ಶುಕ್ರವಾರ, ಆಗಸ್ಟ್ 12, 2022
22 °C
ಜಿಲ್ಲೆಯಲ್ಲಿ ಜೂನ್‌ 21ರವರೆಗೂ ಲಾಕ್‌ಡೌನ್‌ ಮುಂದುವರಿಕೆ– ಜನರ ಮೇಲೆ ಪೊಲೀಸರ ನಿಗಾ

ನಿಯಮ ಉಲ್ಲಂಘನೆ: ₹15.90 ಲಕ್ಷ ದಂಡ ವಸೂಲಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌ 2ನೇ ಅಲೆ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಏಪ್ರಿಲ್‌ 14ರಿಂದ ಹೇರಲಾಗಿರುವ ಲಾಕ್‌ಡೌನ್‌ ಅವಧಿಯಲ್ಲಿ ಜನರು ಮಾಸ್ಕ್‌ ಧರಿಸದೆ, ಸುರಕ್ಷಿತ ಅಂತರ ಕಾಪಾಡುವ ನಿಯಮ ಪಾಲಿಸದೇ ಇದ್ದುದಕ್ಕಾಗಿ ಪೊಲೀಸರು ಶುಕ್ರವಾರದವರೆಗೆ (ಜೂನ್‌ 11) ₹15.90 ಲಕ್ಷ ದಂಡ ವಿಧಿಸಿದ್ದಾರೆ.

ನಗರ, ಪಟ್ಟ‌ಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಅನಗತ್ಯವಾಗಿ ಸಂಚರಿಸುತ್ತಿದ್ದವರ 3,168 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಭಾರತೀಯ ದಂಡ ಸಂಹಿತೆಯ ಸಾರ್ವಜನಿಕ ಸುರಕ್ಷಾ ನಿಯಮದ (ಸೆಕ್ಷನ್‌ 188–269 ಮತ್ತು 271) ಅಡಿಯಲ್ಲಿ ನಾಲ್ಕು, 2005ರ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ 275 ಹಾಗೂ 2020ರ ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆ 10 ಪ್ರಕರಣಗಳು ಸೇರಿದಂತೆ ಒಟ್ಟು 289 ಪ್ರಕರಣಗಳನ್ನು ದಾಖಲಿಸಲಾಗಿದೆ. 

ಈ ಮಧ್ಯೆ, ಈ ಹಿಂದೆ ಘೋಷಿಸಿರುವ ಲಾಕ್‌ಡೌನ್‌ ನಿರ್ಬಂಧಗಳ ಅವಧಿ ಇದೇ 14ರ ಬೆಳಿಗ್ಗೆ 6 ಗಂಟೆಗೆ ಕೊನೆಗೊಳ್ಳಲಿದೆ. ಆದರೆ, ಜಿಲ್ಲೆಯಲ್ಲಿ ಕೋವಿಡ್‌ ಪಾಸಿಟಿವಿಟಿ ದರ ಇನ್ನೂ ಶೇ 5ರ ಕೆಳಗಡೆ ಬಾರದಿರುವುದರಿಂದ ಜಿಲ್ಲೆಯಲ್ಲಿ ಲಾಕ್‌ಡೌನ್‌ ನಿಯಮಗಳನ್ನು ಮತ್ತೆ ಒಂದು ವಾರ ಅಂದರೆ ಜೂನ್‌ 21ರ ಬೆಳಿಗ್ಗೆ 6 ಗಂಟೆಯವರೆಗೆ ವಿಸ್ತರಿಸಲಾಗಿದೆ. 

ಹೀಗಾಗಿ, ಜಿಲ್ಲೆಯಲ್ಲಿ ಈಗ ಇರುವ ನಿಯಮಗಳು ಜೂನ್‌ 21ರ ಬೆಳಿಗ್ಗೆಯವರೆಗೆ ಮುಂದುವರಿಯಲಿದೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಇದೇ 14ರ ಬೆಳಿಗ್ಗೆ 6 ಗಂಟೆಯಿಂದ 21ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಿ ಹಾಗೂ ಅಂಗಡಿಗಳು ತೆರೆಯುವುದಕ್ಕೆ, ಜನರ ಓಡಾಟಕ್ಕೆ ಸಂಬಂಧಿಸಿದಂತೆ ಈಗಿರುವ ನಿಯಮಗಳನ್ನೇ ಮುಂದುವರಿಸಿ ಆದೇಶ ಹೊರಡಿಸಿದ್ದಾರೆ. 

ಪೊಲೀಸರ ನಿಗಾ: ಏಪ್ರಿಲ್‌ 14ರಂದು ಲಾಕ್‌ಡೌನ್‌ ಜಾರಿಯಾದ ನಂತರ ಜಿಲ್ಲಾ ಪೊಲೀಸರು ಕೋವಿಡ್‌ ನಿಯಮಗಳ ಉಲ್ಲಂಘನೆ, ಜನರು ಅನಗತ್ಯವಾಗಿ ಸಂಚರಿಸುವುದರ ಮೇಲೆ ನಿಗಾ ಇಟ್ಟಿದ್ದಾರೆ. 

ಕೋವಿಡ್‌ ನಿಯಂತ್ರಣಕ್ಕಾಗಿ ಮಾಸ್ಕ್‌ ಧರಿಸುವುದನ್ನು, ಸುರಕ್ಷಿತ ಅಂತರ ಕಾಪಾಡುವುದನ್ನು ಕಡ್ಡಾಯ ಮಾಡಲಾಗಿತ್ತು. ಇವುಗಳ ಮೇಲೆ ನಿಗಾ ಇಟ್ಟು ದಂಡ ವಿಧಿಸುವುದಕ್ಕಾಗಿ ಪೊಲೀಸರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಸ್ವಯಂ ಸೇವಕರನ್ನೊಳಗೊಂಡ ಪ್ರತ್ಯೇಕ ತಂಡವನ್ನೂ ರಚಿಸಿದೆ. 

ಪೊಲೀಸ್‌ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಏಪ್ರಿಲ್‌ 14ರಿಂದ ಶುಕ್ರವಾರದವರೆಗೆ ಮಾಸ್ಕ್‌ ಧರಿಸಿದ 14,966 ಮಂದಿಗೆ ದಂಡ ವಿಧಿಸಲಾಗಿದ್ದು, ₹15.05 ಲಕ್ಷ ಹಣವನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಸುರಕ್ಷಿತ ಅಂತರ ನಿಯಮ ಉಲ್ಲಂಘಿಸಿರುವುದರ ಸಂಬಂಧ 811 ಪ್ರಕರಣಗಳನ್ನು ದಾಖಲಾಗಿದ್ದು, ₹84,900 ದಂಡ ವಿಧಿಸಲಾಗಿದೆ. 

‘ನಿಯಮ ಪಾಲಿಸಿ ಜನರು ಸಹಕರಿಸಬೇಕು’

ಈ ವಿಚಾರವಾಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು, ‘ಲಾಕ್‌ಡೌನ್‌ ನಿಯಮಗಳನ್ನು ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕಾರಣವಿಲ್ಲದೇ ಸಂಚರಿಸುವವರ ವಾಹನಗಳನ್ನು ಜಪ್ತಿ ಮಾಡಿದ್ದೇವೆ‌. ಐಪಿಸಿ ಸೆಕ್ಷನ್‌, ವಿಪತ್ತು ನಿರ್ವಹಣಾ ಕಾಯ್ದೆ, ಕರ್ನಾಟಕ ಸಾಂಕ್ರಾಮಿಕ ರೋಗ ಕಾಯ್ದೆಗಳ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು. 

‘ಜಿಲ್ಲೆಯಲ್ಲಿ ದೃಢಪಡುತ್ತಿರುವ ಕೋವಿಡ್‌ ಪ್ರಕರಣಗಳ ಪ್ರಮಾಣ ಶೇ 5ಕ್ಕಿಂತ ಕೆಳಗೆ ಬಾರದಿರುವುದರಿಂದ ಮತ್ತೆ ಒಂದು ವಾರ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ತುರ್ತು ಪರಿಸ್ಥಿತಿ ಹಾಗೂ ಅಗತ್ಯ ಸಂದರ್ಭಗಳಲ್ಲಿ ಮಾತ್ರ ಜನರು ಮನೆಯಿಂದ ಹೊರಗಡೆ ಬರಬೇಕು. ಜನರು ಇನ್ನೂ ಒಂದು ವಾರ ಕಾಲ ಲಾಕ್‌ಡೌನ್‌ ನಿಯಮಗಳನ್ನು ಪಾಲಿಸುವುದ‌ರ ಮೂಲಕ ನಮ್ಮೊಂದಿಗೆ ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು