ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಲಂಟಾನ ತೆರವು; ಹೆಚ್ಚಿದ ಹುಲಿಗಳ ದರ್ಶನ

ಪ್ರವಾಸಿಗರಿಗೆ ಕಾಣಸಿಗುತ್ತಿರುವ ವ್ಯಾಘ್ರಗಳು, ಸಫಾರಿ ವಲಯದಲ್ಲಿ ಬಲಿ ಪ್ರಾಣಿಗಳ ಓಡಾಟ ಹೆಚ್ಚಳ
Last Updated 30 ಆಗಸ್ಟ್ 2021, 19:31 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಸಫಾರಿ ವಲಯ ಹಾಗೂ ಇತರ ಕಡೆಗಳಲ್ಲಿ ಲಂಟಾನ ಗಿಡಗಳನ್ನು ತೆರವು ಮಾಡುತ್ತಿರುವುದು ಪ್ರವಾಸಿಗರಿಗೆ ಹಾಗೂ ವನ್ಯಜೀವಿಗಳಿಗೆ ಅನುಕೂಲಕರವಾಗಿ ಪರಿಣಮಿಸಿದೆ.

ಇತ್ತೀಚೆಗೆ ಸಫಾರಿ ವಲಯದಲ್ಲಿ ಪ್ರವಾಸಿಗರಿಗೆ ಹುಲಿಗಳ ದರ್ಶನವಾಗುತ್ತಿದೆ.ಸಫಾರಿ ವಲಯಗಳಾದ ಟೈಗರ್ ರೋಡ್, ಹೊಳಕಲ್ಲಾರೆ, ಮಿನಿಸ್ಟರ್ ಗುತ್ತಿ, ತಾವರೆಕಟ್ಟೆ, ಸೊಳ್ಳಿಕಟ್ಟೆ, ಮೂಲಾಪುರಕೆರೆ ಮರಳಲ್ಲಕ್ಯಾಂಪ್ ಗಂಜಿಕಟ್ಟೆ, ಗಾರೆಪಾಲ, ಬಸವನಕಟ್ಟೆಗಳಲ್ಲಿ ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಪ್ರವಾಸಿಗರಿಗೆ ಕಾಣಸಿಗುತ್ತಿವೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ಸರಕು ಸಾಗಣೆ ಲಾರಿ ಚಾಲಕರ ಕಣ್ಣಿಗೂ ಆಗಾಗ ವ್ಯಾಘ್ರಗಳು ಬೀಳುತ್ತಿವೆ.

ಬಂಡೀಪುರ ಭಾಗದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಅರಣ್ಯ ಹಚ್ಚ ಹಸಿರಿನಿಂದ ಕೂಡಿದೆ. ಹೀಗಾಗಿ ಜಿಂಕೆ, ಕಡವೆಯಂತಹ ಬಲಿ ಪ್ರಾಣಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಲಭ್ಯವಾಗಿದೆ. ಇದಲ್ಲದೇ ಅರಣ್ಯ ಇಲಾಖೆಯು ಕಾಡನ್ನು ಆವರಿಸಿರುವ ಲಂಟಾನವನ್ನು ತೆರೆವುಗೊಳಿಸುತ್ತಿದೆ. ತೆರವುಗೊಳಿಸಿದ ಜಾಗಗಳಲ್ಲಿ ಹುಲ್ಲಿನ ಗಿಡಗಳನ್ನು ನಾಟಿ ಮಾಡಿದೆ.

ಲಂಟಾನ ಗಿಡಗಳನ್ನು ತೆರವುಗಳಿಸಿರುವುದರಿಂದ ಜಿಂಕೆಗಳು ಸಫಾರಿ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಹೀಗಾಗಿ ಹುಲಿಗಳು ಕಾಣಿಸುತ್ತಿವೆ ಎಂದು ಸಫಾರಿ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ನಾಲ್ಕು ಹುಲಿಗಳ ದರ್ಶನ: ಸಫಾರಿಗೆ ತೆರಳುತ್ತಿರುವವರಿಗೆ ಪದೇ ಪದೇ ನಾಲ್ಕು ಹುಲಿಗಳು ದರ್ಶನ ಕೊಡುತ್ತಿವೆ. ಈ ಪೈಕಿ ಒಂದು ಹುಲಿಗೆ ‘ಮೂಗ’ ಎಂಬ ಹೆಸರನ್ನು ಸಿಬ್ಬಂದಿ‌ ಇಟ್ಟಿದ್ದಾರೆ. ಇದಲ್ಲದೇ, ಒಂದು ಹೆಣ್ಣು ಹಾಗೂ ಎರಡು ಗಂಡು ಹುಲಿಗಳು ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು, ಇವು ತಾಯಿ ಹಾಗೂ ಎರಡು ಮರಿಗಳು ಎಂದು ಹೇಳಲಾಗುತ್ತಿದೆ. ತಾಯಿ ಹುಲಿಯನ್ನು ‘ಸುಂದರಿ’ ಎಂದು ಕರೆದರೆ, ಮರಿಗಳನ್ನು ‘ಬಂಡೀಪುರ ಸಹೋದರರು’ ಎಂಬ ಹೆಸರಿನಿಂದ ಸಿಬ್ಬಂದಿ ಹಾಗೂ ಪ್ರವಾಸಿಗರು ಗುರುತಿಸುತ್ತಿದ್ದಾರೆ.

ಹಿಂದೆ ಸಫಾರಿ ವಲಯದಲ್ಲೇ ಬೀಡು ಬಿಟ್ಟಿರುತ್ತಿದ್ದ ‘ಪ್ರಿನ್ಸ್‌’ ಎಂಬ ಹುಲಿ ಪ್ರವಾಸಿಗರ ಹಾಗೂ ಛಾಯಾಗ್ರಾಹಕರ ಆಕರ್ಷಣೆಯ ಕೇಂದ್ರವಾಗಿತ್ತು. ಅದು ಸತ್ತ ನಂತರ ಆ ಮಟ್ಟಿಗೆ ಜನಪ್ರಿಯತೆಯನ್ನು ಬೇರೆ ಯಾವ ಹುಲಿಯೂ ಗಳಿಸಿರಲಿಲ್ಲ. ಈಗ ಮೂರು ಹುಲಿಗಳು ಸಫಾರಿಯ ಆಕರ್ಷಣೆಯನ್ನು ಹೆಚ್ಚಿಸಿವೆ.

ಹುಲಿಗಳ ಸಂಖ್ಯೆ ಹೆಚ್ಚಳ

2018ರ ಹುಲಿ ಗಣತಿ ಪ್ರಕಾರ ಬಂಡೀಪುರದಲ್ಲಿ 126 ಹುಲಿಗಳಿವೆ (ಮುಂದಿನ ವರ್ಷ (2022) ಮತ್ತೆ ಗಣತಿ ನಡೆಯಲಿದೆ). ಮೂರು ವರ್ಷಗಳ ಅವಧಿಯಲ್ಲಿ ಹುಲಿ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತೆ ನಾಗರಹೊಳೆ, ಕೇರಳದ ವೈಯನಾಡು ಹಾಗೂ ತಮಿಳುನಾಡಿನ ಮದುಮಲೆ ಹುಲಿ ಸಂರಕ್ಷಿತ ಪ್ರದೇಶಗಳು ಇರುವುದರಿಂದ ಇಲ್ಲಿ ಹುಲಿಗಳ ಓಡಾಟ ಹೆಚ್ಚಾಗಿದೆ. ಈ ಮೂರು ಅರಣ್ಯ ಪ್ರದೇಶಗಳಿಂದ 37 ಹುಲಿಗಳು ಬಂಡೀಪುರಕ್ಕೆ ಬರುತ್ತಿರುವುದರನ್ನು ಇಲಾಖೆ ಗುರುತಿಸಿದೆ.

ಈಗ 170ಕ್ಕೂ ಹೆಚ್ಚು ಹುಲಿಗಳು ಇರಬಹುದು ಎಂದು ಹೇಳುತ್ತಾರೆ ಅಧಿಕಾರಿಗಳು. ಹುಲಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅವುಗಳು ಅರಣ್ಯದ ಅಂಚಿನ ಪ್ರದೇಶದಲ್ಲೂ ಆಶ್ರಯ ಪಡೆದಿರುವ ಸಾಧ್ಯತೆ ಇದೆ. ಹಾಗಾಗಿ, ಸಫಾರಿ ವಲಯದಲ್ಲಿ ಹೆಚ್ಚು ಹುಲಿಗಳು ಕಂಡುಬರುತ್ತಿರಬಹುದು ಎಂದು ಅವರು ಹೇಳುತ್ತಾರೆ.

* ಸಫಾರಿ ವಲಯ ಸೇರಿದಂತೆ ಕಾಡಿನ ಎಲ್ಲ ಭಾಗಗಳಲ್ಲೂ ಲಂಟಾನ ತೆರವುಗೊಳಿಸಲಾಗುತ್ತಿದೆ. ಹಾಗಾಗಿ ಹುಲಿಗಳು ಹೆಚ್ಚಾಗಿ ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿವೆ.

-ಎಸ್.ಆರ್.ನಟೇಶ್, ಹುಲಿ ಯೋಜನೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT