ಗುರುವಾರ , ಮೇ 6, 2021
33 °C
ಹೋಂ ಐಸೊಲೇಷನ್‌ ಪ್ರಮುಖ ಕಾರಣ l ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭಗೊಳ್ಳದ ಕೋವಿಡ್‌ ಕೇರ್‌ ಕೇಂದ್ರ

ಚಾಮರಾಜನಗರ: ಗ್ರಾಮೀಣ ಭಾಗದಲ್ಲಿ ಕೋವಿಡ್‌ ಅಬ್ಬರವೇಕೆ?

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಊಹೆಗೂ ನಿಲುಕದ ವೇಗದಲ್ಲಿ ಅಪ್ಪಳಿಸುತ್ತಿರುವ ಕೋವಿಡ್‌ ಎರಡನೇ ಅಲೆಗೆ ಜಿಲ್ಲೆ ತತ್ತರಗೊಂಡಿದೆ. ಅದರಲ್ಲೂ ಗ್ರಾಮೀಣ ಭಾಗದ ಜನರು ಕೊರೊನಾ ವೈರಸ್‌ನ ಅಟ್ಟಹಾಸದಿಂದ ಕಂಗೆಟ್ಟಿದ್ದಾರೆ.

ಜಿಲ್ಲೆಯಲ್ಲಿ ದೃಢಪಡುತ್ತಿರುವ ಪ್ರಕರಣಗಳಲ್ಲಿ ಶೇ 79ರಷ್ಟು ಪಾಲು ಗ್ರಾಮೀಣ ಭಾಗಗಳದ್ದು. ಸ್ವತಃ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರೇ ಇದನ್ನು ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ. 

ಐದು ತಾಲ್ಲೂಕುಗಳ ಪೈಕಿ ಚಾಮರಾಜನಗರ, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. 

ಕಳೆದ ಬಾರಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿದ್ದವು. ಗ್ರಾಮೀಣ ಭಾಗಗಳಿಗೆ ಸೋಂಕು ಹರಡುವ ಹೊತ್ತಿಗೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗ ತೊಡಗಿತ್ತು. ಜಿಲ್ಲಾಡಳಿತ ಕಳೆದ ವರ್ಷ ಕೈಗೊಂಡಿದ್ದ ಕ್ರಮಗಳು ಹಳ್ಳಿಗಳಿಗೆ ಸೋಂಕು ವ್ಯಾಪಿಸುವುದನ್ನು ತಡೆದಿತ್ತು. 

ಆದರೆ, ಈ ವರ್ಷ ಕೋವಿಡ್‌ ಎರಡನೇ ಅಲೆ ಆರಂಭವಾದ ತಕ್ಷಣವೇ ಅಂತಹ ಕ್ರಮಗಳನ್ನು ಕೈಗೊಂಡಿರಲಿಲ್ಲ. ಗಂಭೀರವಲ್ಲದ ಪ್ರಕರಣಗಳಲ್ಲಿ ಸೋಂಕಿತರನ್ನು ಹೋಂ ಐಸೊಲೇಷನ್‌ಗೆ ಕಳುಹಿಸುವ ಸರ್ಕಾರದ ನಿಯಮ ಗ್ರಾಮೀಣ ಭಾಗಗಳಲ್ಲಿ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣ ಎಂಬ ಮಾತು ಬಲವಾಗಿ ಕೇಳಿ ಬರುತ್ತಿದೆ. ಜಿಲ್ಲಾಡಳಿತದ ಅಧಿಕಾರಿಗಳು, ವೈದ್ಯರು ಇದನ್ನು ಬಹಿರಂಗವಾಗಿ ಹೇಳದಿದ್ದರೂ, ಖಾಸಗಿಯಾಗಿ ಒಪ್ಪಿಕೊಳ್ಳುತ್ತಾರೆ. 

ಬಡವರೇ ಹೆಚ್ಚು, ಚಿಕ್ಕ ಮನೆಯಲ್ಲಿ ವಾಸ: ಹೋಂ ಐಸೊಲೇಷನ್‌ಗೆ ಅದರದ್ದೇ ಆದ ಮಾನದಂಡಗಳಿವೆ. ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯ, ಸ್ನಾನಗೃಹ ಇರಬೇಕು. ನೋಡಿಕೊಳ್ಳುವುದಕ್ಕೆ ಒಬ್ಬರು ಇರಬೇಕು. ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿರುವವರು ಬಹುತೇಕ ಜನ ಬಡವರು ಇಲ್ಲವೇ ಮಧ್ಯಮ ವರ್ಗದವರು. ಚಿಕ್ಕ ಮನೆಯಲ್ಲಿ ಏಳೆಂಟು ಜನರು ವಾಸ ಮಾಡುತ್ತಿರುತ್ತಾರೆ. ಒಂದು ಶೌಚಾಲಯವೇ ಇರುವುದು ಹೆಚ್ಚು. ಹಳ್ಳಿಗಳಲ್ಲಿ ಮನೆಗಳು ಕೂಡ ಹತ್ತಿರ ಹತ್ತಿರ ಇರುತ್ತವೆ. ಇಂತಹ ಸಂದರ್ಭದಲ್ಲಿ ಹೋಂ ಐಸೊಲೇಷನ್‌ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸಾಧ್ಯವೇ ಇಲ್ಲ. ಮನೆಯಲ್ಲಿ ಒಬ್ಬರಿಗೆ ಬಂದರೆ ಎಲ್ಲರಿಗೂ ಹರಡುವುದು ಖಚಿತ. ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾಗುತ್ತಿರುವ ಹೆಚ್ಚಿನ ಪ್ರಕರಣಗಳು ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರದ್ದು ಎಂದು ಹೇಳುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಕಳೆದ ವರ್ಷದ ಜಿಲ್ಲೆಯಲ್ಲಿ ಕೋವಿಡ್‌ ಹಾವಳಿ ಆರಂಭಕ್ಕೂ ಮುನ್ನ ಜಿಲ್ಲಾಡಳಿತ ಕೋವಿಡ್‌ ಕೇರ್‌ ಕೇಂದ್ರಗಳನ್ನು ಮಾಡಿತ್ತು. ಸೋಂಕು ದೃಢಪಟ್ಟ ತಕ್ಷಣ ಸೋಕಿತರನ್ನು ಈ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತರ ಪತ್ತೆಯೂ ಕಳೆದ ವರ್ಷ ಅತ್ಯಂತ ಪರಿಣಾಮಕಾರಿಯಾಗಿ ನಡೆಸಲಾಗಿತ್ತು. ಈ ಬಾರಿ ಅಂತಹ ಪ್ರಗತಿ ಕಾಣುತ್ತಿಲ್ಲ. ಜಿಲ್ಲಾಧಿಕಾರಿ ಅವರು 22 ಮಂದಿ ಪಿಡಿಒಗಳಿಗೆ ನೋಟಿಸ್‌ ನೀಡಿದ್ದು ಇದಕ್ಕೆ ಸಾಕ್ಷಿ.

‘ಹೋಂ ಐಸೊಲೇಷನ್‌ನಿಂದಾಗಿ ಗ್ರಾಮಗಳಲ್ಲಿ ಪ್ರಕರಣ ಜಾಸ್ತಿಯಾಗಿರುವುದು ನಿಜ. ನಮ್ಮ ಊರಿನಲ್ಲಿ ಅದನ್ನು ಕಣ್ಣಾರೆ ನೋಡಿದ್ದೇನೆ. 40ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಮನೆಯಲ್ಲೇ ಆರೈಕೆ ಪಡೆಯುತ್ತಿದ್ದ ಸೋಂಕಿತರಿಂದ ಅವರ ಮನೆಯವರಿಗೆ, ಅಕ್ಕಪಕ್ಕದ ಮನೆಯವರಿಗೆ ಹರಡಿದೆ. ಇದನ್ನು ನಿಯಂತ್ರಿಸಬೇಕಾದರೆ, ಹೋಂ ಐಸೊಲೇಷನ್‌ ಪದ್ಧತಿ ರದ್ದುಗೊಳಿಸಿ, ಕೋವಿಡ್‌ ಕೇರ್‌ ಕೇಂದ್ರಗಳನ್ನು ಆರಂಭಿಸಬೇಕು. ಯಾರಿಗೆ ಅನುಕೂಲವಿದೆಯೋ ಅವರನ್ನು ಮಾತ್ರ ಹೋಂ ಐಸೊಲೇಷನ್‌ಗೆ ಕಳುಹಿಸಬೇಕು’ ಎಂದು ಹೇಳುತ್ತಾರೆ ತಾಲ್ಲೂಕಿನ ದೊಡ್ಡರಾಯಪೇಟೆಯ ಗಿರೀಶ್‌ ಅವರು. 

ಹೋಂ ಐಸೊಲೇಷನ್‌ ಒಂದು ಕಾರಣವಾದರೆ, ಮನೆಯಲ್ಲೇ ಆರೈಕೆ ಪಡೆಯುತ್ತಿರುವರ ಬೇಜವಾಬ್ದಾರಿತನ ಇನ್ನೊಂದು ಕಾರಣ. ಹಲವು ಗ್ರಾಮಗಳಲ್ಲಿ ಸೋಂಕಿತರು ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ. ಇದರಿಂದಲೂ ಸೋಂಕು ಹರಡುತ್ತಿದೆ. 

ರೋಗ ಲಕ್ಷಣ ಹೊಂದಿರುವವರು ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳದೆ, ನೇರವಾಗಿ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದು, ಗುಣಮುಖರಾಗದೆ ನಂತರ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಹಲವರನ್ನು ಸಂಪರ್ಕಿಸಿ, ವೈರಸ್‌ ಹರಡುವುದಕ್ಕೂ ಕಾರಣವಾಗುತ್ತಿದ್ದಾರೆ. 

ನಿಗಾ ವ್ಯವಸ್ಥೆಯ ಕೊರತೆ: ಸೋಂಕು ದೃಢಪಟ್ಟ ಬಳಿಕ ವೈದ್ಯರು ಸೋಂಕಿತನ ‌ತಪಾಸಣೆ ನಡೆಸಿ ಸಾಮಾನ್ಯ ರೋಗ ಲಕ್ಷಣಗಳಿದ್ದರೆ, ಪೂರಕ ಔಷಧಗಳನ್ನು ನೀಡಿ ಹೋಂ ಐಸೊಲೇಷನ್‌ಗೆ ಕಳುಹಿಸುತ್ತಾರೆ. ಆ ಬಳಿಕ ಅವರ ಮೇಲೆ ಪರಿಣಾಮಕಾರಿಯಾಗಿ ನಿಗಾ ಇಡುವ ವ್ಯವಸ್ಥೆ ಇಲ್ಲ ಎಂಬ ‌ಆರೋಪವೂ ಇದೆ. ಜಿಲ್ಲಾ ಕಂಟ್ರೋಲ್‌ ರೂಂನಿಂದ ಒಂದು ಬಾರಿ ಕರೆ ಮಾಡಿ ವಿಚಾರಿಸುತ್ತಾರೆ. ಆ ಬಳಿಕ ಆಶಾ ಕಾರ್ಯಕರ್ತರಷ್ಟೇ ಬಂದು ವಿಚಾರಿಸುತ್ತಾರೆ ಎಂದು ಆರೋಪಿಸುತ್ತಾರೆ ಸೋಂಕಿತರು. 

ಹೋಂ ಐಸೊಲೇಷನ್‌ನಲ್ಲಿದ್ದವರೂ ಸಾವು: ಈ ಮಧ್ಯೆ ಜಿಲ್ಲೆಯಲ್ಲಿ ಎರಡು ದಿನಗಳ ಹಿಂದೆ ಯಳಂದೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ತಲಾ ಒಬ್ಬರು ಹೋಂ ಐಸೊಲೇಷನ್‌ನಲ್ಲಿ ಇದ್ದ ಸೋಂಕಿತರು ಮೃತಪಟ್ಟಿದ್ದಾರೆ. ಮನೆಯಲ್ಲೇ ಆರೈಕೆ ಪಡೆದವರಿಗೆ ಸರಿಯಾದ ವೈದ್ಯರ ಸಲಹೆ ಸಿಗುತ್ತಿಲ್ಲವೇ ಅಥವಾ ಅವರ ಮೇಲೆ ನಿಗಾ ಸರಿಯಾಗಿ ಇಡಲಾಗುತ್ತಿಲ್ಲವೇ ಪ್ರಶ್ನೆಯನ್ನು ಈ ಪ್ರಕರಣಗಳು ಹುಟ್ಟು ಹಾಕಿವೆ.

ಶನಿವಾರ ಪತ್ರಿಕಾಗೋಷ್ಠಿ ನಡೆಸಿದ್ದ ಸಂದರ್ಭದಲ್ಲಿ ಈ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಸೋಂಕಿತರು ದೂರವಾಣಿ ಕರೆ ಮಾಡುವ ಸಂದರ್ಭದಲ್ಲಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೇಳಿದ್ದಕ್ಕೆ ಆರೋಗ್ಯವಾಗಿ ಇದ್ದಾರೆ ಎಂದೇ ಹೇಳುತ್ತಿದ್ದಾರೆ’ ಎಂದು ಹೇಳಿದ್ದರು. 

ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆಯಲು ಸಿದ್ಧತೆ
ಗ್ರಾಮೀಣ ಪ್ರದೇಶಗಳಲ್ಲಿ ತುರ್ತಾಗಿ ಕೋವಿಡ್‌ ಹರಡುವಿಕೆಯನ್ನು ನಿಯಂತ್ರಿಸುವ ಅಗತ್ಯ ಮನಗಂಡಿರುವ ಜಿಲ್ಲಾಡಳಿತ, ಈಗ ಬಿಗಿ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. 

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆಯುತ್ತಿದೆ. ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಖುದ್ದಾಗಿ ಎಲ್ಲ ತಾಲ್ಲೂಕುಗಳಿಗೆ ಭೇಟಿ ನೀಡಿ ಕೋವಿಡ್‌ ಕೇರ್‌ ಕೇಂದ್ರಗಳಿಗೆ ಗುರುತಿಸಲಾಗಿರುವ ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ.

ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡಿಲ್ಲ. ಇನ್ನೂ ಕೆಲವು ದಿನಗಳು ಬೇಕಾಗಬಹುದು.

ಇದಲ್ಲದೇ, ಗ್ರಾಮೀಣ ಭಾಗಗಳಲ್ಲಿ 5ಕ್ಕಿಂತ ಅಥವಾ 10ಕ್ಕಿಂತ ಹೆಚ್ಚು ಪ್ರಕರಣಗಳಿದ್ದರೆ, ಕಂಟೈನ್‌ಮೆಂಟ್‌ ವಲಯವನ್ನು ರಚನೆ ಮಾಡುವ ನಿರ್ಧಾರವನ್ನೂ ಜಿಲ್ಲಾಡಳಿತ ಕೈಗೊಂಡಿದೆ. 

ಸೋಂಕಿತರು ಅನಗತ್ಯವಾಗಿ ಓಡಾಡುವುದನ್ನು ತಡೆಯುವುದಕ್ಕಾಗಿ ಅವರ ಕೈಗೆ ಮುದ್ರೆ ಹಾಕುವ ತೀರ್ಮಾನವನ್ನೂ ಜಿಲ್ಲಾಡಳಿತ ತೆಗೆದುಕೊಂಡಿದೆ. 

ಜನರು ಏನಂತಾದರೆ?
ಕೌನ್ಸೆಲಿಂಗ್‌ ಮಾಡಿ

ಜಿಲ್ಲಾಡಳಿತವು ಕೋವಿಡ್‌ ಕೇರ್‌ ಕೇಂದ್ರಗಳನ್ನು ತಕ್ಷಣ ತೆರೆಯಬೇಕು. ಇದರಿಂದ ರೋಗ ಹರಡುವುದನ್ನು ತಡೆಯಬಹುದು. ಕೋವಿಡ್‌ ಎದುರಿಸಲು ಧೈರ್ಯ ಬಹಳ ಮುಖ್ಯ. ಸೋಂಕಿತರಿಗೆ ಸರಿಯಾಗಿ ಕೌನ್ಸೆಲಿಂಗ್‌ ಸಿಗುತ್ತಿಲ್ಲ. ಜಿಲ್ಲಾಡಳಿತ ಕೌನ್ಸೆಲರ್‌ಗಳನ್ನು ನೇಮಿಸಿ, ಸೋಂಕಿತರಿಗೆ ಕೌನ್ಸೆಲಿಂಗ್‌ ಕೊಡಿಸುವ ಕೆಲಸ ಮಾಡಬೇಕು. ಮನೆಗಳಲ್ಲಿ ಆರೈಕೆ ಇರುವವರ ಮೇಲೆ ನಿಗಾ ಇಡುವ ವ್ಯವಸ್ಥೆ ಇನ್ನಷ್ಟು ಪರಿಣಾಮಕಾರಿಯಾಗಬೇಕು.
–ಡಿ.ಎಸ್‌.ಗಿರೀಶ್‌, ದೊಡ್ಡರಾಯಪೇಟೆ, ಚಾಮರಾಜನಗರ

ಸೋಂಕಿತರನ್ನು ಗುರುತಿಸಬೇಕು
ಬಿಳಿಗಿರಿಬೆಟ್ಟದ ಹೊಸಪೋಡಿನಲ್ಲಿ ಕೆಲವು ಸೋಲಿಗರು ಸೋಂಕಿಗೆ ಒಳಗಾಗಿದ್ದಾರೆ. ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿರದೆ ಸುತ್ತಾಡುವುದು ಹೆಚ್ಚಾಗಿದೆ. ಈ ಬಗ್ಗೆ ಪೊಲೀಸರು ಮತ್ತು ಹಾಡಿ ಮಂದಿ ಎಷ್ಟೇ ಎಚ್ಚರ ವಹಿಸಿದರೂ, ಕಾಡಿನ ವಿವಿಧ
ಭಾಗಗಳಲ್ಲಿ ಜನರೊಟ್ಟಿಗೆ ಬೆರೆಯುತ್ತಾರೆ. ಗ್ರಾಮ ಪಂಚಾಯಿತಿಯು ಬಾಧಿತರನ್ನು ಗುರುತಿಸಿ ಜನರ ಜೊತೆಗೂಡದಂತೆ ಕ್ರಮ ವಹಿಸಬೇಕು.
–ಬೊಮ್ಮಯ್ಯ, ಸೋಲಿಗ ಮುಖಂಡ, ಬಿಳಿಗಿರಿರಂಗನಬೆಟ್ಟ

ಜನರಲ್ಲಿ ಜಾಗೃತಿ ಇದೆ
ಮಾಂಬಳ್ಳಿ ಪಂಚಾಯಿತಿ ಸೋಂಕು ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಿದೆ. ಜನರು ಕೋವಿಡ್ ಕರ್ಫ್ಯೂಗೆ ಸ್ಪಂದಿಸುತ್ತಿದ್ದಾರೆ. ಹಾಗಾಗಿ, ಗ್ರಾಮಸ್ಥರು ಸೋಂಕಿತರಿಂದ ದೂರ ಇದ್ದು ಆರೋಗ್ಯ ಕಾಳಜಿ ಮೆರೆದಿದ್ದಾರೆ. ಕೋವಿಡ್ ಪಾಸಿಟಿವ್ ಕಂಡುಬಂದವರು ದೈಹಿಕ ಅಂತರ ಕಾಪಾಡಿ, ಜನರಿಂದ ದೂರ ಇದ್ದು, ಸೋಂಕು ನಿಯಂತ್ರಣಕ್ಕೆ ನೆರವಾಗಿದ್ದಾರೆ.
–ಶಕೀಲ್ ಅಹ್ಮದ್, ಮುಖಂಡ, ಯಳಂದೂರು

ಆಮ್ಲಜನಕ ವ್ಯವಸ್ಥೆ ಮಾಡಿ
ರೋಗದ ಹರಡುವಿಕೆಯನ್ನು ನಾವೆಲ್ಲರೂ ಅರಿತಿದ್ದೇವೆ. ಆಮ್ಲಕನಕ ಕೊರತೆಯಿಂದ ತೊಂದರೆಗೆ ಒಳಗಾಗುತ್ತಿರುವವರು ಜಾಸ್ತಿ ಆಗುತ್ತಿದ್ದಾರೆ. ನಮ್ಮ ಗ್ರಾಮದಲ್ಲೂ ಅಂತಹ ಪರಿಸ್ಥಿತಿ ಬಂದರೆ ಆಮ್ಲಜನಕ ವ್ಯವಸ್ಥೆ ಇದೆಯೇ ಎಂಬುದರ ಬಗ್ಗೆ ಯೋಚಿಸುವುದು ಮುಖ್ಯ. ನಮ್ಮ ಗ್ರಾಮ ಪಂಚಾಯಿತಿಯು ಈ ನಿಟ್ಟಿನಲ್ಲಿ ಗಮನ ಹರಿಸಬೇಕು. ನಮ್ಮ ಗ್ರಾಮ ಪಂಚಾಯಿತಿಯು ಈ ಕಾರ್ಯವನ್ನು ಮಾಡಲು ಒತ್ತಾಯಿಸಬೇಕು ಮತ್ತು ಅವರ ಜೊತೆಗೆ ಸಹಕರಿಸಬೇಕು. ಈ ಎಚ್ಚರಿಕೆಯನ್ನು ನಾವೆಲ್ಲರೂ ವಹಿಸುವುದು. ಆಮ್ಲಜನಕ ವ್ಯವಸ್ಥೆ ನಮ್ಮ ಗ್ರಾಮದಲ್ಲಿ ಸಿಗುವಂತೆ ಮಾಡಲು ನಾವೆಲ್ಲರೂ ಸಹಾಯ ಹಸ್ತ ಚಾಚಬೇಕು.
–ಜಾನ್ ಡಾನ್ ಬಾಸ್ಕೊ, ಮಾರ್ಟಳ್ಳಿ, ಹನೂರು ತಾಲ್ಲೂಕು

ತಪಾಸಣೆ ಮಾಡುತ್ತಿಲ್ಲ

ಸರಿಯಾದ ಸಮಯದಲ್ಲಿ ಆರೋಗ್ಯ ತಪಾಸಣೆ ಮಾಡುವುದಿಲ್ಲ, ಕೇವಲ ಮಾತ್ರೆಗಳನ್ನು ನೀಡಿ ಕಳುಹಿಸಿದ್ದಾರೆ. ಮನೆಯಲ್ಲಿ ಎಲ್ಲರಿಗೂ ಪಾಸಿಟಿವ್ ಬಂದಿರುವುದರಿಂದ ಜಮೀನಿನಲ್ಲಿ ವಾಸವಾಗಿದ್ದೇವೆ. ಯುವಕರು, ಮಧ್ಯವಯಸ್ಕರಿಗೆ ಮನೆಯಲ್ಲಿ ಐಸೊಲೇಷನ್ ಮಾಡಿಕೊಳ್ಳಬಹುದು. ವಯಸ್ಸಾದವರಿಗೆ ಸ್ವಲ್ಪ ಕಷ್ಟ.
–ಶಿವಮೂರ್ತಿ, ಉತ್ತಂಗೆರೆ ಗುಂಡ್ಲುಪೇಟೆ ತಾಲ್ಲೂಕು

ನಿಯಮ ಪಾಲನೆಯೊಂದೇ ದಾರಿ
ಗ್ರಾಮೀಣ ಭಾಗಗಳಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕದ ವಿಚಾರ. ನಿಯಂತ್ರಣಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ಲಾಕ್‌ಡೌನ್‌ ಮಾದರಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಜನರು ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಅದು ಬಿಟ್ಟು ಬೇರೆ ದಾರಿ ಕಾಣುತ್ತಿಲ್ಲ.
– ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ

***

ಜಿಲ್ಲೆಯಲ್ಲಿ ಕೋವಿಡ್‌ ಪರಿಸ್ಥಿತಿ ಬಿಗಡಾಯಿಸಿದೆ. ಕಠಿಣ ಕ್ರಮ ಅನಿವಾರ್ಯ. ಹೆಚ್ಚು ಪ್ರಕರಣಗಳಿದ್ದರೆ ಕಂಟೈನ್‌ಮೆಂಟ್‌ ವಲಯ ರಚನೆ ಸೇರಿದಂತೆ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ.
-ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ (ಸುದ್ದಿಗೋಷ್ಠಿಯಲ್ಲಿ) 

***

ಕೋವಿಡ್‌ ಕೇರ್‌ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮಾದಾಪುರದಲ್ಲಿ ಒಂದು ಕೇಂದ್ರ ಕಾರ್ಯಾರಂಭ ಮಾಡಿದೆ. ಒಂದೆರಡು ದಿನಗಲ್ಲಿ ಉಳಿದವುಗಳೂ ಆರಂಭವಾಗಲಿವೆ.
-ಡಾ.ಎಂ.ಸಿ.ರವಿ, ಜಿಲ್ಲಾ ಆರೋಗ್ಯಾಧಿಕಾರಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು