ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮ: ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ

ಹೆಚ್ಚು ಪ್ರಕರಣಗಳಿದ್ದರೆ ಕಂಟೈನ್‌ಮೆಂಟ್‌ ವಲಯ ರಚನೆ
Last Updated 1 ಮೇ 2021, 12:33 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌ 2ನೇ ಅಲೆಯ ಪರಿಸ್ಥಿತಿ ಬಿಗಡಾಯಿಸುತ್ತಿರುವುದರ ನಡುವೆಯೇ ಸೋಂಕು ಹರಡುವುದನ್ನು ನಿಯಂತ್ರಿಸಲು ಜಿಲ್ಲಾಡಳಿತ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ಹೆಚ್ಚು ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶದಲ್ಲಿ ಕಂಟೈನ್‌ಮೆಂಟ್‌ ವಲಯಗಳನ್ನು ರಚಿಸಲು ಮುಂದಾಗಿದೆ.

ಶನಿವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 3,950 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಶೇ 79ರಷ್ಟು ಪ್ರಕರಣಗಳು ಗ್ರಾಮೀಣ ಭಾಗಗಳಲ್ಲೇ ಇವೆ. ಶೇ 21ರಷ್ಟು ಪ್ರಕರಣಗಳು ನಗರ ಪ್ರದೇಶಗಳಲ್ಲಿ ವರದಿಯಾಗಿವೆ. ಹಾಗಾಗಿ ಕಠಿಣ ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದರು.

‘ಸೋಂಕು ಹರಡುವುದನ್ನು ನಿಯಂತ್ರಿಸಲು ಕಳೆದ ವರ್ಷದ ರೀತಿಯಲ್ಲಿ ಕಂಟೈನ್‌ಮೆಂಟ್‌ ವಲಯ ರಚಿಸಲು ನಿರ್ಧರಿಸಲಾಗಿದೆ. 100 ಮೀಟರ್‌ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಸೋಂಕಿತರಿದ್ದರೆ, ಆ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸಲಾಗುವುದು. ಹಳ್ಳಿ ವ್ಯಾಪ್ತಿಯಲ್ಲಿ 10ಕ್ಕಿಂತ ಹೆಚ್ಚು ಪ್ರಕರಣಗಳಿದ್ದರೆ, ಹಳ್ಳಿ ಚಿಕ್ಕದಾಗಿದ್ದರೆ ಇಡೀ ಹಳ್ಳಿಯನ್ನು ಕಂಟೈನ್‌ಮೆಂಟ್‌ ವಲಯ ಅಥವಾ ದೊಡ್ಡ ಹಳ್ಳಿಯಾದರೆ, ಹೆಚ್ಚಿನ ಪ್ರಕರಣ ವರದಿಯಾದ ಬೀದಿ ಅಥವಾ ಗಲ್ಲಿಯನ್ನು ಕಂಟೈನ್‌ಮೆಂಟ್‌ ವಲಯ ಎಂದು ಘೋಷಿಸುವುದು ಘೋಷಿಸಲಾಗುವುದು. ನಗರ, ಪಟ್ಟಣ ಪ್ರದೇಶದಲ್ಲೂ ಇದೇ ರೀತಿಯ ವ್ಯವಸ್ಥೆ ಮಾಡಲಾಗುವುದು’ ಎಂದರು.

ಕಂಟೈನ್‌ಮೆಂಟ್‌ ವಲಯದಲ್ಲಿ ಅಗತ್ಯ ಸೇವೆಗಳನ್ನು ಬಿಟ್ಟು ಬೇರೆಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಲಾಗುವುದು. ಆರೋಗ್ಯ ಸಿಬ್ಬಂದಿ ಪ್ರತಿ ದಿನ ಕಂಟೈನ್‌ಮೆಂಟ್‌ ವಲಯದಲ್ಲಿ ಐಎಲ್‌ಐ, ಸಾರಿ ಪ್ರಕರಣಗಳ ಸಮೀಕ್ಷೆ ನಡೆಸಲಿದ್ದಾರೆ’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಯುವ, ಮಧ್ಯವಯಸ್ಕರಲ್ಲಿ ಹೆಚ್ಚು ಸೋಂಕು

‘ಜಿಲ್ಲೆಯಲ್ಲಿ ಒಂದು ತಿಂಗಳಲ್ಲಿ ದಾಖಲಾದ ಪ್ರಕರಣಗಳನ್ನು ವಿಶ್ಲೇಷಣೆಗೆ ಒಳಪಡಿಸಿದರೆ, 21 ವರ್ಷದಿಂದ 40 ವರ್ಷ ವಯಸ್ಸಿನವರಲ್ಲಿ ಹೆಚ್ಚಿನ ಸೋಂಕು ಕಂಡು ಬಂದಿದೆ. 3,950 ಸೋಂಕಿತರಲ್ಲಿ 1,830 ಮಂದಿ ಇದೇ ವಯಸ್ಸಿನವರು. ಅಂದರೆ ಶೇ 46ರಿಂದ ಶೇ 48ರಷ್ಟು ಸೋಂಕಿತರು ಈ ವಯಸ್ಸಿನವರಿದ್ದಾರೆ. 41 ವರ್ಷದಿಂದ 60 ವರ್ಷ ವಯೋಮಾನದವರು ಶೇ 29ರಷ್ಟು ಮಂದಿ ಇದ್ದಾರೆ. 10ರಿಂದ 20 ವರ್ಷದೊಳಗಿನ ಸೋಂಕಿತರು ಶೇ 12ರಷ್ಟಿದ್ದಾರೆ. ಉಳಿದವರು ಹಿರಿಯ ನಾಗರಿಕರು’ ಎಂದು ಅವರು ಹೇಳಿದರು.

‘10 ವರ್ಷದಿಂದ 40 ವರ್ಷ ವಯಸ್ಸಿನವರು ಸೋಂಕು ಹರಡುತ್ತಿದ್ದಾರೆ ಎಂಬುದು ನಮ್ಮ ಶಂಕೆ. ಹೋಂ ಐಸೊಲೇಷನ್‌ನಲ್ಲಿರುವವರು ಸರಿಯಾಗಿ ನಿಯಮ ಪಾಲನೆ ಮಾಡುತ್ತಿಲ್ಲ ಎಂಬ ದೂರುಗಳು ಇವೆ. ಕೋವಿಡ್‌ ಕೇರ್‌ ಕೇಂದ್ರಗಳನ್ನು ಸ್ಥಾಪ‍ನೆ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ಹೋಂ ಐಸೊಲೇಷನ್‌ನಲ್ಲಿ ಇರಲು ಸಾಧ್ಯವಾಗದವರನ್ನು ಅಥವಾ ಹೋಂ ಐಸೊಲೇಷನ್‌ಗೆ ಬೇಕಾದ ಸೌಲಭ್ಯ ಇಲ್ಲದಿದ್ದರೆ ಅವರನ್ನು ಕೋವಿಡ್‌ ಕೇರ್‌ ಕೇಂದ್ರಗಳಲ್ಲಿ ಇರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಹಿರಿಯರ ಸಾವು

‘ಒಂದು ತಿಂಗಳ ಅವಧಿಯಲ್ಲಿ 41 ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಈ ಪೈಕಿ ಐದು ಪ್ರಕರಗಳು, ಹೊರ ಜಿಲ್ಲೆ ಹಾಗೂ ಕೋವಿಡ್‌ಯೇತರ ಪ್ರಕರಣಗಳು. ಸೋಂಕಿನ ಕಾರಣಕ್ಕೆ 36 ಮಂದಿ ಕೊನೆಯುಸಿರೆಳೆದಿದ್ದಾರೆ. 26 ಪುರುಷರು ಹಾಗೂ 10 ಮಂದಿ ಮಹಿಳೆಯರು. ಈ ಪೈಕಿ 22 ಮಂದಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದವರು’ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

‘ಮೃತಪಟ್ಟವರಲ್ಲಿ 60 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 20ರಿಂದ 40 ವರ್ಷ ವಯಸ್ಸಿನವರಲ್ಲಿ ಸೋಂಕು ಜಾಸ್ತಿ ಕಂಡು ಬಂದಿದ್ದರೂ, ಸಾವಿನ ಪ್ರಮಾಣ ಕಡಿಮೆ. ಶೇ 0.3ರಷ್ಟು ಇದೆ. 40ರಿಂದ 60 ವರ್ಷ ವಯೋಮಾನದವರ ಸಾವಿನ ಪ್ರಮಾಣ ಶೇ 1ರಷ್ಟಿದೆ’ ಎಂದು ಅವರು ಮಾಹಿತಿ ನೀಡಿದರು.

‘ರೋಗಿಗಳು ತಡವಾಗಿ ಆಸ್ಪತ್ರೆಗೆ ಬರುತ್ತಿರುವವರಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಕೆಲವರು ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದು ಬರುತ್ತಿದ್ದಾರೆ ಎಂಬ ಮಾಹಿತಿಯೂ ಇದೆ. ರೋಗ ಲಕ್ಷಣಗಳು ಕಂಡು ಬಂದ ತಕ್ಷಣ ಜನರು ಖಾಸಗಿ ಆಸ್ಪತ್ರೆಗೆ ತೆರಳದೆ ನೇರವಾಗಿ ಸರ್ಕಾರಿ ಆಸ್ಪತ್ರೆಗೆ ಬರಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT