ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಟನ್‌ ಕಾಲುವೆ ಅಭಿವೃದ್ಧಿಗೆ ಇನ್ನೆಷ್ಟು ವರ್ಷ?

ಕೊಳ್ಳೇಗಾಲ: ಚರಂಡಿ ದುರ್ವಾಸನೆಗೆ ಬೇಸತ್ತ ನಿವಾಸಿಗಳು
Last Updated 18 ಜುಲೈ 2021, 16:51 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಒಂದು ಕಿ.ಮೀ ಉದ್ದದ ಕಾಂಕ್ರಿಟ್‌ ಕಾಲುವೆ ನಿರ್ಮಿಸಲು ಎಷ್ಟು ಸಮಯ ಬೇಕಾಗಬಹುದು? ಒಂದು ವರ್ಷ ಅಥವಾ ಎರಡು ವರ್ಷ? ಕೊಳ್ಳೇಗಾಲಕ್ಕೆ ಬಂದು ನೋಡಿ, ಮೂರು ವರ್ಷಗಳಾದರೂ ಮುಗಿದಿಲ್ಲ!

ನಗರದ ದೊಡ್ಡ ರಂಗನಾಥನ ಕೆರೆ ಕೋಡಿ ಬಿದ್ದಾಗ ಕೊಂಗಳ ಕೆರೆಗೆ ನೀರು ಹರಿದು ಬರಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ನಿರ್ಮಾಣವಾಗುತ್ತಿರುವ ಸರ್ಕಟನ್‌ ಕಾಲುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದೆ. ಕಾವೇರಿ ನೀರಾವರಿ ನಿಗಮ ಯೋಜನೆಯ ಜವಾಬ್ದಾರಿ ಹೊತ್ತಿದೆ.

ಶುದ್ಧ ನೀರು ಹರಿಯಬೇಕಾದ ಈ ಕಾಲುವೆ, ನಗರದ ವಿವಿಧ ಬಡಾವಣೆಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ, ಕೊಳಚೆ ನೀರು ಹರಿಯುವ ದೊಡ್ಡ ಚರಂಡಿಯಾಗಿ ಬದಲಾಗಿದೆ. ಕೊಳಚೆ ನೀರು ಕೂಡ ಸರಾಗವಾಗಿ ಹರಿಯದೆ, ಗಬ್ಬು ನಾರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಹುಟ್ಟುಹಾಕುತ್ತಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯ ಅಂತಿಮ ಹಂತದಲ್ಲಿ (2018) ₹20.35 ಕೋಟಿ ವೆಚ್ಚದಲ್ಲಿ ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ ನಡೆದಿತ್ತು. ಶೇ 98ರಷ್ಟು ಕಾಮಗಾರಿ ಮುಗಿದಿದ್ದರೂ, 200 ಮೀಟರ್‌ಗಳಷ್ಟು ಕೆಲಸ ಪೂರ್ಣಗೊಳ್ಳಬೇಕಾಗಿದೆ.

‘ಕಾಲುವೆ ಮಾರ್ಗದಲ್ಲಿರುವ ಐದು ಅಡ್ಡರಸ್ತೆಗಳಿಗೆ ಸೇತುವೆ ನಿರ್ಮಾಣ ಮಾಡುವ ಕೆಲಸ ಬಾಕಿ ಇದೆ. ಇದು ಮುಗಿದರೆ ಕಾಲುವೆ ಪೂರ್ಣವಾದಂತೆ’ ಎನ್ನುತ್ತಾಋಎ ನಿಗಮದ ಅಧಿಕಾರಿಗಳು.

ಹಲವು ಅಡೆತಡೆ: ಕಾಲುವೆಯ ಅಭಿವೃದ್ಧಿಯ ಕೂಗು 10 ವರ್ಷಕ್ಕೂ ಹೆಚ್ಚು ಕಾಲದ ಬೇಡಿಕೆ. ಎಸ್‌.ಜಯಣ್ಣ ಶಾಸಕರಾಗಿದ್ದಾಗ ಯೋಜನೆಗೆ ಅನುಮೋದನೆ ದೊರಕಿತ್ತು.ಕಾಮಗಾರಿ ಆರಂಭವಾಗುವ ಮುನ್ನ ಒತ್ತುವರಿ ತೆರವು, ಭೂಮಿ ಸ್ವಾಧೀನ ಸೇರಿದಂತೆ ಅನೇಕ ಅಡೆತಡೆಗಳು ಎದುರಾದವು.

ಹಲವು ಕಡೆಗಳಲ್ಲಿ ಒತ್ತುವರಿ ತೆರವುಗೊಳಿಸಬೇಕಾಯಿತು. ಕಾಲುವೆ ಹಾದುಹೋಗುವ ಪ್ರದೇಶದಲ್ಲಿದ್ದ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಬೇಕಾಗಿತ್ತು. 32 ಕುಟುಂಬಗಳಿಗೆ ಬಸ್ತೀಪುರ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ.

ಸೊಳ್ಳೆ, ದುರ್ವಾಸನೆ ಜೊತೆ ಜೀವನ: ಕಾಲುವೆ ಪಕ್ಕದ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡೇ ಸಂಚರಿಸಬೇಕಾಗಿದೆ. ಕಾಲುವೆಗೆ ಮನೆಗಳು ಇರುವವರ ಸ್ಥಿತಿ ಹೇಳತೀರದು. ಚರಂಡಿ ನೀರು ಕಾಲುವೆಯಲ್ಲಿ ನಿಂತಿರುವುದರಿಂದಸೊಳ್ಳೆಗಳು, ಬಚ್ಚಲು ಹುಳುಗಳ ಕಾಟ ಮೀತಿ ಮೀರಿದೆ. ಪ್ರತಿ ದಿನ ದುರ್ವಾಸನೆ ಸೇವಿಸಿಕೊಂಡೇ ಜೀವನ ನಡೆಸಬೇಕಾದ ಅನಿವಾರ್ಯತೆ ನಿವಾಸಿಗಳದ್ದು. ಮಕ್ಕಳು ಅನೇಕ ಬಾರಿ ಕಾಲುವೆಗೆ ಬಿದ್ದು ಗಾಯಗೊಂಡಿರುವ ನಿದರ್ಶನಗಳೂ ಇವೆ.

ಶಾಸಕರು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಿ ಈ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸುವುದರ ಜೊತೆಗೆ, ಕೊಳಚೆ ನೀರು ಕಾಲುವೆಯಲ್ಲಿ ಹರಿಯದಂತೆ ಮಾಡಲು ಕ್ರಮವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

---

ಸ್ಥಳೀಯರು ಏನು ಹೇಳುತ್ತಾರೆ?

‘ನಿವಾಸಿಗಳಿಗೆ ತೊಂದರೆ’

‘ಸರ್ಕಟನ್ ಕಾಲುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ತೊಂದರೆಯಾಗಿದೆ. ಆದಷ್ಟು ಬೇಗನೆ ಕಾಲುವೆ ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು. ಹಲವು ತಿಂಗಳಿಂದ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಗಮನ ಹರಿಸುತ್ತಿಲ್ಲ’

–ಪ್ರಸನ್ನ,ಸ್ಥಳೀಯ ನಿವಾಸಿ

‘ತುಂಬಿ ತುಳುಕುತ್ತಿದೆ ಕೊಳಚೆ’

‘ನಾಲೆಯಲ್ಲಿ ಕಸದ ರಾಶಿ, ಕೊಳಚೆ ನೀರು ತುಂಬಿ ತುಳುಕುತ್ತಿದ್ದು ಗಬ್ಬೆದ್ದು ನಾರುತ್ತಿದೆ. ಪ್ರತಿನಿತ್ಯ ದುರ್ವಾಸನೆ ನಡುವೆಯೇ ಬದುಕಬೇಕಾಗಿದೆ. ರೋಗ ಭೀತಿಯೂ ಕಾಡುತ್ತಿದೆ. ಸಮಸ್ಯೆಯಿಂದ ಯಾವಾಗ ಪಾರಾಗುತ್ತೇವೆಯೋ ಗೊತ್ತಿಲ್ಲ’

–ಇದ್ರೀಸ್,ಸ್ಥಳೀಯ ನಿವಾಸಿ

‘ಹೋರಾಟ ಅನಿವಾರ್ಯ’

‘ಕಾಲುವೆ ನಿರ್ಮಾಣ ಕಾಮಗಾರಿ ಆರಂಭವಾಗಿ ಮೂರು ವರ್ಷಗಳಾದರೂ ಮುಗಿದಿಲ್ಲ. ಜನಪ್ರತಿನಿಧಿಗಳು ಗಮನಹರಿಸಿ ಅನುಕೂಲ ಮಾಡಿಕೊಡಬೇಕು. ಇಲ್ಲದಿದ್ದರ ಉಗ್ರ ಹೋರಾಟ ನಡೆಸಬೇಕಾಗುತ್ತದೆ’

–ಆರೀಫ್,ಸ್ಥಳೀಯ ನಿವಾಸಿ

--------

ಅಧಿಕಾರಿಗಳು ಏನಂತಾರೆ?

ತ್ವರಿತಕ್ಕೆ ಸೂಚನೆ

‘ಕಾಲುವೆ ಕಾಮಗಾರಿ ನಿಧಾನವಾಗಿ ನಡೆಯುತ್ತಿದೆ ಎಂಬ ದೂರಿನ ಕಾರಣಕ್ಕೆ ಕಾಮಗಾರಿ ನಡೆಯುವ ಸ್ಥಳಕ್ಕೆ ಅನೇಕ ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಬೇಗನೆ ಕೆಲಸ ಮುಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ’

–ಕುನಾಲ್,ತಹಶೀಲ್ದಾರ್

ಎರಡು ತಿಂಗಳಲ್ಲಿ ಪೂರ್ಣ

‘ಸರ್ಕಟನ್ ಕಾಲುವೆ ಕೆಲಸ ನಡೆಯುತ್ತಿದೆ. ಕೆಲವು ಕಡೆ ನಿ‌ಧಾನವಾಗಿರುವುದು ನಿಜ. ಇನ್ನು 200 ಮೀಟರ್‌ಗಳಷ್ಟು ಮಾತ್ರ ಉಳಿದಿದೆ. ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’

–ಮಹದೇವಸ್ವಾಮಿ,ಕಾವೇರಿ ನೀರಾವರಿ ನಿಗಮದ ಎಇಇ

---------

ನಾನು ಶಾಸಕನಾಗಿದ್ದ ಅವಧಿಯಲ್ಲಿ ಕಾಮಗಾರಿಗೆ ಚಾಲನೆ ದೊರಕಿತ್ತು. ನಂತರ ಬಂದವರು ಹೆಚ್ಚು ಗಮನ ಹರಿಸಿಲ್ಲ. ಅಧಿಕಾರಿಗಳೂ ಸುಮ್ಮನಿದ್ದಾರೆ
ಎಸ್‌.ಜಯಣ್ಣ, ಕಾಂಗ್ರೆಸ್‌ ಮುಖಂಡ

-----

ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ
ಎನ್‌.ಮಹೇಶ್‌, ಕೊಳ್ಳೇಗಾಲ ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT