ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ: 221 ಕೆಜಿ ಒಣಗಾಂಜಾ ವಶ; ನಾಲ್ವರ ಬಂಧನ

Published 14 ಫೆಬ್ರುವರಿ 2024, 15:31 IST
Last Updated 14 ಫೆಬ್ರುವರಿ 2024, 15:31 IST
ಅಕ್ಷರ ಗಾತ್ರ

ಕೊಳ್ಳೇಗಾಲ ‌(ಚಾಮರಾಜನಗರ): ನಗರದ ಹೊರ ವಲಯದ, ಕೊಳ್ಳೇಗಾಲ-ಮಳವಳ್ಳಿ ಮುಖ್ಯ ರಸ್ತೆಯ ಮಧುವನಹಳ್ಳಿ ಬೈಪಾಸ್‌ ಬಳಿ ಸೋಮವಾರ ತಡ ರಾತ್ರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಲಾರಿಯಲ್ಲಿ 221 ಕೆಜಿ ಒಣಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.  

ಲಾರಿಯಲ್ಲಿ ಪ್ಲೈವುಡ್‌ ಶೀಟುಗಳ ನಡುವೆ ಒಣಗಾಂಜಾದ ನಾಲ್ಕು ಚೀಲಗಳನ್ನು ಇರಿಸಿ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರು, ದಾವಣಗೆರೆ, ಯಾದಗಿರಿ, ಹರಿಹರದವರಾದ ಸೆಂದಿಲ್ ಕುಮಾರ್, ರವಿಕುಮಾರ್, ಉಮಾಶಂಕರ್ ಮತ್ತು ವಿನಾಯಕ ಅಲಿಯಾಸ್‌ ವಿನಯ್ ಎಂಬುವವರನ್ನು ಬಂಧಿಸಿದ್ದಾರೆ. 

ಬಂಧಿತರಿಂದ ₹1.10 ಕೋಟಿ ಮೌಲ್ಯದ 221 ಕೆಜಿ ಒಣ ಗಾಂಜಾ, ₹25 ಲಕ್ಷ ಮೌಲ್ಯದ ಲಾರಿ, ₹9 ಲಕ್ಷ ಮೌಲ್ಯದ ಪ್ಲೈವುಡ್‌ ಶೀಟುಗಳನ್ನು ವಶಕ್ಕೆ ಪಡೆದಿದ್ದಾರೆ. 

‘ಒಣಗಾಂಜಾವನ್ನು ಆಂಧ್ರಪ್ರದೇಶದಿಂದ ತರಲಾಗಿತ್ತು. ಜಿಲ್ಲೆಯ ಕೊಳ್ಳೇಗಾಲ– ರಾಮಾಪುರ ಮಾರ್ಗವಾಗಿ ತಮಿಳುನಾಡಿನ ಕಡೆಗೆ ಹೋಗುತ್ತಿತ್ತು’ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.  

‘ಮಾದಕ ದ್ರವ್ಯ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕಾರ್ಯಾಚರಣೆಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಒಣಗಾಂಜಾ ಸಿಕ್ಕಿದೆ. ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಎಲ್ಲಿಂದ ತರಲಾಗಿತ್ತು? ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪದ್ಮಿನಿ ಸಾಹು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT