್ಬಿದ್ದರು. ಉಪ ಚುನಾವಣೆಯಲ್ಲಿ ಎಲ್ಲರೂ ಸೇರಿ ಸೋಲಿಸಿದರು. ಇದು ಅನ್ಯಾಯ ಅಲ್ಲವೇ’ ಎಂದು ಪ್ರಶ್ನಿಸಿದರು.

ಗುಂಡ್ಲುಪೇಟೆ ಶಾಸಕ ಸಿ.ಎಸ್‌.ನಿರಂಜನಕುಮಾರ್‌, ಜಿಲ್ಲೆಯ ಬಿಜೆಪಿ ಚುನಾವಣಾ ಉಸ್ತುವಾರಿ ಡಾ.ದಿಲೀಪ್‌ ಜೈಸ್ವಾಲ್‌, ಜಿಲ್ಲಾ ಘಟಕದ ಅಧ್ಯಕ್ಷ ಜಿ.ನಾರಾಯಪ್ರಸಾದ್‌, ವಿಧಾನ ಪರಿಷತ್‌ ಮಾಜಿ ಸದಸ್ಯ ಸಿದ್ದರಾಜು, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಎಂ.ರಾಮಚಂದ್ರ, ಡಾ.ಎ.ಆರ್‌.ಬಾಬು, ಅಮ್ಮನಪುರ ಮಲ್ಲೇಶ್‌, ನಗರಸಭೆ ಅಧ್ಯಕ್ಷೆ ಆಶಾ, ಆರ್‌.ಸುಂದರ್‌, ವೃಷಭೇಂದ್ರಪ್ಪ, ಎ.ಆರ್‌.ಬಾಲರಾಜು, ಸಿ.ಎನ್‌.ಬಾಲರಾಜು, ಬಾಲಸುಬ್ರಹ್ಮಣ್ಯ, ಪ್ರಭುಸ್ವಾಮಿ ಶಿವಕುಮಾರ್‌, ಕೆಲ್ಲಂಬಳ್ಳಿ ಸೋಮನಾಯಕ ಇದ್ದರು.

ಬಿಜೆಪಿ ಈಗಲೇ ಗೆದ್ದಾಯಿತು: ನಾಗಶ್ರೀ

ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌ ಮಾತನಾಡಿ ‘ಇದು ಐತಿಹಾಸಿಕ ದಿನ. ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಸೇರಿ ಒಂದು ಸಂದೇಶ ರವಾನೆ ಮಾಡಿದ್ದೀರಿ. ಬಿಜೆಪಿ ಇಂದೇ ಗೆದ್ದಾಗಿದೆ ಎಂಬ ಸಂದೇಶ ಇಲ್ಲಿಂದ ಹೋಗಿದೆ’ ಎಂದರು.

‘ವಿ.ಸೋಮಣ್ಣ ಎಲ್ಲಿ ಸ್ಪರ್ಧಿಸಿದ್ದರೂ ಗೆಲ್ಲುತ್ತಿದ್ದರು. ಜಿಲ್ಲೆಗೆ ಶಕ್ತಿ ತುಂಬುವ ಉದ್ದೇಶದಿಂದ ವರಿಷ್ಠರು ಅವರಿಗೆ ಚಾಮರಾಜನಗರದಿಂದ ಟಿಕೆಟ್‌ ನೀಡಿದ್ದಾರೆ. ಕಾರ್ಯಕರ್ತರು, ಪಕ್ಷ ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು. ಸೋಮಣ್ಣ ನಮ್ಮ ಕ್ಷೇತ್ರದೊಂದಿಗೆ ವರುಣದಲ್ಲೂ ಸ್ಪರ್ಧಿಸಿದ್ದಾರೆ. ಅವರು ಅಲ್ಲೂ ಪ್ರಚಾರ ನಡೆಸಬೇಕು. ಎರಡೂ ಕಡೆ ಓಡಾಡುವುದು ಕಷ್ಟ. ಹಾಗಾಗಿ, ಅವರ ಅನುಪಸ್ಥಿತಿಯಲ್ಲಿ ನಾವೇ ಬಿಜೆಪಿ ಅಭ್ಯರ್ಥಿಗಳಾಗಿ ಅವರ ಪರವಾಗಿ ಕೆಲಸ ಮಾಡಬೇಕು’ ಎಂದು ಹೇಳಿದರು.

--

ಸೋಮಣ್ಣ ಅವರ ನಾಯಕತ್ವದಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಈ ಬಾರಿ ಗೆಲ್ಲಲಿದೆ. ವರುಣಾದಲ್ಲೂ ಅವರು ಜಯ ಸಾಧಿಸಲಿದ್ದಾರೆ

ಪ್ರತಾಪ ಸಿಂಹ, ಮೈಸೂರು–ಕೊಡಗು ಸಂಸದ

--

ಚಾಮರಾಜನಗರ ಅಭಿವೃದ್ಧಿಯಾಗಿಲ್ಲ. ಸೋಮಣ್ಣರಿಂದ ಮಾತ್ರ ಅಭಿವೃದ್ಧಿ ಸಾಧ್ಯ. 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ

ಎಂ.ಶಿವಣ್ಣ (ಕೋಟೆ), ಚಾಮರಾಜನಗರ ಕ್ಷೇತ್ರ ಉಸ್ತುವಾರಿ

--

ಸೋಮಣ್ಣ ಎಂದರೇ ಒಂದು ನಾಣ್ಯದ ಎರಡು ಮುಖದಂತೆ. ಒಂದು ಬದಿಯಲ್ಲಿ ಸೋಮಣ್ಣ ಇದ್ದರೆ ಇನ್ನೊಂದರಲ್ಲಿ ಅಭಿವೃದ್ಧಿ. ಅವರ ಗೆಲುವು ನಿಶ್ಚಿತ

ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ, ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT