ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಲೆಕ್ಕಕ್ಕಷ್ಟೇ ಜಲಾಶಯ, ರೈತರ ಪಾಲಿಗೆ ಲಯ

ಹನೂರು: ಮಳೆ ಕೊರತೆ, ಹೂಳು, ಸೋರಿಕೆ, ನಿರ್ವಹಣೆ ಕೊರತೆ ಸಮಸ್ಯೆಯಿಂದ ಅವಸಾನದತ್ತ
Last Updated 26 ಜುಲೈ 2021, 3:02 IST
ಅಕ್ಷರ ಗಾತ್ರ

ಹನೂರು: ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸಿ, ವನ್ಯಪ್ರಾಣಿಗಳಿಗೆ ಜೀವನಾಡಿಯಾಗಬೇಕಿದ್ದ ತಾಲ್ಲೂಕಿನ ಜಲಾಶಯಗಳು ನಿರ್ವಹಣೆ ಕೊರತೆಯಿಂದಾಗಿ ಕುಡುಕರ ಅಡ್ಡಗಳಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟು ಅವಸಾನದತ್ತ ಸಾಗಿವೆ.

ತಾಲ್ಲೂಕಿನಲ್ಲಿ ಗುಂಡಾಲ್, ಉಡುತೊರೆ, ಹುಬ್ಬೆಹುಣಸೆ, ಮಿಣ್ಯತ್ತಹಳ್ಳ, ಗೋಪಿನಾಥಂ ಸೇರಿ ಐದು ಜಲಾಶಯಗಳಿವೆ. ದೊಡ್ಡದಾದ ರಾಮನಗುಡ್ಡೆ ಕೆರೆ ಇದೆ. ನಿರ್ಮಾಣವಾದ ಪ್ರಾರಂಭದಲ್ಲಿ ರೈತರ ಜೀವನಾಡಿಯಾಗಿದ್ದ ಇವುಗಳು ನಂತರದ ದಿನಗಳಲ್ಲಿ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ತನ್ನ ಮೂಲ ಉದ್ದೇಶವನ್ನೇ ಕಳೆದುಕೊಳ್ಳುತ್ತಿವೆ. ಇಲ್ಲಿರುವ ಐದು ಜಲಾಶಯಗಳದ್ದೂ ಒಂದೊಂದು ಕಥೆ. ಮಳೆಕೊರತೆ, ನಿರ್ವಹಣೆ, ನೀರು ಸೋರಿಕೆ, ಸಂಗ್ರಹಣಾ ಸಾಮರ್ಥ್ಯದ ಕೊರತೆ... ಮುಂತಾದ ಸಮಸ್ಯೆಗಳು ಜಲಾಶಯಗಳನ್ನು ಅಧೋಗತಿಗೆ ತಂದು ನಿಲ್ಲಿಸಿವೆ.

ಅಂದಾಜು 20 ಸಾವಿರ ಎಕರೆ ಕೃಷಿ ಭೂಮಿಗೆ ನೀರುಣಿಸಬೇಕಿದ್ದ ಗುಂಡಾಲ್ ಜಲಾಶಯ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕಾಮಗೆರೆ, ಕಣ್ಣೂರು, ಚನ್ನಾಂಗಹಳ್ಳಿ, ದೊಡ್ಡಿಂದುವಾಡಿ ಗ್ರಾಮಗಳ ಸಾವಿರಾರು ರೈತರಿಗೆ ಇದು ಜೀವನಾಡಿನಾಗಿತ್ತು. ಅಲ್ಲದೇ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಂತಿದ್ದರಿಂದ ವನ್ಯಪ್ರಾಣಿಗಳಿಗೂ ನೀರಿನ ಮೂಲವಾಗಿತ್ತು. 2010ರಲ್ಲಿ ಇದರ ಕಾಮಗಾರಿ ಸಂಪೂರ್ಣ ಮುಗಿಯಿತು. ನಿರ್ಮಾಣವಾದಾಗಿನಿಂದ ಇದುವರೆಗೆ ಒಂದು ಬಾರಿ ಮಾತ್ರ ಜಲಾಶಯ ಭರ್ತಿಯಾಗಿದೆ.

ಇದನ್ನು ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಬೇಕು ಎಂಬ ಒತ್ತಾಯ ಹಲವು ವರ್ಷಗಳಿಂದಲೂ ಕೇಳಿ ಬರುತ್ತಿದೆ. ಸುತ್ತಮುತ್ತಲಿನ ಜನರು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಇದಕ್ಕಾಗಿ ನೀರಾವರಿ ಇಲಾಖೆ ವತಿಯಿಂದ ಉದ್ಯಾನವನ್ನು ನಿರ್ಮಾಣವಾಗಿತ್ತು. ಆದರೆ, ಅದು ಸಹ ನಿರ್ವಹಣೆ ಕೊರತೆಯಿಂದಾಗಿ ನನೆಗುದಿಗೆ ಬಿದ್ದಿದೆ.

ಹುಬ್ಬೆಹುಣಸೆ ಜಲಾಶಯದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಬೆಳತ್ತೂರು, ಉದ್ದನೂರು ಮುಖ್ಯವಾಗಿ ಹನೂರು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿನ ಮೂಲವಾಗಿದ್ದ ಇದು ಈಗ ವಿನಾಶದ ಹಾದಿ ಹಿಡಿದಿದೆ. ಎರಡು ವರ್ಷಗಳಿಂದ ಮಳೆ ಕೊರತೆಯಿಂದಾಗಿ ಜಲಾಶಯ ಭರ್ತಿಯಾಗಿಲ್ಲ. ಇದನ್ನೇ ನಂಬಿ ಬದುಕುತ್ತಿದ್ದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಜಲಾಶಯದಲ್ಲಿ ಹೂಳು ತೆಗೆಸಿ ನೀರು ಸೋರಿಕೆಯನ್ನು ತಡೆಗಟ್ಟಿದರೆ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗುವುದರ ಜೊತೆಗೆ ನೀರು ದೀರ್ಘಕಾಲ ಉಳಿಯುತ್ತದೆ. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಆದರೆ, ಅಧಿಕಾರಿಗಳು ಮಾತ್ರ ಈ ಕೆಲಸಕ್ಕೆ ಆಸಕ್ತಿಯನ್ನೇ ತೋರುತ್ತಿಲ್ಲ’ ಎನ್ನುತ್ತಾರೆ ಇಲ್ಲಿನ ರೈತರು.

‘16 ಸಾವಿರ ಎಕರೆ ಕೃಷಿ ಭೂಮಿಗೆ ನೀರು ಸರಬರಾಜು ಮಾಡಬೇಕಾದ ಉಡುತೊರೆ ಜಲಾಶಯ ಅವಸಾನದ ಹಾದಿ ಹಿಡಿದಿದೆ. 1978ರಲ್ಲಿ ಆರಂಭವಾದ ಕಾಮಗಾರಿ ಸುದೀರ್ಘ 38 ವರ್ಷದ ಬಳಿಕ 2016ರಲ್ಲಿ ಲೋಕಾರ್ಪಣೆಗೊಂಡಿತು. ಕಾಮಗಾರಿ ಪೂರ್ಣಗೊಳಿಸದೇ ಚುನಾವಣೆ ಗಿಮಿಕ್‌ಗಾಗಿ ಜಲಾಶಯವನ್ನು ಲೋಕರ್ಪಣೆಗೊಳಿಸಲಾಗುತ್ತಿದೆ’ ಎಂಬ ವ್ಯಾಪಕ ಆರೋಪಗಳ ನಡುವೆಯೂ ಜನಪ್ರತಿನಿಧಿಗಳು ಅದನ್ನು ಉದ್ಘಾಟಿಸಿದರು.

ಬಳಕೆಗೆ ಮುಕ್ತವಾದ ನಾಲ್ಕು ವರ್ಷಗಳಲ್ಲೇ ಜಲಾಶಯ ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ. ಎಡ ಹಾಗೂ ಬಲದಂಡೆಗಳ ನಾಲೆಗಳು ಕಿತ್ತು ಬರುವುದರ ಜೊತೆಗೆ ನಾಲೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಬಿಆರ್‌ಟಿ ಹಾಗೂ ತಮಿಳುನಾಡಿನ ಅರಣ್ಯ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾದರೆ ಈ ಜಲಾಶಯ ಭರ್ತಿಯಾಗುತ್ತದೆ. ಆದರೆ, ತುಂಬಿದ ನೀರು ಕೆಲವೇ ತಿಂಗಳಲ್ಲೇ ಖಾಲಿಯಾಗುತ್ತದೆ. ನೀರಿನ ಸೋರಿಕೆ ಒಂದೆಡೆಯಾದರೆ, ಹೂಳು ತೆಗೆಸದ ಪರಿಣಾಮ ದಿನದಿಂದ ದಿನಕ್ಕೆ ನೀರಿನ ಸಂಗ್ರಹಣಾ ಸಾಮರ್ಥ್ಯವೂ ಕುಸಿಯುತ್ತಿದೆ ಎಂಬುದು ಸ್ಥಳೀಯರ ಆರೋಪ.

308 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಈ ಜಲಾಶಯ, 0.67 ಟಿಎಂಸಿ ಅಡಿ ನೀರು ಸಂಗ್ರಹಣ ಸಾಮರ್ಥ್ಯ ಹೊಂದಿದೆ. ಅಜ್ಜೀಪುರ, ರಾಮಾಪುರ, ದೊಡ್ಡಾಲತ್ತೂರು, ಕೌದಳ್ಳಿ, ಮಾರ್ಟಳ್ಳಿ ಹಾಗೂ ಸೂಳೇರಿಪಾಳ್ಯ ಸೇರಿ ಒಟ್ಟು ಆರು ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ದೃಷ್ಟಿಯಿಂದ ಇದನ್ನು ನಿರ್ಮಿಸಲಾಗಿತ್ತು. ಆದರೆ ಮೂರು ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ರೈತರಿಗಷ್ಟೇ ನೀರು ಲಭ್ಯವಾಗುತ್ತಿದೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಶಾಸಕರಿಗೆ ಗೊತ್ತಿದ್ದರೂ ಸುಮ್ಮನಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಈ ಭಾಗದ ರೈತರು.

ಉಳಿದಂತೆ ಮಿಣ್ಯತ್ತಹಳ್ಳ ಹಾಗೂ ಗೋಪಿನಾಥಂ ಜಲಾಶಯಗಳು ಮಳೆನೀರಿನಿಂದ ತುಂಬಿದಾಗ ಶಾಸಕರು, ಸಂಸದರು ಹಾಗೂ ಸಚಿವರ ಬಾಗಿನ ಅರ್ಪಣೆಗಾಗಿ ಮಾತ್ರ ಸೀಮಿತವಾಗಿವೆ. ಮಿಣ್ಯತ್ತಹಳ್ಳ ಜಲಾಶಯ ಸರಿಪಡಿಸಿ ಎಂಬ ಕೂಗು ಹಲವು ವರ್ಷಗಳಿಂದಲೂ ಕೇಳಿಬರುತ್ತದೆ. ಜೊತೆಗೆ ಗೋಪಿನಾಥಂ ಜಲಾಶಯಕ್ಕೆ ಕಾವೇರಿ ನದಿಯಿಂದ ನೀರು ತುಂಬಿಸಬೇಕು ಎಂಬ ಕೂಗು ದಶಕದಿಂದಲೂ ಕೇಳಿ ಬರುತ್ತಿದೆ.

‘ಹೂಳು ತೆಗೆಸಿ ನೀರು ತುಂಬಿಸಿ’
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಾಲ್ಲೂಕಿನ ಎರಡು ಜಲಾಶಯ (ಗುಂಡಾಲ್ ಜಲಾಶಯ, ಹುಬ್ಬೆಹುಣಸೆ ಜಲಾಶಯ ಹಾಗೂ ರಾಮನಗುಡ್ಡೆ ಕೆರೆ) ಹಾಗೂ ಒಂದು ಕೆರೆಗೆ ₹135 ಕೋಟಿ ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ ಚಾಲನೆ ದೊರೆತಿದೆ. ಈಗಾಗಲೇ ಗುಂಡಾಲ್ ಜಲಾಶಯದ ಕಾಮಗಾರಿಯೂ ಬಹುತೇಕ ಮುಗಿದಿದೆ. ಆದರೆ, ಮೊದಲು ಹೂಳು ತೆಗೆಸಿ ನಂತರ ನೀರು ತುಂಬಿಸಿ ಎಂಬ ಒತ್ತಾಯ ರೈತರದ್ದು.

‘ಗುಂಡಾಲ್ ಜಲಾಶಯ, ಹುಬ್ಬೆಹುಣಸೆ ಜಲಾಶಯ ಹಾಗೂ ರಾಮನಗುಡ್ಡೆ ಕೆರೆ ನಿರ್ಮಾಣವಾದಾಗಿನಿಂದ ಒಮ್ಮೆಯೂ ಹೂಳು ತೆಗೆಸಿಲ್ಲ. ಇದರಿಂದ ಸಂಗ್ರಹಣಾ ಸಾಮರ್ಥ್ಯ ಕಡಿಮೆಯಾಗಿದೆ. ಮಳೆಗಾಲದಲ್ಲಿ ಭರ್ತಿಯಾದ ನೀರು ಸಮರ್ಪವಾಗಿ ನಿಲ್ಲುವುದಿಲ್ಲ. ನೀರಿನ ಸೋರಿಕೆಯೂ ಆಗುತ್ತಿದೆ. ಮೊದಲು ಈ ಸಮಸ್ಯೆಗಳನ್ನು ಬಗೆಹರಿಸಿ ಬಳಿಕ ನೀರು ತುಂಬಿಸಿ’ ಎಂಬುದು ರೈತರ ಒತ್ತಾಯ.

ಒಂದು ಜಲಾಶಯಕ್ಕೆ ಮಾತ್ರ ನೀರು?
ಕೆರೆಗೆಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಎರಡು ಜಲಾಶಯ ಹಾಗೂ ಒಂದು ಕೆರೆ ಎಂದು ತೀರ್ಮಾನಿಸಿ ₹135 ಕೋಟಿ ಹಣವೂ ಬಿಡುಗಡೆಯಾಗಿತ್ತು. ಆದರೆ, ಈಗ ಗುಂಡಾಲ್ ಜಲಾಶಯಕ್ಕೆ ಮಾತ್ರ ನೀರು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಸಂಬಂಧ ಹನೂರಿನಲ್ಲಿ ಹನೂರು ಪಟ್ಟಣ ಮತ್ತು ರೈತರ ಹೋರಾಟಸಲಹಾ ಸಮಿತಿ ಸದಸ್ಯರು ಸಭೆ ನಡೆಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಭಿನ್ನ ಹೇಳಿಕೆ: ಇದೇ ವಿಚಾರವಾಗಿ ಶಾಸಕರು ಹಾಗೂ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭಿನ್ನ ಹೇಳಿಕೆ ನೀಡಿದ್ದಾರೆ.

‘ತಾಂತ್ರಿಕ ಸಮಸ್ಯೆಯಿಂದಾಗಿ ಈ ಯೋಜನೆಯಲ್ಲಿ ಹುಬ್ಬೆಹುಣಸೆ ಹಾಗೂ ರಾಮನಗುಡ್ಡೆ ಕೆರೆಗೆ ನೀರು ತುಂಬಿಸುವುದನ್ನು ಕೈ ಬಿಡಲಾಗಿದೆ. ಉಡುತೊರೆ ಜಲಾಶಯಕ್ಕೆ ನೀರು ತುಂಬಿಸುವಾಗ ಇವುಗಳಿಗೂ ನೀರು ತುಂಬಿಸಲು ಕ್ರಮವಹಿಸಲಾಗುವುದು’ ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಾಂತಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಂಡಾಲ್‌ ಜಲಾಶಯಕ್ಕೆ ಮಾತ್ರ ತುಂಬಿಸಿ ಉಳಿದ ಎರಡು ಕೆರೆಗಳನ್ನು ಯೋಜನೆಯಿಂದ ಕೈ ಬಿಡಲಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು, ಜನರು ಈ ವದಂತಿಗೆ ಕಿವಿಕೊಡಬಾರದು’ ಎಂದು ಶಾಸಕ ಆರ್‌.ನರೇಂದ್ರ ಅವರು ಹೇಳಿದರು.

ಜನರು ಏನಂತಾರೆ?
ಹೂಳು ತೆಗೆಸಿ

ಗುಂಡಾಲ್ ಜಲಾಶಯದಲ್ಲಿ ಮೊದಲು ಹೂಳು ತೆಗೆಸಿ ಬಳಿಕ ನೀರು ತುಂಬಿಸಿ. ಮಳೆಗಾಲದಲ್ಲಿ ಮಳೆ ನೀರು ಅಲ್ಲಿ ಉಳಿಯುವುದಿಲ್ಲ. ಹೀಗಿರುವಾಗ ಕಾವೇರಿ ನದಿಯಿಂದ ತುಂಬಿಸುವ ನೀರು ದೀರ್ಘಕಾಲ ಉಳಿಯುತ್ತದೆಯೇ?
– ನಟೇಶ್, ಕಾಮಗೆರೆ

**

ನೀರಿನ ಸೋರಿಕೆ ತಡೆಗಟ್ಟಿ
ಗುಂಡಾಲ್ ಜಲಾಶಯದಿಂದ ನೀರು ಸೋರಿಕೆಯಾಗುತ್ತಿದೆ. ಲಾರಿಯ ಟ್ಯಾಂಕ್‌ಗಳಿಗೆ ನೀರು ತುಂಬಿಸುವ ಸಲುವಾಗಿ ತೂಬುಗಳಲ್ಲಿ ಹಾಕಿದ್ದ ಬುಷ್‌ಗಳನ್ನು ನಾಶ ಮಾಡಿದ್ದಾರೆ. ಇದರಿಂದ ಜಲಾಶಯದಲ್ಲಿ ಸಂಗ್ರಹಣೆಯಾದ ನೀರು ಉಳಿಯುತ್ತಿಲ್ಲ. ಇದನ್ನು ಸರಿಪಡಿಸಿ ಬಳಿಕ ನೀರು ತುಂಬಿಸಬೇಕು.
– ಜಗದೀಶ್, ಕಣ್ಣೂರು

**

ಕಾವಲುಗಾರರನ್ನು ನಿಯೋಜಿಸಿ
ಹೂಗ್ಯಂ ಸಮೀಪವಿರುವ ಮಿಣ್ಯತ್ತಹಳ್ಳ ಜಲಾಶಯ ಸಮರ್ಪಕ ನಿರ್ವಹಣೆಯಿಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಾವಲುಗಾರರನ್ನು ನಿಯೋಜಿಸಿ ನಿರ್ವಹಣೆಗೆ ಮುಂದಾಗಬೇಕು.
– ಮುರುಗೇಶ್, ಯರಂಬಾಡಿ

**

ಅಭಿವೃದ್ಧಿ ಪಡಿಸಲು ಗಮನ ಹರಿಸಿ
ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ಹುಬ್ಬೆಹುಣಸೆ ಜಲಾಶಯ ಇಂದು ಅವನತಿಯತ್ತ ಸಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಲಾಶಯನ್ನು ಅಭಿವೃದ್ಧಿ ಪಡಿಸಬೇಕು.
–ಜೆ. ಶಿವರಾಜು, ಹನೂರು

**

₹135 ಕೋಟಿ ವೆಚ್ಚದಲ್ಲಿ ತಾಲ್ಲೂಕಿನ ಎರಡು ಜಲಾಶಯಗಳು ಮತ್ತು ಒಂದು ಕೆರೆಗೆ ನೀರು ತುಂಬಿಸುವ ಯೋಜನೆ ಸೆಪ್ಟೆಂಬರ್‌ ತಿಂಗಳ ಒಳಗಾಗಿ ಪೂರ್ಣಗೊಳ್ಳಲಿದೆ.
–ಆರ್‌.ನರೇಂದ್ರ, ಹನೂರು ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT