ಗುರುವಾರ , ಆಗಸ್ಟ್ 11, 2022
21 °C
ಕನಿಷ್ಠ ಬೆಂಬಲ ಬೆಲೆ: ಖರೀದಿ ಕೇಂದ್ರ ಆರಂಭ, ಭತ್ತ ಖರೀದಿ ಮಿತಿ ಪರಿಷ್ಕರಣೆ

ನೋಂದಣಿ ಪ್ರಕ್ರಿಯೆ| ಭತ್ತ ಬಿರುಸು, ರಾಗಿ ನಿಧಾನ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ  2020–21ನೇ ಸಾಲಿನ ಮುಂಗಾರು ಅವಧಿಯ ಭತ್ತ ಹಾಗೂ ರಾಗಿಯನ್ನು ಖರೀದಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಖರೀದಿ ಕೇಂದ್ರಗಳನ್ನು ತೆರೆದಿದೆ. 

ಭತ್ತ ಖರೀದಿಗಾಗಿ ವಾರದಿಂದ ನೋಂದಣಿ ಪ್ರಕ್ರಿಯೆಯೂ ಶುರುವಾಗಿದ್ದು, ರಾಗಿ ಬೆಳೆಗಾರರ ನೋಂದಣಿ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ.

‘ರಾಗಿ ಖರೀದಿಗೆ ಸಂಬಂಧಿಸಿದಂತೆ ಎರಡು ದಿನಗಳ ಹಿಂದೆಯಷ್ಟೇ ಸರ್ಕಾರದಿಂದ ಪರಿಷ್ಕೃತ ಆದೇಶ ಬಂದಿದ್ದು, ನೋಂದಣಿಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಒಂದೆರಡು ದಿನಗಳಲ್ಲಿ ನೋಂದಣಿ ಆರಂಭಗೊಳ್ಳಲಿದೆ’ ಎಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಭಾರ ಉಪನಿರ್ದೇಶಕ ಸಿ.ಎನ್‌.ರುದ್ರಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ಚಾಮರಾಜನಗರ ಮತ್ತು ಸಂತೇಮರಹಳ್ಳಿಯ ಎಪಿಎಂಸಿ ಆವರಣ, ಯಳಂದೂರಿನ ಟಿಎಪಿಸಿಎಂಎಸ್‌ ಆವರಣ, ಕೊಳ್ಳೇಗಾಲ ಹಾಗೂ ಹನೂರಿನ ಎಪಿಎಂಸಿ ಆವರಣಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಗುಂಡ್ಲುಪೇಟೆ ಭಾಗದಲ್ಲಿ ಭತ್ತ ಬೆಳೆಯದೇ ಇರುವುದರಿಂದ ಅಲ್ಲಿ ಖರೀದಿ ಕೇಂದ್ರ ಇಲ್ಲ. ಇದೇ ಕೇಂದ್ರಗಳಲ್ಲಿ ರಾಗಿಯನ್ನೂ ಖರೀದಿಸಲು ನಿರ್ಧರಿಸಲಾಗಿದ್ದು, ಗುಂಡ್ಲುಪೇಟೆ ತಾಲ್ಲೂಕಿನ ರೈತರಿಗಾಗಿ ಅಲ್ಲಿನ ಎಪಿಎಂಸಿ ಆವರಣದಲ್ಲಿ ಕೇಂದ್ರ ತೆರೆಯಲಾಗಿದೆ. 

ಸಾಮಾನ್ಯ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ ₹1,868 ಹಾಗೂ ‘ಎ’ ಗ್ರೇಡ್‌ ಭತ್ತಕ್ಕೆ ₹1,888 ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ‍ಪಡಿಸಲಾಗಿದೆ. ಪ್ರತಿ ಕ್ವಿಂಟಲ್‌ ರಾಗಿಗೆ ₹3,295 ಬೆಲೆ ನಿಗದಿ ಪಡಿಸಲಾಗಿದೆ. ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವು ರೈತರಿಂದ ಭತ್ತ ಹಾಗೂ ರಾಗಿಯನ್ನು ಖರೀದಿಸಲಿದೆ. 

ಪರಿಷ್ಕರಣೆ

ಆರಂಭದಲ್ಲಿ ಒಬ್ಬ ರೈತರಿಂದ ಒಂದು ಎಕರೆಗೆ 16 ಕ್ವಿಂಟಲ್‌ನಂತೆ ಗರಿಷ್ಠ 45 ಕ್ವಿಂಟಲ್‌ ಭತ್ತವನ್ನು ಖರೀದಿಸಲಾಗುವುದು ಎಂದು ಸರ್ಕಾರ ಹೇಳಿತ್ತು. ಈಗ ಇದನ್ನು ಪರಿಷ್ಕರಿಸಲಾಗಿದ್ದು, ಎಕರೆಗೆ 25 ಕ್ವಿಂಟಲ್‌ನಂತೆ ಗರಿಷ್ಠ 75 ಕ್ವಿಂಟಲ್‌ ಖರೀದಿ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. 

ರಾಗಿಗೆ ಸಂಬಂಧಿಸಿದಂತೆ ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಲ್‌ನಂತೆ ಗರಿಷ್ಠ 50 ಕ್ವಿಂಟಲ್‌ವರೆಗೆ ಸರ್ಕಾರ ಖರೀದಿಸಲಿದೆ. 

ನೋಂದಣಿ ಆರಂಭ: ‌ಕಳೆದ ಸೋಮವಾರದಿಂದ ಖರೀದಿ ಕೇಂದ್ರಗಳಲ್ಲಿ ಭತ್ತ ಬೆಳೆಗಾರರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಇದುವರೆಗೆ 20 ಮಂದಿ ರೈತರು (ಚಾಮರಾಜನಗರ–1, ಯಳಂದೂರು–11, ಕೊಳ್ಳೇಗಾಲ–8) ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಒಟ್ಟು 870 ಕ್ವಿಂಟಲ್‌ಗಳಷ್ಟಯ ಭತ್ತ ಮಾರಾಟ ಮಾಡಲು ನೋಂದಣಿ ಮಾಡಿಕೊಂಡಿದ್ದಾರೆ. 

‘ಈ ತಿಂಗಳ ಅಂತ್ಯದವರೆಗೂ ನೋಂದಣಿಗೆ ಅವಕಾಶ ಇದೆ. ಇದೇ 20ರಿಂದ ಖರೀದಿ ಆರಂಭಿಸಲಾಗುವುದು. ಈಗಿನ ವೇಳಾಪಟ್ಟಿ ಪ್ರಕಾರ ಮಾರ್ಚ್‌ 20ರವರೆಗೂ ಭತ್ತ ಖರೀದಿಸಲಾಗುವುದು. ‘ಫ್ರೂಟ್ಸ್‌’ (ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ವ್ಯವಸ್ಥೆ) ತಂತ್ರಾಂಶದ ಐಡಿಯನ್ನು ಬಳಸಿಕೊಂಡು ನೋಂದಣಿ ಮಾಡಿಕೊಳ್ಳಬೇಕು. ಈ ಐಡಿಯಲ್ಲಿ ಯಾವುದಾದರೂ ದೋಷವಿದ್ದರೆ ರೈತರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಸರಿಪಡಿಸಿಕೊಳ್ಳಬೇಕು’ ಎಂದು ರುದ್ರಸ್ವಾಮಿ ಅವರು ಮಾಹಿತಿ ನೀಡಿದರು. 

ರಾಗಿ ವಿಳಂಬ

ರಾಗಿ ನೋಂದಣಿ ಪ್ರಕ್ರಿಯೆ ಇನ್ನೂ ಆರಂಭಗೊಂಡಿಲ್ಲ. ಬಹುತೇಕ ರೈತರು ಈಗಾಗಲೇ ರಾಗಿ ಕಟಾವು ಮುಗಿಸಿದ್ದು, ಶೀಘ್ರದಲ್ಲಿ ಖರೀದಿ ಪ್ರಕ್ರಿಯೆ ಆರಂಭವಾದರೆ ಅನುಕೂಲ ಎಂಬ ಅಭಿಪ್ರಾಯ ರೈತ ಮುಖಂಡರದ್ದು. 

‘ರಾಗಿ ನೋಂದಣಿ, ಖರೀದಿಗೂ ಸಿದ್ಧತೆ ನಡೆಸಿದ್ದೇವೆ. ತಂತ್ರಾಂಶದಲ್ಲಿ ಇನ್ನೂ ಲಾಗಿನ್‌ಗೆ ಅವಕಾಶ ಕೊಟ್ಟಿಲ್ಲ. ನೋಂದಣಿ ಸಾಧ್ಯವಾದರೆ, ಭತ್ತದೊಂದಿಗೆ ಅದನ್ನೂ ಮಾಡುತ್ತೇವೆ’ ಎಂದು ರುದ್ರಸ್ವಾಮಿ ಅವರು ಮಾಹಿತಿ ನೀಡಿದರು. 

‘ಭತ್ತವನ್ನು ರೈತರು ನೇರವಾಗಿ ಅಕ್ಕಿ ಗಿರಣಿಗಳಿಗೆ ಸರಬರಾಜು ಮಾಡಬೇಕಾಗಿದೆ. ಗಿರಣಿಗಳೊಂದಿಗೆ ಇನ್ನೂ ಒಪ್ಪಂದ ನಡೆದಿಲ್ಲ. ಖರೀದಿ ಆರಂಭಿಸುವಾಗ ಒಪ್ಪಂದ ಮಾಡಿಕೊಳ್ಳಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು