ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ | ಹೆಚ್ಚಿದ ಬೇಡಿಕೆ, ₹250ರ ಸನಿಹಕ್ಕೆ ಚಿಕನ್‌ ಬೆಲೆ

ಕಡಿಮೆಯಾದ ಪೂರೈಕೆ
Last Updated 20 ಮೇ 2020, 20:00 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ವಾರದಿಂದೀಚೆಗೆ ತಾಲ್ಲೂಕಿನಲ್ಲಿ ಕೋಳಿ ಮಾಂಸದ ಬೆಲೆ ಏರಿಕೆಯಾಗುತ್ತಿದ್ದು, 1 ಕೆ.ಜಿ. ‌ಚಿಕನ್‌ ಬೆಲೆ ₹ 250ರ ಸನಿಹ ತಲುಪುತ್ತಿದೆ.

ಕೊರೊನಾ ವೈರಸ್‌ ಹಾವಳಿಯ ಆರಂಭದ ದಿನಗಳಲ್ಲಿ 1 ಕೆ.ಜಿ.ಗೆ ₹ 50 ಇದ್ದರೂ, ಚಿಕನ್‌ ಅನ್ನು ಕೇಳುವರಿರಲಿಲ್ಲ. ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆಯೇ ಬೇಡಿಕೆ ಹೆಚ್ಚಿದ್ದು, ಬೆಲೆಯಲ್ಲೂ ಏರಿಕೆ ಕಂಡಿದೆ.

ಕೊರೊನಾ ವೈರಸ್‌ ಕಾಟದ ಜೊತೆಯೇ ಹಕ್ಕಿ ಜ್ವರದ ಭೀತಿಯೂ ತಲೆದೋರಿದ್ದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದಿತ್ತು. ವ್ಯಾಪಾರಸ್ಥರು, ಸಾಕಣೆದಾರರು ಕೋಳಿಗಳನ್ನು ಉಚಿತವಾಗಿ ವಿತರಿಸಿದ ನಿದರ್ಶನಗಳೂ ಇದ್ದವು. ಇನ್ನೂ ಕೆಲವರು ಉಚಿತವಾಗಿ ವಿತರಿಸುವ ಬದಲು ಒಂದು ಕೋಳಿಗೆ ₹ 20, ₹ 30, ₹ 50ಕ್ಕೆ ಮಾರಾಟ ಮಾಡಿದ್ದರು.

ಹಕ್ಕಿ ಜ್ವರದ ಭಯ ದೂರವಾದ ನಂತರ, ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿತ್ತು. ಕೋವಿಡ್‌–19 ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಕೆ ಮಾಡುತ್ತಿದ್ದಂತೆಯೇ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಾಗತೊಡಗಿದೆ. ದಿನದಿಂದ ದಿನಕ್ಕೆ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಸದ್ಯ 1 ಕೆ.ಜಿ.ಗೆ ₹ 220ರಿಂದ ₹ 240ರವರೆಗೆ ಮಾರಾಟವಾಗುತ್ತಿದೆ.

ಮಟನ್‌ ಬೆಲೆ ₹ 600ರ ಆಸುಪಾಸಿರುವುದರಿಂದ ಮಾಂಸ ಪ್ರಿಯರು ಇದೀಗ ಕೋಳಿಯತ್ತ ಮುಖ ಮಾಡಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಕಡಿಮೆ ಬೆಲೆಗೆ ಕೆಜಿಗಟ್ಟಲೆ ಚಿಕನ್‌ ಖರೀದಿಸುತ್ತಿದ್ದ ಗ್ರಾಹಕರ ಜೇಬಿಗೆ ಈಗಿನ ದರ ಬಿಸಿ ಮುಟ್ಟಿಸಿದೆ.

ಲಾಕ್‌ಡೌನ್‌ನಿಂದಾಗಿ ಸರಿಯಾದ ಸಂಪಾದನೆ ಇಲ್ಲದಿರುವ ಗ್ರಾಹಕರು ಈಗ ಅನಿವಾರ್ಯವಾಗಿ ದುಬಾರಿ ಬೆಲೆ ನೀಡಿ ಚಿಕನ್‌ ಖರೀದಿಸುತ್ತಿದ್ದಾರೆ. ಎರಡು ಮೂರು ಕೆ.ಜಿ. ಚಿಕನ್‌ ಖರೀದಿಸುತ್ತಿದ್ದವರು, ಈಗ ಒಂದು ಕೆ.ಜಿ.ಗೆ ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ.

‘ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿಲ್ಲ’
ಹಕ್ಕಿ ಜ್ವರದ ಭೀತಿ ಹಾಗೂ ಕೋಳಿಗಳಿಂದ ಕೊರೊನಾ ಸೋಂಕು ಹರಡುತ್ತದೆ ಎಂಬ ಸುದ್ದಿಯಿಂದಾಗಿ ಕೋಳಿ ಸಾಕಣೆದಾರರು ಹಾಗೂ ವಿವಿಧ ಕಡೆ ಸಾವಿರಾರು ಕೋಳಿಗಳನ್ನು ಕೊಲ್ಲಲಾಗಿತ್ತು.

ಇದರ ಜೊತೆಗೆ ಲಾಕ್‌ಡೌನ್‌ ಅವಧಿಯಲ್ಲಿ ಬೇಡಿಕೆಯೂ ಕಡಿಮೆ ಇತ್ತು. ಸಿಕ್ಕಷ್ಟು ಬೆಲೆಗೆ ಕೋಳಿ ಮಾರಾಟ ಮಾಡಿದ್ದರು. ಆಮೇಲೆ ಸಾಕಣೆ ಮಾಡಲಿಲ್ಲ. ಇದರಿಂದಾಗಿ ಕೋಳಿ ಹಾಗೂ ಮೊಟ್ಟೆಗಳು ಇಲ್ಲದಂತಾಯಿತು. ಇದೀಗ ಎಲ್ಲೆಡೆ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಕೋಳಿ ಮಾಂಸಕ್ಕೆ ಬೇಡಿಕೆ ಬಂದಿದೆ. ಅದಕ್ಕೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ ಎನ್ನುತ್ತಾರೆ ಕೋಳಿ ಮಾಂಸ ವ್ಯಾಪಾರಿಗಳು.

‘ಸದ್ಯ ಅಂಗಡಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಕೋಳಿಗಳು ಪೂರೈಕೆ ಆಗುತ್ತಿಲ್ಲ. ಸಾಕಣೆದಾರರು ಈಗ ಮರಿಗಳನ್ನು ಸಾಕುತ್ತಿದ್ದಾರೆ. ಇನ್ನೂ ಎರಡ್ಮೂರು ವಾರ ಇದೇ ರೀತಿಯ ಪರಿಸ್ಥಿತಿ ಇರಬಹುದು. ಆ ಬಳಿಕ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಚಿಕನ್‌ ಅಂಗಡಿ ಮಾಲೀಕ ಸಬೀರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT