ಶುಕ್ರವಾರ, ಅಕ್ಟೋಬರ್ 22, 2021
21 °C

ಚಾಮರಾಜನಗರ: ಜಿಲ್ಲಾ ದಸರಾಗೆ ಸಾಂಸ್ಕೃತಿಕ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಈ ಬಾರಿಯ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೇ ಮೇಳೈಸಿವೆ. ನಾಲ್ಕೂ ದಿನ ಎರಡು ವೇದಿಕೆಗಳಲ್ಲಿ (ಜೆ.ಎಚ್‌.ಪಟೇಲ್‌ ಸಭಾಂಗಣ ಹಾಗೂ ಚಾಮರಾಜೇಶ್ವರ ದೇವಾಲಯದ ಆವರಣ) ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಉತ್ಸವದ ಮೊದಲ ದಿನವೇ ಎರಡೂ ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಕಳೆಗಟ್ಟಿದವು. 

ಮಧ್ಯಾಹ್ನ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಾಯಿತು. ಜಿಲ್ಲಾ ದಸರಾ ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಹೊನ್ನೇಗೌಡ ಢಮರುಗ ನುಡಿಸುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. 

ವಿವಿಧ ಕಲಾ ತಂಡಗಳು ತಮ್ಮ ಕಲಾ ಪ್ರೌಢಿಮೆಯನ್ನು ವೇದಿಕೆಯಲ್ಲಿ ಮೆರೆದವು. 

ವೈ.ಕೆ.ಮೋಳೆ ಮಲ್ಲಿಕಾರ್ಜುನಸ್ವಾಮಿ ತಂಡದ ನಾದಸ್ವರ, ರಾಮಸಮುದ್ರದ ಶಂಕರ ತಂಡದ ಗೊರವರ ಕುಣಿತ, ಶ್ರೀನಿವಾಸ ಮೂರ್ತಿ ತಂಡದ ಬೀಸು ಕಂಸಾಳೆ ನೃತ್ಯ, ಕೊಳ್ಳೇಗಾಲದ ದಶಪಾಲ್ ತಂಡ ವಾದ್ಯ ಸಂಗೀತ, ಜಾಲಹಳ್ಳಿ ಹುಂಡಿ ಗೌರಮ್ಮ, ಮದ್ದೂರಿನ ದುಂಡಮ್ಮ ಹಾಗೂ ಆಲೂರಿನ ದೇವಿರಮ್ಮ, ಸಿದ್ದಯ್ಯನಪುರದ ಸಿದ್ದಮ್ಮ ಅವರ ಸೋಬಾನೆ ಪದ, ರಾಚಯ್ಯ ತಂಡದ ಭಜನೆ, ಶಿವಣ್ಣ ತಂಡದ ರಂಗಗೀತೆಗಳ ಗಾಯನ ಹಾಗೂ ನಿಂಗಶೆಟ್ಟಿ ಮತ್ತು ಮಾದಶೆಟ್ಟಿ ಅವರ ತಂಬೂರಿ ನೀಲಗಾರರ ಪದಗಳು ಗಮನ ಸೆಳೆದವು. 

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗಮಲ್ಲೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ಪಂಕಜಾ, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ರಂಗಕರ್ಮಿ ಕಿರಣ್ ಗಿರ್ಗಿ ಉಪಸ್ಥಿತರಿದ್ದರು.

ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿನ ವೇದಿಕೆಯಲ್ಲೂ ಸಂಜೆ 4ರಿಂದ ರಾತ್ರಿ 9.35ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಫೇಸ್‌ಬುಕ್‌ನಲ್ಲಿ ನೇರ ಪ್ರಸಾರ
ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಆವರಣದ ಮುಖ್ಯ ವೇದಿಕೆಯಲ್ಲಿ ಸಂಜೆ 4ರಿಂದ ರಾತ್ರಿ 9.45ರವರೆಗೆ ನಡೆಯಲಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್‌ಬುಕ್ ಮೂಲಕ ನೇರ ಪ್ರಸಾರವಾಗಲಿವೆ.

https://www.facebook.com/chamarajanagarvarthabhavan/live ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.